May 19, 2024

Bhavana Tv

Its Your Channel

ಕಾಲಕಾಲಕ್ಕೆ ಮಧುಮೇಹ ತಪಾಸಣೆ ಮಾಡಿಸಿಕೊಳ್ಳಿ- ಡಾ.ಕೆ. ರಾಮಚಂದ್ರ ಜೋಶಿ

ಕಾರ್ಕಳ: ಮಧುಮೇಹ ಕಾಯಿಲೆಯು ಪ್ರಾರಂಭದಲ್ಲಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ, ಇದನ್ನು ಪತ್ತೆಹಚ್ಚಲು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯಕ. ನಿಯಮಿತವಾದ ಆಹಾರ ಸೇವನೆ, ನಿಯಮಿತವಾದ ವ್ಯಾಯಾಮ ಮತ್ತು ಮನಸ್ಸಿನ ನಿಗ್ರಹದಿಂದ ಮಧುಮೇಹವನ್ನು ಹತೋಟಿಯಲ್ಲಿಡಬಹುದು ಎಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ ಇದರ ಸಭಾಪತಿಯಾದ ಡಾ.ಕೆ. ರಾಮಚಂದ್ರ ಜೋಶಿ ಹೇಳಿದರು.
ಅವರು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ ಘಟಕ, ಭಾರತೀಯ ವೈದ್ಯಕೀಯ ಸಂಘ ಕಾರ್ಕಳ ಮತ್ತು ಶ್ರೀ ಭುವನೇಂದ್ರ ಮೆಡಿಕಲ್ ಮಿಷನ್ ಇವರ ಸಂಯುಕ್ತ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ ಇದರ ಕಾರ್ಯಾಲಯದಲ್ಲಿ ನಡೆದ “ವಿಶ್ವ ಮಧುಮೇಹ ದಿನಾಚರಣೆ ೨೦೨೧”ಇದರ ಅಂಗವಾಗಿ ನಡೆದ ಉಚಿತ ಮಧುಮೇಹ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.

  ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ  ಇಸ್ರೋದ ನಿವೃತ್ತ ವಿಜ್ಞಾನಿ ರೋಟೇರಿಯನ್ ಇ. ಜನಾರ್ಧನ್ ಅಧಿಕ ಮಧುಮೇಹಿಗಳಿರುವ ನಮ್ಮ ದೇಶದಲ್ಲಿ ಮಧುಮೇಹಿಗಳನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಅರಿತು ಸೂಕ್ತ ಔಷಧಿಗಳನ್ನು ನೀಡುವ ವ್ಯವಸ್ಥೆಯಾಗಬೇಕು ಎಂದರು.

   ಮುಖ್ಯಅತಿಥಿ ಭಾರತೀಯ ವೈದ್ಯಕೀಯ ಸಂಘ ಕಾರ್ಕಳ ಇದರ ಅಧ್ಯಕ್ಷರಾದ ಡಾ. ಅನಂತ ಕಾಮತ್ ಮಾತನಾಡುತ್ತಾ ಭಾರತವು ಮಧುಮೇಹದ  ರಾಜಧಾನಿಯಾಗಿದೆ.  ಮಧುಮೇಹ ರೋಗಿಗಳು ಮಿತವಾದ ಮತ್ತು ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸಬೇಕು ಎಂದರು.

 ಶ್ರೀ ಭುವನೇಂದ್ರ ವೈದ್ಯಕೀಯ ಮಿಷನ್ ಇದರ ಅಧ್ಯಕ್ಷ ಗಣೇಶ್ ಕಾಮತ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

    ಈ ಸಂದರ್ಭದಲ್ಲಿ ಆಯೋಜಿಸಲಾದ ಸ್ಪೆಷಲಿಸ್ಟ್ ವೈದ್ಯಕೀಯ ಶಿಬಿರದಲ್ಲಿ ೬೦ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು ಎಲ್ಲರಿಗೂ ಬ್ಲಡ್ ಶುಗರ್, ಬಿಪಿ, ಇಸಿಜಿ, ಸೀರಂ ಯೂರಿಕ್ ಆಸಿಡ್   ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಯಿತು.

 ಶಿವಕುಮಾರ್ ಪ್ರಾರ್ಥಿಸಿದರು. ಶೇಖರ್ ಹೆಚ್. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಸಂತ್ ಎಂ ವಂದಿಸಿದರು.

ವರದಿ: ಅರುಣ ಭಟ್ ಕಾರ್ಕಳ

error: