April 29, 2024

Bhavana Tv

Its Your Channel

ಸುಳ್ಳೇ ಬಿಜೆಪಿಗರ ಬಂಡವಾಳ: ಮಂಕಾಳ ವೈದ್ಯ ಟೀಕೆ

ಹೊನ್ನಾವರ: ಸುಳ್ಳು ಹೇಳುವ ಅವಶ್ಯಕತೆ ನಮಗಿಲ್ಲ. ಬಿಜೆಪಿಗರಿಗೆ ಸುಳ್ಳೇ ಬಂಡವಾಳ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಿಡಿಕಾರಿದರು.
ಹೊನ್ನಾವರ ತಾಲೂಕಿನ ಮಾವಿನಕುರ್ವಾ ಜಿಲ್ಲಾ ಪಂಚಾಯತಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಟಾಚಾರಕ್ಕೆ ದೇವರನ್ನ ನಂಬುವವರೂ ನಾವಲ್ಲ. ಮಠ- ದೇವಸ್ಥಾನ ಕಟ್ಟುವುದೇ ನನ್ನ ಕೆಲಸ ಎಂದ ಅವರು, ತೆರಿಗೆ ಹಣದಿಂದಲೇ ಗ್ಯಾರಂಟಿ ಯೋಜನೆ ನೀಡುತ್ತಿರುವುದು ನಿಜ. ಬಿಜೆಪಿ ಆಡಳಿತದಲ್ಲಿ ಈ ತೆರಿಗೆ ಹಣ ಎಲ್ಲಿಗೆ ಹೋಯಿತು? ಎಂದು ಪ್ರಶ್ನಿಸಿದರು.
ಕೆಲಸ ಮಾಡದವರು ಶಾಸಕರಾಗಲು ಯೋಗ್ಯರಲ್ಲ. ದೇಶದ ಎಲ್ಲವನ್ನೂ ಮಾರಲು ಹೊರಟಿರುವವರಿಗೆ ಸಂವಿಧಾನ ಅಡ್ಡಲಾಗಿದೆ. ಅದಕ್ಕಾಗಿ ಬಿಜೆಪಿಗರು ಅದನ್ನು ಬದಲಿಸಲು ಹೊರಟಿದ್ದಾರೆ. ನಾಲ್ಕೂವರೆ ವರ್ಷ ಮಲಗಿದ್ದು ಆರು ತಿಂಗಳಿದ್ದಾಗ ಸುಳ್ಳನ್ನ ಹಿಡಿದು ಚುನಾವಣೆಗೆ ಬರುತ್ತಾರೆ, ಅಂಥವರನ್ನ ನಂಬದಿರಿ ಎಂದರು.
ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ಮತದಾನವೆಂಬ ಅಧಿಕಾರ ನೀಡಿದವರು ಬಾಬಾ ಸಾಹೇಬ್ ಅಂಬೇಡ್ಕರ್. ಮತಗಳು ಮಾರಾಟವಾಗಬಾರದು. 10 ವರ್ಷಗಳ ಕಾಲ ಬಿಜೆಪಿ, ಪ್ರಧಾನಿ ಮೋದಿ ನೀಡಿದ್ದ ಭರವಸೆಗಳನ್ನ ಈಡೇರಿಸಿಲ್ಲ. ಆರು ಬಾರಿ ಆಯ್ಕೆಯಾದ ಸಂಸದರು ಮಾಡಿದ್ದೇನಿದೆ? ಕೇಂದ್ರದ ಯಾವ ಯೋಜನೆಗಳು ಜಿಲ್ಲೆಗೆ ಬಂದಿವೆ? ಸಂವಿಧಾನ ಬದಲಾಯಿಸಲು 400ಕ್ಕೂ ಹೆಚ್ಚು ಸೀಟು ಬೇಕೆನ್ನುತ್ತಾರೆ. ಯಾವ ಸಂವಿಧಾನ ಬದಲಾಯಿಸಬೇಕೆನ್ನುತ್ತಾರೋ, ಅದೇ ಸಂವಿಧಾನದಿAದಲೇ ಅವರು ಆರು ಬಾರಿ ಆಯ್ಕೆಯಾಗಿದ್ದು ಎಂಬುದನ್ನೂ ಮರೆತಿದ್ದಾರೆ. ಜಾತಿ- ಧರ್ಮದ ಆಧಾರದ ಮೇಲೆ ಬಿಜೆಪಿ ಸರ್ಕಾರ ನಡೆಯುತ್ತಿದೆ. ಧರ್ಮದ ಹೆಸರಲ್ಲಿ ರಾಜಕಾರಣ ಮಾಡಬಾರದು. ನಮ್ಮ ಗ್ಯಾರಂಟಿ ಬಗ್ಗೆ ಪ್ರಧಾನಿ, ಬಿಜೆಪಿಗರು ಟೀಕಿಸಿದ್ದರು. ಈಗ ಅವರೇ ‘ಯೇ ಮೋದಿ ಕೀ ಗ್ಯಾರಂಟಿ ಹೈ’ ಎಂದು ನಮ್ಮ ಶಬ್ದವನ್ನೇ ಕಳವು ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಶಿರಸಿ ಶಾಸಕ ಭೀಮಣ್ಣ ನಾಯ್ಕ, ನೆಹರೂರವರಿಂದ ಹಿಡಿದು ಮನಮೋಹನ್ ಸಿಂಗ್‌ರವರೆಗೆ ಕಾಂಗ್ರೆಸ್ ಜನಪರ ಆಡಳಿತ ನೀಡಿದೆ. ಆದರೆ 10 ವರ್ಷಗಳಲ್ಲಿ ಬಿಜೆಪಿ ಮಾಡಿದ್ದೆಲ್ಲ ಅನಾಚಾರ. ಆರು ಬಾರಿ ಶಾಸಕರಾಗಿದ್ದ ಬಿಜೆಪಿ ಅಭ್ಯರ್ಥಿಯ ಸಾಧನೆಯೂ ಶೂನ್ಯ. ಒಂದು ಕ್ಷೇತ್ರದ ಜನರ ನೋವನ್ನ ಅರಿಯದವರು ಎಂಟು ಕ್ಷೇತ್ರಗಳನ್ನೊಳಗೊಂಡ ಲೋಕಸಭಾ ಕ್ಷೇತ್ರದ ಜನರಿಗೆ ಸ್ಪಂದಿಸುವರೇ? ಅತಿಕ್ರಮಣದ ಬಗ್ಗೆ ಒಂದೇ ಒಂದು ಬಾರಿ ಸಂಸತ್‌ನಲ್ಲಿ ಈ ಹಿಂದಿನ ಸಂಸದರು ಮಾತನಾಡಿಲ್ಲ. ಈಗಿನ ಬಿಜೆಪಿ ಅಭ್ಯರ್ಥಿಯೂ ಒಮ್ಮೆಯೂ ಅತಿಕ್ರಮಣದಾರರಿಗೆ ಅಭಯ ನೀಡುವ ಕಾರ್ಯವನ್ನೂ ಮಾಡಿಲ್ಲ. ಕೇಂದ್ರದಲ್ಲಿ ಬಡವರ ಪರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಜಿಲ್ಲೆಯಲ್ಲಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಮತ ನೀಡಿ ಗೆಲ್ಲಿಸಬೇಕಿದೆ ಎಂದು ಕರೆನೀಡಿದರು.

ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, 56 ಇಂಚಿನ ವಿಶ್ವಗುರು ನರೇಂದ್ರ ಮೋದಿಯವರು 10 ವರ್ಷಗಳಲ್ಲಿ ಏನು ಮಾಡಿದ್ದೀರಿ ಎನ್ನುವುದನ್ನ ತಿಳಿಸಲಿ. ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಬಿಜೆಪಿಗರು ಹೇಳುತ್ತಾರೆ. ಅಪಾಯ ಇರುವುದು ಭಾರತೀಯ ಜನತಾ ಪಾರ್ಟಿಗೆ ಹೊರತು ಯಾವ ಧರ್ಮಕ್ಕೂ ಅಲ್ಲ. 56 ಇಂಚಿನ ಎದೆ ಇದ್ದರೆ ಸಾಲದು, ತಲೆಯಲ್ಲಿ ಬುದ್ಧಿನೂ ಇರಬೇಕು. ಪ್ರಧಾನಿ ಒಂಥರ ಊಸರವಳ್ಳಿ ಇದ್ದಂತೆ, ದಿನಕ್ಕೆ ಮೂರು ಫ್ಯಾನ್ಸಿ ಬಟ್ಟೆ ಧರಿಸುತ್ತಾರೆ. ಇದಕ್ಕಾಗ ಅವರನ್ನ ಪ್ರಧಾನಿಯನ್ನಾಗಿ ಮಾಡಿದ್ದು? ಧರ್ಮ- ಜಾತಿ ಹೆಸರಲ್ಲಿ ಮತ ಕೇಳಲು ಬರುವವರಿಗೆ ಪಾಠ ಕಲಿಸಬೇಕಿದೆ ಎಂದು ಕರೆನೀಡಿದರು.

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ನನ್ನ ಜನ, ನನ್ನ ಸಮಾಜಕ್ಕೋಸ್ಕರ ಮತ ಭಿಕ್ಷೆ ಕೇಳುತ್ತಿದ್ದೇನೆ. ಈ ಭಿಕ್ಷೆ ಕೇಳಲು ನನಗೆ ಯಾವ ಅಳುಕೂ ಇಲ್ಲ. ಸುಳ್ಳು ಹೇಳಿ ಹಿಂದುತ್ವದ ಹೆಸರಿನಲ್ಲಿ ಯುವಕರನ್ನ ಬಿಜೆಪಿಗರು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ನಮ್ಮ ತಂದೆ- ತಾಯಿಯರು ನಮಗೆ ಸಂಸ್ಕೃತಿ ಕಲಿಸಿದ್ದಾರೆ, ನಮಗೆ ಹಿಂದುತ್ವದ ಪಾಠ ಹೇಳಲು ಬಿಜೆಪಿಗರು ಯಾರು? ಸಂತ- ಮಹಾತ್ಮ, ದೇವರ ಹೆಸರನ್ನೂ ರಾಜಕೀಯಕ್ಕೆ ಬಳಸಿಕೊಳ್ಳುವ ಅವರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ಸ್ಥಳೀಯ ಮಹಿಳೆಯರಿಂದ ಡಾ.ಅಂಜಲಿ ಅವರಿಗೆ ಉಡಿ ತುಂಬಿ ಗೌರವಿಸಲಾಯಿತು. ಸಾನಮೋಟ ಗ್ರಾಮಸ್ಥರು ಮಂಕಾಳ ವೈದ್ಯ ಅವರಿಗೆ ಸನ್ಮಾನಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಕೆಪಿಸಿಸಿ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೊಸಬಾಳೆ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೃಷ್ಣ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ, ಖಲೀಲ್ ಶೇಖ್ ಉಪಸ್ಥಿತರಿದ್ದರು.
ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ

error: