May 6, 2024

Bhavana Tv

Its Your Channel

ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲವೆಂದು ಖಾಲಿ ಕೊಡ ಹಿಡಿದು ಪ್ರತಿಭಟನೆ.

ಹೊನ್ನಾವರ: ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ ಎಂದು ಹೊನ್ನಾವರ ತಾಲೂಕಿನ ಮುಗ್ವಾ ಗ್ರಾ.ಪಂ. ಎದುರಿಗೆ ಗ್ರಾಮಸ್ಥರು ಖಾಲಿ ಕೊಡ ಹಿಡಿದು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆದಿದೆ.

 ಮುಗ್ವಾ ಮುರುಕಟ್ಟೆ ಮಾಸ್ತಿಮನೆಯಿಂದ ಕನ್ನಡ ಶಾಲೆಯವರೆಗೆ ಒಂದು ವರ್ಷದಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು `ಬೇಕೇ ಬೇಕು ನೀರು ಬೇಕು' ಎಂದು ಘೋಷಣೆ ಕೂಗಿದರು. ನಂತರ ಗ್ರಾಪಂ ಅಧ್ಯಕ್ಷೆ ಗೌರಿ ಅಂಬಿಗ ಹಾಗೂ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಕವಿತಾ ಗೌಡ ಅವರಿಗೆ ಮನವಿ ಸಲ್ಲಿಸಿ ನೀರಿನ ಸಮಸ್ಯೆ ಕುರಿತು ಗಮನ ಸೆಳೆದರು. 
`ಕಳೆದ ಒಂದು ವರ್ಷಗಳಿಂದ ಮುಗ್ವಾ ಮುರುಕಟ್ಟೆ ಭಾಗಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಬಿಡುತ್ತಿಲ್ಲ. ಈ ಬಗ್ಗೆ ಕೇಳಿದರೆ ಕೊಳವೆ ಬಾವಿಯಲ್ಲಿ ನೀರಿಲ್ಲ ಎಂಬ ಸಬೂಬು ಹೇಳುತ್ತಾರೆ. ಈ ಭಾಗದಲ್ಲಿ ಕೊಳವೆ ಬಾವಿ ಅಥವಾ ತೆರೆದ ಬಾವಿಗಳು ಇಲ್ಲ. ಯಾವುದೇ ಶುದ್ಧ ಕುಡಿಯುವ ಜಲಮೂಲವೂ ಇಲ್ಲ. ಕಳೆದೊಂದು ವರ್ಷಗಳಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದೇವೆ. ನೀರಿಲ್ಲದೇ ಜನಸಾಮಾನ್ಯರಾದ ನಾವು ತೀವ್ರ ತೊಂದರೆ ಅನುಭವಿಸುತ್ತಿರುವ ವಿಷಯ ಗ್ರಾಮ ಪಂಚಾಯಿತಿಗೂ ಹಾಗೂ ಈ ಭಾಗದ ಸದಸ್ಯರಿಗೂ ತಿಳಿದಿದೆ. ಆದರೂ ಯಾರೊಬ್ಬರೂ ಈ ಬಗ್ಗೆ ಗಮನಕೊಡುತ್ತಿಲ್ಲ. ಸದ್ಯಕ್ಕೆ ನೀರಿನ ಸಮಸ್ಯೆ ಬಗೆಹರಿಸುವಂತೆ ಕಾಣುತ್ತಿಲ್ಲ.  ಇಲ್ಲಿನ ಬಹುಪಾಲು ಜನರು ಕೂಲಿ-ನಾಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಈ ಪರಿಸ್ಥಿತಿಯಲ್ಲಿ ನೀರಿಗೂ ಬರ ಬಂದರೆ ನಮ್ಮ ಗತಿಯೇನು? ಒಂದು ಟ್ಯಾಂಕರ್ ನೀರಿಗೆ 350-400 ರೂ. ಹೇಳುತ್ತಾರೆ. ತುತ್ತು ಅನ್ನಕ್ಕೂ ಕಷ್ಟ ಪಡುವ ನಮಗೆ ಇಷ್ಟು ಹಣ ಕೊಟ್ಟು ನೀರು ಖರೀದಿಸುವ ಶಕ್ತಿ ನಮಗಿಲ್ಲ. ಸ್ಥಳೀಯ ಜನಪ್ರತಿನಿಧಿಗಳು, ತಾಲೂಕಾಡಳಿತ, ಸರ್ಕಾರ ಈ ಬಗ್ಗೆ ಗಮನಹರಿಸಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. 
 ಗ್ರಾಮಸ್ಥರಾದ ಗಣೇಶ ಗೌಡ ಮಾತನಾಡಿ ಸರ್ಕಾರ ಕುಡಿಯುವ ನೀರು, ರಸ್ತೆ ಸೇರಿ ಮೂಲಭೂತ ಸೌಕರ್ಯಕ್ಕೆ ಮೊದಲ ಆದ್ಯತೆ ನೀಡುತ್ತಿದೆ. ಆದೆರೆ ನಮ್ಮ ಭಾಗದಲ್ಲಿ ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರದ ಯಾವೊಂದು ಸೌಲಭ್ಯವೂ ಸರಿಯಾಗಿ ಸಿಗುತ್ತಿಲ್ಲ. ಆದಷ್ಟು ಶೀಘ್ರವಾಗಿ ನೀರಿನ ಕೊರತೆಯನ್ನು ನೀಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. 
ಗ್ರಾ.ಪಂ ಅಧ್ಯಕ್ಷೆ ಗೌರಿ ಅಂಬಿಗ ಮನವಿ ಸ್ವೀಕರಿಸಿ ಮಾತನಾಡಿ ಮುರುಕಟ್ಟೆ ಭಾಗದಲ್ಲಿ ನೀರಿನ ಕೊರತೆ ಇರುವುದು ಗಮನಕ್ಕೆ ಬಂದಿದೆ. ಆದರೆ ಇತ್ತೀಚೆಗೆ ಎಲ್ಲಾ ಭಾಗದಲ್ಲೂ ನೀರಿನ ಕೊರತೆ ಕಾಡಿದೆ. ಈಗಿರುವ ಕೊಳವೆ ಬಾವಿಯ ಯಂತ್ರವನ್ನು ದುರಸ್ಥಿಗೊಳಿಸಿ ಎರಡು ದಿನಗಳಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು ಎಂದರು. 
ಗ್ರಾಪಂ ಅಭಿವೃದ್ಧಿ ಅಧಿಕಾರಿ ಕವಿತಾ ಗೌಡ ಮಾತನಾಡಿ ಎರಡು ದಿನದ ಹಿಂದೆ ಪಂಪ್ ಹಾಳಾಗಿದೆ ಸಮಸ್ಯೆ ಗಮನಕ್ಕೆ ಬಂದಾಗ  ಪಂಪ್ ರಿಪೇರಿಗೆ ಕಳಿಸಲಾಗಿದೆ. ಮುರುಕಟ್ಟೆ ಭಾಗಕ್ಕೆ ನೀರು ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರು ಯಾವುದೇ ಗೊಂದಲ ಮಾಡಿಕೊಳ್ಳದೆ ಸಹಕರಿಸಬೇಕು ಎಂದರು. 
ಈ ಸಂದರ್ಭದಲ್ಲಿ ವೆಂಕಟೇಶ ಶೇಟ್, ವಿಕ್ಟರ್ ಫರ್ನಾಂಡೀಸ್, ಸುಬ್ರಾಯ ಮೇಸ್ತ, ವಿ.ಎಂ.ಶೇಟ್, ದೇವೇಂದ್ರ ಮೇಸ್ತ, ನಾರಾಯಣ ಗಣಪಯ್ಯ ನಾಯ್ಕ, ರಾಮನಾಥ ನಾಯ್ಕ, ವೀಣಾ ಶೇಟ್, ಜಯಲಕ್ಷ್ಮೀ ಮೇಸ್ತ, ಕಾವ್ಯ ಮೇಸ್ತ, ಸವಿತಾ ಆಚಾರಿ, ಸುಮಂಗಲಾ ಮಡಿವಾಳ, ಲಲಿತಾ ಶೇಟ್, ಗೀತಾ ಶೇಟ್ ಇತರರು ಪಾಲ್ಗೊಂಡಿದ್ದರು.
error: