May 14, 2024

Bhavana Tv

Its Your Channel

ಅವೈಜ್ಞಾನಿಕ ಹೆದ್ದಾರಿ 66ರ ಚತುಷ್ಪತ ಕಾಮಗಾರಿ, ಮೂಡಭಟ್ಕಳ, ಮುಟ್ಟಳ್ಳಿ ಭಾಗದ ನಾಗರೀಕರ ಆಗ್ರಹ

ಭಟ್ಕಳ: ರಾಷ್ಟಿಯ ಹೆದ್ದಾರಿ 66ರ ಚತುಷ್ಪತ ಕಾಮಗಾರಿ ನಡೆಯುತ್ತಿರುವುದರಿಂದ ಹಲವೆಡೆ ಅವೈಜ್ಞಾನಿಕ ಕಾಮಗಾರಿಯಿಂದ ಅನೇಕ ಅಪಘಾತಗಳಾಗುತ್ತಿದ್ದು ಅವುಗಳನ್ನು ತಪ್ಪಿಸುವಲ್ಲಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಮೂಡಭಟ್ಕಳ, ಮುಟ್ಟಳ್ಳಿ ಭಾಗದ ನಾಗರೀಕರು ಆಗ್ರಹಿಸಿದರು.

ಭಟ್ಕಳ ಸಹಾಯಕ ಆಯುಕ್ತರ ಕಚೇರಿಯಲ್ಲಿ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರ ಅಧ್ಯಕ್ಷತೆಯಲ್ಲಿ ಜರುಗಿದ ಮೂಡಭಟ್ಕಳ, ಮುಟ್ಟಳ್ಳಿ ನಾಗರೀಕರ ಸಭೆಯಲ್ಲಿ ನಾಗರೀಕರು ಗಂಭೀರ ಆರೋಪ ಮಾಡಿದರು.
ಕಳೆದ ಕೆಲವು ದಿನಗಳ ಹಿಂದೆಷ್ಟೇ ಮೂಡಭಟ್ಕಳದಲ್ಲಿ ಇಬ್ಬರು ಅಪಘಾತದಿಂದ ಮೃತಪಟ್ಟಿದ್ದು ಇದಕ್ಕೆ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯೇ ಕಾರಣವಾಗಿದೆ. ಕಳೆದ ಕೆಲವು ವರ್ಷಗಳಿಂದ ಮೂಡಭಟ್ಕಳದಲ್ಲಿ ಅಂಡರ್‌ಪಾಸ್ ನಿರ್ಮಿಸಿಕೊಡುವಂತೆ ಹೆದ್ದಾರಿ ಇಲಾಖೆಗೆ ಕಾಮಗಾರಿ ಮಾಡುತ್ತಿರುವ ಐ.ಆರ್.ಬಿ. ಕಂಪೆನಿಗೆ ಹೇಳುತ್ತಲೇ ಬಂದಿದ್ದೇವೆ. ಆದರೆ ಇನ್ನೂ ತನಕ ಅಂಡರ್‌ಪಾಸ್ ಮಾಡಲೂ ಇಲ್ಲ, ರಸ್ತೆಯನ್ನು ಸರಿಪಡಿಸಲೂ ಇಲ್ಲ ಇದರಿಂದಾಗಿ ಅನೇಕ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ತಕ್ಷಣ ಅಂಡರ್‌ಪಾಸ್ ಕಾಮಗಾರಿಯನ್ನು ಆರಂಭಿಸಿ ನಂತರ ಹೆದ್ದಾರಿಯನ್ನು ಪೂರ್ಣಗೊಳಿಸಬೇಕು ಎಂದು ಪಟ್ಟು ಹಿಡಿದರು.
ಇದಕ್ಕುತ್ತರಿಸಿದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಮೂಡಭಟ್ಕಳದಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ ಇನ್ನೂ ತನಕ ಮಂಜೂರಿಯಾಗಿಲ್ಲ, ಐ.ಆರ್.ಬಿ.ಯವರು ಮಾರ್ಚ ತನಕ ಅದಷ್ಟು ಕಾಮಗಾರಿಯನ್ನು ಮಾಡಬೇಕಾಗಿದೆ. ಮಾರ್ಚ ನಂತರ ಹೆದ್ದಾರಿಯನ್ನು ನಿರ್ವಹಣೆ ಮಾಡಲು ಬೇರೆ ಏಜೆನ್ಸಿಗೆ ನೀಡುತ್ತಿದ್ದು ಅವರು ಮಾಡಬೇಕಾಗುತ್ತದೆ. ಆದ್ದರಿಂದ ಮಾರ್ಚ ಒಳಗಾಗಿ ಅವರು ಹೆದ್ದಾರಿಯನ್ನು ಅಗಲೀಕರಣ ಮಾಡಿ ಸಂಚಾರಕ್ಕೆ ಯೋಗ್ಯ ಮಾಡುತ್ತಾರೆ ಅದಕ್ಕೆ ನಾಗರೀಕರು ಒಪ್ಪಿಗೆ ಕೊಡಬೇಕು ಎಂದು ಹೇಳಿದರು.
ನಾಗರೀಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಹೆದ್ದಾರಿ ಅಗಲೀಕರಣ ಮಾಡುವಾಗಲೆ ಅಂಡರ್‌ಪಾಸ್ ನಿರ್ಮಾಣವಾಗಬೇಕು, ನಂತರ ಐ.ಆರ್.ಬಿ.ಯವರೂ ಬರುವುದಿಲ್ಲ, ಹೆದ್ದಾರಿಯವರು ಮಾಡುವುದಿಲ್ಲ, ನಾಗರೀಕರು ತೀವ್ರ ತೊಂದರೆಗೊಳಗಾಗುತ್ತಾರೆ ಅಲ್ಲದೇ ಇನ್ನೂ ಅಪಘಾತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದರು. ನಾಗರೀಕರನ್ನು ಸಮಾಧಾನ ಪಡಿಸಿದ ಸಹಾಯಕ ಆಯುಕ್ತೆ ಹೆದ್ದಾರಿ ನಿವಾಹಣೆ ಮಾಡುವ ಏಜೆನ್ಸಿಯವರಿಂದ ಅಂಡರ್‌ಪಾಸ್ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆಯನ್ನು ನೀಡಿದರು.
ಕಳೆದ ಎಂಟು ವರ್ಷಗಳಿಂದ ಮೂಡಭಟ್ಕಳ ನದಿಯಿಂದ ನೀರು ಗದ್ದೆಗಳಿಗೆ ಹೋಗದಿರುವುದರಿಂದ ಬೇಸಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಭೆಯಲ್ಲಿದ್ದ ಹಲವು ರೈತರು ದೂರಿದರು. ಹೆದ್ದಾರಿ ಕಾಮಗಾರಿಯಿಂದ ನೀರು ಹೋಗುವ ಮೋರಿ ಮುಚ್ಚಿಹೋಗಿದೆ. ಅದನ್ನು ಸರಿಪಡಿಸಿಕೊಡಬೇಕು, ಹೊಳೆಯ ಹತ್ತಿರದ ಕಟ್ಟಡದಿಂದ ಹೊಲಸು ನೀರು ನದಿಗೆ ಬಿಡಲಾಗುತ್ತಿದ್ದು ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ತಕ್ಷಣ ಪುರಸಭಾ ಮುಖ್ಯಾಧಿಕಾರಿಗಳನ್ನು ಸಭೆಗೆ ಕರೆಯಿಸಿದ ಸಹಾಯಕ ಆಯುಕ್ತೆ ಅವರನ್ನು ರೈತರೊಂದಿಗೆ ಸ್ಥಳಕ್ಕೆ ಹೋಗಿ ಸ್ಥಳಪರಿಶೀಲನೆ ನಡೆಸಿ ಹತ್ತು ದಿನಗಳ ಒಳಗಾಗಿ ವರದಿ ನೀಡುವಮತೆ ತಿಳಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಅಶೋಕ ಭಟ್ಟ, ಪೊಲೀಸ್ ಇನ್ಸಪೆಕ್ಟರ್ ದಿವಾಕರ, ಪುರಸಭಾ ಮುಖ್ಯಾಧಿಕಾರಿ ಎಂ.ಕೆ. ಸುರೇಶ, ಸಬ್ ಇನ್ಸಪೆಕ್ಟರ್ ಎಚ್.ಬಿ. ಕುಡಗುಂಟಿ, ಐ.ಆರ್.ಬಿ.ಯ್ ಸುದೇಶ್ ಶೆಟ್ಟಿ, ರಾ.ಹೆ.ಯ ಪ್ರದೀಪ ಪೂಜಾರಿ, ಐ.ಆರ್.ಬಿ. ಪ್ರಾಜೆಕ್ಟ್ ಮೆನೇಜರ್ ಶ್ರೀನಿವಾಸ ರಾವ್ ಮುಂತಾದವರು ಉಪಸ್ಥಿತರಿದ್ದರು.

error: