May 17, 2024

Bhavana Tv

Its Your Channel

ಹೆಚ್ಚುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆ : ಮತ್ತೆ ಶುರುವಾಗಿದೆ ಆತಂಕ.

ಹೊನ್ನಾವರ ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಒಂದನೇ ಅಲೆ, ಎರಡನೇ ಅಲೆ ಹೇಳಿ ಸೋತು ಹೈರಾಣವಾಗಿ ಸ್ವಲ್ಪ ಮಟ್ಟಿಗೆ ಚೇತರಿಸಿ ಕೊಳ್ಳುತ್ತಿದ್ದ ತಾಲೂಕಿನ ಜನರಿಗೆ ಮತ್ತೆ ಕೋವಿಡ್ ಮಹಾಮಾರಿಯ ಭಯ ಕಾಡುತ್ತಿದೆ.

ಬುಧವಾರ ಹನ್ನೆರಡು ಸೊಂಕಿತರು, ಒಂದು ಸಾವು ಸಂಭವಿಸಿತ್ತು. ಗುರುವಾರ ಐದು ಜನರಿಗೆ ಸೋಂಕು ತಗುಲಿತ್ತು. ಶುಕ್ರವಾರ ಏಳು ಜನರಿಗೆ ಸೋಂಕು ಧೃಡಪಟ್ಟಿದೆ. ಮಂಕಿಯಲ್ಲಿ ಮೂರು, ಸಾಲಕೋಡ ಮೂರು, ಬಳಕೂರು ಒಂದು ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಕೂಡ ಸೋಂಕು ಹೆಚ್ಚುತ್ತಲೆ ಇದೆ. ಈ ಹಿಂದೆ ಸಾಲಕೋಡ, ಮಂಕಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಜನರಿಗೆ ಕೋವಿಡ್ ಸೋಂಕು ತಗುಲಿತ್ತು. ಸಾವು ನೋವು ಕಂಡು ಸ್ವಲ್ಪ ಮಟ್ಟಿಗೆ ಚೇತರಿಕೆ ಆಯಿತು ಅನ್ನುವಷ್ಟರಲ್ಲಿ ಮತ್ತೆ ತಲೆ ಎತ್ತುತ್ತಿದೆ.

ಲಾಕ್ ಡೌನ್, ಸೀಲ್ ಡೌನ್ ಎಲ್ಲಾ ಮುಕ್ತಾಯವಾಗಿ ಜನರು ಬಿಂದಾಸ್ ಆಗಿ ಓಡಾಡುತ್ತಿದ್ದಾರೆ. ಪಟ್ಟಣ, ಹಳ್ಳಿ ಎಲ್ಲು ಕೂಡ ಕೋವಿಡ್ ನಿಯಮ ಪಾಲನೆಯಾಗುತ್ತಿಲ್ಲ. ಅಂಗಡಿ ಮುಗ್ಗಟ್ಟುಗಳಲ್ಲಿ, ಮೀನು ಮಾರುಕಟ್ಟೆ, ದೇವಸ್ಥಾನ, ಸರಕಾರಿ ಕಛೇರಿ, ಆಸ್ಪತ್ರೆ, ಬಸ್ಸು ಮತ್ತು ಟೆಂಪೋದಲ್ಲಿ ಎಲ್ಲೂ ಕೂಡ ಕೋವಿಡ್ ನಿಯಮ ಲೆಕ್ಕಕ್ಕೆ ಇಲ್ಲದಂತಾಗಿದೆ. . ಸಾಮಾಜಿಕ ಅಂತರ ಅನ್ನುವುದು ಬಹುತೇಕ ಅವರಿಗೆ ಅನ್ವಯ ಆಗುವುದೇ ಇಲ್ಲ ಅನಿಸುತ್ತಿದೆ. ಈ ಹಿಂದೆ ಕೋವಿಡ್ ಅನ್ನುವುದು ಇತ್ತು ಅನ್ನುವದನ್ನೇ ಮರೆತ ಹಾಗೆ ಕಾಣುತ್ತಿದೆ.

ಹೀಗೆ ಮುಂದುವರಿದರೆ ತಾಲೂಕಿನ ಜನತೆ ಮತ್ತೆ ಸಂಕಷ್ಟ ಎದುರಿಸಬೇಕಾದ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಕೋವಿಡ್ ಬಾದಿತರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇನ್ನೂ ಕೂಡ ಎಷ್ಟೋ ಕುಟುಂಬ ಚೇತರಿಸಿಕೊಂಡಿಲ್ಲ. ಕಷ್ಟ ಮತ್ತು ನೋವಿನಲ್ಲೇ ದಿನ ಕಳೆಯುತ್ತಿದ್ದಾರೆ. ತಾಲೂಕಿನಲ್ಲಿ ಎಳೆಯ ಜೀವಗಳನ್ನೇ ಬಲಿ ತೆಗೆದುಕೊಂಡಿದೆ. ದೊಡ್ಡ ಆಸ್ಪತ್ರೆಗೆ ಹೋಗಿ ಸಾವು ಬದುಕಿನ ನಡುವೆ ಹೋರಾಡಿ ಸ್ವಲ್ಪ ಮಟ್ಟಿಗೆ ಚೇತರಿಸಿ ಕೊಳ್ಳುತ್ತಿದ್ದಾರೆ. ಇಷ್ಟೂ ದೊಡ್ಡ ಮಟ್ಟದಲ್ಲಿ ಸಾವು ನೋವು ಕಂಡಿದ್ದ ತಾಲೂಕಿನ ಜನರು ಇನ್ನೂ ಮೈ ಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ನಮಗೆ ನಾವೇ ಎಚ್ಚರಿಕೆ ಹೇಳಿ ಕೊಳ್ಳಬೇಕಾಗಿದೆ.

ಇನ್ನೂ ವಿದ್ಯಾರ್ಥಿಗಳಿಗೆ ಎಸ್. ಎಸ್. ಎಲ್. ಸಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಬಸ್ಸು ಸಂಚಾರ, ಅಪರೂಪಕ್ಕೆ ಗೆಳೆಯರೊಂದಿಗೆ ಒಟ್ಟಿಗೆ ಸೇರುವುದರಿಂದ ಮತ್ತೆ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಮದುವೆಗೂ ಕೂಡ ನೂರು ಜನರಿಗೆ ಅವಕಾಶ ಮಾಡಿ ಕೊಟ್ಟಿರುವುದರಿಂದ ಅಲ್ಲೂ ಕೂಡ ಜನ ದಟ್ಟಣೆ ಯಾಗುವ ಸಾಧ್ಯತೆ ಇದೆ. ನೂರು ಅಂದರು ಕೂಡ ಅದರ ಮೂರು ಪಟ್ಟು ಜನ ಸೇರುತ್ತಾರೆ. ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲನೆ ಮಾಡಲು ಅಧಿಕಾರಿಗಳು ಎಚ್ಚರಿಕೆ ನೀಡಬೇಕಾಗಿದೆ.

ಹಳ್ಳಿ ಮತ್ತು ಪಟ್ಟಣದ ಅಂಗಡಿಗಲ್ಲಿ ಕೋವಿಡ್ ನಿಯಮ ಪಾಲನೆಗೆ ಕಟ್ಟು ನಿಟ್ಟಿನ ಆದೇಶ ಮಾಡಬೇಕಿದೆ. ಮದುವೆಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರಕ್ಕೆ ಸೂಕ್ತ ಆದೇಶ ನೀಡಬೇಕು, ತಪ್ಪಿದ್ದಲ್ಲಿ ಕೇಸ್ ದಾಖಲು ಮಾಡಬೇಕು. ಕೋವಿಡ್ ನಿಯಮ ಪಾಲನೆ ಮಾಡದ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಬೇಕು. ಬಸ್ಸು ಮತ್ತು ಟೆಂಪೋದಲ್ಲಿ ಪ್ರಯಾಣಿಕರ ಬಗ್ಗೆ ಪರಿಶೀಲನೆ ಮಾಡಿ ಅಲ್ಲೂ ಕೂಡ ನಿಯಮ ಪಾಲನೆಗೆ ಎಚ್ಚರಿಕೆ ನೀಡಬೇಕಾಗಿದೆ.
ಜಿಲ್ಲೆಯಲ್ಲಿ ಕರೊನಾ ಕೇಸುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಹಶಿಲ್ದಾರರಿಗೆ ಜಿಲ್ಲಾಧಿಕಾರಿಗಳು ಕಟ್ಟು ನಿಟ್ಟಿನ ಆದೇಶ ನೀಡಲು ನಿರ್ದೇಶನದ ನೀಡಿರುವ ವಿಷಯ ತಿಳಿದು ಬಂದಿದೆ.
ವರದಿ ವೆಂಕಟೇಶ ಮೇಸ್ತ ಹೊನ್ನಾವರ.

error: