May 18, 2024

Bhavana Tv

Its Your Channel

ಕಾರ್ಕಳ ಪುರಸಭೆ ಸಾಮಾನ್ಯ ಸಭೆ: ಅನಧಿಕೃತ ಕಟ್ಟಡ ತೆರವಿಗೆ ವಿಪಕ್ಷ ಕಾಂಗ್ರೆಸ್ ಸದಸ್ಯರ ಬಿಗಿಪಟ್ಟು

ಕಾರ್ಕಳ: ಪುರಸಭಾ ವ್ಯಾಪ್ತಿಯ ಅನಂತಶಯನ ವೃತ್ತದ ಸಮೀಪದಲ್ಲಿ ಪುರಾತತ್ವ ಇಲಾಖೆಯ ನೀಷೇಧಿತ ವಲಯದಲ್ಲಿ ನಿತ್ಯಾನಂದ ಪೈ ಎಂಬವರು ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡವನ್ನು ತೆರವುಗೊಳಿಸಬೇಕೆಂದು ಪುರಸಭೆ ನೋಟೀಸ್ ನೀಡಿದ್ದರೂ ಅದನ್ನು ಮೀರಿ ಕಟ್ಟಡ ಕಾಮಗಾರಿ ಮುಂದುವರಿಸುತ್ತಿರುವ ವಿರುದ್ಧ ಪುರಸಭಾ ಸದಸ್ಯ ಸೋಮನಾಥ ನಾಯ್ಕ್ ತೀವೃ ಆಕ್ರೋಶ ಹೊರಹಾಕಿದರು.

ಪುರಸಭಾಧ್ಯಕ್ಷೆ ಸುಮಾ ಕೇಶವ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಕಾಂಗ್ರೆಸ್ ಸದಸ್ಯ ಸೋಮನಾಥ ನಾಯ್ಕ್ ವಿಷಯ ಪ್ರಸ್ತಾಪಿಸಿ, ಪುರಸಭೆ ಹಾಗೂ ಪುರಾತತ್ವ ಇಲಾಖೆಯ ಅನುಮತಿ ಪಡೆಯದೇ ನಿಷೇಧಿತ ವಲಯದಲ್ಲಿ ಅಕ್ರಮವಾಗಿ ಬಹುಮಹಡಿ ವಾಣಿಜ್ಯ ಸಂಕೀರ್ಣ ಕಟ್ಟುತ್ತಿರುವ ವಿಚಾರ ಗೊತ್ತಿದ್ದರೂ ಅಧಿಕಾರಿಗಳು ಸುಮ್ಮನಿದ್ದರು, ಈಗ ಸಾರ್ವಜನಿಕರ ವಿರೋಧಕ್ಕೆ ಮಣಿದು ನೋಟೀಸ್ ಜಾರಿಗೊಳಿಸಲಾಗಿದೆ ಆದರೆ ಕಾಮಗಾರಿ ಸ್ಥಗಿತಗೊಳಿಸುವ ಧೈರ್ಯ ತೋರದೇ ಪುರಸಭೆ ಆಡಳಿತ ಅಕ್ರಮಕ್ಕೆ ಕೈಜೋಡಿಸಿದೆ ಎಂದು ಆರೋಪಿಸಿದರು.
ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಒಂದು ನ್ಯಾಯ ಎನ್ನುವುದಾದರೆ ಕಾನೂನು ಯಾರಿಗೆ ,ಇದು ಸರ್ವಾಧಿಕಾರವೇ ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉತ್ತರಿಸಿ ಈಗಾಗಲೇ ಅವರಿಗೆ ನೋಟೀಸ್ ನೀಡಲಾಗಿದೆ,ಆದರೆ ಕಾಲಾವಕಾಶ ಕೇಳಿದ್ದು, ಖಾಸಗಿ ಜಾಗದಲ್ಲಿ ಕಟ್ಟಡ ನಿರ್ಮಿಸಿದ ಕಾರಣಕ್ಕಾಗಿ ಕಾನೂನು ತೊಡಕಿನಿಂದ ಏಕಾಎಕಿ ಕಟ್ಟಡ ತೆರವು ಪ್ರಕ್ರಿಯೆ ಸಾಧ್ಯವಾಗಿಲ್ಲ ಎಂದಾಗ ಆಕ್ರೋಶಗೊಂಡ ಸೋಮನಾಥ ನಾಯ್ಕ್, ಪುರಸಭೆಯ ಆದೇಶಕ್ಕೂ ಬೆಲೆಯಿಲ್ಲ ಎಂದಾದರೆ ಜನಪ್ರತಿನಿಧಿಗಳಿಗೂ ಬೆಲೆಯಿಲ್ಲ ಹಾಗಾಗಿ ನಾವು ಸಭೆಯಲ್ಲಿ ಭಾಗವಹಿಸುವುದು ಸರಿಯಲ್ಲ ಎಂದು ಆಕ್ರೋಶಿತರಾಗಿ ಸಭಾತ್ಯಾಗ ಮಾಡಿದರು.

ಪುರಸಭೆ ವ್ಯಾಪ್ತಿಯಲ್ಲಿ ಎಣ್ಣೆಹೊಳೆ ಏತನೀರಾವರಿ ಪೈಪ್ ಲೈನ್ ಕಾಮಗಾರಿಗೆ ರಸ್ತೆ ಅಗೆದು ಹಾಕಲಾಗಿದೆ ಇದರಿಂದ ರಸ್ತೆ ಗುಂಡಿಗೆ ವಾಹನ ಸವಾರರು ಬಿದ್ದು ಅಪಘಾತಗಳು ಸಂಭವಿಸುತ್ತಿದ್ದರೂ ಸಂಬAಧಪಟ್ಟವರು ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯ ಎಂದು ಸದಸ್ಯರಾದ ಪ್ರತಿಮಾ ರಾಣೆ, ಶಶಿಕಲಾ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಅಧ್ಯಕ್ಷೆ ಸುಮಾ ಕೇಶವ ಉತ್ತರಿಸಿ, ಈಗಾಗಲೇ ನಗರದ ರಸ್ತೆಗಳ ದುರಸ್ತಿಗೆ ಸಚಿವರು ಒಂದು ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಟೆಂಡರ್ ಕರೆದು ಕಾಮಗಾರಿ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು.

ಸಂವಿಧಾನ ದಿನಾಚರಣೆ ಅಂಗವಾಗಿ ನಗರದಲ್ಲಿ ಅಳವಡಿಸಲಾಗಿದ್ದ ಅಂಬೇಡ್ಕರ್ ಬ್ಯಾನರ್ ಗಳನ್ನು ತೆರವುಗೊಳಿಸಿದ ವಿರುದ್ಧ ಪ್ರತಿಮಾ ರಾಣೆ ಆಕ್ರೋಶ ಹೊರಹಾಕಿ, ನಿಮಗೆ ದಲಿತರು ಎಂದರೆ ಕೀಳರಿಮೆ, ಅಂಬೇಡ್ಕರ್ ಬ್ಯಾನರ್ ತೆರವುಗೊಳಿಸಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕಿದರು. ಇದಕ್ಕೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉತ್ತರಿಸಿ, ನಾವು ಅನಧಿಕೃತ ಬ್ಯಾನರ್ ಗಳನ್ನು ಮಾತ್ರ ತೆರವುಗೊಳಿಸಿದ್ದು, ಅಂಬೇಡ್ಕರ್ ಬ್ಯಾನರ್ ಗಳನ್ನು ತೆರವುಗೊಳಿಸಿಲ್ಲ ಎಂದಾಗ ಅನಧಿಕೃತ ಬ್ಯಾನರ್ ಗಳ ಪಟ್ಟಿ ಕೊಡಿ, ನಾವು ಅನುಮತಿ ಪಡೆದು ಹಾಕಿರುವ ಬ್ಯಾನರ್ ತೆರವು ಮಾಡಿರುವುದನ್ನು ನೋಡಿಕೊಂಡು ಸುಮ್ಮನಿರಲು ಸಾದ್ಯವಿಲ್ಲ ಎಂದು ಪ್ರತಿಮಾ ಗುಡುಗಿದರು.

ಮುಂಡ್ಲಿ ಜಲಾಶಯದಿಂದ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು ಗೇಟ್ ಹಾಕುವಲ್ಲಿ ಕಂಪನಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಸೋಮನಾಥ ನಾಯ್ಕ್ ಸಭೆಯ ಗಮನಸೆಳೆದರು. ಕುಡಿಯುವ ನೀರಿನ ಸಮಸ್ಯೆಗೆ ಪುರಸಭೆ ತ್ವರಿತವಾಗಿ ಸ್ಪಂದಿಸಬೇಕಿದೆ ಎಂದು ಅವರು ಆಗ್ರಹಿಸಿದರು
ವರದಿ:ಅರುಣ ಭಟ್ಟ ಕಾರ್ಕಳ

error: