ಭಟ್ಕಳ: ಮಲ್ಲಿಗೆ ಕಂಪಿನ ನಾಡು ಭಟ್ಕಳದಲ್ಲಿ ಈಗ ರಾಜಕೀಯ ಕಮಟು ಹೆಚ್ಚಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿದ್ದು ಗೆಲುವು ಯಾರ ಮಡಿಲು ಸೇರಲಿದೆ ಎನ್ನುವುದು ಕುತೂಹಲವಾಗಿದೆ.
ಹಾಲಿ ಶಾಸಕ ಸುನೀಲ ನಾಯ್ಕ ಬಿಜೆಪಿಯಿಂದ ಎರಡನೇ ಅವಧಿಗೆ ಸ್ಪರ್ಧಾ ಕಣದಲ್ಲಿದ್ದಾರೆ. ೨೦೧೩ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಮಂಕಾಳ ವೈದ್ಯ ಕಾಂಗ್ರೆಸ್‌ನಿAದ ಸ್ಪರ್ಧೆಯಲ್ಲಿದ್ದಾರೆ. ಇಬ್ಬರ ನಡುವೆ ಜಿದ್ದಾಜಿದ್ದಿನ ಹೋರಾಟ ನಿರೀಕ್ಷೆ ಇದೆ. ಜೆಡಿಎಸ್‌ನಿಂದ ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ಕಣದಲ್ಲಿದ್ದಾರೆ. ಮೇಲ್ನೋಟಕ್ಕೆ ಅವರ ಸ್ಪರ್ಧೆ ಪ್ರಬಲ ಎನಿಸದಿದ್ದರೂ ಮತ ಗಳಿಕೆಯಲ್ಲಿ ಅವರು ಹಿಂದೆ ಬೀಳುವ ಸಾಧ್ಯತೆ ಕಡಿಮೆ.
ಒಂದು ಕಾಲದಲ್ಲಿ ಕೋಮು ಸೂಕ್ಷ್ಮ ಪ್ರದೇಶ ಎನಿಸಿದ್ದ ಭಟ್ಕಳದಲ್ಲಿ ಈಗಲೂ ಬಿಜೆಪಿಗೆ ಹಿಂದುತ್ವವೇ ಚುನಾವಣೆ ಅಜೆಂಡಾ. ಕಳೆದ ಚುನಾವಣೆಯಲ್ಲಿ ಇದೇ ಅಸ್ತ್ರ ಪ್ರಯೋಗಿಸಿ ಸುನೀಲ ನಾಯ್ಕ ಕಾಂಗ್ರೆಸ್‌ನ ಮಂಕಾಳ ವೈದ್ಯ ಅವರನ್ನು ಸೋಲಿಸಿದ್ದರು. ಈ ಬಾರಿಯೂ ಮೋದಿ ಅಲೆ, ಹಿಂದುತ್ವ ಅಸ್ತ್ರ ಪ್ರಯೋಗಕ್ಕೆ ಅವರು ಮುಂದಾಗಿದ್ದಾರೆ. ಆದರೆ ಆಡಳಿತ ವಿರೋಧಿ ಅಲೆ, ಪಕ್ಷದಲ್ಲೇ ಸೃಷ್ಟಿಯಾಗಿರುವ ಭಿನ್ನಮತ ಅವರಿಗೆ ಅಡ್ಡಗಾಲಾಗುವ ಸಾಧ್ಯತೆ ಅಲ್ಲಗಳೆಯಲಾಗದು. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಅವರ ವಿರುದ್ಧ ಅಪಪ್ರಚಾರ ಹೆಚ್ಚುತ್ತಿದೆ.
ಜಾಣ ನಡೆ ಅನುಸರಿಸಿರುವ ಮಂಕಾಳ ವೈದ್ಯ ಹಿಂದುತ್ವ ವಿಚಾರದಲ್ಲೂ ಮೃದು ಧೋರಣೆ ಅನುಸರಿಸುತ್ತಲೇ ಅಲ್ಪಸಂಖ್ಯಾತ ಮತಗಳತ್ತಲೂ ದೃಷ್ಟಿ ನೆಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿ ವಿರುದ್ಧ ಕೆಲ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಲ್ಲಿ ಎದ್ದಿರುವ ಅಸಮಾಧಾನವನ್ನು ತಮ್ಮ ಗೆಲುವಿನ ದಾರಿ ಸುಗಮವಾಗಿಸಲು ಬಳಸಿಕೊಳ್ಳುತ್ತಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಕೊನೆ ಕ್ಷಣದಲ್ಲಿ ಚುನಾವಣೆ ಕಣಕ್ಕೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯೂ ಹಿನ್ನೆಡೆಯಲ್ಲಿದೆ. ಆದರೆ ಬಹುಸಂಖ್ಯಾತ ನಾಮಧಾರಿ ಮತದಾರರ ಸಮುದಾಯಕ್ಕೆ ಸೇರಿರುವ ಕಾರಣ ಒಂದಷ್ಟು ಮತ ಸೆಳೆಯಬಹುದು ಎಂಬ ಲೆಕ್ಕಾಚಾರವಿದೆ.
ಭಟ್ಕಳ ಕ್ಷೇತ್ರದ ಮಟ್ಟಿಗೆ ಇಲ್ಲಿನ ಮುಸ್ಲಿಂ ಸಮುದಾಯದ ಪರಮೋಚ್ಛ ಸಂಸ್ಥೆ ತಂಜೀಮ್ ನಿರ್ಧಾರ ಚುನಾವಣೆಯ ಮೇಲೆ ಫಲಿತಾಂಶ ಬೀರುತ್ತದೆ. ೫೦ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಂ ಮತದಾರರ ಪೈಕಿ ಶೇ ೭೦ಕೂ ಹೆಚ್ಚು ಮಂದಿ ತಂಜೀಮ್ ನಿರ್ಣಯಕ್ಕೆ ತಲೆಬಾಗುತ್ತಾರೆ ಎಂಬುದು ಈ ಹಿಂದಿನ ಚುನಾವಣೆಗಳಲ್ಲಿ ದೃಢಪಟ್ಟಿದೆ. ಹೀಗಾಗಿ ತಂಜೀಮ್ ಬೆಂಬಲ ಪಡೆಯುವುದು ಪ್ರಮುಖ ಪಕ್ಷಗಳಿಗೆ ಅನಿವಾರ್ಯವೂ ಆಗಿದೆ.
ಇದೇ ವಿಚಾರದಲ್ಲಿ ಕಳೆದ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದ ಮಂಕಾಳ ವೈದ್ಯ ಈ ಬಾರಿ ಬಹಿರಂಗವಾಗಿ ತಂಜೀಮ್ ಬೆಂಬಲ ಕೋರಲು ಮುಂದಾಗಿಲ್ಲ. ಆದರೆ ಜೆಡಿಎಸ್ ಮಾತ್ರ ಬಹಿರಂಗವಾಗಿ ಸಂಸ್ಥೆಯ ಬೆಂಬಲ ಕೋರಿದೆ.
೨,೨೨,೭೦೮ ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ ನಾಮಧಾರಿ ಸಮುದಾಯದ ಮತದಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ನಾಮಧಾರಿ ಮತಗಳ ಧ್ರುವೀಕರಣಕ್ಕೆ ಯತ್ನಿಸುತ್ತಿದ್ದರೆ ಕಾಂಗ್ರೆಸ್ ಕೂಡ ಇದೇ ಸಮುದಾಯದ ಸಮಾವೇಶ ನಡೆಸಿ ಮತ ಸೆಳೆಯುವ ಪ್ರಯತ್ನವನ್ನೂ ಮಾಡಿದೆ.
ಕಣದಲ್ಲಿರುವ ಅಭ್ಯರ್ಥಿಗಳು ಮಂಕಾಳ ವೈದ್ಯ- ಕಾಂಗ್ರೆಸ್
ಸುನೀಲ ನಾಯ್ಕ- ಬಿಜೆಪಿ
ನಸೀಮ್ ಖಾನ್ – ಆಮ್ ಆದ್ಮಪಕ್ಷ
ಶಂಕರ ಗೌಡ- ಕೆ.ಆರ್.ಎಸ್.
ನಾಗೇಂದ್ರ ನಾಯ್ಕ – ಜೆಡಿಎಸ್
ಯೊಗೇಶ ನಾಯ್ಕ – ಉತ್ತಮ ಪ್ರಜಾಕೀಯ ಪಕ್ಷ
ಪ್ರಕಾಶ ಪಾಸ್ಕೋಲ್ – ಭಾರತೀಯ ಬೆಳಕು ಪಾರ್ಟಿ
ಗಫೂರ್ ಸಾಬ್ – ಆಲ್ ಇಂಡಿಯಾ ಮಹಿಳಾ ಎಂಪವರಮೆAಟ್ ಪಕ್ಷ
ಮೊಹ್ಮದ್ ಖತೀಬ್ – ಪಕ್ಷೇತರ
ಭಟ್ಕಳ ವಿಧಾನಸಭಾ ಕ್ಷೇತ್ರ ೨೦೧೩ ಗೆಲುವು – ಮಂಕಾಳ ವೈದ್ಯ (ಪಕ್ಷೇತರ-೩೭೩೧೯)
ಸಮೀಪದ ಪ್ರತಿಸ್ಪರ್ಧಿ – ಇನಾಯತುಲ್ಲಾ ಶಾಬಂದ್ರಿ (ಜೆಡಿಎಸ್ ೨೭೪೩೫)
ಗೆಲುವಿನ ಅಂತರ – ೯೮೮೪
೨೦೧೮ ಗೆಲುವು- ಸುನೀಲ ನಾಯ್ಕ (ಬಿಜೆಪಿ-೮೩೧೭೨)
ಸಮೀಪದ ಪ್ರತಿಸ್ಪರ್ಧಿ – ಮಂಕಾಳ ವೈದ್ಯ (ಕಾಂಗ್ರೆಸ್-೭೭೨೪೨)
ಗೆಲುವಿನ ಅಂತರ – ೫೯೩೦
More Stories
ಗಣಪತಿ ವಿಸರ್ಜನೆ ವೇಳೆ ಸಮುದ್ರದಲ್ಲಿ ಕೊಚ್ಚಿ ಹೊದ ಬಾಲಕ, ರಕ್ಷಣೆ ಮಾಡಿದ ಕೆ.ಎನ್ಡಿ ಪೊಲೀಸರು
ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವನ ಕೈ ದೇಹದಿಂದ ತುಂಡು
ಉಜಿರೆಯ ಶ್ರೀರಾಮ ಕ್ಷೇತ್ರದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 5ನೇ ಚಾತುರ್ಮಾಸ ವೃತಾಚರಣೆ, ಭಟ್ಕಳ ತಾಲ್ಲೂಕಿನ ಕರಿಕಲ್ ಧ್ಯಾನಮಂದಿರದಲ್ಲಿ