September 18, 2024

Bhavana Tv

Its Your Channel

ಕಾಡಿನಲ್ಲಿ ಸಿಕ್ಕಿಬಿತ್ತು ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಸಾರಾಯಿ!

ಕಾರವಾರ: ಸದ್ಯ ಎಲ್ಲೆಡೆ ಲಾಕ್‌ಡೌನ್ ಇದ್ದು ಮೆಡಿಕಲ್ ಶಾಪ್‌ಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿ ವಾರಗಳೇ ಕಳೆದಿದೆ. ಹಾಗಂತ ಉತ್ತರಕನ್ನಡ ಜಿಲ್ಲೆಯ ಜನರಿಗೆ ಯಾವುದೇ ತೊಂದರೆ ಇಲ್ಲದೇ ಹಣ್ಣು, ತರಕಾರಿ, ಕಿರಾಣಿ ವಸ್ತುಗಳು ಮನೆ ಬಾಗಿಲಿಗೆ ಬಂದು ತಲುಪುತ್ತಿವೆ. ಆದರೆ ಎಣ್ಣೆ ಪ್ರಿಯರಿಗೆ ಮಾತ್ರ ಎಲ್ಲಿ ಹೋದ್ರೂ ಒಂದು ತೊಟ್ಟು ಮದ್ಯವೂ ಸಿಗದೇ ಪರದಾಡುವಂತಾಗಿದೆ.

ಈ ನಿಟ್ಟಿನಲ್ಲಿ ಅಕ್ರಮವಾಗಿ ಗೋವಾದಿಂದ ಕಾಡಿನ ಮಾರ್ಗವಾಗಿ ಸಾಗಾಟವಾಗುತ್ತಿದ್ದ ಮದ್ಯ, ಮಧ್ಯದಾರಿಯಲ್ಲೇ ಅಬಕಾರಿ ಇಲಾಖೆ ಕಣ್ಣಿಗೆ ಬಿದ್ದು ಲಾಕ್ ಆಗಿದೆ. ತಾಲ್ಲೂಕಿನ ಸಣ್ಣಮುಡಗೇರಿ ಗ್ರಾಮದ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಅಕ್ರಮ ಗೋವಾ ಮದ್ಯವನ್ನು ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಅಬಕಾರಿ ಇಲಾಖೆಯ ಗಸ್ತು ಪಡೆ ಖಚಿತ ಮಾಹಿತಿಯ ಮೇರೆಗೆ ಅಕ್ರಮ ಮದ್ಯ ಸಾಗಾಟವನ್ನು ಪತ್ತೆ ಮಾಡಿದ್ದು ತಕ್ಷಣ ದಾಳಿ ನಡೆಸಿದೆ. ಇದರಿಂದ ಕಕ್ಕಾಬಿಕ್ಕಿಯಾದ ಅಕ್ರಮ ಸಾಗಾಟಗಾರರು ಮದ್ಯದ ಚೀಲಗಳನ್ನು ಅರಣ್ಯದಲ್ಲೇ ಎಸೆದು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ವೈ.ಆರ್.ಮೋಹನ್ ರವರ ಮಾರ್ಗದರ್ಶನದ ಮೇರೆಗೆ ಅಬಕಾರಿ ಸಿಬ್ಬಂದಿ ದಾಳಿಯನ್ನು ನಡೆಸಿದ್ದು ಗೋವಾದಲ್ಲಿ ತಯಾರಿಸಲಾದ ಒಟ್ಟೂ 119.880 ಲೀಟರ್‌ ಅಕ್ರಮ ಮದ್ಯವನ್ನು ಪತ್ತೆ ಹಚ್ಚಿ ಜಪ್ತು ಮಾಡಿದ್ದಾರೆ. ಮದ್ಯದ ಬಾಟಲ್‌ಗಳನ್ನು ಚೀಲಗಳಲ್ಲಿ ತುಂಬಿಕೊಂಡು ಮೂರ್ನಾಲ್ಕು ಮಂದಿ ತಲೆಯ ಮೇಲೆ ಹೊತ್ತುಕೊಂಡೇ ಅರಣ್ಯ ಮಾರ್ಗದಲ್ಲಿ ಸಾಗಾಟಕ್ಕೆ ಮುಂದಾಗಿದ್ದು ಈ ವೇಳೆ ಅಬಕಾರಿ ಸಿಬ್ಬಂದಿ ದಾಳಿ ನಡೆಸಿ ಅಕ್ರಮ ಮದ್ಯ ಜಿಲ್ಲೆ ಪ್ರವೇಶಿವುದನ್ನು ತಡೆಹಿಡಿದ್ದಾರೆ.

ಘಟನೆ ಸಂಬಂಧ ಕಾರವಾರ ಅಬಕಾರಿ ನಿರೀಕ್ಷಕಿ ಸುವರ್ಣಾ ಬಿ ನಾಯ್ಕ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಅಬಕಾರಿ ರಕ್ಷಕ ಅಶೋಕ, ಶ್ರೀನಿವಾಸ, ಶರೀಫ್ ಮತ್ತು ವಾಹನ ಚಾಲಕರಾದ ಬಸವರಾಜ ಮತ್ತು ನದಾಫ್ ಅಕ್ರಮ ಮದ್ಯ ಸಾಗಾಟವನ್ನು ತಡೆಗಟ್ಟುವ ಪ್ರಕರಣದಲ್ಲಿ ಸಹಕರಿಸಿದ್ದಾರೆ

error: