April 30, 2024

Bhavana Tv

Its Your Channel

ಭಾರತ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ 133ನೇ ಜನ್ಮದಿನೋತ್ಸವ

ಹೊನ್ನಾವರ ತಾಲೂಕಿನ ಕುದ್ರಿಗಿ ಜನತೋಳಕೇರಿಯ ಶ್ರೀ ಚೌಡೇಶ್ವರಿ ಸಾಂಸ್ಕೃತಿಕ ಕ್ರೀಡಾ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಭಾರತ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ 133ನೇ ಜನ್ಮದಿನೋತ್ಸವ ಆಚರಣೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮ ಇಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ಸಮಾಜ ಮಂದಿರದಲ್ಲಿ ನಡೆಯಿತು.

ದೀಪ ಪ್ರಜ್ವಲನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಹಶಿಲ್ದಾರ ರವಿರಾಜ ದೀಕ್ಷಿತ್ ಮಾತನಾಡಿ, ಚಿಕ್ಕ ಹಳ್ಳಿಯಾದರು ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಅಂಬೇಡ್ಕರ್ ಅವರು ವಿದ್ಯೆಗೆ ಮಹತ್ವ ನೀಡಿ ಎಂದಿದ್ದರು. ಎಲ್ಲರಿಗೂ ಸಮಾನತೆ ಹಕ್ಕಿರಬೇಕೆಂದು ಸಂವಿಧಾನ ಶಿಲ್ಪಿಯಾಗಿದ್ದಾರೆ. ಅವರ ಜಯಂತಿಯAದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿರುವುದು ಅರ್ಥಪೂರ್ಣವಾಗಿದೆ. ಇದರಿಂದ ಇನ್ನಷ್ಟೂ ಸಾಧನೆ ಮಾಡಲು ಪ್ರೇರಣೆ ಸಿಗುತ್ತದೆ ಎಂದು ಶುಭಕೋರಿದರು.

ತಾಲೂಕಾ ಪಂಚಾಯತ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಎನ್.ಜಿ ಆನಂದ್ ಮಾತನಾಡಿ,ಅಂಬೇಡ್ಕರ್ ಅವರು ಶಿಕ್ಷಣಕ್ಕೆ ನೀಡಿದ ಒತ್ತನ್ನು ಪ್ರೇರಣೆಗೊಂಡು,ಶಿಕ್ಷಣದ ಮಹತ್ವ ಅರಿತು ಸಂಘಟನೆಯವರು ಮಕ್ಕಳಿಗೆ ಶೈಕ್ಷಣಿಕ ಪರಿಕರ ವಿತರಿಸಿದ್ದಾರೆ.ಎಷ್ಟೇ ಕಷ್ಟವಾದರು ವಿದ್ಯಾಭ್ಯಾಸದಿಂದ ವಂಚಿತರಾಗಬೇಡಿ.ಶಿಕ್ಷಣ ಪಡೆದು ಉತ್ತಮ ಪ್ರಜೆಗಳಾಗಿ,ಉನ್ನತ ಹುದ್ದೆ ಅಲಂಕರಿಸಿ ದೇಶಕ್ಕೆ ಕೊಡುಗೆ ನೀಡಿ ಎಂದು ಮಕ್ಕಳಿಗೆ ಕರೆ ನೀಡಿದರು.ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು,ಕಡ್ಡಾಯವಾಗಿ ಮತದಾನ ಮಾಡಿ.ಯಾವುದೇ ಆಮಿಷಗಳಿಗೆ ಒಳಗಾಗಬೇಡಿ. ಇದು ಚುನಾವಣಾ ಆಯೋಗದ ಆಶಯವಾಗಿದೆ.ಅಭ್ಯರ್ಥಿ ಇಷ್ಟವಿಲ್ಲದಿದ್ದರೆ ನೋಟಾವನ್ನಾದರು ಒತ್ತುವ ಅವಕಾಶವಿದೆ.ಆ ಮೂಲಕ ಮತದಾನ ಯಶಸ್ವಿಗೊಳಿಸಿ ಎಂದು ನೆರೆದಿದ್ದ ಮತದಾರರಿಗೆ ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್ ನಾಯ್ಕ ಮಾತನಾಡಿ,ಡಾ.ಬಿ.ಆರ್ ಅಂಬೇಡ್ಕರ್ ರವರು ಸಮಾಜದಲ್ಲಿರುವ ಅಸ್ಪರ್ಶತೆ ಹೋಗಲಾಡಿಸುವುದು.ಎಲ್ಲರಿಗೂ ಸಮಾನವಾದ ಅವಕಾಶ ನೀಡಬೇಕೆನ್ನುವುದನ್ನು ಪ್ರತಿಪಾದಿಸಿದವರು.ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದರು.ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದರೆ ಮಾತ್ರ ಸಮಾಜ ಅಭಿವೃದ್ಧಿ ಹೊಂದಬಹುದು ಎನ್ನುವುದನ್ನು ತಿಳಿಸಿದ್ದರು. ಅದಕ್ಕನುಗುಣವಾಗಿ ಈ ಸಂಘಟನೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ನೆರವು ನೀಡಿದ್ದಾರೆ.ಇಂದು ಮಕ್ಕಳಲ್ಲಿ ಓದುವಂತಹ ಅಭ್ಯಾಸ ಕಡಿಮೆಯಾಗಿದೆ.ಕೇವಲ ಪರೀಕ್ಷೆಗಾಗಿ ಓದುವುದಲ್ಲ.ಹೆಚ್ಚೆಚ್ಚು ಜ್ಞಾನ ಸಂಪಾದನೆಗಾಗಿ ಓದಬೇಕು.ಅಂಬೇಡ್ಕರ್ ಅವರು ಸಹ ಹೆಚ್ಚು ಪುಸ್ತಕ ಓದಿ ಜ್ಞಾನ ಸಂಪಾದಿಸಿದ್ದರು. ಅದಕ್ಕಾಗಿ ಅವರನ್ನು ಜ್ಞಾನದಾಹಿ ಎಂದು ಕರೆಯುತ್ತಿದ್ದರು ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳನ್ನಾಡಿದರು.

ಸೀಮಾ ಮುಖ್ಯಪ್ರಾಣ ದೇವಸ್ಥಾನದ ಅರ್ಚಕರಾದ ಸೂರಾಲು ಚಂದ್ರಶೇಖರ್ ಭಟ್ ಮಾತನಾಡಿ, ವಿದ್ಯೆಯಿಂದ ಸಾಧನೆ ಮಾಡಬಹುದೆನ್ನುವುದನ್ನು ಅಂಬೇಡ್ಕರ್ ಅವರು ತೋರಿಸಿಕೊಟ್ಟಿದ್ದಾರೆ.ಅವರು ಯಾವುದೇ ಒಂದು ಸಮಾಜಕ್ಕೆ ಸಿಮೀತವಾದವರಲ್ಲ.ಸಂವಿಧಾನದ ಮೂಲಕ ಜಗತ್ತಿಗೆ ಕೊಡುಗೆ ನೀಡಿದವರು.ಅದರಲ್ಲಿನ ಮೌಲ್ಯಗಳನ್ನು ನಾವು ಅರಿಯಬೇಕು.ದುಷ್ಚಟಗಳಿಂದ ದೂರವಾಗಿ,ಎಲ್ಲರು ಸಮಾನರು ಎನ್ನುವ ಭಾವನೆಯೊಂದಿಗೆ,ದ್ವೇಷ,ಅಸೂಯೆ ಮರೆತು ಪ್ರೀತಿ,ವಿಶ್ವಾಸದಿಂದ ಇರಬೇಕು ಎಂದು ಕರೆ ನೀಡಿದರು.

ಸಂಘಟನೆ ವತಿಯಿಂದ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಸಾಧನೆಗೈದ ಧನುಶ್ರೀ ನಾರಾಯಣ ಹಳ್ಳೇರ್ ಹಾಗೂ ಊರಿನ ಯಜಮಾನರಾದ ಅಪ್ಪು ಸುಕ್ರು ಹಳ್ಳೇರ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ನೀಡಿ ಪ್ರೋತ್ಸಾಹಿಸಿದರು.

ಊರಿನ ಯಜಮಾನರಾದ ಅಪ್ಪು ಸುಕ್ರು ಹಳ್ಳೇರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಹಿಂದುಳಿದ ವರ್ಗಗಳ ಇಲಾಖಾ ಅಧಿಕಾರಿ ರಾಜು ನಾಯ್ಕ,ತೋಟಗಾರಿಕೆ ಇಲಾಖಾ ಅಧಿಕಾರಿ ಸೂರ್ಯಕಾಂತ್,ನರೇಗಾ ಯೋಜನೆ ಸಹಾಯಕ ನಿರ್ದೇಶಕ ಕೃಷ್ಣಾನಂದ, ಶ್ರೀ ಚೌಡೇಶ್ವರಿ ಸಾಂಸ್ಕೃತಿಕ ಕ್ರೀಡಾ ಅಭಿವೃದ್ಧಿ ಸಂಘದ ಅಧ್ಯಕ್ಷ ಗಣಪತಿ ಹಳ್ಳೆರ್, ಈಶ್ವರ ನಾಯ್ಕ,ಮಾರುತಿ ಹಳ್ಳೇರ್ ಉಪಸ್ಥಿತರಿದ್ದರು.

ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ

error: