May 18, 2024

Bhavana Tv

Its Your Channel

“ವಿದ್ಯಾಗಮ” ಮಕ್ಕಳ ಮನೆಗೆ ತೆರಳುತ್ತಿದ್ದಾಗ ದರೋಡೆ : ಕೊಲ್ಲೂರು ರೋಡಲ್ಲಿ ಆಭರಣ ಕೊಟ್ಟು ಜೀವ ಉಳಿಸಿಕೊಂಡ ಶಿಕ್ಷಕಿ !

ಶಿವಮೊಗ್ಗ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗಾಗಿ ವಿದ್ಯಾಗಮ ಯೋಜನೆಯನ್ನು ಜಾರಿಗೆ ತಂದಿದೆ. ವಿದ್ಯಾಗಮ ಯೋಜನೆಯ ಅನುಷ್ಟಾನಕ್ಕಾಗಿ ಶಿಕ್ಷಕರು ಹಳ್ಳಿ, ಕಾಡು ಮೇಡು ಅಲೆದು ಮಕ್ಕಳಿಗೆ ಶಿಕ್ಷಣವನ್ನು ಬೋಧಿಸುತ್ತಿದ್ದಾರೆ. ಆದರೆ ವಿದ್ಯಾಗಮ ಯೋಜನೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮನೆಗೆ ತೆರಳುತ್ತಿದ್ದ ಶಿಕ್ಷಕಿಯ ಚಿನ್ನಾಭರಣಗಳನ್ನು ದರೋಡೆ ಮಾಡಿದ ಘಟನೆ ಕೊಲ್ಲೂರು ರಸ್ತೆಯಲ್ಲಿ ನಡೆದಿದೆ.
ಹೌದು, ಈ ಘಟನೆ ನಡೆದಿರುವುದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ. ಶಿವಮೊಗ್ಗ ಜಿಲ್ಲೆಯ ಕೊಡತೆ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿರುವ ಆರ್. ಮಂಜುಳಾ ಅವರು ಹೊಸನಗರ ತಾಲೂಕಿನ ಕೊಲ್ಲೂರು ರಸ್ತೆಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಪಾಠ ಹೇಳಿಕೊಡಲು ತೆರಳುತ್ತಿದ್ದರು. ಈ ವೇಳೆಯಲ್ಲಿ ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಚಾಕು ತೋರಿಸಿ ಶಿಕ್ಷಕಿಯನ್ನು ಬೆದರಿಸಿದ್ದಾರೆ. ಶಿಕ್ಷಕಿ ಕತ್ತಿನಲ್ಲಿದ್ದ ತಾಳಿ ಸರ, ಬಂಗಾರದ ಬಳೆ ಸೇರಿದಂತೆ ಸುಮಾರು 90 ಗ್ರಾಂ ತೂಕದ ಚಿನ್ನಾಭರಣಗಳನ್ನು ದುಷ್ಕರ್ಮಿಗಳಿಗೆ ಕೊಟ್ಟು ಬಚಾವ್ ಆಗಿದ್ದಾರೆ.
ಮೂವರು ಮುಖಕ್ಕೆ ಮಾಸ್ಕ್ ತೊಟ್ಟಿದ್ದು, ಕುಂದಾಪುರ ಕನ್ನಡ ಭಾಷೆಯಲ್ಲಿ ಮಾತನಾಡುತ್ತಿದ್ದರು ಎನ್ನಲಾಗುತ್ತಿದೆ. ಅಲ್ಲದೇ ಬೈಕಿನ ನಂಬರ್ ಪ್ಲೇಟ್ ನಲ್ಲಿ ಸಂಖ್ಯೆ ಸರಿಯಾಗಿ ಕಾಣುತ್ತಿರಲಿಲ್ಲ. ದುಷ್ಕರ್ಮಿಗಳು ದರೋಡೆ ಮಾಡುವ ಸಲುವಾಗಿಯೇ ಆ ದಾರಿಯಲ್ಲಿ ಬಂದಿದ್ದಾರೆನ್ನಲಾಗುತ್ತಿದೆ. ಶಿಕ್ಷಕಿಯಿಂದ ಚಿನ್ನಾಭರಣಗಳನ್ನು ತೆಗೆದುಕೊಂಡ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಈ ಕುರಿತು ಶಿಕ್ಷಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದು, ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ.
ಶಿಕ್ಷಕಿಯ ದರೋಡೆ ಪ್ರಕರಣ ಇದೀಗ ಮಲೆನಾಡಿನ ಭಾಗದ ಶಿಕ್ಷಕರಿಗೆ ಆತಂಕವನ್ನು ಮೂಡಿಸಿದೆ. ಒಂದೆಡೆ ಕೊರೊನಾ ಭೀತಿ. ಇನ್ನೊಂದೆಡೆ ದುಷ್ಕರ್ಮಿಗಳ ದಾಳಿಯಿಂದಾಗಿ ಜೀವ ಭಯದಲ್ಲಿಯೇ ಶಿಕ್ಷಕರು ವಿದ್ಯಾಗಮ ಯೋಜನೆಯಲ್ಲಿ ತೊಡಗಿಕೊಂಡಿದ್ದಾರೆ

error: