May 4, 2024

Bhavana Tv

Its Your Channel

ಗುಂಡಿಬೈಲ್ ಗ್ರಾಮಪಂಚಾಯತ್ ನ 2022-23 ನೇ ಸಾಲಿನ ಮೊದಲ ಸುತ್ತಿನ ಗ್ರಾಮ ಸಭೆ

ಹೊನ್ನಾವರ ತಾಲೂಕಿನ ಗುಂಡಿಬೈಲ್ ಗ್ರಾಮಪಂಚಾಯತ್ ನ ೨೦೨೨-೨೩ ನೇ ಸಾಲಿನ ಮೊದಲ ಸುತ್ತಿನ ಗ್ರಾಮ ಸಭೆಯು, ಗ್ರಾಮ ಪಂಚಾಯತ್ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ಈ ವೇಳೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಯಿತು.

ಸಾಮೂಹಿಕವಾಗಿ ನಾಡಗೀತೆಯನ್ನು ಹಾಡುವ ಮೂಲಕ ಗ್ರಾಮ ಸಭೆಗೆ ಚಾಲನೆ ನೀಡಲಾಯಿತು. ಬಳಿಕ ಗ್ರಾಮ ಪಂಚಾಯತ್ ಅಧಿಕಾರಿ ೨೦೨೨-೨೩ ನೇ ಸುತ್ತಿನ ಜಮಾ ಖರ್ಚಿನ ವಿವರವನ್ನು ವರದಿಯಲ್ಲಿ ವಾಚಿಸಿದ್ದು, ಒಟ್ಟೂ ಜಮಾ ೭೭,೫೭,೧೧೧ ರೂಪಾಯಿ ಆದರೆ, ಒಟ್ಟೂ ಖರ್ಚು ೪೦,೮೮,೮೧೨ ರೂಪಾಯಿ ಎಂಬುದನ್ನು ಸವಿವರವಾಗಿ ಮಾಹಿತಿ ನೀಡಿದರು. ಸರಕಾರದ ೨೫ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು, ಜನರ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ಕೊಡುವ ಪ್ರಯತ್ನ ಮಾಡಿದರು. ಕೆಲವು ಇಲಾಖೆಗಳಲ್ಲಿ ಹೊಸದಾಗಿ ನಿಯೋಜನೆಗೊಂಡ ಅಧಿಕಾರಿಗಳನ್ನು ಗ್ರಾಮ ಸಭೆಗೆ ಕಳಿಸಿದ್ದು, ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲು ಸೂಕ್ತ ಮಾಹಿತಿ ಹಾಗೂ ದಾಖಲೆ ಇಲ್ಲದೆ ತಬ್ಬಿಬ್ಬಾದ ಘಟನೆಯೂ ನಡೆಯಿತು.

ಕಂದಾಯ ಇಲಾಖೆ ಅಧಿಕಾರಿ ಸುಪ್ರಿತಾ ಆಚಾರಿ ಮಾತನಾಡಿ “ಹೊಳೆಬದಿ ಹಾಗೂ ಗುಡ್ಡದ ಮೇಲೆ ಎರಡೂ ಕಡೆ ಮನೆಯುಳ್ಳವರಿದ್ದಾರೆ. ಆದರೆ ನೆರೆ ಪರಿಹಾರವನ್ನು ಹೊಳೆಬದಿಗೆ ಇರುವ ಮನೆಗಳಲ್ಲಿ ವಾಸ್ತವ್ಯ ಇರುವ ಫಲಾನುಭವಿಗಳಿಗೆ ಮಾತ್ರಾ ನೀಡಿದ್ದೇವೆ” ಎಂದರು.

ವಿದ್ಯುತ್ ಸಮಸ್ಯೆಯ ಕುರಿತಾಗಿ ಕೇಳಿದ ಪ್ರಶ್ನೆಗಳಿಗೆ ಹೆಸ್ಕಾಂ ಅಧಿಕಾರಿ ಗಜಾನನ ನಾಯ್ಕ್ ಸಮರ್ಪಕವಾಗಿ ಉತ್ತರ ನೀಡಿ ಸ್ಪಂದಿಸಿದರು.

ಗ್ರಾಮದ ಶ್ರೀಕಾಂತ್ ನಾಯ್ಕ್ ಪ್ರಶ್ನೆಯೊಂದನ್ನು ಕೇಳಿ “ಗುಂಡಿಬೈಲ್ ನಂಬರ್-೨ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿಯ ಪ್ರಕರಣಕ್ಕೆ ಸಂಬAದಿಸಿದAತೆ ಶಿಕ್ಷಣ ಇಲಾಖೆಯವರು ಏನು ಕ್ರಮ ಕೈಗೊಂಡಿದ್ದೀರಿ?” ಎಂದರು. ಈ ಪ್ರಕರಣದ ಹಿನ್ನೆಲೆ ನೋಡುವುದಾದರೆ “ಸೆಪ್ಟೆಂಬರ್ ೮ ರಂದು ಗುಂಡಿಬೈಲ್ ನಂಬರ್-೨ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಏರ್ಪಡಿಸಲಾಗಿತ್ತು. ಹೆರಾವಲಿ ಕಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಸದಾನಂದ ಭಟ್ ಪ್ರದರ್ಶಿಸಿದ ಛದ್ಮವೇಷಕ್ಕೆ ನಿರ್ಣಾಯಕರು ಪ್ರಥಮ ಬಹುಮಾನ ಘೋಷಣೆ ಮಾಡಿ, ವೇದಿಕೆಗೆ ಕರೆದು ಪ್ರಥಮ ಬಹುಮಾನ ವಿತರಿಸಿದ್ದರು. ಅರ್ಧ ಗಂಟೆಯ ಬಳಿಕ ಬೇರೇನೋ ಚರ್ಚೆ ನಡೆದು ಬಹುಮಾನವನ್ನು ಹಿಂದಿರುಗಿಸುವAತೆ ಎನೌನ್ಸ್ ಮಾಡಲಾಯಿತು. ವಿದ್ಯಾರ್ಥಿಯ ತಾಯಿ ಕಾರಣ ಏನೆಂದು ಪ್ರಶ್ನಿಸಿದಾಗ “ಗ್ರಾಮ ಪಂಚಾಯತ್ ಅಧ್ಯಕ್ಷರು ಬೇಗ ಮನೆಗೆ ಹೋಗಬೇಕು ಅಂದಿದ್ದಾರೆ. ಹಾಗಾಗಿ ಅವಸರದಲ್ಲಿ ತಪ್ಪಾಗಿದೆ” ಎಂದು ನಿರ್ಣಾಯಕರು ಸಬೂಬು ಹೇಳಿದ್ದರು. ಈ ಸಂಬAಧ ಬಾಲಕನ ತಾಯಿ ಶಿಕ್ಷಣಾಧಿಕಾರಿಗಳಿಗೆ ಲಿಖಿತ ದೂರು ಸಹ ಸಲ್ಲಿಸಿದ್ದರು.
ಆದರೆ ಗ್ರಾಮ ಸಭೆಯಲ್ಲಿ ಈ ಪ್ರಶ್ನೆಗೆ ಶಿಕ್ಷಣ ಇಲಾಖೆಯಿಂದ ಬಂದಿದ್ದ ಸಿ ಆರ್ ಪಿ ಪ್ರಮೀಳಾ ಮಾತನಾಡಿ “ಮೊದಲ ಹಂತದ ತನಿಖೆ ಮಾಡಿದ್ದೇವೆ. ಇನ್ನೂ ವಿಚಾರಣೆ ಬಾಕಿಯಿದೆ” ಎಂದು ಹಾರಿಕೆಯ ಉತ್ತರ ಕೊಟ್ಟರು.
ಬಳಿಕ ಗ್ರಾಮ ಪಂಚಾಯತ್ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಮಾತನಾಡಿ “ಶಿಕ್ಷಕರು ಹಾಗೂ ನಿರ್ಣಾಯಕರು ತಪ್ಪು ಮಾಡಿದ್ದು, ಆ ತಪ್ಪಿನಿಂದ ಬಚಾವ್ ಆಗುವ ಸಲುವಾಗಿ ನನ್ನ ಹೆಸರನ್ನು ಮದ್ಯ ತಂದಿದ್ದಾರೆ. ನಮ್ಮ ವ್ಯಾಪ್ತಿಯ ಕಾರ್ಯಕ್ರಮ ಎಂಬ ಅಭಿಮಾನದಿಂದ ನಾನು ಬೆಳಗ್ಗಿನಿಂದ ಸಂಜೆ ತನಕ ಅಲ್ಲಿಯೇ ಇದ್ದೇನೆ. ನಾನು ಕೇವಲ ಬಹುಮಾನ ವಿತರಕನೇ ಹೊರತು ಕಾರ್ಯಕ್ರಮದ ಆಯೋಜನೆ ಅಥವಾ ನಿರ್ಣಯದಲ್ಲಿ ನನ್ನ ಪಾತ್ರವಿಲ್ಲ”. ಎಂದು ಸ್ಪಷ್ಟನೆ ನೀಡಿದರು.

ಗ್ರಾಮದ ವಿನೋದ್ ಗೌಡ ಮಾತನಾಡಿ “ಸರಕಾರಿ ಹಿರಿಯ ಪ್ರಾಥಮಿಕ ಗುಂಡಬಾಳ ನಂಬರ್-೧ ಶಾಲೆಯಲ್ಲಿ, ತಾಲೂಕಾ ಪಂಚಾಯತ್ ನ ಅನಿರ್ಬಂದಿತ ಅನುದಾನದ ಅಡಿಯಲ್ಲಿ ಒಂದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲಾ ಮೇಲ್ಚಾವಣಿ ಕಾಮಗಾರಿ ನಡೆದಿತ್ತು. ಇದು ಸಂಪೂರ್ಣ ಕಳಪೆ ಕಾಮಗಾರಿಯಾಗಿದೆ ಎಂದು ದೂರು ನೀಡಿದ್ದೆವು. ಆದರೂ ಬಿಲ್ ಪಾಸ್ ಮಾಡಲಾಗಿದೆ. ಇಲ್ಲೂ ಸಹ ೪೦ ಪರ್ಸೆಂಟ್ ಕಮಿಷನ್ ದಂದೆ ನಡೆದಿದೆ” ಎಂದು ಅಸಮಾಧಾನ ಹೊರ ಹಾಕಿದರು.
ಇದಕ್ಕೆ ಉತ್ತರಿಸಬೇಕಾದ ಇಂಜಿನಿಯರ್ ಪ್ರದೀಪ್ ಗ್ರಾಮ ಸಭೆಗೆ ಬಂದಿರಲಿಲ್ಲ. ಅವರ ಪರವಾಗಿ ಬಂದ ಸಹಾಯಕ ಸಿಬ್ಬಂದಿಯೊಬ್ಬರು ಉತ್ತರಿಸುವ ಪ್ರಯತ್ನ ಮಾಡಿದರಾದರೂ ಅವರಿಗೆ ಸೂಕ್ತ ಮಾಹಿತಿ ಇರಲಿಲ್ಲ.

ಇನ್ನುಳಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳೂ ಆಯಾ ಇಲಾಖೆಯಲ್ಲಿ ಸಿಗುವ ಸವಲತ್ತುಗಳ ಕುರಿತಾಗಿ ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ನ ಸರ್ವ ಸದಸ್ಯರು, ಅಧಿಕಾರಿಗಳು, ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡು ಗ್ರಾಮ ಸಭೆಯ ಯಶಸ್ಸಿಗೆ ಕಾರಣರಾದರು.

ವರದಿ:ನರಸಿಂಹ ನಾಯ್ಕ್ ಹರಡಸೆ

error: