May 10, 2024

Bhavana Tv

Its Your Channel

ಕಾರ್ಕಳ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ: ಭಕ್ತಾದಿಗಳಿಂದ ಮುಷ್ಠಿ ಕಾಣಿಕೆ ಸಮರ್ಪಣೆ

ಕಾರ್ಕಳ: ಇತಿಹಾಸ ಪ್ರಸಿದ್ಧ ಕಾರ್ಕಳ ಕೋಟೆ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭಗೊAಡಿದ್ದು, ಈ ಪ್ರಯುಕ್ತ ಭಾನುವಾರ ಭಕ್ತಾದಿಗಳಿಂದ ಮುಷ್ಠಿ ಕಾಣಿಕೆ ಸಮರ್ಪಣಾ ಕಾರ್ಯಕ್ರಮ ನಡೆಯಿತು.
ಮುಜರಾಯಿ ಹಾಗೂ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಜೀರ್ಣೋದ್ಧಾರ ಪ್ರಯುಕ್ತ ನಡೆದ ಮುಷ್ಠಿ ಕಾಣಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ಸುಮಾರು 15 ಕೋ.ರೂ ವೆಚ್ಚದಲ್ಲಿ ಮಾರಿಯಮ್ಮ ದೇವಳವು ಜೀರ್ಣೋದ್ಧಾರಗೊಳ್ಳುತ್ತಿದ್ದು, ಮುಜರಾಯಿ ಇಲಾಖೆಯ ವತಿಯಿಂದ 1 ಕೋ.ರೂ ಅನುದಾನ ಬಿಡುಗಡೆಗೊಳಿಸುವುದಾಗಿ ಹೇಳಿದರು. ದೈವ ಸಂಕಲ್ಪ ಯೋಜನೆಯಡಿ ದೇವಸ್ಥಾನಗಳ ಅಭಿವೃದ್ಧಿಗೆ 1140 ಕೋ.ರೂ ಅನುದಾನ ಮೀಸಲಿರಿಸಲಾಗಿದೆ. ರಾಜ್ಯದ ಎ ಶ್ರೇಣಿಯ 25 ದೇವಸ್ಥಾನಗಳನ್ನು ಈ ಯೋಜನೆಯಡಿ ಅಭಿವೃದ್ಧಿಪಡಿಸಲು ಮಾಸ್ಟರ್ ಪ್ಲಾನ್ ಸಿದ್ದತೆಗೊಂಡಿದ್ದು ಟೆಂಡರ್ ಕರೆಯಲಾಗಿದೆ. ಈ ಯೋಜನೆಯಲ್ಲಿ ದೇವಳಗಳ ಅಭಿವೃದ್ಧಿ ಜತೆಗೆ ದೇವಸ್ಥಾನಗಳ ಸಂಪರ್ಕ ರಸ್ತೆಗಳ ಅಭಿವೃದ್ಧಿ, ಚರಂಡಿ ನಿರ್ಮಾಣ, ಭೂಗತ ಕೇಬಲ ವ್ಯವಸ್ಥೆ, ವಿದ್ಯುತ್ ದೀಪ, ಯಾತ್ರಿ ನಿವಾಸಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತದೆ. ಅವಿಭಜಿತ ದ.ಕ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ , ಕೊಲ್ಲೂರು ಮೂಕಾಂಬಿಕೆ, ಸೌತಡ್ಕ ಗಣಪತಿ ದೇವಸ್ಥಾನ, ಕಮಲಶಿಲೆ ದುರ್ಗಾಪರಮೇಶ್ವರಿ ದೇವಸ್ಥಾನ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಮಂದರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ, ಪುತ್ತೂರು ಮಹತೋಬಾರ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ರಾಜ್ಯದ 25 ದೇವಸ್ಥಾನಗಳ ಅಭಿವೃದ್ಧಿ ಕುರಿತು ನೀಲ ನಕಾಶೆ ಸಿದ್ಧವಾಗಿದೆ ಎಂದರು.

ಕಾಶಿ ಯಾತ್ರೆಗೆ ವಿಶೇಷ ಅನುದಾನ ಘೋಷಣೆ:
ಪ್ರತೀವರ್ಷ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಳ್ಳುವ ತಲಾ 30 ಸಾವಿರ ಯಾತ್ರಾರ್ಥಿಗಳಿಗೆ ಮುಜರಾಯಿ ಇಲಾಖೆಯಿಂದ ತಲಾ 5 ಸಾವಿರ ಸಹಾಯಧನವನ್ನು ನೀಡಲಾಗುವುದು. ಆಗಸ್ಟ್ ತಿಂಗಳಿನಿAದ ಬೆಂಗಳೂರು,ಕಾಶಿ,ಅಯೋಧ್ಯೆ, ಪ್ರಯಾಗರಾಜ್ ನಡುವೆ ಯಾತ್ರಾರ್ಥಿಗಳಿಗೆ ವಿಶೇಷ ರೈಲುಗಳನ್ನು ಓಡಿಸಲಾಗುವುದು,ಏಳು ದಿನಗಳ ಈ ಪ್ರವಾಸದಲ್ಲಿ ರೈಲುಗಳನ್ನು ಸುಸಜ್ಜಿತವಾಗಿ ಮಾರ್ಪಾಟುಗೊಳಿಸಲಾಗಿದ್ದು, ಮೊದಲ ಬೋಗಿಯಲ್ಲಿ ದೇವಸ್ಥಾನದ ಸ್ವರೂಪವನ್ನು ನಿರ್ಮಿಸಿ ಯಾತ್ರಾರ್ಥಿಗಳಿಗೆ ಭಜನೆ ಕೀರ್ತನೆಗಳನ್ನು ಮಾಡಿಕೊಂಡು ಯಾತ್ರೆ ಕೈಗೊಳ್ಳುವ ಅವಕಾಶ ಕಲ್ಪಿಸಲಾಗಿದೆ .14 ಬೋಗಿಗಳ ರೈಲಿನ ಒಂದು ಪಾರ್ಶ್ವದಲ್ಲಿ ರಾಜ್ಯದ ಎ ಶ್ರೇಣಿಯ ದೇವಸ್ಥಾನಗಳ ಮಾಹಿತಿ ಹಾಗೂ ಭಿತ್ತಿಚಿತ್ರಗಳು, ಇನ್ನೊಂದು ಪಾರ್ಶ್ವದಲ್ಲಿ ಕಾಶಿ ಮತ್ತು ಅಯೋಧ್ಯೆಯ ಮಾಹಿತಿ ಹಾಗೂ ಭಿತ್ತಿಚಿತ್ರಗಳನ್ನು ವಿನ್ಯಾಸಗೊಳಿಸಲಾಗುವುದೆಂದರು.
ರಾಜ್ಯದ ಮುಜರಾಯಿ ದೇವಸ್ಥಾನಗಳ ಅರ್ಚಕರ ಶ್ರೇಯೋಭಿವೃದ್ದಿಗಾಗಿ ಅರ್ಚಕರಿಗೆ ವಾರ್ಷಿಕ ನೀಡಲಾಗುತ್ತಿದ್ದ ತಸ್ತೀಕ್ 60 ಸಾವಿರ ಕ್ಕೆ ಏರಿಸಲಾಗಿದೆ. ಅರ್ಚಕರ ಕುಟುಂಬಗಳಿಗೆ ಆರೋಗ್ಯ ವಿಮಾ ಸೌಲಭ್ಯ ಕಲ್ಪಿಸಲಾಗುವುದು.
ಟೆಂಪಲ್ ಟೂರಿಸಂ ಕನಸು ಸಾಕಾರಗೊಳ್ಳುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲಾಗುತ್ತಿದ್ದು, ಕೊರೊನಾ ಭೀತಿಯ ನಡುವೆಯೂ ಲೋಕ ಕಲ್ಯಾಣಾರ್ಥವಾಗಿ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ವಿಜಯದಶಮಿಯ ಸಂದರ್ಭದಲ್ಲಿ ಧನ್ವಂತರಿ ಜಪ,ದೀಪಾವಳಿ ಬಲಿ ಪಾಡ್ಯಮಿಯ ಗೋಧೂಳಿ ಮುಹೂರ್ತದಲ್ಲಿ 35 ಸಾವಿರ ದೇವಸ್ಥಾನಗಳಲ್ಲಿ ಗೋಪೂಜೆಯ ಮೂಲಕ ಐತಿಹಾಸಿಕ ಕಾರ್ಯಕ್ರಮ ನಡೆಸಿ ದೇಸೀ ಗೋವುಗಳ ಮಹತ್ವ, ದೇಸೀ ಗೋವುಗಳ ಕೊರತೆಯ ಮಾಹಿತಿ, ರೈತರ ಮನೆಯಲ್ಲಿ ದೇಸೀ ಗೋವುಗಳನ್ನು ಸಾಕಾಣಿಕೆಗೆ ಪ್ರೋತ್ಸಾಹ ನೀಡಲಾಗುವುದು.
ಸಮಗ್ರ ದೇವಸ್ಥಾನ ನಿರ್ವಹಣಾ ವ್ಯವಸ್ಥೆ:
ರಾಜ್ಯದಲ್ಲಿನ ಎಲ್ಲಾ ದೇವಸ್ಥಾನಗಳ ಮಾಹಿತಿ, ಪೂಜೆ ಹಾಗೂ ಸೇವೆಗಳ ಮಾಹಿತಿಯನ್ನು ಆನ್ ಲೈನ್ ಮೂಲಕ ಭಕ್ತರಿಗೆ ತಲುಪಿಸಲು ಅಂತರ್ಜಾಲ ಮೂಲಕ ಸಮಗ್ರ ದೇವಸ್ಥಾನಗಳ ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ರಾಜ್ಯದ 205 ಎ ಶ್ರೇಣಿ ದೇವಸ್ಥಾನಗಳ ಮಾಹಿತಿಯನ್ನು ಈ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ. ಇ- ಹುಂಡಿ ವ್ಯವಸ್ಥೆಯನ್ನು ಮಾಡುವ ಮೂಲಕ ಭಕ್ತರ ದೇಣಿಗೆಗಳು ನೇರವಾಗಿ ಮುಜರಾಯಿ ದೇವಸ್ಥಾನಗಳಿಗೆ ಜಮೆಯಾಗುವ ಮೂಲಕ ಹಣ ದುರ್ಬಳಕೆಗೆ ಕಡಿವಾಣ ಹಾಕಲಾಗುತ್ತದೆ ಎಂದರು.
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಎಲ್ಲಾ ಭಕ್ತಾದಿಗಳಿಂದ ಉತ್ತಮ ಸಹಕಾರ ಸಿಗುತ್ತಿದೆ, ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಸೇವಾ ಮನೋಭಾವದಿಂದ ತಮ್ಮನ್ನು ತೊಡಗಿಸಿಕೊಳ್ಳಬೇಕು. ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರದ ಜತೆಗೆ ಈ ದೇವಸ್ಥಾನಕ್ಕೆ ಹೊಂದಿಕೊAಡ ಎಲ್ಲಾ ಗುಡಿಗಳ ಜೀರ್ಣೋದ್ಧಾರ ನಡೆಯಲಿದೆ ಎಂದರು. ನಿರಂತರವಾಗಿ ಹೋಮ ಹವನಗಳನ್ನು ನಡೆಸುವ ನಿಟ್ಟಿನಲ್ಲಿ ಯಾಗಶಾಲೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ನಿಟ್ಟಿನಲ್ಲಿ ಸಭಾಭವನದ ನಿರ್ಮಾಣ ಕಾಮಗಾರಿ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಗೌರವಿಸಿದರು.

error: