May 19, 2024

Bhavana Tv

Its Your Channel

ಫೇವರಿಚ್ ಮೆಗಾ ಫುಡ್ ಫ್ಯಾಕ್ಟರಿಯಲ್ಲಿ ಸ್ಥಳೀಯ ನಿರುದ್ಯೋಗಿ ಯುವಕ ಯುವತಿಯರಿಗೆ ಹಾಗೂ ಕನ್ನಡಿಗರಿಗೆ ಮೊದಲ ಆದ್ಯತೆಯಲ್ಲಿ ಉದ್ಯೋಗ ನೀಡಬೇಕೆಂದು ಆಗ್ರಹ

ಕೃಷ್ಣರಾಜಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಣ್ಣೇನಹಳ್ಳಿಯ ಬಳಿ ಆರಂಭವಾಗುತ್ತಿರುವ ಫೇವರಿಚ್ ಮೆಗಾ ಫುಡ್ ಫ್ಯಾಕ್ಟರಿಯಲ್ಲಿ ಸ್ಥಳೀಯ ನಿರುದ್ಯೋಗಿ ಯುವಕ ಯುವತಿಯರಿಗೆ ಹಾಗೂ ಕನ್ನಡಿಗರಿಗೆ ಮೊದಲ ಆದ್ಯತೆಯಲ್ಲಿ ಉದ್ಯೋಗವನ್ನು ನೀಡಬೇಕೆಂದು ಆಗ್ರಹಿಸಿ ಕೆ.ಆರ್.ಪೇಟೆ ತಾಲ್ಲೂಕು ಕರವೇ ಅಧ್ಯಕ್ಷ ಹೊನ್ನೇನಹಳ್ಳಿ ವೇಣು ನೇತೃತ್ವದಲ್ಲಿ ನೂರಾರು ಯುವಕರು ಫುಡ್ ಪಾರ್ಕಿನ ಮುಖ್ಯ ಧ್ವಾರದ ಬಳಿ ಪ್ರತಿಭಟನೆ ನಡೆಸಿ ಆಡಳಿತ ಮಂಡಳಿಯ ಮುಖ್ಯಸ್ಥ ವೇಲುಮಣಿ ಅವರಿಗೆ ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದರು …

ಕಳೆದ ಎಂಟು ವರ್ಷಗಳ ಹಿಂದೆ ಸಿದ್ಧರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ೩೦೦ ಎಕರೆ ಭೂಮಿಯನ್ನು ಕೆಎಐಡಿಬಿ ಸಂಸ್ಥೆಗೆ ಮಂಜೂರು ಮಾಡಿ ಫೇವರಿಚ್ ಮೆಗಾ ಫುಡ್ ಕಾರ್ಖಾನೆಯ ಆರಂಭಕ್ಕೆ ಶಾಸಕ ಡಾ.ನಾರಾಯಣಗೌಡರ ನೇತೃತ್ವದಲ್ಲಿ ಭೂಮಿ ಪೂಜೆಯನ್ನು ನೆರವೇರಿಸಿದ್ದರು..

ಫೇವರಿಚ್ ಮೆಗಾ ಫುಡ್ ಫ್ಯಾಕ್ಟರಿಯು ಆರಂಭವಾದರೆ ತಾಲ್ಲೂಕಿನ ಸಾವಿರಾರು ನಿರುದ್ಯೋಗಿ ಯುವಜನರಿಗೆ ಉದ್ಯೋಗ ದೊರೆಯುವುದಲ್ಲದೇ ರೈತರು ಬೆಳೆಯುವ ಹಣ್ಣು ತರಕಾರಿಗಳಿಗೆ ಬಂಗಾರದ ಬೆಲೆಯು ದೊರೆಯಲಿದೆ. ಆಹಾರ ಸಂಸ್ಕರಣಾ ಘಟಕವು ಆರಂಭವಾಗುವುದರಿAದ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕವಾದ ಬೆಲೆಯು ದೊರೆಯಲಿದ್ದು ಮಾರಾಟಕ್ಕೆ ಸುಲಭವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು.
ಕಳೆದ ಎಂಟು ವರ್ಷಗಳಿಂದಲೂ ಫುಡ್ ಫ್ಯಾಕ್ಟರಿ ಕಾಮಗಾರಿಯು ಕುಂಟುತ್ತಾ ಸಾಗಿದ್ದು ಕಳೆದ ಒಂದು ವರ್ಷಗಳಿಂದ ಮಾತ್ರ ಜೆಡಿಎನ್ ಪಶು ಆಹಾರ ಸಂಸ್ಕರಣಾ ಘಟಕ ಮತ್ತು ಲೇಸ್ ಕುರ್ ಕುರೆ ಉತ್ಪನ್ನಗಳ ತಯಾರಿಕಾ ಘಟಕಗಳು ಆರಙಭವಾಗಿದ್ದು ಕೇವಲ ೧೦೦ ಜನ ನೌಕರರು ಈ ಎರಡೂ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆಯಕಟ್ಟಿನ ಮುಖ್ಯವಾದ ಕೆಲಸಗಳಿಗೆ ತಮಿಳಿಗರು, ತೆಲುಗರು ಹಾಗೂ ಹಿಂದಿ ಭಾಷಿಕರನ್ನು ನೇಮಿಸಿಕೊಂಡಿರುವ ಫೇವರಿಚ್ ಮೆಗಾ ಫುಡ್ ಫ್ಯಾಕ್ಟರಿಯ ವ್ಯವಸ್ಥಾಪಕ ನಿರ್ದೇಶಕ ಜಯದೇವ್ ಅವರ ಕೈಕೆಳಗಿನ ಅಧಿಕಾರಿಗಳು ಕನ್ನಡಿಗರು ಹಾಗೂ ಸ್ಥಳೀಯರನ್ನು ನಿರ್ಲಕ್ಷಿಸಿ ಬೇರೆ ರಾಜ್ಯಗಳ ನೌಕರರಿಗೆ ಮಣೆ ಹಾಕಿದ್ದಾರೆ. ಭದ್ರತಾ ಸಿಬ್ಬಂಧಿಗಳು ಕೂಡ ಹಿಂದಿ ಭಾಷಿಕರಾಗಿದ್ದಾರೆ ಎಂದು ಕರವೇ ಅಧ್ಯಕ್ಷ ವೇಣು ಆಕ್ರೋಶ ವ್ಯಕ್ತಪಡಿಸಿದರು..

ಫೇವರಿಚ್ ಮೆಗಾ ಫುಡ್ ಫ್ಯಾಕ್ಟರಿಯಲ್ಲಿ ಆರಂಭವಾಗುವ ಎಲ್ಲಾ ಉತ್ಪನ್ನಗಳ ತಯಾರಿಕಾ ಘಟಕಗಳಲ್ಲಿ ಉದ್ಯೋಗಗಳಿಗೆ ಕನ್ನಡಿಗರಿಗೆ ಮೊದಲ ಆಧ್ಯತೆ ನೀಡಬೇಕು ಎಂದು ಆಗ್ರಹಿಸಿದ ವೇಣು ಜೆಡಿಎನ್ ನ್ಯೂಟ್ರಿಷಿಯನ್ ಪಶು ಆಹಾರ ತಯಾರಿಕಾ ಘಟಕದ ಮುಖ್ಯಸ್ಥ ವೇಲುಮಣಿ ಹಾಗೂ ಫೇವರಿಚ್ ಮೆಗಾ ಫುಡ್ ಫ್ಯಾಕ್ಟರಿಯ ಆಡಳಿತ ವ್ಯವಸ್ಥಾಪಕ ಗಿರೀಶ್ ಅವರನ್ನು ತರಾಟೆಗೆ ತೆಗೆದುಕೊಂಡು ಪ್ರಸ್ತುತ ಕೆಲಸ ಮಾಡುತ್ತಿರುವ ನೌಕರರ ವಿಳಾಸ ಹಾಗೂ ಪಟ್ಟಿಯನ್ನು ನೀಡಬೇಕು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಹೊರ ರಾಜ್ಯಗಳ ಯುವಜನರನ್ನು ತೆಗೆದುಹಾಕಿ ಸ್ಥಳೀಯರು ಹಾಗೂ ಕನ್ನಡಿಗರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿ ಮನವಿ ಸಲ್ಲಿಸಿದರು ..

ಕಸದ ಬುಟ್ಟಿಯಲ್ಲಿ ಚೆಲ್ಲಾಡುತ್ತಿದ್ದ ಕನ್ನಡಿಗರ ಉದ್ಯೋಗದ ಅರ್ಜಿಗಳು:-
ಫೇವರಿಚ್ ಮೆಗಾ ಫುಡ್ ಫ್ಯಾಕ್ಟರಿಯಲ್ಲಿ ಸ್ಥಳೀಯ ನಿರುದ್ಯೋಗಿ ಯುವಜನರು ಹಾಗೂ ಕನ್ನಡಿಗರು ಉದ್ಯೋಗಕ್ಕಾಗಿ ನೀಡಿದ್ದ ಅರ್ಜಿಗಳು ಕಸದ ಬುಟ್ಟಿಯಲ್ಲಿ ಚೆಲ್ಲಾಡುತ್ತಿರುವುದು. ಮಳೆಯ ನೀರಿನಲ್ಲಿ ತೊಯ್ದಿರುವುದನ್ನು ಕಣ್ಣಾರೆ ಕಂಡು ಆಕ್ರೋಶ ವ್ಯಕ್ತಪಡಿಸಿದ ವೇಣು ಆಡಳಿತ ಮಂಡಳಿಯ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ತಾಲ್ಲೂಕು ಆಡಳಿತವು ಫೇವರಿಚ್ ಮೆಗಾ ಫುಡ್ ಫ್ಯಾಕ್ಟರಿಯ ಆಡಳಿತ ವ್ಯವಹಾರದ ಬಗ್ಗೆ ಗಮನ ಹರಿಸುವ ಜೊತೆಗೆ ಕನ್ನಡಿಗರಿಗೆ ಉದ್ಯೋಗದಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ವೇಣು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರವೇ ಪದವೀಧರ ಘಟಕದ ಅಧ್ಯಕ್ಷ ಚೇತನ್ ಕುಮಾರ್, ಕರವೇ ನಗರ ಘಟಕದ ಅಧ್ಯಕ್ಷ ಮದನಕುಮಾರ್, ಕರವೇ ಜಿಲ್ಲಾ ಉಪಾಧ್ಯಕ್ಷ ಶ್ರೀನಿಧಿ ಶ್ರೀನಿವಾಸ್, ತಾಲ್ಲೂಕು ಉಪಾಧ್ಯಕ್ಷ ಟೆಂಪೋ ಶ್ರೀನಿವಾಸ್, ಸಾಗರ್ ಗೌಡ, ಖಲೀಲ್ ಅಹಮದ್, ಆರ್.ಶ್ರೀನಿವಾಸ್ ಸೇರಿದಂತೆ ನೂರಾರು ಯುವಜನರು ಕರವೇ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: