May 2, 2024

Bhavana Tv

Its Your Channel

ಪುರಸಭಾ ಸದಸ್ಯ ಹಾಗೂ ಬ್ಲಾಕ್ ಕಾಂಗ್ರೇಸ್ ವಕ್ತಾರ ಶುಭದರಾವ್ ಪತ್ರಿಕಾ ಘೋಷ್ಠಿ

ಕಾರ್ಕಳ : ಪರಶುರಾಮ ಥೀಂ ಪಾರ್ಕ್ ನಿರ್ಮಾಣಕ್ಕೆ ಜಮೀನೇ ಮಂಜೂರಾಗಲಿಲ್ಲ ಪ್ರಸ್ತಾವನೆಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದ್ದ ಬಿಜೆಪಿ ಸರಕಾರ ಗೋಮಾಳ ಜಮೀನಿನಲ್ಲಿ ನಿರ್ಮಾಣಗೊಂಡಿರುವ ಈ ಪಾರ್ಕಿನ ನಿರ್ವಣೆಯ ಹೊಣೆ ಯಾರಿಗೆ ಪುರಸಭಾ ಸದಸ್ಯ ಹಾಗೂ ಬ್ಲಾಕ್ ಕಾಂಗ್ರೇಸ್ ವಕ್ತಾರ ಶುಭದರಾವ್ ಪ್ರಶ್ನಿಸಿದ್ದಾರೆ.
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ತುಳುನಾಡಿನ ಸೃಷ್ಟಿಕರ್ತ ಪರಶುರಾಮನಿಗೆ ಪರಶುರಾಮ ಥೀಂ ಪಾರ್ಕ್ ನಿರ್ಮಾಣಗೊಳಿಸಿ ಕಾರ್ಕಳವನ್ನು ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿಗೊಳಿಸಿದ್ದೇನೆ ಎಂದು ಹೇಳುತ್ತಿದ್ದ ಶಾಸಕರ ಸಾಧನೆಗೆ ಪೂರಕವಾದ ದಾಖಲೆಗಳೇ ಇಲ್ಲದೆ ಸಾರ್ವಜನಿಕರ ಆಕ್ಷೇಪಗಳಿಗೆ ಕಾರಣವಾಗುತ್ತಿರುವ ಸತ್ಯಾಸತ್ಯತೆಗಳು ಬೆಳಕಿಗೆ ಬಂದಿವೆ.
ಕಾರ್ಕಳ ಎರ್ಲಪಾಡಿಯ ಉಮ್ಮಿಕಲ್ ಬೆಟ್ಟದಲ್ಲಿ ಪರಶುರಾಮನ ಪಾರ್ಕ್ ನಿರ್ಮಾಣಗೊಂಡಿರುವ ಜಮೀನು ಗೋಮಾಳ ಜಮೀನು ಆದ ಕಾರಣ ಮಂಜೂರಾತಿ ಪ್ರಸ್ತಾವನೆಯನ್ನು ತಿರಸ್ಕರಿಸಿ ಬಿಜೆಪಿ ಸರಕಾರವೇ ಅದೇಶ ಹೊರಡಿಸಿದೆ. ಹಾಗಾದರೆ ಪರಶುರಾಮ ಥೀಂ-ಪಾರ್ಕ್ ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿದೆಯೇ ? ಮುಂದೆ ಅದರ ನಿರ್ವಹಣೆಯ ಜವಾಬ್ದಾರಿ ಯಾರ ಹೊಣೆ ? ಎಂದು ಪುರಸಭಾ ಸದಸ್ಯ ಬ್ಲಾಕ್ ಕಾಂಗ್ರೇಸ್ ವಕ್ತಾರ ಶುಭದರಾವ್ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ಎರ್ಲಪಾಡಿ ಗ್ರಾಮದ ಸರ್ವೆ ನಂ.329/1ರಲ್ಲಿ 1.58 ಎಕ್ರೆ ಜಮೀನು ಗೋಮಾಳ ಜಮೀನಾಗಿದ್ದು, ಅದರಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಂ ಪಾರ್ಕ್ಗೆ ಆ ಜಾಗವನ್ನು ಮಂಜೂರು ಮಾಡಲು ಅವಕಾಶವಿಲ್ಲ ಎಂದು ಕಾರ್ಕಳ ತಹಶೀಲ್ದಾರ್ ಎರ್ಲಪಾಡಿ ಗ್ರಾ.ಪಂ.ಗೆ ನೀಡಿರುವ ಆದೇಶದಿಂದ ಕೋಟ್ಯಾಂತರ ರೂಪಾಯಿ ಸರಕಾರದ ಅನುದಾನ ಬಳಕೆ ಮಾಡಿ ನಿರ್ಮಾಣಗೊಂಡ ಥೀಂ ಪಾರ್ಕ್ ಕಾನೂನು ಬಾಹಿರ ಅಭಿವೃದ್ಧಿ ಎನ್ನುವುದು ಸಾಬೀತಾಗಿದೆ.
2019 ರ ನ.8 ರಂದು ಎರ್ಲಪಾಡಿ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಈ ಜಮೀನನ್ನು ಪರಶುರಾಮ ಥೀಂ ಪಾರ್ಕ್ ನಿರ್ಮಾಣ ಮಾಡುವ ಉದ್ದೇಶಕ್ಕೆ ಕಾಯ್ದಿರಿಸುವಂತೆ ನಿರ್ಣಯ ಮಾಡಿ ಪ್ರಸ್ತಾವನೆಯನ್ನು ತಹಶೀಲ್ದಾರ್‌ಗೆ ಸಲ್ಲಿಸಿತ್ತು. ಡೀಮ್ಡ್ ಫಾರೆಸ್ಟ್, ಗೋಮಾಳ ಎನ್ನುವ ಕಾರಣಗಳಿಂದ ಗ್ರಾ.ಪಂ., ತಹಸೀಲ್ದಾರ್ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಹಾಗೂ ಸರಕಾರದ ಕಂದಾಯ ಅಧೀನ ಕಾರ್ಯದರ್ಶಿವರೆಗೂ ಪತ್ರ ವ್ಯವಹಾರ ನಡೆಯುತ್ತಲೇ ಇತ್ತು. ಆದರೆ ಇನ್ನೊಂದೆಡೆ ಯಾವುದೇ ಅನುಮೋದನೆ ಇಲ್ಲದೆ ಸರಕಾರದ ಗರಿಷ್ಠ ಪ್ರಮಾಣದ ಅನುದಾನ ಅನಧೀಕೃತವಾಗಿ ಈ ಉಮಿಕಲ್ಲ್ ಬೆಟ್ಟದ ಮೇಲೆ ಸುರಿಯಿತು. ತಮ್ಮದೇ ಸರಕಾರ, ತಾನು ಮಾಡಿದ್ದೇ ಸರಿ ಎನ್ನುವ ರೀತಿ ನಡೆದುಕೊಂಡ ಶಾಸಕರು ರಾಜ್ಯದ ಮುಖ್ಯ ಮಂತ್ರಿಯನ್ನೇ ಉದ್ಘಾಟನೆಗೆ ಕರೆಸಿ ಪ್ರಚಾರ ಗಿಟ್ಟಿಸಿಕೊಂಡರು. ಮೂರು ದಿನಗಳ ಕಾಲ ನಡೆದ ಅದ್ದೂರಿಯ ಕಾರ್ಯಕ್ರಮ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆಯಂತೆ ನಡೆಯಿತು. ಪರಶುರಾಮನ ವಿಗ್ರಹದ ದರ್ಶನಕ್ಕೆ ಲಕ್ಷಾಂತರ ಜನ ಆಗಮಿಸಿರುವುದೂ ಕಂಡು ಬಂತು. ಕೊನೇ ಕ್ಷಣದಲ್ಲಿ ಇವೆಲ್ಲವುಗಳು ಕಾನೂನು ಬಾಹಿರ ಎನ್ನುವುದು ಸಾಬೀತಾಗುತ್ತಿದ್ದಂತೆ ಕಾರ್ಕಳದ ಪ್ರಜ್ಞಾವಂತ ಜನತೆ ಮೌನ ಮುರಿಯುವಂತೆ ಮಾಡಿದೆ.
ಪರಶುರಾಮ ಥೀಂ-ಪಾರ್ಕ್ ನಿರ್ಮಾಣಕ್ಕೆ ನಮ್ಮ ವಿರೋದವಾಗಲಿ, ಆಕ್ಷೇಪವಾಗಲಿ ಇಲ್ಲ. ಆದರೆ ಮುಚ್ಚಿಟ್ಟಿರುವ ಸತ್ಯವನ್ನು ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ ಅದನ್ನು ಮಾಡಿದ್ದೇವೆ. ಶಾಸಕರು ಕೂಡ ಈ ಬಗ್ಗೆ ಸತ್ಯಾಸತ್ಯತೆಯನ್ನು ಜನತೆಗೆ ತಿಳಿಸುವಂತೆ ಆಗ್ರಹಿಸುತ್ತೇನೆ ಎಂದು ಶುಭದರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬ್ಲಾಕ್ ಕಾಂಗ್ರೇಸ್ ಉಪಾಧ್ಯಕ್ಷ ಅಜಿತ್ ಹೆಗ್ಡೆ, ಕಾರ್ಯದರ್ಶಿ ವಿವೇಕಾನಂದ ಶೆಣೈ ಉಪಸ್ಥಿತರಿದ್ದರು.
ವರದಿ : ಅರುಣ ಭಟ್ ಕಾರ್ಕಳ

error: