May 17, 2024

Bhavana Tv

Its Your Channel

ಆಮ್ಲಜನಕ ಉತ್ಪಾದನಾ ಘಟಕವನ್ನು ಉದ್ಘಾಟಿಸಿದ ಸಚಿವ ಕೆ.ಸಿ.ನಾರಾಯಣಗೌಡ

ಮಳವಳ್ಳಿ: ಕೋವಿಡ್ ಮೂರನೇ ಅಲೆ ಬರುವ ಮುನ್ನ ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಿಗೂ ಇನ್ನೂ ೧೫ ದಿನಗಳಲ್ಲಿ ೧೦ ಐಸಿಯು ಬೆಡ್ ಗಳನ್ನು ಮಂಜೂರು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಭಾನುವಾರ ೭೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ೩೯೦
ಎಲ್ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ತಾಲ್ಲೂಕು ಕೇಂದ್ರದಲ್ಲಿ ಸರ್ಕಾರದ ಅನುದಾನದಿಂದ ನಿರ್ಮಿಸಿರುವ ಆಮ್ಲಜನಕ ಘಟಕವನ್ನು ಉದ್ಘಾಟಿಸಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆ ಉಂಟಾಗುವುದಿಲ್ಲ. ಚಾಮರಾಜನಗರದಲ್ಲಿ ನಡೆದಂತಹ ಆಮ್ಲಜನಕ ದುರಂತದಲ್ಲಿ ೨೮ ಮಂದಿ ಸಾವನ್ನಪ್ಪಿದ್ದರು. ಅಂತಹ ವೇಳೆಯಲ್ಲಿ ಖುದ್ದು ನಾವೇ ಮುಂದೆ ನಿಂತು ಮೈಸೂರಿನಿಂದ ಆಮ್ಲಜನಕವನ್ನು ತರಿಸಿಕೊಳ್ಳುತ್ತಿದ್ದವು. ಆದರೆ ಇನ್ನೂ ಮುಂದೆ ಅಂತಹ ಸಮಸ್ಯೆಯಾಗುವುದಿಲ್ಲ. ಮಂಡ್ಯದ ಮಿಮ್ಸ್ ನಲ್ಲಿ ಸರ್ಕಾರದ ವತಿಯಿಂದ ಉಳಿದ ತಾಲ್ಲೂಕುಗಳಲ್ಲಿ ಸಿಎಸ್ ಆರ್ ನಿಧಿಯಿಂದ ಘಟಕಗಳನ್ನು ನಿರ್ಮಿಸಲಾಗುತ್ತಿದೆ ಎಂದರು.


ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶವಾಗಾರದ ನೂತನ ಕಟ್ಟಡ ನಿರ್ಮಾಣದ ಜತೆಗೆ ಎಸಿ ಅಳವಡಿಕೆ, ೧೦ ಐಸಿಯು ಬೆಡ್ ಗಳು, ಇರುವ ಮೂರರ ಜತೆಗೆ ಮತ್ತೆ ಎರಡು ಡಯಾಲಿಸಿಸ್ ಯಂತ್ರಗಳನ್ನು ನೀಡಲಾಗುವುದು. ಅಲ್ಲದೇ ಮತ್ತೆ ೨೫ ಐಸಿಯು ಬೆಡ್ ಗಳಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಾಸಕ ಡಾ.ಕೆ.ಅನ್ನದಾನಿ ಅವರ ನೇತೃತ್ವದಲ್ಲಿ ಕೋವಿಡ್ ನಿಯಂತ್ರಣವನ್ನು ಚೆನ್ನಾಗಿ ಮಾಡಲಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಆಮ್ಲಜನಕ ಲೋಕಾರ್ಪಣೆ ಒಂದು ಐತಿಹಾಸಿಕ ಕ್ಷಣವಾಗಿದೆ. ತಾಲ್ಲೂಕಿನ ಜನತೆಯ ಪರವಾಗಿ ಸಚಿವರಿಗೆ ಧನ್ಯವಾದ ಸಲ್ಲಿಸುವೆ. ಅತಿ ಕಡಿಮೆ ಅವಧಿಯಲ್ಲಿ ಘಟಕ ನಿರ್ಮಾಣ ಮಾಡಲಾಗಿದ್ದು, ಇದ್ದರಿಂದ ಇನ್ನೂ ಮುಂದೆ ತಾಲ್ಲೂಕಿನಲ್ಲಿ ಆಮ್ಲಜನಕ ಕೊರತೆ ಇರುವುದಿಲ್ಲ. ಯಾವುದೇ ತಾಲ್ಲೂಕು ಕೇಂದ್ರದಲ್ಲಿ ಇಲ್ಲದ ಸೌಲಭ್ಯ ನಮ್ಮಲ್ಲಿ ಇದೆ. ಸೋಂಕು ನಿಯಂತ್ರಣಕ್ಕೆ ಅಧಿಕಾರಿಗಳ ಜತೆ ಹಗಲಿರುಳು ದುಡಿದಿದ್ದು, ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ವೇದಿಕೆ ಮೇಲೆ ಕುರ್ಚಿಗಳ ಕೊರತೆಯಿಂದ ಮುಂಭಾಗ ನಿಂತಿದ್ದ ಪುರಸಭೆಯ ಬಹುತೇಕ ಸದಸ್ಯರು ಕಾರ್ಯಕ್ರಮ ಮುಗಿದ ನಂತರ ಕಾರ್ಯಕ್ರಮ ಆಯೋಜಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಹಲವು ಬಾರಿ ಆಹ್ವಾನ ನೀಡಿ ಖುರ್ಚಿ ಹಾಕದ ಜನರಿಂದ ಆಯ್ಕೆಯಾದ ನಮಗೆ ಅಧಿಕಾರಿಗಳು ಅಗೌರವ ತೋರುತ್ತಿದ್ದು, ಸುಮ್ಮನೆ ಏಕೆ ನಮ್ಮನ್ನು ಆಹ್ವಾನಿಸಬೇಕು. ಅದರ ಬದಲು ಅವರೇ ಕಾರ್ಯಕ್ರಮ ಮಾಡಿಕೊಳ್ಳಲಿ ಎಂದು ಸದಸ್ಯರಾದ ಎಂ.ಟಿ.ಪ್ರಶಾAತ್, ರವಿ, ಪುಟ್ಟಸ್ವಾಮಿ, ಪ್ರಮೀಳಾ, ಬಸವರಾಜು, ಕುಮಾರ್, ನಾಗೇಶ್ ನಾರಾಯಣ ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ರಾಧಾ ನಾಗರಾಜು, ಉಪಾಧ್ಯಕ್ಷ ಟಿ.ನಂದಕುಮಾರ್, ಸದಸ್ಯೆ ವೆದಾವತಿ, ಉಪವಿಭಾಗಾಧಿಕಾರಿ ಐಶ್ವರ್ಯಾ, ತಹಶೀಲ್ದಾರ್ ಎಂ.ವಿಜಯಣ್ಣ, ತಾಲ್ಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಮಾಧವ ನಾಯಕ್, ಬಿಜೆಪಿ ಮುಖಂಡ ಯಮದೂರು ಸಿದ್ದರಾಜು ಸೇರಿದಂತೆ ಹಲವರು ಇದ್ದರು

ಮಲ್ಲಿಕಾರ್ಜುನ ಮಳವಳ್ಳಿ

error: