May 17, 2024

Bhavana Tv

Its Your Channel

ಚಿಕ್ಕನಕೋಡ್ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಹೊನ್ನಾವರ ತಾಲೂಕಿನ ಚಿಕ್ಕನಕೋಡ್ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು, ಸಂಘದ ಅಧ್ಯಕ್ಷ ಆರ್.ಪಿ ನಾಯ್ಕ್ ಅದ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಚಿಕ್ಕನಕೋಡ ವ್ಯವಸಾಯ ಸೇವಾ ಸಹಕಾರಿ ಸಂಘದ ೯೩ ನೇ ವಾರ್ಷಿಕ ಮಹಾಸಭೆಯನ್ನು ಚಿಕ್ಕನಕೋಡ್ ದುರ್ಗಾಂಬ ದೇವಾಲಯದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಾರ್ಥನೆ ಹಾಡಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಚಾಲನೆ ನೀಡಲಾಯಿತು.

ಈ ವೇಳೆ ಸಂಘದ ಮುಖ್ಯ ಕಾರ್ಯನಿರ್ವಾಹಕ ವಸಂತ ನಾಯ್ಕ್ , ಸಂಘದ ವ್ಯವಹಾರಗಳ ಕುರಿತಾಗಿ ಪರಿಪೂರ್ಣ ಮಾಹಿತಿಯನ್ನು ನೀಡಿದರು. ೨೦೨೧-೨೨ ನೇ ಸಾಲಿನ ವರದಿಯಂತೆ ಸಂಘದಲ್ಲಿ ೧೭೨೧ ಸದಸ್ಯರಿದ್ದು, ಉತ್ತಮ ವ್ಯವಹಾರದಿಂದಾಗಿ ಆಡಿಟ್ ನಲ್ಲಿ ಸಂಘಕ್ಕೆ “ಎ” ಕ್ಲಾಸ್ ದೊರಕಿದೆ. ಸಂಘವು ತನ್ನ ಎಲ್ಲ ವ್ಯವಹಾರಗಳಿಂದ ಸಾಲಗಾರರಿಗೆ ಸ್ಪರ್ಧಾತ್ಮಕ ಬಡ್ಡಿ ಆಕರಿಸುವ ಮೂಲಕ ಹಾಗೂ ಠೇವಣಿದಾರರಿಗೆ ಆಕರ್ಷಕ ಬಡ್ಡಿ ನೀಡುವ ಮೂಲಕ, ಖರ್ಚುಗಳನ್ನು ಮಿತಿಯಲ್ಲಿ ಇರಿಸಿ, ೨೫,೫೭,೨೩೦ ರೂಪಾಯಿ ನಿಕ್ಕಿ ಲಾಭ ಗಳಿಸಿದೆ.

ಸಂಘದಲ್ಲಿ ಉತ್ತಮವಾಗಿ ವ್ಯವಹರಿಸಿದ ಹಿರಿಯ ಸಹಕಾರಿಗಳನ್ನು ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿಸಲಾಯಿತು. ಕಳೆದ ಜುಲೈ ೨೮ ನೇ ತಾರೀಕಿನಂದು ಕಳ್ಳರಿಬ್ಬರು ರಾತ್ರಿ ಸೊಸೈಟಿಯ ದರೋಡೆಗೆ ಪ್ರಯತ್ನಿಸಿದ್ದರು. ಸ್ಥಳೀಯರ ಸಮಯಪ್ರಜ್ಞೆ, ಹಾಗೂ ಪರಿಶ್ರಮದ ಫಲವಾಗಿ ದರೋಡೆ ಪ್ರಯತ್ನ ವಿಫಲವಾಗಿ ಕಳ್ಳರು ಜೈಲು ಸೇರಿದ್ದರು. ಪ್ರಾಣದ ಹಂಗನ್ನು ತೊರೆದು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಸಾಹಸಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಹಿರಿಯ ಸಹಕಾರಿಗಳಲ್ಲೊಬ್ಬರಾದ ಪದ್ಮನಾಭ ಪ್ರಭು ಮಾತನಾಡಿ “ತೀರಾ ಅಶಕ್ತರು, ವಯೋವೃದ್ಧರು ಸಾಲ ಪಡೆಯುವ ಸಂದರ್ಭದಲ್ಲಿ ಸೊಸೈಟಿಗೆ ಬಂದು ಸಹಿ ಹಾಕಲು ಕಷ್ಟವಿರುತ್ತದೆ. ಇಂಥ ಸಂದರ್ಭದಲ್ಲಿ ಸಂಘದ ಸಿಬ್ಬಂದಿಗಳೇ ಅವರ ಮನೆಗೆ ಹೋಗಿ ಸಹಿ ಹಾಕಿಸಿಕೊಂಡು ಬರುತ್ತಾರೆ. ಈ ರೀತಿಯ ಸಹಕಾರಿ ಮನೋಭಾವದ ಸಿಬ್ಬಂದಿಗಳುಳ್ಳ ನಮ್ಮ ಸಂಘದ ಕುರಿತಾಗಿ ತುಂಬಾ ಹೆಮ್ಮೆಯಿದೆ” ಎಂದರು.

ಸAಘದ ನಿರ್ದೇಶಕರಲ್ಲೊಬ್ಬರಾದ ದಯಾನಂದ ಭಟ್ ಮಾತನಾಡಿ “ಈಗಿರುವ ೧೭೨೧ ಸದಸ್ಯರ ಸಂಖ್ಯೆಗಳನ್ನು ಮುಂಬರುವ ಶತಮಾನೋತ್ಸವದ ಸುಸಂದರ್ಭದಲ್ಲಿ ಹತ್ತು ಸಾವಿರಕ್ಕೆ ತಲುಪಿಸುವ ಅಭಿಲಾಷೆಯಿದೆ” ಎಂದರು.

ಸAಘದ ಅಧ್ಯಕ್ಷ ಆರ್.ಪಿ ನಾಯ್ಕ್ ಮಾತನಾಡಿ “ಸಂಘದ ಭದ್ರತೆಯ ದೃಷ್ಟಿಯಿಂದ ಹೊಸ ಗುಣಮಟ್ಟದ ಲಾಕಾರ್ ಖರೀದಿಸುತ್ತೇವೆ. ಮತ್ತು ರಾತ್ರಿ ವೇಳೆ ಕಾವಲುಗಾರನನ್ನು ನೇಮಿಸುತ್ತೇವೆ. ನಮ್ಮ ಸಿಬ್ಬಂದಿಗಳ ಪ್ರಾಮಾಣಿಕ ಕರ್ತವ್ಯ ಹಾಗೂ ಸದಸ್ಯರ ಉತ್ತಮ ವ್ಯವಹಾರದ ಫಲವಾಗಿ, ನಮ್ಮ ಸಂಘಕ್ಕೆ ‘ಹೊನ್ನಾವರ ತಾಲೂಕಿನ ಅತ್ಯುತ್ತಮ ಸಹಕಾರಿ ಸಂಘ’ ಎಂಬ ಪ್ರಶಸ್ತಿ ಘೋಷಣೆಯಾಗಿದೆ” ಎಂದರು.

ಸAಘದ ಸರ್ವ ನಿರ್ದೇಶಕರು, ಸಿಬ್ಬಂದಿಗಳು, ಸದಸ್ಯರೆಲ್ಲ ಪಾಲ್ಗೊಂಡು ವಾರ್ಷಿಕ ಮಹಾಸಭೆಯ ಯಶಸ್ಸಿಗೆ ಕಾರಣರಾದರು.

ವರದಿ:ನರಸಿಂಹ ನಾಯ್ಕ್ ಹರಡಸೆ.

error: