April 27, 2024

Bhavana Tv

Its Your Channel

ಅಂಜುಮನ್ ಮಹಾವಿದ್ಯಾಲಯದಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ

ಭಟ್ಕಳ: ಏಡ್ಸ್ ಕಾಯಿಲೆ ಮತ್ತು ಎಚ್‌ಐವಿ ವೈರಸ್ ಬಗ್ಗೆ ಸರಿಯಾದ ತಿಳಿವಳಿಕೆ ಹೊಂದಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದರ ಮೂಲಕ ಅದು ಬರದಂತೆ ನಿಗ್ರಹಿಸಬಹುದು ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಮತ್ತು ಆರೋಗ್ಯಾಧಿಕಾರಿಗಳಾದ ಡಾ|| ಸವಿತಾ ಕಾಮತ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಡಾ|| ಸವಿತಾ ಕಾಮತ್ ಇಂದು ಸ್ಥಳೀಯ ಅಂಜುಮನ್ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ರೆಡ್‌ರಿಬ್ಬನ್ ವಿಂಗ್‌ಗಳ ಸಹಯೋಗದಲ್ಲಿ ಹಮ್ಮಿಕೊಂಡ ಏಡ್ಸ್ ಜಾಗೃತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ, ವಿದ್ಯಾರ್ಥಿಗಳಿಗೆ ಮಾರಕ ರೋಗವಾದ ಏಡ್ಸ್ ಮತ್ತು ಎಚ್‌ಐವಿ ವೈರಸ್ ಕುರಿತು ಅಗತ್ಯ ಮಾಹಿತಿಗಳನ್ನು ನೀಡಿದರು. ಯಾವ ಯಾವ ಸಂದರ್ಭದಲ್ಲಿ ಯಾರಿಂದ ಯಾರಿಗೆ ಎಚ್‌ಐವಿ ಸೋಂಕು ಹರಡಬಹುದು ಎಂಬುದನ್ನು ತಿಳಿಸಿದರು. ಕೆಲವರಿಗೆ ಸ್ವಯಂಕೃತ ಅಪರಾಧದ ಮೂಲಕ ಏಡ್ಸ್ ಕಾಯಿಲೆ ಒಕ್ಕರಿಸಿಕೊಂಡರೆ, ಇನ್ನು ಕೆಲವರು ಯಾರೋ ಮಾಡಿದ ತಪ್ಪಿಗೆ ಬಲಿಯಾಗುತ್ತಾರೆ. ಗರ್ಭದಲ್ಲಿದ್ದ ಮಗುವಿಗೂ ತಾಯಿಯಿಂದ ಎಚ್‌ಐವಿ ಸೋಂಕು ತಗಲುತ್ತದೆ ಎಂದು ತಿಳಿಸಿದ ಸವಿತಾ ಕಾಮತ್, ಗಂಡು ಹೆಣ್ಣುಗಳ ಮಧ್ಯದ ಲೈಂಗಿಕ ಸಂಬoಧ ಪರಿಶುದ್ಧ ಮತ್ತು ಪವಿತ್ರವಾಗಿದ್ದರೆ ಎಚ್‌ಐವಿ ಸೋಂಕು ಹತ್ತಿರ ಸುಳಿಯದಂತೆ ನೋಡಿಕೊಳ್ಳಬಹುದೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಮುಸ್ತಾಕ್ ಕೆ. ಶೇಖ್ ಭಾರತದಂತಹ ದೇಶದಲ್ಲಿ ಏಡ್ಸ್ ಕಾಯಿಲೆ ತ್ವರಿತವಾಗಿ ಹಬ್ಬಲು ನಮ್ಮಲ್ಲಿರುವ ಅಜ್ಞಾನ, ಮಡಿವಂತಿಕೆಯ ಮನೋಭಾವ ಮತ್ತು ಸೆಕ್ಸ್ ವಿಷಯವಾಗಿ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಮುಜುಗರ ಪಟ್ಟುಕೊಳ್ಳುವುದು ಕಾರಣವೆಂದು ತಿಳಿಸಿದರು.
ರಾಷ್ಟಿçÃಯ ಸೇವಾ ಯೋಜನಾ ಘಟಕದ ಸಂಯೋಜಕರಾದ ಪ್ರೊ. ಆರ್. ಎಸ್. ನಾಯಕ ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಕಾಲೇಜಿನ ಹಿರಿಯ ಉಪನ್ಯಾಸಕರಾದ ಪ್ರೊ. ಎಸ್. ಎ. ಇಂಡಿಕರ್ ಹಾಗೂ ರೆಡ್‌ರಬ್ಬನ್ ಕ್ಲಬ್‌ನ ಸಂಯೋಜಕರಾದ ಪ್ರೊ. ಮಿರ್ಜಾ ಮುಲ್ಲಾ, ಉಪಪ್ರಾಚಾರ್ಯ ಪ್ರೊ. ಹಿಬ್ಬಾನ್ ಶಾಬಂದ್ರಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ಗಾನಿಮ್ ಮೊಹತಿಶಾಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಸಬ್ಹಾ ಮತ್ತು ಯಾಖುಬ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ, ಕೊನೆಯಲ್ಲಿ ವಿದ್ಯಾರ್ಥಿನಿ ಪೂಜಾ ನಾಯ್ಕ ಸರ್ವರಿಗೂ ವಂದನೆ ಸಲ್ಲಿಸಿದರು.

error: