May 3, 2024

Bhavana Tv

Its Your Channel

ಮಂಡ್ಯ ಜಿಲ್ಲಾ ಬ್ಯೂಟಿಷಿಯನ್ ಅಸೋಶಿಯೇಷನ್ ಸಂಘ ಉದ್ಘಾಟಿಸಿದ ಸಚಿವ ಡಾ.ನಾರಾಯಣಗೌಡ

ಕೃಷ್ಣರಾಜಪೇಟೆ ಹೆಣ್ಣು ಮಕ್ಕಳು ರಾಷ್ಟ್ರದ ಶಕ್ತಿಯಾಗಿದ್ದಾರೆ, ಹೆಣ್ಣು ಮಕ್ಕಳು ಮನಸ್ಸು ಮಾಡಿ ನಿಂತರೆ ಸಾಕು ಸಶಕ್ತವಾದ ಸಧೃಡ ಸ್ವಾಭಿಮಾನಿ ಸಮಾಜವನ್ನು ಸುಲಭವಾಗಿ ನಿರ್ಮಿಸಬಹುದಾಗಿದೆ . ಎಂದು ರಾಜ್ಯದ ಯುವಜನ ಸಬಲೀಕರಣ, ಕ್ರೀಡೆ, ರೇಷ್ಮೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಹೇಳಿದರು .

ಅವರು ಪಟ್ಟಣದ ರಾಮದಾಸ್ ಹೋಟೆಲ್‌ನ ಸುಲೋಚನಮ್ಮ ಸಭಾಂಗಣದಲ್ಲಿ ಮಹಿಳೆಯರು ನೂತನವಾಗಿ ಆರಂಭಿಸಿದ ಮಂಡ್ಯ ಜಿಲ್ಲಾ ಬ್ಯೂಟಿಷಿಯನ್ ಅಸೋಶಿಯೇಷನ್ ಸಂಘವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಮನೆ, ಕುಟುಂಬ ಸೇರಿದಂತೆ ಇಡೀ ಸಮಾಜವನ್ನು ಸಶಕ್ತವಾಗಿ ಸದೃಡವಾಗಿ ಮುನ್ನಡೆಸುವ ಶಕ್ತಿಯು ಹೆಣ್ಣು ಮಕ್ಕಳಿಗಿದೆ. ಹೆಣ್ಣು ಮಕ್ಕಳು ಆತ್ಮವಿಶ್ವಾಸದಿಂದ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಸಬಲೀಕರಣ ಹೊಂದುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಸರಿಸಮನಾಗಿ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಬೇಕು. ಹೆಣ್ಣುನ ಮಕ್ಕಳು ಮನಸ್ಸು ಮಾಡಿ ನಿಂತರೆ ಏನನ್ನಾದರೂ ಸಾಧಿಸಿ ತೋರಿಸಬಹುದು ಎಂಬ ಬಗ್ಗೆ ಧೃಡವಾದ ನಂಬಿಕೆ ಹೊಂದಿರಬೇಕು. ತಂದೆ-ತಾಯಿಗಳೂ ಕೂಡ ಹೆಣ್ಣು ಮಕ್ಕಳನ್ನು ಅಗೌರವದಿಂದ ಕಾಣದೇ ಆತ್ಮವಿಶ್ವಾಸವನ್ನು ತುಂಬಿ ಸಾಧನೆ ಮಾಡುವಂತೆ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದ ಸಚಿವ ನಾರಾಯಣಗೌಡ ನಾನು ಒಬ್ಬ ಸಾಮಾನ್ಯ ಉಧ್ಯಮಿಯಾಗಿದ್ದೆ, ನನ್ನ ತಾಯಿಯ ಆಶೀರ್ವಾಧದ ಫಲವಾಗಿ ಇಂದು ಸಮಾಜದಲ್ಲಿ ಉನ್ನತವಾದ ಸ್ಥಾನಕ್ಕೆ ಬೆಳೆದು ಮೂರು ಅವಧಿಗೆ ಶಾಸಕನಾಗಿ ರಾಜ್ಯದ ಸಚಿವನಾಗಿ ದೇವರು ಹಾಗೂ ನನ್ನ ಕ್ಷೇತ್ರದ ಜನತೆಯ ವಿಶ್ವಾಸಕ್ಕೆ ಚ್ಯುತಿಯಾಗದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಅಭಿಮಾನದಿಂದ ಹೇಳಿದರು.

ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಹೆಣ್ಣು ಮಕ್ಕಳನ್ನು ಸುಂದರವಾಗಿ ಕಾಣುವಂತೆ ಸಿಂಗರಿಸಿ ಅಲಂಕಾರ ಮಾಡುವ ಬ್ಯೂಟೀಷಿಯನ್ ಹುದ್ದೆಗೆ ಸಮಾಜದಲ್ಲಿ ಎಲ್ಲಿಲ್ಲದ ಬೇಡಿಕೆಯಿದೆ. ಹೆಣ್ಣು ಮಕ್ಕಳು ತಮ್ಮಲ್ಲಿನ ವೃತ್ತಿಕೌಶಲ್ಯದ ಮೂಲಕ ಅತ್ಯುತ್ತಮವಾದ ಬ್ಯೂಟೀಷಿಯನ್‌ಗಳಾಗಿ ಹೊರಹೊಮ್ಮುವ ಜೊತೆಗೆ ನಾಡನ್ನು ಸಮರ್ಥವಾಗಿ ಮುನ್ನಡೆಸುವ ಆದರ್ಶ ನಾರಿಯರಾಗಿ ಬದಲಾಗಬೇಕು. ಇಂದು ಸಮಾಜವನ್ನು ಮುನ್ನಡೆಸುವ ಧೀಶಕ್ತಿಯಾಗಿ ಮಹಿಳೆಯರು ಸರ್ವಶ್ರೇಷ್ಠ ಸಾಧನೆ ಮಾಡಬೇಕು ಎಂದು ಸಚಿವ ನಾರಾಯಣಗೌಡ ಮನವಿ ಮಾಡಿದರಲ್ಲದೇ ಹೆಣ್ಣು ಮಕ್ಕಳು ಲಕ್ಷೀ-ಸರಸ್ವತಿಯರಂತೆ ಸಂಪೂರ್ಣವಾದ ಜ್ಞಾನವಂತರಾಗಿ ಸಮಾಜದ ಮುನ್ನಡೆಗೆ ತಮ್ಮ ಕೈಲಾದ ಸಹಾಯವನ್ನು ಮಾಡಬೇಕು. ಸಮಾಜದ ಅಭಿವೃದ್ಧಿಗೆ ಮಾರಕವಾಗಿರುವ ಸಾಮಾಜಿಕ ಕಟ್ಟುಪಾಡುಗಳು ಹಾಗೂ ಮೂಡನಂಬಿಕೆಗಳ ನಿರ್ಮೂಲನೆಗೆ ಸಮರ ಸಾರಬೇಕು ಎಂದು ಕರೆ ನೀಡಿದರು.

ಜಿಲ್ಲಾ ಬ್ಯೂಟೀಷಿಯನ್ ಅಸೋಸಿಯೇಷನ್ ಅಧ್ಯಕ್ಷೆ ಸುಧಾನಾಗರಾಜು ಮಾತನಾಡಿ ಕೋವಿಡ್ ಸಂಕಷ್ಠದ ಸಮಯದಲ್ಲಿ ಆದ ಲಾಕ್‌ಡೌನ್‌ನಿಂದಾಗಿ ಬ್ಯೂಟಿ ಪಾರ್ಲರ್‌ಗಳು ಮುಚ್ಚಿದ್ದು ಮಹಿಳೆಯರು ಆರ್ಥಿಕ ಸಂಕಷ್ಠಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರವು ದುಡಿಯುವ ವರ್ಗಗಳ ಜನರು, ಆಟೋ ಚಾಲಕರು ಸೇರಿದಂತೆ ನೊಂದ ಜನರಿಗೆ ನೆರವಾದಂತೆ ಬ್ಯೂಟೀಷಿಯನ್‌ಗಳ ಆರ್ಥಿಕ ಸಧೃಡತೆಗೆಗೆ ವಿಶೇಷ ಪ್ಯಾಕೇಜ್ ಘೋಷಿಸಿ ನೆರವಿಗೆ ನಿಲ್ಲುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು ಎಂದು ಸಚಿವರಲ್ಲಿ ಕೈಮುಗಿದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆರ್ಯಭಟ ಪ್ರಶಸ್ತಿ ಪುರಸ್ಕೃತರಾದ ಮಹಿಳಾ ಉಧ್ಯಮಿ ದೀಪಾನಾಗೇಶ್ ಮಾತನಾಡಿ ಹೆಣ್ಣು ಮಕ್ಕಳು ಬದಲಾಗಿ ಸಮಾಜಮುಖಿಯಾಗಿ ಮುನ್ನಡೆಯುತ್ತಿದ್ದಾರೆ ಎಂಬುದಕ್ಕೆ ಇಂದು ಕೆ.ಆರ್.ಪೇಟೆ ಪಟ್ಟಣದಲ್ಲಿ ಆರಂಭವಾಗಿರುವ ಬ್ಯೂಟೀಷಿಯನ್ ಅಸೋಸಿಯೇಷನ್ ಸಂಘವೇ ಸಾಕ್ಷಿಯಾಗಿದೆ. ಹೆಣ್ಣು ಮಕ್ಕಳು ತಮ್ಮಲ್ಲಿನ ಕೀಳರಿಮೆಯನ್ನು ಅಳಿಸಿಹಾಕಿ ಸ್ವಾಭಿಮಾನದಿಂದ ಹೆಜ್ಜೆಹಾಕಿ ತಮ್ಮಲ್ಲಿನ ವೃತ್ತಿಕೌಶಲ್ಯಗಳ ಮೂಲಕ ಸಾಧನೆ ಮಾಡಬೇಕು ಎಂದು ಕರೆ ನೀಡಿದರು. ತಾಲೂಕು ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷೆ ಚಂದ್ರಕಲಾಪ್ರಕಾಶ್, ಸುಪ್ರಸಿದ್ಧ ವೈದ್ಯರಾದ ಡಾ.ರಾಜೇಶ್ವರಿ, ಸಂಘದ ಪ್ರಧಾನ ಕಾರ್ಯದರ್ಶಿ ರಾಣಿಕಾಂತರಾಜು ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: