April 27, 2024

Bhavana Tv

Its Your Channel

ಪರೇಶ್ ಮೇಸ್ತಾನ ಕೊಲೆಗಾರರನ್ನು ಹಿಡಿದರೆ ಬಿಜೆಪಿಯವರೇ ಸಿಗುತ್ತಾರೆ ಎಂಬ ಭಯದಿಂದ ಸಹಜ ಸಾವು ಎಂದು ವರದಿ ಕೊಟ್ಟರು-ಮಾಂಕಾಳ್ ವೈದ್ಯ ಆರೋಪ

ಭಟ್ಕಳ: ಹೊನ್ನಾವರದ ಪರೇಶ್ ಮೇಸ್ತಾ ಕೊಲೆಗಾರರನ್ನು ಹಿಡಿದರೆ ಬಿಜೆಪಿಯವರೇ ಸಿಕ್ಕಿಹಾಕಿಕೊಳ್ಳುತ್ತಾರೆ ಎಂಬ ಭಯದಿಂದ ದೇಶದ ಗೃಹಮಂತ್ರಿ ಅಮಿತ್ ಶಾ ಇದೊಂದು ಅಸಹಜ ಸಾವು ಎಂಬ ವರದಿ ಬರುವಂತೆ ನೋಡಿಕೊಂಡಿದ್ದಾರೆ ಎಂದು ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮಾಂಕಾಳ್ ಎಸ್. ವೈದ್ಯ ಆರೋಪಿಸಿದ್ದಾರೆ.

ಅವರು ಶುಕ್ರವಾರ ರಾತ್ರಿ ಮುರುಡೇಶ್ವರದ ಬೀನಾ ವೈದ್ಯ ಶಾಲಾ ಮೈದಾನದಲ್ಲಿ ಜರಗಿದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
2018ರಲ್ಲಿ ಹೊನ್ನಾವರದಲ್ಲಿ ನಡೆದ ಪರೇಶ್ ಮೇಸ್ತಾನ ಸಾವನ್ನು ಕೊಲೆ ಎಂದು ಈ ದೇಶದ ಗೃಹ ಮಂತ್ರಿ ಅಮಿತ್ ಶಾ ಅವರೆ ಹೊನ್ನಾವರಕ್ಕೆ ಬಂದು ಹೇಳಿದ್ದು ನಾವು ಅವರ ಕುಟುಂಬಕ್ಕೆ ನ್ಯಾಯಾ ಕೊಡುತ್ತೇವೆ ಯಾವುದೇ ಕಾರಣಕ್ಕೂ ಕೊಲೆಗಾರರನ್ನು ಹಿಡಿಯುತ್ತೇವೆ ಎಂಬ ಭರವಸೆಯನ್ನೂ ನೀಡಿದ್ದರು. ಆದರೆ ಇದೇ ಅಮಿತ್ ಶಾ ಇಂದೂ ಕೂಡ ಗೃಹಮಂತ್ರಿಯಾಗಿದ್ದು ಅವರದ್ದೇ ಸಂಸ್ಥೆಯಾಗಿರುವ ಸಿಬಿಐ ಮೂಲಕ ಪರೇಶ್ ಮೇಸ್ತಾನ ಸಾವು ಕೊಲೆಯಲ್ಲ ಅದೊಂದು ಅಸಹಜ ಸಾವು ಎಂಬ ವರದಿ ನೀಡುವಂತೆ ಮಾಡುತ್ತಾರೆ. ಪರೇಶ್ ಮೇಸ್ತಾನ ಕೊಲೆಗಾರರನ್ನು ಹಿಡಿದರೆ ಎಲ್ಲಿ ಬಿಜೆಪಿಯವರೆ ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂಬ ಭಯದಿಂದ ಅಮಿತ್ ಶಾ ಸಿಬಿಐ ವರದಿಯನ್ನು ಅಸಹಜ ಸಾವು ಎಂದು ಬರುವಂತೆ ನೋಡಿಕೊಂಡಿದ್ದಾರೆ. ಅಂದು ಕೊಲೆ ಎಂದು ಹೇಳಿದವರು ಇವರೇ ಇಂದು ಅಸಹಜ ಸಾವು ಎಂದು ಹೇಳುವವರೂ ಇವರೇ ಎಂದು ಕಿಡಿಕಾರಿದರು. ಇವರ ಅನಾಚಾರದ ಕುರಿತು ಮಾತನಾಡಿದರೆ ಸಮಯ ಸಾಲದು ಎಂದ ಮಾಂಕಾಳು ವೈದರು ರಾಜ್ಯ ಮತ್ತು ಕೇಂದ್ರದಲ್ಲಿರುವ ಸರ್ಕಾರ ಒಂದೇ ಆಗಿದ್ದು ಇದು ಡಬಲ್ ಇಂಜನ್ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ಈ ಡಬಲ್ ಇಂಜನ್ ಕೆಲಸ ಮಾಡುವುದನ್ನು ನಿಲ್ಲಿಸಿ ಬಹಳಷ್ಟು ಸಮಯ ಕಳೆದಿದೆ. ಎರಡೂ ಇಂಜೆನ್ ಗಳು ಕೆಟ್ಟು ನಿಂತಿವೆ ಎಂದು ವ್ಯಂಗವಾಡಿದರು. ಬಿಜೆಪಿಯವರು ಸುಳ್ಳು ಹೇಳುವುದನ್ನು ಬಿಟ್ಟರೆ ಬೇರೇನೂ ಮಾಡುವುದಿಲ್ಲ. ನಾನು ಅಭ್ಯರ್ಥಿ ಈ ಕ್ಷೇತ್ರ ಅಭಿವೃದ್ಧಿ ಮಾಡುತ್ತೇನೆ ಎಂದು ಯಾರಾದ್ರೂ ಎಲ್ಲಿಯಾದ್ರೂ ಓಟು ಕೇಳಿದನ್ನೂ ನೀವು ನೋಡಿದ್ದೀರಾ? ಎಂದು ಪ್ರಶ್ನೆ ಹಾಕಿದ ವೈದ್ಯ, ನಾನು ಅದನ್ನು ಎದೆ ತಟ್ಟಿ ಹೇಳಬಲ್ಲೆ. ನಿಮ್ಮ ಕಷ್ಟಕ್ಕೆ ನಿಲ್ಲುತ್ತೇನೆ ಯಾವುದೇ ಸಂದರ್ಭದಲ್ಲೂ ನಿಮ್ಮನ್ನು ಬಿಟ್ಟುಕೊಡುವುದಿಲ್ಲ ನನಗೆ ಓಟು ಹಾಕಿ ಎಂದು ನಾನು ಕೇಳುತ್ತೇನೆ. ಆದರೆ ಅವರು ಹೇಳುವುದೇನು ಗೊತ್ತಾ? ಹಿಂದುತ್ವ, ನಾನ್ರಿ ಹಿಂದೂ. ಮಠ ಕಟ್ಟಿದ್ದೇನೆ, ಶಾಲೆ ಕಟ್ಟಿದ್ದೇನೆ. ದೇವಸ್ಥಾನ ಕಟ್ಟಿದ್ದೇನೆ. ನಾವು ಕಟ್ಟಿಸಿದ ದೇವಸ್ಥಾನದಲ್ಲಿ ಬಂದು ನಮಗೆ ಹಿಂದುತ್ವದ ಪಾಠ ಹೇಳುತ್ತಾರೆ ಇದು ದೊಡ್ಡ ದುರಂತ ಇದನ್ನು ಆಗಲು ಬಿಡಕೂಡದು. ಹಿಂದೂತ್ವ ಅಂದ್ರೆ ಏನು ಎಂಬ ಗಂಧಗಾಳಿ ಇಲ್ಲದವರಿಂದ ನಮಗೆ ಹಿಂದೂತ್ವದ ಪಾಠ ಕಲಿಯಬೇಕಾಗಿಲ್ಲ ಹಿಂದುತ್ವ ಎಂದರೆ ಬಡವರ, ದುರ್ಬಲರ ಕಳಕಳಿಯಾಗಿದೆ. ಇವರಿಗೆ ಚುನಾವಣೆ ಹತ್ತಿರ ಬಂದಾಗ ಮಾತ್ರ ಹಿಂದುತ್ವ ಮತ್ತು ದೇಶಪ್ರೇಮ ನೆನಪಾಗುತ್ತವೆ ಎಂದು ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಸುನಿಲ್ ನಾಯ್ಕರನ್ನು ಟೀಕಿಸಿದರು.

ವೇದಿಕೆಯಲ್ಲಿ ಮಾಜಿ ಸಚಿವಾ ಹಳಿಯಾಳ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ, ಮಾಜಿ ಶಾಸಕ ಜೆ.ಡಿ.ನಾಯ್ಕ, ಎಲ್.ಎಸ್. ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

error: