April 28, 2024

Bhavana Tv

Its Your Channel

ಪ್ರಧಾನಿ ನರೇಂದ್ರ ಮೋದಿ ಸರಕಾರ ಅಗ್ನಿಪಥ ಹೆಸರಲ್ಲಿ ಸೇನೆಗೆ ಅಲ್ಪಾವದಿ ನೆಲೆಯ ಗುತ್ತಿಗೆ ಆಧಾರದ ನೇಮಕಾತಿ ಯೋಜನೆ ಹಮ್ಮಿಕೊಂಡಿರುವುದು ಖಂಡನೀಯ

ಕಾರ್ಕಳ: ಪ್ರಧಾನಿ ನರೇಂದ್ರ ಮೋದಿ ಸರಕಾರ ಅಗ್ನಿಪಥ ಹೆಸರಲ್ಲಿ ಸೇನೆಗೆ ಅಲ್ಪಾವದಿ ನೆಲೆಯ ಗುತ್ತಿಗೆ ಆಧಾರದ ನೇಮಕಾತಿ ಯೋಜನೆ ಹಮ್ಮಿಕೊಂಡಿರುವುದು ಖಂಡನೀಯ. ಇದು ಈ ಸರಕಾರದ ಆರ್ಥಿಕ ಹಾಗೂ ಆಡಳಿತಾತ್ಮಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಕಳೆದ 2021ರಲ್ಲಿ ಲಿಖಿತ ಪರೀಕ್ಷೆ ಮುಗಿಸಿ ಮುಂದಿನ ನೇಮಕಾತಿ ಪ್ರಕ್ರಿಯೆಗಾಗಿ ಕಾಯುತ್ತಿರುವವರಿಗೆ ಈ ಯೋಜನೆ ನಿರಾಸೆ ತಂದಿದೆ. ದೇಶದಲ್ಲಿ ಕೊರೋನಾ ಸಾಂಕ್ರಾಮಿಕತೆ, ನಿರುದ್ಯೊಗ, ಆರ್ಥಿಕ ಹಿಂಜರಿತದ ಹೊರತಾಗಿಯೂ ತನ್ನ ವೈಯಕ್ತಿಕ ಪ್ರತಿಷ್ಠೆಗಾಗಿ ನಮೋ ಟ್ರಂಪ್ ಹೆಸರಲ್ಲಿ ನೂರಾರು ಕೋಟಿ ಖರ್ಚು ಮಾಡಿದ್ದ ಮೋದಿ ಸರಕಾರ ಕಳೆದ 2 ವರ್ಷಗಳಿಂದ ಅದೇ ಕಾರಣವನ್ನು ದೇಶದ ಮುಂದಿಟ್ಟು ಸೇನಾಪಡೆಗೆ ನೇಮಕಾತಿಯನ್ನೇ ಮಾಡದೇ ಇರುವ ಔಚಿತ್ಯವಾದರೂ ಏನು ಎಂದು ಪ್ರಶ್ನಿಸಿರುವ ಕಾಂಗ್ರೆಸ್, ದೇಶವನ್ನು ಅಭಿವೃದ್ದಿಯ ಪಥದಲ್ಲಿ ನಡೆಸ ಬೇಕಿದ್ದ ಮೋದಿ ಸರಕಾರ ತನ್ನ ಆಡಳಿತ ವೈಫಲ್ಯದ ಕಾರಣವಾಗಿ ದೇಶವನ್ನು ಅಗ್ನಿ ಪಥಕ್ಕೆ ತಳ್ಳಿ ಅಭಿವೃದ್ದಿಗೆ ಕೊಳ್ಳಿ ಇಟ್ಟಿದೆ ಎಂದು ಹೇಳಿದೆ.
ಅಗ್ನಿಪಥ ಯೋಜನೆ ದೇಶದ ಸೇನೆಯಲ್ಲಿ ಸೇವೆ ಮಾಡಬೇಕೆಂಬ ಈ ದೇಶದ ಯುವಕರ ರಾಷ್ಟ್ರಾಭಿಮಾನದ ಕೆಚ್ಚನ್ನು ಕೆರಳಿಸಿದೆ. ದೇಶದ ಸೇನಾ ಪಡೆಗೆ ಸೇರುವುದು ದೇಶಕ್ಕಾಗಿ ತ್ಯಾಗ ಬಲಿದಾನಕ್ಕೆ ಸನ್ನದ್ಧವಾದ ಒಂದು ಸೇವೆಯೇ ಹೊರತು ಅದೊಂದು ಉದ್ಯೋಗವಲ್ಲ. ಆದರೆ ಇದನ್ನು ಅರ್ಥೈಸಿಕೊಳ್ಳುವಲ್ಲಿ ಮೋದಿ ಸರಕಾರ ಎಡವಿದೆ. ಅದಕ್ಕೆ ಅವರದ್ದೇ ಸರಕಾರದ ಸಚಿವರೊಬ್ಬರ ಹೇಳಿಕೆ ಸಾಕ್ಷಿ ನುಡಿದಿದೆ.
ಈ ಅವೈಜ್ಞಾನಿಕ ಯೋಜನೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ದೇಶಾದ್ಯಂತ ಯುವಕರು ಉಗ್ರ ಪ್ರತಿಭಟನೆ ಮಾಡುತ್ತಿರುವುದರ ಹೊರತಾಗಿಯೂ, ಸರಕಾರ ಸೇನಾ ಪಡೆಯ ಮುಖ್ಯಸ್ಥರ ಮೂಲಕ ಯೋಜನೆಯನ್ನು ಹಿಂಪಡೆಯುವುದಿಲ್ಲ ಎಂಬ ಹೇಳಿಕೆ ಕೊಡಿಸುವ ಬೆದರಿಸುವ ತಂತ್ರಗಾರಿಕೆಗೆ ಶರಣಾಗಿರುವುದು ಸಾಂವಿಧಾನಿಕ ಉಲ್ಲಂಘನೆಯಾಗಿದೆ.
ಪ್ರಜಾತಂತ್ರ ವ್ಯವಸ್ಥೆಯಡಿಯಲಿ ಇದು ಒಪ್ಪಲರ್ಹವಲ್ಲ. ಸರಕಾರ ಕೂಡಲೇ ಈ ಯೋಜನೆಯನ್ನು ತಡೆಹಿಡಿದು ರೆಗ್ಯುಲರ್ ನೇಮಕಾತಿ ಪ್ರಕ್ರಿಯೆಯಡಿಯಲ್ಲಿ ಯುವ ಜನರಿಗೆ ಸೇನೆಗೆ ಸೇರುವ ಅವಕಾಶವನ್ನು ಮಾಡಿಕೊಡಬೇಕು ಎಂದು ಜಿಲ್ಲಾ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವರದಿ: ಅರುಣ ಭಟ್ ಕಾರ್ಕಳ

error: