April 28, 2024

Bhavana Tv

Its Your Channel

ಶ್ರೀ ಬೇಟೆವೀರ ಲಕ್ಷ್ಮೀ ವೆಂಕಟೇಶ ನಾಟ್ಯ ಕಲಾ ಸಂಘದ 31 ನೇ ಕಲಾಕುಸುಮ “ಓ ನನ್ನ ನಲ್ಲೇ” ಎಂಬ ಸಾಮಾಜಿಕ ನಾಟಕ

ಹೊನ್ನಾವರ ತಾಲೂಕಿನ ರಥಬೀದಿಯ ಶ್ರೀ ಬೇಟೆವೀರ ಲಕ್ಷ್ಮೀ ವೆಂಕಟೇಶ ನಾಟ್ಯ ಕಲಾ ಸಂಘದ 31 ನೇ ಕಲಾಕುಸುಮ “ಓ ನನ್ನ ನಲ್ಲೇ” ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.
ಪ್ರಭಾತ ನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ವರ್ಣರಂಜಿತ ಭವ್ಯ ರಂಗಸಜ್ಜಿಕೆಯ ಮೇಲೆ ಪ್ರದರ್ಶನಗೊಂಡ “ಓ ನನ್ನ ನಲ್ಲೇ” ನಾಟಕವು, ಖ್ಯಾತ ಲೇಖಕ ಮಾರುತಿ ಬಾಡಕರ್ ವಿರಚಿತವಾಗಿದೆ. ಇಂದಿನ ಸಮಾಜದಲ್ಲಿ ನಿತ್ಯ ನೂತನ ನಡೆಯುವ ನೈಜ ಘಟನೆಗಳನ್ನು ಪ್ರತಿಬಿಂಬಿಸುವ, ಹೃದಯ ಸ್ಪರ್ಶಿ ಕೌಟಂಬಿಕ ಕಥೆಯನ್ನು ಹೊಂದಿದ್ದು, ಅದಕ್ಕೆ ಪೂರಕವಾಗಿ ಕಲಾವಿದರೆಲ್ಲ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದರು.
ನಾಟಕ ರಂಗದಲ್ಲಿ ತಾಲೂಕಿನ ಖ್ಯಾತ ಕಲಾವಿದರಲ್ಲಿ ಒಬ್ಬರಾದ ಹೊನ್ನಾವರದ ನಿತ್ಯಾನಂದ ಭಟ್ಟರು, ಸ್ತ್ರೀ ಪಾತ್ರದ ಕಥನಾಯಕಿಯಾಗಿ ನಿಜವಾದ ಹೆಣ್ಣನ್ನೇ ನಾಚಿಸುವಂತೆ ಆಕರ್ಷಕವಾಗಿ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದರು. ರೌದ್ರ ಖಳನಾಯಕರಾಗಿ ಸದಾನಂದ ನಾಯ್ಕ್ ಹಾಗೂ ನಾಗರಾಜ್ ಪಟಗಾರ್ ಆರ್ಭಟ, ದುರಂತ ಕಥನಾಯಕರಾಗಿ ಕೆ.ಎಸ್. ಹೆಗಡೆ ಹಾಗೂ ಪ್ರಕಾಶ್ ಭಂಡಾರಿ ಚೀರಾಟ, ದುಷ್ಟರ ಪರ ನಿಲ್ಲುವ ಭ್ರಷ್ಟ ಅಧಿಕಾರಿಯ ಪಾತ್ರದಲ್ಲಿ ಕಿಣಿ ರಾಮ್ ಅತ್ಯಮೋಘ ಅಭಿನಯ, ಹಾಸ್ಯದಲ್ಲಿ ಇಜಾಕ್ ಪರ್ನಾಂಡಿಸ್ ಪಂಚಿAಗ್ ಡೈಲಾಗ್ ಕಲಾಭಿಮಾನಿಗಳ ಮೆಚ್ಚುಗೆಗೆ ಸಾಕ್ಷಿಯಾಯಿತು.
ಮಹಾಬಲೇಶ್ವರ್ ನಾಯ್ಕ್, ರಾಜು ದೇವಾಡಿಗ, ಶ್ರೀ ವಿನಾಯಕ, ಜಗದೀಶ್ ಪೈ, ಎಂ. ಎಸ್. ನಾಯ್ಕ್, ಶ್ರೀಕಾಂತ್ ಭಂಡಾರಿ ಮುಂತಾದ ಪ್ರತಿಭಾನ್ವಿತರು ಜನ ಮನ ಗೆದ್ದರು.
ಜನಪ್ರಿಯ ಕೀಬೋರ್ಡ್ ವಾದಕ ವಿಜಯ್ ಮಹಾಲೆ ಸಂಗೀತ, ರಾಜ್ಯಪ್ರಶಸ್ತಿ ಪುರಸ್ಕೃತ ಮಾರುತಿ ನಾಯ್ಕ್ ಕೂಜಳ್ಳಿ ಗಾಯನ, ಕಲಾ ಚತುರ ಹರೀಶ್ ಶೇಟ್ ತಬಲಾ ಸಾಥ್ ನಾಟಕದ ಮೆರಗನ್ನು ಹೆಚ್ಚಿಸಿತು.
ಪಾತ್ರಧಾರಿಗಳಿಗೆ ಪೂರಕವಾಗಿ ಮೇಕಪ್ ಮಾಡುವಲ್ಲಿ ವಂದೂರು ರವಿ ಹೆಗಡೆ ಸಹಕರಿಸಿದರು. ಇನ್ನು ಕಲಾ ಪ್ರೋತ್ಸಾಹಕರು, ಊರನಾಗರಿಕರು ಕಲಾ ಸಂಘದ ಜೊತೆಗಿದ್ದು, ನಾಟಕದ ಯಶಸ್ಸಿಗೆ ಕಾರಣರಾದರು.

ವರದಿ : ನರಸಿಂಹ ನಾಯ್ಕ್ ಹರಡಸೆ

error: