May 19, 2024

Bhavana Tv

Its Your Channel

ರೈತರ ಸಮಸ್ಯೆಗಳ ನಿವಾರಣೆ ಕುರಿತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮ

ಕೆ.ಆರ್.ಪೇಟೆ:- ರೈತಸ್ನೇಹಿಯಾಗಬೇಕಿದ್ದ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ರೈತವಿರೋಧಿಯಾಗಿವೆ. ರೈತರಿಗೆ ನಿರಂತರವಾಗಿ ಕಳಪೆ ಗುಣಮಟ್ಟದ ರಸಗೊಬ್ಬರ ಹಾಗೂ ಬಿತ್ತನೆಬೀಜಗಳು ಸರಬರಾಜಾಗುತ್ತಿದ್ದರೂ ಕಮಿಷನ್ ಹಣದ ಆಸೆಗಾಗಿ ರೈತರ ಹಿತ ಮರೆತಿರುವ ಭ್ರಷ್ಠ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ರೈತ ಮುಖಂಡರಾದ ಮುದುಗೆರೆ ರಾಜೇಗೌಡ, ಮರುವನಹಳ್ಳಿ ಶಂಕರ್, ಲಕ್ಷ್ಮೀಪುರ ಜಗಧೀಶ್, ಕಾರಿಗನಹಳ್ಳಿ ಪುಟ್ಟೇಗೌಡ ಮತ್ತು ಮುದ್ದುಕುಮಾರ್ ತಾಲ್ಲೂಕು ಆಡಳಿತವನ್ನು ಆಗ್ರಹಿಸಿದರು …

ಕೆ.ಆರ್.ಪೇಟೆ ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲ್ಲೂಕು ಆಡಳಿತವು ರೈತಸಂಘದ ಬೇಡಿಕೆಯಂತೆ ಇಂದು ತಾಲ್ಲೂಕಿನ ಕೃಷಿ, ತೋಟಗಾರಿಕೆ ಮತ್ತು ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳೊಂದಿಗೆ ತಹಶೀಲ್ದಾರ್ ಎಂ.ವಿ.ರೂಪ ಅವರ ಅಧ್ಯಕ್ಷತೆಯಲ್ಲಿ ರೈತರ ಸಮಸ್ಯೆಗಳ ನಿವಾರಣೆ ಕುರಿತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತ ಮುಖಂಡರು ಆಗ್ರಹಿಸಿ ಜನವಿರೋಧಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೃಷಿ ಇಲಾಖೆಯು ದಳ್ಳಾಳಿಗಳ ಸಂತೆಯಾಗಿದೆ. ರೈತರಿಗೆ ನ್ಯಾಯಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳು ಹಾಗೂ ಸವಲತ್ತುಗಳು ಉಳ್ಳವರ ಪಾಲಾಗುತ್ತಿವೆ. ತಾಲ್ಲೂಕಿನಲ್ಲಿ ರಸಗೊಬ್ಬರಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದರೂ ಕಣ್ಣು ಮುಚ್ಚಿಕೊಂಡು ಕುಳಿತಿರುವ ಕೃಷಿ ಅಧಿಕಾರಿಗಳು ವರ್ತಕರೊಂದಿಗೆ ಶಾಮೀಲಾಗಿ ಕಮಿಷನ್ ದಂಧೆಗೆ ಇಳಿದಿದ್ದಾರೆ ಎಂದು ಗಂಭೀರ ಆರೋಪ ಮಾಡಿದಾಗ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರೈತರ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದರು..ರಸಗೊಬ್ಬರಗಳು ಖಾಸಗಿ ವರ್ತಕರಲ್ಲಿ ದೊರೆಯುತ್ತಿವೆ ಆದರೆ ಇಲಾಖೆಯ ವತಿಯಿಂದ ಏಕೆ ದೊರೆಯುತ್ತಿಲ್ಲ, ರಸಗೊಬ್ಬರಗಳ ಕೃತಕ ಅಭಾವ ಸೃಷ್ಠಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರೂ ನೀವೇಕೆ ಕ್ರಮಕೈಗೊಂಡಿಲ್ಲ, ಕೃಷಿ ಇಲಾಖೆಗೂ ರಸಗೊಬ್ಬರಗಳ ಮಾರಾಟಕ್ಕೂ ಸಂಬAಧವಿಲ್ಲವೇ ನೀವು ದಂದೆಕೋರರ ವಿರುದ್ಧ ಕ್ರಮಕೈಗೊಳ್ಳಲು ಅಸಮರ್ಥರಾಗಿದ್ದೀರಿ ನಿಮ್ಮಿಂದ ಇಲಾಖೆಯಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಆದ್ದರಿಂದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಮತ್ತೊಂದು ದಿನಾಂಕ ನಿಗಧಿಪಡಿಸಿ ಸಭೆ ಕರೆದು ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಿಕೊಡಿ ಎಂಬ ರೈತಮುಖಂಡರ ಮನವಿಗೆ ತಹಶೀಲ್ದಾರ್ ರೂಪ ಸಮ್ಮತಿಸಿದರು.

ತೋಟಗಾರಿಕೆ ಮತ್ತು ಪಶುಸಂಗೋಪನೆ ಇಲಾಖೆಗಳು ತಾಲ್ಲೂಕಿನಲ್ಲಿ ಇದ್ದೂ ಇಲ್ಲದಂತಿವೆ. ರೈತರು ಅಧಿಕಾರಿಗಳಿಗೆ ಲಂಚದ ಹಣ ನೀಡದಿದ್ದರೆ ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ. ಕ್ಷೇತ್ರದ ಶಾಸಕರಾದ ಸಚಿವ ನಾರಾಯಣಗೌಡ ಅವರು ಕ್ಷೇತ್ರದ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ವಿಫಲರಾಗಿದ್ದಾರೆ. ಆಡಳಿತ ಯಂತ್ರವು ದಿಕ್ಕುತಪ್ಪಿದೆ. ತಾಲ್ಲೂಕಿನ ಜನತೆಯ ಕಷ್ಟಸುಖಗಳ ಬಗ್ಗೆ ಕಾಳಜಿ ವಹಿಸುವವರು ಯಾರೂ ಇಲ್ಲದಂತಾಗಿದೆ. ಸ್ಥಳೀಯ ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಹಾರುಬೂದಿಯನ್ನು ಚೆಲ್ಲುವ ಮೂಲಕ ರೈತರು ಬೆಳೆದ ಬೆಳೆಗಳನ್ನು ನಾಶಪಡಿಸಿ ಕೃಷಿಕರು ಮತ್ತು ಶ್ರೀ ಸಾಮಾನ್ಯರ ಬದುಕನ್ನು ನುಂಗಿಹಾಕುತ್ತಿದೆ. ಪರಿಸರ ಮಾಲಿನ್ಯ ಮಾಡುತ್ತಿರುವ, ರೈತರ ಜೀವನದೊಂದಿಗೆ ಚಲ್ಲಾಟವಾಡುತ್ತಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ರೈತ ಮುಖಂಡರಾದ ರಾಜೇಗೌಡ ಮತ್ತು ಕರೋಟಿ ತಮ್ಮಯ್ಯ ಆಗ್ರಹಿಸಿದರು. ಈ ಹಿಂದೆ ರೂಪ ಮೇಡಂ ಅವರು ತಾಲ್ಲೂಕಿನ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡು ಆಗಮಿಸುವ ಮುನ್ನ ಕೆಲಸ ಮಾಡುತ್ತಿದ್ದ ತಹಶೀಲ್ದಾರ್ ಅವರು ತಾಲ್ಲೂಕಿನ ರೈತರಿಗೆ ಸೇರಬೇಕಾಗಿದ್ದ ಒಂದೂವರೆ ಸಾವಿರ ತೆಂಗಿನ ಸಸಿಗಳನ್ನು ತಮ್ಮ ಜಮೀನಿಗೆ ರಾತ್ರೋರಾತ್ರಿ ಕದ್ದೊಯ್ದಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳಬೇಕು. ಈ ಹಿಂದೆ ತೋಟಗಾರಿಕೆ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಲೋಕೇಶ್ ವಿರುದ್ಧ ತನಿಖೆ ನಡೆಸಿ ಸತ್ಯವನ್ನು ಅನಾವರಣಗೊಳಿಸಿ ಇಬ್ಬರೂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ತಾಲ್ಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಸಭೆಯಲ್ಲಿ ಆಗ್ರಹಿಸಿದರು ..

ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಶಿಧರ್, ಕೃಷಿ ಅಧಿಕಾರಿ ಶ್ರೀಧರ್, ಉಪತಹಶೀಲ್ದಾರ್ ಸ್ವಾಮಿ, ಹಿರಿಯಣ್ಣ, ತಾಲ್ಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್ ರೈತ ಮುಖಂಡರಾದ ನಗರೂರು ಕುಮಾರ್, ಬೂಕನಕೆರೆ ನಾಗರಾಜು, ಚೌಡೇನಹಳ್ಳಿ ನಾರಾಯಣಸ್ವಾಮಿ, ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಶಾಂತಮ್ಮ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.

ವರದಿ. ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ .

error: