May 4, 2024

Bhavana Tv

Its Your Channel

ಜೋಗ್ ಫೂಲ್ಸ್ – ಅಂತೆಕAತೆಯ ಸಾಮ್ರಾಜ್ಯ

ಹೊನ್ನಾವರ : ಬೇಸಿಗೆಯಲ್ಲಿ ಬತ್ತಿಹೋಗುವ ಜೋಗಜಲಪಾತ ಮಳೆಗಾಲ ಅರ್ಧ ಮುಗಿಯುತ್ತಿದ್ದಂತೆ ಅಗಸ್ಟ್ ತಿಂಗಳಲ್ಲಿ ಸ್ವಲ್ಪ ಚಿಗುರುತ್ತದೆ. ಲಿಂಗನಮಕ್ಕಿ ಜಲಾಶಯ ಅರ್ಧದಷ್ಟು ತುಂಬುತ್ತದೆ, ಇಂತಹ ಕಾಲದಲ್ಲಿ ಜೋಗಫಾಲ್ಸ್ ಹೆಸರಿನಲ್ಲಿ ಫೂಲ್ಸ್ಗಳನ್ನಾಗಿ (ಮೂರ್ಖ) ಮಾಡುವ ಮತ್ತು ಲಿಂಗನಮಕ್ಕಿಯ ಹೆಸರಿನಲ್ಲಿ ಜನಗಳ ದಿಕ್ಕುತಪ್ಪಿಸುವ ಕೆಲಸ ಕೆಲವರಿಂದ ಪ್ರತಿವರ್ಷ ನಡೆಯುತ್ತದೆ. ಸೂಕ್ಷö್ಮವಾಗಿ ಲಿಂಗನಮಕ್ಕಿಯ ಅಧಿಕೃತ ವರದಿಗಳನ್ನು ಗಮನಿಸಿದಾಗ ಜೋಗಜಲಪಾತ ಹೇಗಿದೆ, ಲಿಂಗನಮಕ್ಕಿ ಹೇಗಿದೆ ಎಂಬುದನ್ನು ಅರಿತುಕೊಳ್ಳಬಹುದು.
ಅಗಸ್ಟ್ ತಿಂಗಳಲ್ಲಿ ಜೋಗ್ ಜಲಪಾತದ ಯಾವುದೋ ವರ್ಷದ ಹಳೆ ಪೋಟೋ ಹಾಕಿ ಜೋಗ ಅಬ್ಬರಿಸುತ್ತಿದೆ, ಪ್ರವಾಸಿಗರು ಕಿಕ್ಕಿರಿದು ಸೇರಿದ್ದಾರೆ ಎಂಬ ಸುದ್ದಿಯನ್ನು ಸಾಮಾಜಿಕ ಜಾಲತಾಣ ಮತ್ತು ಕೆಲವು ಮಾಧ್ಯಮದಲ್ಲಿ ಹರಿಬಿಡಲಾಗುತ್ತಿದೆ. ಇದನ್ನು ನಂಬಿ ಜೋಗಕ್ಕೆ ಧಾವಿಸುವ ಜನ ಮೂರ್ಖರಾಗುತ್ತಾರೆ. ವಾರಕ್ಕೆ ಒಮ್ಮೆಯಾದರೂ ಇಂತಹ ಸುಳ್ಳು ಸುದ್ಧಿ ಹರಡುತ್ತಾರೆ. ಈ ಬಾರಿ ಸತ್ಯವಿರಬಹುದೇನೋ ಎಂದು ಜನ ಮತ್ತೆ ಹೋಗುತ್ತಾರೆ, ತೋಳಬಂತು ತೋಳ ಕಥೆಯಾಗುತ್ತದೆ. ವಾಸ್ತವವಾಗಿ ಲಿಂಗನಮಕ್ಕಿ ಆಣೆಕಟ್ಟು ಭರ್ತಿಯಾಗುವವರೆಗೆ ಆಣೆಕಟ್ಟಿನ ಗೇಟು ತೆರೆದು ನೀರು ಬಿಡುವುದಿಲ್ಲ, ಗೇಟು ತೆರೆದು ನೀರು ಬಿಡದಿದ್ದರೆ ಜೋಗ ಅಬ್ಬರಿಸುವ ಪ್ರಶ್ನೆಯಿಲ್ಲ. ವಿದ್ಯುತ್ ಉತ್ಪಾದಿಸಿ ಆಣೆಕಟ್ಟಿನಿಂದ ಬರುವ ನೀರು ಜಲಪಾತಕ್ಕೆ ಹೋಗದೆ ತಲಕಳಲೆ ಆಣೆಕಟ್ಟು ಸೇರಿಕೊಳ್ಳುತ್ತದೆ. ತಲಕಳಲೆ ತುಂಬಿದರೂ ಹೊರಬರುವ ನೀರು ಜೋಗಿಗೆ ಬರುವುದಿಲ್ಲ.
ಲಿಂಗನಮಕ್ಕಿ ಆಣೆಕಟ್ಟಿನಿಂದ ಜಲಪಾತದವರೆಗಿನ ೧೫ಕಿಮೀ ಕೊಳ್ಳದಲ್ಲಿ ಮಳೆಬರುವಾಗ ಮಾತ್ರ ಆ ನೀರಿನಿಂದ ಜೋಗ ಸ್ವಲ್ಪಮಟ್ಟಿಗೆ ಚಿಗುರುತ್ತದೆ, ಮಳೆನಿಂತ ಮೇಲೆ ಮಾಯವಾಗುತ್ತದೆ. ಆದ್ದರಿಂದ ಜೋಗದ ವೈಭವ ಕಾಣಲು ಲಿಂಗನಮಕ್ಕಿ ಆಣೆಕಟ್ಟು ತುಂಬುವವರೆಗೆ ಕಾಯಬೇಕು. ಲಿಂಗನಮಕ್ಕಿ ೧೮೦೦, ೧೮೧೫, ೧೮೧೭ ಅಡಿ ತುಂಬಿದಾಗ ಮುನ್ನೆಚ್ಚರಿಕೆಯ ನೋಟೀಸು ನೀಡಲಾಗುತ್ತದೆ. ಆಗ ೨ಲಕ್ಷ ಕ್ಯೂಸೆಕ್ಸ್ಗಿಂತ ಹೆಚ್ಚು ನೀರನ್ನು ಆಣೆಟ್ಟಿನಿಂದ ಬಿಟ್ಟರೆ ಮಾತ್ರ ಜೋಗ ಝಗಮಗಿಸುತ್ತದೆ. ಕಳೆದ ವರ್ಷ ಒಂದುವಾರ ಇಂತಹ ವೈಭವ ಇತ್ತು. ಈ ವರ್ಷ ಅಂತಹ ದಿನಬರಲು ಇನ್ನು ಎರಡುವಾರದ ನಂತರವೂ ಮಳೆ ಮುಂದುವರಿಯಬೇಕು. ಇದೇ ರೀತಿ ಮಳೆ ಇದ್ದರೆ ಅಗಸ್ಟ್ ತಿಂಗಳ ಕೊನೆಗೆ ಲಿಂಗನಮಕ್ಕಿ ತುಂಬುವ ಸಾಧ್ಯತೆ ಇದೆ.
ಇಂದಿಗೆ ಲಿಂಗನಮಕ್ಕಿ ಜಲಮಟ್ಟ ೧೭೯೦.೧೫ ಅಂದರೆ ತುಂಬಲು ಇನ್ನು ೨೯ ಅಡಿ ಬೇಕು. ಕೇವಲ ೪೯,೯೯೧ ಕ್ಯೂಸೆಕ್ಸ್ ನೀರಿನ ಒಳಹರಿವಿದೆ. ಇಂದು ಆಣೆಕಟ್ಟಿನಲ್ಲಿ ೨.೧೫ ಅಡಿ ಮಾತ್ರ ನೀರು ಏರಿದೆ. ಒಟ್ಟೂ ಆಣೆಕಟ್ಟಿನ ಜಲ ಸಂಗ್ರಹ ಸಾಮರ್ಥ್ಯದಲ್ಲಿ ಕೇವಲ ೪೮.೪೭ರಷ್ಟು ಮಾತ್ರ ತುಂಬಿದೆ, ಹೀಗಿರುವಾಗ ಸದ್ಯ ಆಣೆಕಟ್ಟಿನಿಂದ ನೀರು ಬಿಡುವ ಪ್ರಶ್ನೆಯಿಲ್ಲ. ಈ ವಾರ ಗುಂಡಬಾಳ ಹೊಳೆಗೆ ಪ್ರವಾಹ ಬಂದು ೩೫೦ ಮನೆಗಳಿಗೆ ನೀರು ನುಗ್ಗಿತ್ತು, ಇದನ್ನೇ ಶರಾವತಿಯ ಪ್ರವಾಹ ಎಂದು ಸಾಮಾಜಿಕ ಜಾಲತಾಣ ಮತ್ತು ಕೆಲವು ಸುದ್ದಿ ಮಾಧ್ಯಮಗಳು ವರದಿಮಾಡಿದೆ. ಈ ತಪ್ಪಿನಿಂದಾಗಿ ಶರಾವತಿಕೊಳ್ಳದಲ್ಲಿ ಹುಟ್ಟಿ ಬೆಳೆದು ದೂರ ನೆಲೆಸಿರುವ ಹಲವರು ಗಾಬರಿಗೊಂಡು ಮಧ್ಯರಾತ್ರಿ ಫೋನ್ ಮಾಡಿದ್ದರು. ಲಿಂಗನಮಕ್ಕಿ ಆಣೆಕಟ್ಟು ತುಂಬುವುದಕ್ಕೆ, ಜಲಪಾತ ಅಬ್ಬರಿಸುವುದಕ್ಕೆ, ಶರಾವತಿಕೊಳ್ಳದಲ್ಲಿ ನೆರೆ ಬರುವುದಕ್ಕೆ ಒಂದಕ್ಕೆ ಒಂದು ಸಂಬAಧವಿದೆ. ಜೋಗದ ಸಂಭ್ರಮ, ಕೊಳ್ಳದ ಸಂಕಟ ಮರುಕಳಿಸಲು ಸಾಕಷ್ಟು ಕಾಲವಿದೆ. ಆದ್ದರಿಂದ ಜೋಗದ ಕುರಿತು ಸುಳ್ಳು ಸುದ್ದಿ ಓದಿ ಮೂರ್ಖರಾಗಬೇಡಿ. ಜೋಗ್‌ಗೆ ಧಾವಿಸಬೇಡಿ, ಆಣೆಕಟ್ಟು ತುಂಬಿದರೂ, ಜೋಗದಿಂದ ನೀರು ಬಿಟ್ಟರೂ ಅದು ನೆರೆಹಾವಳಿಯಾಗದಂತೆ ಕೆಪಿಸಿ ಪರಿಸ್ಥಿತಿ ನೋಡಿ ನಿರ್ಣಯ ಕೈಗೊಳ್ಳಲಿದೆ. ಯಾವುದಕ್ಕೂ ಕುತೂಹಲದಿಂದ ಕಾಯಿರಿ…

ಪೋಟೊ ; ಲಿಂಗನಮಕ್ಕಿ ಆಣೆಕಟ್ಟಿನಿಂದ ವಿದ್ಯುತ್ ಉತ್ಪಾದಿಸಿ ಹೊರಬಂದ ನೀರು ತಲಕಳಲೆ ಆಣೆಕಟ್ಟಿಗೆ ಬರುತ್ತದೆ. ಅಲ್ಲಿ ತುಂಬಿದ ನೀರು ಚಿಕ್ಕ ಜಲಪಾತವಾಗಿ ಇಳಿದು ಬರುತ್ತದೆ. ಇದು ನಿರ್ಬಂಧಿತ ವಲಯದಲ್ಲಿರುವ ಈ ಪುಟ್ಟ ಜಲಪಾತ.
ಜಿಯು, ಹೊನ್ನಾವರ

error: