May 17, 2024

Bhavana Tv

Its Your Channel

ಆನೆ ದಾಳಿ ಲಕ್ಷಾಂತರ ಬೆಳೆ ಹಾನಿ

ಮಳವಳ್ಳಿ : ತಾಲ್ಲೂಕಿನ ಚಂದಹಳ್ಳಿ ಗ್ರಾಮದ ರೈತರ ಜಮೀನಿನ ಮೇಲೆ ಕಳೆದ ಎರಡು ದಿನಗಳಿಂದ ನಿರಂತರ ವಾಗಿ ದಾಳಿ ಮಾಡುತ್ತಿರುವ ಒಂಟಿ ಸಲಗವೊಂದು ರೈತರ ಜಮೀನಿನಲ್ಲಿ ಬೆಳೆದು ನಿಂತಿದ್ದ ಲಕ್ಷಾಂತರ ರೂ ಮೌಲ್ಯದ ಬೆಳೆಯನ್ನು ತುಳಿದು ನಾಶ ಪಡಿಸಿರುವ ಘಟನೆ ಜರುಗಿದೆ.

ಭಾನುವಾರ ರಾತ್ರಿ ಈ ಗ್ರಾಮದ ವಾಸಿ ತಾಲ್ಲೂಕು ಯುವ ಜೆಡಿಎಸ್ ಘಟಕದ ಅಧ್ಯಕ್ಷ ಶ್ರೀಧರ್, ರಾಜು, ಚಿಕಣ್ಣ, ನಾಗಣ್ಣ, ಮಹಾದೇವ ಸ್ವಾಮಿ ರವರುಗಳ ಜಮೀನಿಗೆ ನುಗ್ಗಿರುವ ಆನೆ ಬೆಳೆದು ನಿಂತಿದ್ದ ತೆಂಗು ಬಾಳೆ, ಪರಂಗಿ ಬೆಳೆಗಳನ್ನು ತುಳಿದು ನಾಶ ಪಡಿಸಿದೆ.
ಸೋಮವಾರ ರಾತ್ರಿ ಸಹ ಇದೇ ಜಮೀನುಗಳಿಗೆ ನುಗ್ಗಿರುವ ಸದರಿ ಒಂಟಿ ಆನೆ ಅದೇ ಜಮೀನುಗಳಲ್ಲಿ ಬೆಳೆದಿದ್ದ ಇನ್ನುಳಿದ ಟಮೋಟೊ, ಕಬ್ಬು ಸೇರಿದಂತೆ ಇನ್ನುಳಿದ ಬೆಳೆಗಳನ್ನು ಸಹ ತುಳಿದು ನಾಶ ಪಡಿಸಿರುವುದೇ ಅಲ್ಲದೇ ಜಮೀನಿನಲ್ಲಿ ಅಳವಡಿಸಿದ್ದ ನೀರು ಪೂರೈಕೆಯ ಪೈಪ್‌ಗಳನ್ನು ಕಿತ್ತು ನಾಶಪಡಿಸಿದೆ.
ಆಘಾತಕಾರಿ ಸಂಗತಿ ಎಂದರೆ ಈ ವರೆಗೆ ಗ್ರಾಮದ ಹೊರ ವಲಯದ ಜಮೀನುಗಳ ಮೇಲೆ ದಾಳಿ ಮಾಡುತ್ತಿದ್ದು ನಿನ್ನೆ ರಾತ್ರಿ ಊರಿನ ಒಳಭಾಗಕ್ಕೆ ನುಗ್ಗಿ ಹುಲ್ಲಿನ ಮೆದೆಗಳನ್ನು ಕೆಡವಿ ನಾಶ ಪಡಿಸಿರುವುದು ಗ್ರಾಮಸ್ಥರಲ್ಲಿ ಭಾರಿ ಆತಂಕವನ್ನು ಸೃಷ್ಟಿಸಿದೆ.
ಎರಡು ದಿನಗಳ ಈ ಆನೆ ದಾಳಿಯಿಂದಾಗಿ ಲಕ್ಷಾಂತರ ರೂ ನಷ್ಟ ಅನುಭವಿಸಿರುವ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವರದಿ ; ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: