May 3, 2024

Bhavana Tv

Its Your Channel

ಕಾವೇರಿ ನದಿಗೆ ಅಡ್ಡಲಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಸೇತುವೆ ನಿರ್ಮಿಸಿಕೊಡುವಂತೆ ಸಚಿವ ಡಾ.ನಾರಾಯಣಗೌಡರಿಗೆ ಶ್ರೀ ಗಜಾನನ ಶ್ರೀಗಳ ಮನವಿ

ಕೃಷ್ಣರಾಜಪೇಟೆ :- ಶ್ರೀರಂಗಪಟ್ಟಣದ ದೊಡ್ಡಕೊಪ್ಪಲು ಸಮೀಪದ ಕಾವೇರಿ ನದಿಯ ಮಧ್ಯದ ನಡುಗಡ್ಡೆಯಲ್ಲಿರುವ ಶ್ರೀಗೌತಮ ಕ್ಷೇತ್ರಕ್ಕೆ ಭಕ್ತಾದಿಗಳು ಬಂದು ಹೋಗಲು ಅನುಕೂಲವಾಗುವಂತೆ ಕಾವೇರಿ ನದಿಗೆ ಅಡ್ಡಲಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಸೇತುವೆ ನಿರ್ಮಿಸಿಕೊಡುವಂತೆ ಸಚಿವ ಡಾ.ನಾರಾಯಣಗೌಡರಿಗೆ ಶ್ರೀ ಗಜಾನನ ಶ್ರೀಗಳ ಮನವಿ ….

ಶ್ರೀರಂಗಪಟ್ಟಣ ತಾಲೂಕಿನ ಕಾವೇರಿ ನದಿಯ ಮಧ್ಯದ ನಡುಗಡ್ಡೆಯಲ್ಲಿರುವ ಶ್ರೀಗೌತಮ ಕ್ಷೇತ್ರಕ್ಕೆ ಭಕ್ತಾಧಿಗಳು ಹಾಗೂ
ಸುತ್ತಮುತ್ತಲಿನ ನಾಲ್ಕೈದು ಹಳ್ಳಿಗಳ ಗ್ರಾಮಸ್ಥರು ಬಂದುಹೋಗಲು ಅನುಕೂಲವಾಗುವಂತೆ ಕಾವೇರಿ ನದಿಗೆ ಅಡ್ಡಲಾಗಿ ದೊಡ್ಡಕೊಪ್ಪಲಿನಿಂದ ಸೇತುವೆಯನ್ನು ನಿರ್ಮಿಸಿಕೊಟ್ಟು ಸಹಾಯ ಮಾಡಬೇಕೆಂದು ಗೌತಮ ಕ್ಷೇತ್ರದ ಪೂಜ್ಯ ಶ್ರೀ ಗಜಾನನ
ಸ್ವಾಮೀಜಿಗಳು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅವರಲ್ಲಿ ಮನವಿ ಮಾಡಿದರು.

ಕೆ.ಆರ್.ಪೇಟೆ ಪಟ್ಟಣದಲ್ಲಿರುವ ಸಚಿವ ನಾರಾಯಣಗೌಡರ ನಿವಾಸಕ್ಕೆ ಇಂದು ಆಗಮಿಸಿದ ಗೌತಮ ಕ್ಷೇತ್ರದ ಪೀಠಾಧಿಪತಿಗಳದ ಗಜಾನನ ಸ್ವಾಮೀಜಿಗಳು ಕಾವೇರಿ ನದಿಯ ನಡುಗಡ್ಡೆಯಲ್ಲಿರುವ ಆಶ್ರಮಕ್ಕೆ ಭಕ್ತಾಧಿಗಳು ಹಾಗೂ ಸಾರ್ವಜನಿಕರು ಮತ್ತು ದೊಡ್ಡಕೊಪ್ಪಲು ಸೇರಿದಂತೆ ಸುತ್ತಮುತ್ತಲಿನ ನಾಲ್ಕೈದು ಹಳ್ಳಿಗಳ ಗ್ರಾಮಸ್ಥರು ಬಂದು ಹೋಗಲು ಅನುಕೂಲವಾಗುವಂತೆ ಕಾವೇರಿ ನದಿಗೆ ಅಡ್ಡಲಾಗಿ ದೊಡ್ಡಕೊಪ್ಪಲಿನಿಂದ ನಡುಗಡ್ಡೆಗೆ ಹೋಗಲು ಅನುಕೂಲವಾಗುವಂತೆ ಲೋಕೋಪಯೋಗಿ ಇಲಾಖೆಯ ವತಿಯಿಂದ ಸೇತುವೆಯನ್ನು ನಿರ್ಮಿಸಿಕೊಟ್ಟು ಸಹಾಯ ಮಾಡಬೇಕು ಎಂದು ಸ್ವಾಮೀಜಿಗಳು ಮನವಿ ಮಾಡಿದರು.

ಪ್ರತೀ ಹುಣ್ಣಿಮೆಯಲ್ಲಿ ಕಾವೇರಿ ನದಿಯ ನಡುಗಡ್ಡೆಯಲ್ಲಿರುವ ಗೌತಮ ಕ್ಷೇತ್ರದಲ್ಲಿ ಸತ್ಸಂಗ ಸೇರಿದಂತೆ ಬೆಳದಿಂಗಳ ಹುಣ್ಣಿಮೆ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಪ್ರವಚನಗಳು ನಡೆಯುತ್ತಿದ್ದು ಸಾವಿರಾರು ಭಕ್ತಾದಿಗಳು ಕಾವೇರಿ ನದಿಯ ನೀರಿನಲ್ಲಿಯೇ ಮೊಂಡಿಯುದ್ದದ ನೀರಿನಲ್ಲಿ ನಡೆದುಕೊಂಡು ಬಂದು ಗೌತಮಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹೋಗುತ್ತಿದ್ದಾರೆ. ಶ್ರೀಗೌತಮ ಮಹರ್ಷಿಗಳು ಕಠಿಣವಾದ ತಪ್ಪಸ್ಸು ಮಾಡಿ ಶ್ರೀರಂಗನಾಥಸ್ವಾಮಿಯ ದರ್ಶನ ಮಾಡಿದ ಸ್ಥಳ ಪುರಾಣವನ್ನು ಹೊಂದಿರುವ ಕಾವೇರಿ ನಡುಗಡ್ಡೆಯು ಗೌತಮ ಮಹರ್ಷಿಗಳ ತಪೋಭೂಮಿಯಾಗಿರುವುದರಿಂದ ಕಾವೇರಿ ನದಿಯ ನಡುಗಡ್ಡೆಯಲ್ಲಿರುವ ಈ ಕ್ಷೇತ್ರಕ್ಕೆ ಭಕ್ತರ ಮಹಾಪೂರವೇ ಹರಿದು ಬರುತ್ತಿದೆ. ಕಳೆದ ೨೦ ವರ್ಷಗಳಿಂದಲೂ ಗೌತಮಕ್ಷೇತ್ರದ ನಡುಗಡ್ಡೆಯಲ್ಲಿ ಬೆಳದಿಂಗಳ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಭಕ್ತಾಧಿಗಳು ಶ್ರೀ ಕ್ಷೇತ್ರಕ್ಕೆ ಬಂದು ಹೋಗಲು ಹರಸಾಹಸವನ್ನು ಮಾಡುತ್ತಿದ್ದಾರೆ.

ಕಾವೇರಿ ನದಿಗೆ ಅಡ್ಡಲಾಗಿ ದೊಡ್ಡಕೊಪ್ಪಲು ಗ್ರಾಮದಿಂದ ೨೦೦ಮೀಟರ್ ಉದ್ದದ ಸೇತುವೆಯನ್ನು ನಿರ್ಮಿಸಿ ರಾಜ್ಯ ಸರ್ಕಾರವು ಸಹಾಯ ಮಾಡಿದರೆ ಭಕ್ತಾಧಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಕಳೆದ ೨೦ವರ್ಷಗಳಿಂದಲೂ ತಾವು ಹಲವಾರು ಜನಪ್ರತಿನಿಧಿಗಳು ಹಾಗೂ ಮಂತ್ರಿ ಮಹೋದಯರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಯಾರೂ ಕೂಡ ಸೇತುವೆಯ ನಿರ್ಮಾಣಕ್ಕೆ ಸಹಾಯ ಮಾಡಿಲ್ಲ, ದಕ್ಷತೆ ಶಿಸ್ತು ಹಾಗೂ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿರುವ ಅಭಿವೃದ್ಧಿಯನ್ನೇ ಮೂಲಮಂತ್ರವನ್ನಾಗಿಸಿಕೊAಡಿರುವ ಸಚಿವ ನಾರಾಯಣಗೌಡರು ಒಮ್ಮೆ ಗೌತಮ ಕ್ಷೇತ್ರಕ್ಕೆ ಆಗಮಿಸಿ ನಡುಗಡ್ಡೆಗೆ ಭಕ್ತರು ಬಂದು ಹೋಗಲು ಅನುಕೂಲವಾಗುವಂತೆ ಸುಮಾರು ೫ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸುಸಜ್ಜಿತವಾದ ಸೇತುವೆಯನ್ನು ನಿರ್ಮಿಸಿಕೊಟ್ಟು ಶ್ರೀ ಗೌತಮ ಮಹರ್ಷಿಗಳ ಕೃಪಾಶೀರ್ವಾಧಕ್ಕೆ
ಪಾತ್ರರಾಗಬೇಕು ಎಂದು ಪೂಜ್ಯ ಗಜಾನನ ಸ್ವಾಮೀಜಿಗಳು ಮನವಿ ಮಾಡಿದರು.

ಶ್ರೀ ಗಜಾನನ ಶ್ರೀಗಳ ಮನವಿ ಆಲಿಸಿದ ಸಚಿವ ನಾರಾಯಣಗೌಡ ಲೋಕೋಪಯೋಗಿ ಸಚಿವರಿಗೆ ಮನವಿ ಮಾಡಿ ಗೌತಮ ಕ್ಷೇತ್ರವಿರುವ ಕಾವೇರಿ ನದಿಯ ನಡುಗಡ್ಡೆಗೆ ಸೇತುವೆ ನಿರ್ಮಿಸಿಕೊಡಲು ಸಹಾಯ ಮಾಡುವುದಾಗಿ ಭರವಸೆ ನೀಡಿದ ಸಚಿವರು ಒಮ್ಮೆ ಕ್ಷೇತ್ರಕ್ಕೆ ಆಗಮಿಸಿ ಭಕ್ತಾಧಿಗಳಿಗೆ ಅಗತ್ಯವಾಗಿ ಬೇಕಾದ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು
ಒದಗಿಸಿಕೊಡಲು ಜಿಲ್ಲಾಡಳಿತಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ನಾಯಕ ಸಂಘದ ಅಧ್ಯಕ್ಷರಾದ ಅಗ್ರಹಾರಬಾಚಹಳ್ಳಿ ಆರ್.ಜಗಧೀಶ್, ಪುರಸಭೆಯ ಸದಸ್ಯರಾದ ಹೆಚ್.ಆರ್.ಲೋಕೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜೆ.ವಿಜಯಕುಮಾರ್, ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಕೆ.ಕಾಳೇಗೌಡ, ಪುರಸಭೆ ಮಾಜಿಸದಸ್ಯ ಕೆ.ಆರ್.ನೀಲಕಂಠ, ಸರ್ಕಾರಿ ನೌಕರರ ಸಂಘದ ರಾಜ್ಯ ಸಾಂಸ್ಕೃತಿಕ ಸಂಚಾಲಕ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: