May 4, 2024

Bhavana Tv

Its Your Channel

ಕೆ.ಆರ್ ಪೇಟೆ ತಾಲೂಕಿನಲ್ಲಿ ದಲಿತರ ಕುಂದುಕೊರತೆಗಳ ನಿವಾರಣಾ ಸಭೆ

ಕೆ.ಆರ್ ಪೇಟೆ:– ದೌರ್ಜನ್ಯಕ್ಕೊಳಗಾದ ದಲಿತರ ರಕ್ಷಣೆಗೆ ಪೋಲಿಸರು ಮುಂದಾಗಬೇಕೇ ಹೊರತು ದೂರಿಗೆ ಪ್ರತಿದೂರನ್ನು ದಾಖಲಿಸುವ ಕೆಲಸ ಮಾಡಬಾರದು. ತಾಲ್ಲೂಕಿನಲ್ಲಿಅಸ್ಪೃಶ್ಯತೆ ಆಚರಣೆಯಂತಹ ಪ್ರಕರಣಗಳು ಕಂಡು ಬಂದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಚಿವ ನಾರಾಯಣಗೌಡ ಎಚ್ಚರಿಸಿದರು ..

ಅವರು ಪಟ್ಟಣದ ಹೊರವಲಯದ ಚಿಕ್ಕೋನಹಳ್ಳಿಯ ರೇಷ್ಮೆ ತರಬೇತಿ ಶಾಲೆಯ ಸಭಾಂಗಣದಲ್ಲಿ ನಡೆದ ತಾಲ್ಲೂಕಿನ ದಲಿತರ ಕುಂದುಕೊರತೆಗಳ ನಿವಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು…

ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ದಲಿತರ ಮೇಲೆ ದಬ್ಬಾಳಿಕೆ ದೌರ್ಜನ್ಯಗಳು ನಡೆಯುತ್ತಿವೆ. ಅನ್ಯಾಯಕ್ಕೆ ಒಳಗಾದ ದಲಿತರು ದೂರು ನೀಡಿದರೆ ಅದಕ್ಕೆ ಪ್ರತಿ ದೂರು ದಾಖಲಿಸಿ ನೊಂದ ದಲಿತರಿಗೆ ಮತ್ತಷ್ಟು ತೊಂದರೆಯನ್ನು ಪೊಲೀಸರು ನೀಡುತ್ತಿದ್ದಾರೆ. ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲಿ ದಲಿತರ ದೂರಿನ ಮೇಲೆ ಪ್ರತಿ ದೂರು ದಾಖಲಾಗುತ್ತಿಲ್ಲ ಆದರೆ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಮಾತ್ರ ಪೋಲೀಸರು ಸವರ್ಣೀಯರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಸಹ ಪೋಲೀಸರು ಆಸ್ಪತ್ರೆಯಲ್ಲಿ ಇರುವ ದಲಿತರ ಮೇಲೆಯೇ ಪ್ರತಿದೂರು ದಾಖಲಿಸಿ ತೊಂದರೆ ನೀಡುತ್ತಿದ್ದಾರೆ ಇದನ್ನು ತಪ್ಪಿಸುವಂತೆ ಮನವಿ ಮಾಡಿದರು. ಕೂಡಲೇ ಮದ್ಯ ಪ್ರವೇಶ ಮಾಡಿದ ಸಚಿವ ನಾರಾಯಣಗೌಡ ಅವರು ಕೂಡಲೇ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು ತಾಲ್ಲೂಕಿನಲ್ಲಿ ನೊಂದ ದಲಿತರ ವಿರುದ್ದ ಪ್ರತಿದೂರು ದಾಖಲಿಸದಂತೆ ಸೂಕ್ತ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಕೆ.ಆರ್.ಪೇಟೆ ತಾಲ್ಲೂಕಿನ ಹರೀನಹಳ್ಳಿ ಗ್ರಾಮದಲ್ಲಿ ಬಡ ಕೂಲಿ ಕಾರ್ಮಿಕ ದಲಿತ ವ್ಯಕ್ತಿ ಶಿವಣ್ಣ ಅವರಿಗೆ ಮಂಜೂರಾಗಿರುವ ಜಮೀನನ್ನು ಬಿಡಿಸಿಕೊಡುವಂತೆ ಹೈಕೋರ್ಟ್ ಸೇರಿದಂತೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳ ನ್ಯಾಯಾಲಯವು ಆದೇಶ ನೀಡಿದೆ ಹಾಗಾಗಿ ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದು ಕೂಡಲೇ ಭೂಮಿಯನ್ನು ಸ್ವಾಧೀನಕ್ಕೆ ಕೊಡಿಸಬೇಕು ಎಂದು ತಾಲ್ಲೂಕು ದಲಿತ ಮುಖಂಡರು ಒತ್ತಾಯ ಮಾಡಿದರು. ದಲಿತ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಬಿ.ರಾಜಯ್ಯ, ಲಕ್ಷ್ಮೀಪುರ ರಂಗಸ್ವಾಮಿ, ಮಾಂಬಹಳ್ಳಿ ಜಯರಾಂ, ಗಣೇಶ್, ಮತ್ತಿತರರು ಮಾತನಾಡಿ ಆರ್.ಟಿ.ಸಿ, ಸಾಗುವಳಿ ಚೀಟಿ ಸೇರಿದಂತೆ ಎಲ್ಲಾ ದಾಖಲೆಗಳು ಬಡ ಕೂಲಿ ಕಾರ್ಮಿಕ ವ್ಯಕ್ತಿ ಶಿವಣ್ಣ ಅವರ ಹೆಸರಿನಲ್ಲಿದ್ದರೂ ಅದೇ ಹರೀನಹಳ್ಳಿ ಗ್ರಾಮದ ಸವರ್ಣೀಯರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ತೊಂದರೆ ನೀಡುತ್ತಿದ್ದಾರೆ. ಕೂಡಲೇ ತಾಲ್ಲೂಕು ಆಡಳಿತವು ಗಮನ ಹರಿಸಿ ಸರ್ವೆ ಮಾಡಿಸಿ ಸ್ವಾಧೀನಕ್ಕೆ ಕೊಡಿಸಬೇಕು ಎಂದು ಒತ್ತಾಯ ಮಾಡಿದರು. ದಲಿತರ ಆಗ್ರಹಕ್ಕೆ ತಕ್ಷಣ ಸ್ಪಂದಿಸಿದ ತಹಸೀಲ್ದಾರ್ ಎಂ.ವಿ.ರೂಪ ಮಾತನಾಡಿ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಜಮೀನಿನ ದುರಸ್ತಿ ಮಾಡಿಸಿ ಶಿವಣ್ಣ ಅವರ ಸ್ವಾಧೀನಕ್ಕೆ ಎರಡು ಎಕರೆ ಭೂಮಿಯನ್ನು ಕೊಡಿಸುವುದಾಗಿ ಭರವಸೆ ನೀಡಿದರು.
ದಲಿತರು ಕೂಲಿಮಾಡಿ ಜೀವನ ನಡೆಸುವಂತಹವರು ದಲಿತರದಲ್ಲಿ ಭೂಮಿಗೆ ಸಂಬAಧಪಟ್ಟ ಎಲ್ಲಾ ದಾಖಲೆಗಳು ಇದ್ದರೂ ಸಹ ಬಲಾಢ್ಯರು ದಲಿತರ ಭೂಮಿಯನ್ನು ಉಳುಮೆ ಮಾಡಲು ಅವಕಾಶ ನೀಡುತ್ತಿಲ್ಲ. ಹಾಗಾಗಿ ಸಾಗುವಳಿ ಚೀಟಿ, ಆರ್.ಟಿ.ಸಿ ಮ್ಯೂಟೇಷನ್ ಇದ್ದರೂ ಸ್ವಾಧೀನ ಇಲ್ಲ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಸ್ವಾಧೀನಕ್ಕೆ ಕೊಡಿಸುತ್ತಿಲ್ಲ. ಇದರಿಂದ ದಲಿತರು ಭೂಮಿಯ ಮಾಲೀಕರಾಗಿದ್ದರೂ ದಲಿತರ ಭೂಮಿಯ ಸ್ವಾಧೀನದಲ್ಲಿ ಬಲಾಢ್ಯರು ಇದ್ದಾರೆ. ಇದೇ ರೀತಿಯ ನೂರಾರು ಪ್ರಕರಣಗಳು ತಾಲ್ಲೂಕಿನಲ್ಲಿ ಇದ್ದು ತಾಲ್ಲೂಕು ಆಡಳಿತವು ದಲಿತರಿಗೆ ಭೂಮಿಯನ್ನು ಸರ್ವೆ ಮಾಡಿಸಿ ಸ್ವಾಧೀನಕ್ಕೆ ಕೊಡಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಅಂಬೇಡ್ಕರ್ ಭವನ ಹಾಗೂ ಬಾಬು ಜಗಜೀವರಾಂ ಭವನಗಳ ಕಟ್ಟಡ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಪುರಸಭಾ ಸದಸ್ಯ ಡಿ. ಪ್ರೇಮಕುಮಾರ್ ಮನವಿ ಮಾಡಿದರು. ಎರಡೂ ಭವನಗಳಿಗೆ ಹೆಚ್ಚುವರಿಯಾಗಿ ತಲಾ ಒಂದೂವರೆ ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕಾಮಗಾರಿ ಇನ್ನು ಕೆಲವೇ ತಿಂಗಳಲ್ಲಿ ಪೂರ್ಣಗೊಳಲಿದೆ ಎಂದು ಸಚಿವ ನಾರಾಯಣಗೌಡ ಸಭೆಯಲ್ಲಿ ಸ್ಪಷ್ಟನೆ ನೀಡಿದರು.

ತಾಲ್ಲೂಕಿನ ಹರಿಹರಪುರ, ಆಲೇನಹಳ್ಳಿ, ಬೂಕನಕೆರೆ, ಹೆಚ್.ಬಳ್ಳೇಕೆರೆ ಗ್ರಾಮಗಳಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಿದ್ದು ತಾಲ್ಲೂಕು ಆಡಳಿತವು ಶಾಂತಿ ಸಭೆ ನಡೆಸಿ ದಲಿತ ಬಂದುಗಳಿಗೆ ದೈರ್ಯ ತುಂಬಬೇಕು ಎಂದು ಮಾಂಬಹಳ್ಳಿ ಜಯರಾಂ, ಸಿಂದಘಟ್ಟ ಸೋಮಸುಂದರ್, ಬಿ.ಬಿ.ಕಾವಲು ಕಾಂತರಾಜು, ಹೊಸಹೊಳಲು ದೇವರಾಜು ಒತ್ತಾಯ ಮಾಡಿದರು.
ಕಾಡಂಚಿನ ಗ್ರಾಮಗಳಲ್ಲಿ ಉಳುಮೆ ಮಾಡುತ್ತಿರುವ ದಲಿತರ ಹೆಸರಿಗೆ ಭೂಮಿಯನ್ನು ಮಂಜೂರು ಮಾಡಿಸಿಕೊಡಬೇಕು ಎಂದು ಬಿ.ಬಿ.ಕಾವಲು ಕಾಂತರಾಜು ಒತ್ತಾಯ ಮಾಡಿದರು.

ಸಭೆಯಲ್ಲಿ ತಹಸೀಲ್ದಾರ್ ಎಂ.ವಿ.ರೂಪಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಮಹೇಶ್, ಪುರಸಭೆಯ ಅಧ್ಯಕ್ಷೆ ಮಹಾದೇವಿನಂಜುAಡ, ತಾಲ್ಲೂಕು ದಲಿತ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ರಾಜಯ್ಯ, ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಮಾಂಬಳ್ಳಿ ಜಯರಾಂ, ನಾಯಕ ಸಂಘದ ಗೌರವಾಧ್ಯಕ್ಷ ಕಾರಿಗನಹಳ್ಳಿ ಕುಮಾರ್, ತಾಲ್ಲೂಕು ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ರವಿಶಿವಕುಮಾರ್, ಪುರಸಭಾ ಸದಸ್ಯರಾದ ಡಿ.ಪ್ರೇಮಕುಮಾರ್, ದಲಿತ ಮುಖಂಡರಾದ ಸಂತೋಷ್ ಕುಮಾರ್, ಬಸ್ತಿ ರಂಗಪ್ಪ, ಬಂಡಿಹೊಳೆ ರಮೇಶ್, ಸಿಂದಘಟ್ಟ ಸೋಮಸುಂದರ್, ಕೃಷ್ಣರಾಜಪೇಟೆ ಬನ್ನಾರಿ, ಲಕ್ಷ್ಮೀಪುರ ರಂಗಸ್ವಾಮಿ, ಹರೀನಹಳ್ಳಿ ಶಿವಣ್ಣ, ಅಗ್ರಹಾರಬಾಚಹಳ್ಳಿ ಆರ್.ಜಗದೀಶ್, ಜಿ.ಪಿ.ರಾಜು, ನರೇಂದ್ರನಾಯಕ್, ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: