May 5, 2024

Bhavana Tv

Its Your Channel

22ನೇ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚಂಡೆ ಬಾರಿಸುವುದರ ಮೂಲಕ ನ್ಯಾ. ನಾಗಮೋಹನದಾಸ ಉದ್ಘಾಟನೆ

ಜೋಯಿಡಾ:– ಸಾಹಿತ್ಯ ಯಾವತ್ತೂ ಸಂವಿಧಾನದ ಆಶಯದಂತೆ ಮುನ್ನಡೆಯಬೇಕು. ಸಾಹಿತ್ಯ ಪರಿಷತ್ತು ಯಾವತ್ತೂ ಸರಕಾರದ ಅಡಿಯಾಳಾಗಿ ಇರಬಾರದು ಎಂದು ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ ಹೇಳಿದರು.

22ನೇ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚಂಡೆ ಬಾರಿಸುವುದರ ಮೂಲಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ ಉದ್ಘಾಟಿಸಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತು ತನ್ನದೇ ಆದ ಸ್ವಂತಿಕೆ ಹೊಂದಿದೆ. ಅದು ಸರಕಾರವಾಗಲಿ ಇಲ್ಲವೇ ರಾಜಕಾರಣದ ಸೋಂಕಿನಿAದ ಹೊರಗುಳಿಯಬೇಕು. ಯಾರ ಸ್ವತ್ತು ಆಗದೇ ಸ್ವತಂತ್ರ ಆಲೋಚನೆ ಮತ್ತು ಅಭಿವ್ಯಕ್ತಿಯ ಮೂಲಕ ಸಾಹಿತ್ಯ ಪರಿಷತ್ತಿನ ಸದುದ್ದೇಶ ಪಾಲಿಸಿಕೊಂಡು ಸಾಗಬೇಕಾಗಿದೆ. ಇದರ ಹೊರತಾಗಿ ಆಳುವವರ ಕೈಗೊಂಬೆಯಾಗಬಾರದು ಎಂದು ಕರೆ ನೀಡಿದರು.
ಭಾರತದ ಸಂವಿಧಾನದಲ್ಲಿ ಅಡಕವಾಗಿರುವ ಸಾಮಾಜಿಕ ನ್ಯಾಯ ಎನ್ನುವುದು ಎಲ್ಲ ವ್ಯವಸ್ಥೆಗೂ ಅನ್ವಯವಾಗಬೇಕು ಎಂದು ಹೇಳಿದರಲ್ಲದೆ, ಕಾಡಿನಲ್ಲಿ ವಾಸಿಸುತ್ತಿರುವ ಆದಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವಾಗಬೇಕು. ಆದಿವಾಸಿಗಳ ಬಡತನಕ್ಕೆ ಮಿಡಿಯುವ ಹೃದಯ ಬೇಕು ಎಂದು ಹೇಳಿದರಲ್ಲದೆ, ಜೊಯಿಡಾದಲ್ಲಿ ಆದಿವಾಸಿಗಳಿಗೆ ನೆರವಾಗುವಂತೆ ಕಾನೂನು ಅರಿವು ಕಾರ್ಯಕ್ರಮ ಮಾಡಬೇಕಾದ ಅಗತ್ಯವಿದೆ ಎಂದರು.

ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ ಹಾವೇರಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಬೆಳಗಾವಿಯ ಗಡಿಯಲ್ಲಿ ನಡೆಯುತ್ತಿರುವ ವಿವಾದಕ್ಕೆ ತಕ್ಕ ಉತ್ತರವಾಗಲಿದೆ. ಪಂಪರ ನಾಡಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನವು ಕನ್ನಡ ಸಾಹಿತ್ಯಾಸಕ್ತರಿಗೆ ಖುಷಿ ನೀಡುವ ವಿಚಾರವಾಗಿದೆ
ಮುಂದಿನ ಜನವರಿಯಲ್ಲಿ ಹಾವೇರಿ ಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿದ್ದು, ಮುಂದಿನ ವರ್ಷ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಸಮ್ಮೇಳನ ನಡೆಸುವುದಾದರೆ, ಅದಕ್ಕೆ ಪ್ರಯತ್ನ ಮಾಡುತ್ತೇನೆಂದ ಅವರು ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಪ್ರಯತ್ನಿಸಿ, ಇದಕ್ಕೆ ಬೇಕಾದ ಸಹಕಾರ ತಾನು ನೀಡಲು ಸಿದ್ಧ ಎಂದು ಭರವಸೆ ನೀಡಿದರು.
ಬೆಳಗಾವಿಯಲ್ಲಿ ಕಿಡಿಗೇಡಿಗಳು ಗಡಿ ತಂಟೆಗೆ ಬಂದಲ್ಲಿ ಸೂಕ್ತ ಉತ್ತರ ನೀಡಲು ಕನ್ನಡಿಗರು ಸಿದ್ಧರಾಗಿದ್ದಾರೆ ಎಂದು ಎಂ.ಇ.ಎಸ್. ಸಂಘಟನೆಗೆ ಇದೇ ವೇದಿಕೆಯಲ್ಲಿ ಸಚಿವ ಹೆಬ್ಬಾರ ಎಚ್ಚರಿಕೆ ನೀಡಿದರು.

ಶಾಂತಾರಾಮ ನಾಯಕರ ನೆನಪಿನ ಹಾಲಡಗಿ ಹಾಗೂ ಭಟ್ಕಳದ ಪ್ರೊ. ಆರ್.ಎನ್. ನಾಯಕರ ಉದಾತ್ತ ನಾರಾಯಣ ಮತ್ತು ಇತರ ಲೇಖನಗಳು ಎಂಬ ಕೃತಿಗಳನ್ನು ಹಳಿಯಾಳದ ಮಾಜಿ ಶಾಸಕ ಸುನೀಲ ಹೆಗಡೆ ಬಿಡುಗಡೆಗೊಳಿಸಿದರು.
ಸಮ್ಮೇಳನಾಧ್ಯಕ್ಷ ಶಾಂತಾರಾಮ ನಾಯಕ ಹಿಚಕಡರಿಗೆ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಸೈಯದ್ ಜಮೀರುಲ್ಲಾ ಷರೀಫ್ ಧ್ವಜ ಹಸ್ತಾಂತರಿಸಿ ಮಾತನಾಡಿದರು.

ಸರ್ವಾಧ್ಯಕ್ಷತೆಯನ್ನು ವಹಿಸಿದ ಶಾಂತಾರಾಮ ನಾಯಕ ಹಿಚ್ಕಡ್ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯು ವಿವಿಧ ಕಲೆ ಸಾಹಿತ್ಯ, ಸಂಗೀತ ಯಕ್ಷಗಾನಗಳ ತವರೂರು. ಬಡವರ ಬಲ್ಲಿದರೆನ್ನದೆ ಎಲ್ಲಾ ವಿಧದ ಜನರು ಸಾಹಿತ್ಯ ಸಿರಿ ಸಂಪತ್ತನ್ನು ಹೆಚ್ಚಿಸಿದ್ದಾರೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಗೊಂದು ವಿಶ್ವವಿದ್ಯಾಲಯ ಬೇಕು ಎಂದು ಉತ್ತರ ಕನ್ನಡ ಜಿಲ್ಲಾ 22 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಶಾಂತಾರಾಮ ನಾಯಕ ಹಿಚಕರ್ ತಿಳಿಸಿದರು.
ಕನ್ನಡ ಸಾಹಿತ್ಯ ಸಂಪತ್ತು ರಕ್ಷಿಸಿದ ನೆಲ ಉಳವಿ, ರಕ್ಷಿಸಬೇಕಾದರೇ ಸಾಹಿತ್ಯವನ್ನು ನಾವು ರಕ್ಷಿಸಬೇಕಾಗುತ್ತದೆ ಎಂಬ ಮೂಲ ಸತ್ವವನ್ನು ನಾವು ಮರೆಯುತ್ತಿದ್ದೇವೆ. ಭಾಷೆಗೆ ಅನ್ನ ನೀಡದೇ ಹೋದರೆ ಅದು ಬೆಳೆಯಲಾರದು. ಹಾಗಾಗಿ ನಿರಂತರ ಕನ್ನಡವನ್ನು ನಾವು ಬೆಳೆಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಸಾಹಿತಿಗಳು ಸಂಖ್ಯೆ ತುಂಬಾ ವಿಸ್ತಾರವಾಗಿದೆ. ಪ್ರಸಿದ್ಧ ಕವಿ, ಕಥೆಗಾರರು ಕಾದಂಬರಿಕಾರರು, ನಾಟಕಕಾರರು ಪ್ರಬಂಧಕಾರರು ಹಾಗೂ ಜಾನಪದ ಸಂಶೋಧಕರು ಇರುವ ಈ ಜಿಲ್ಲೆಯ ಬಗ್ಗೆ ಹೆಮ್ಮೆಯಿದೆ ಎಂದರು.

ವೇದಿಕೆಯಲ್ಲಿ ಉಪವಿಭಾಗಾಧಿಕಾರಿಗಳು, ತಾಲೂಕುಗಳ ಕ.ಸಾ.ಪ. ತಾಲೂಕಾಧ್ಯಕ್ಷರು, ಗಣ್ಯರು ವೇದಿಕೆಯಲ್ಲಿ ಇದ್ದರು.

error: