May 17, 2024

Bhavana Tv

Its Your Channel

ಜವಾಬ್ದಾರಿ ಮರೆತ ಶಾಸಕ ದಿನಕರ ಶೆಟ್ಟಿ : ಕಾಂಗ್ರೆಸ್ ಮುಖಂಡ ಮಂಜುನಾಥ ಆರೋಪ

ಕುಮಟಾ : ಹವಾಮಾನ ಇಲಾಖೆ ಈಗಾಗಲೇ ಮಾನ್ಸೂನ್ ಆರಂಭದ ಸೂಚನೆ ನೀಡಿದೆ. ಇನ್ನು ಕೆಲವೇ ದಿನದಲ್ಲಿ ಮಳೆಯೂ ಆರಂಭವಾಗಲಿದೆ. ಈ ಬಗ್ಗೆ ಉತ್ತರ ಕನ್ನಡದ ಜಿಲ್ಲಾಧಿಕಾರಿಗಳು ಕೂಡ ಅಧಿಕಾರಿಗಳ ಸಭೆ ಕರೆದು ತುರ್ತು ಕ್ರಮದ ಬಗ್ಗೆ ಸೂಚಿಸಿದ್ದಾರೆ. ಆದರೆ ಕುಮಟಾ ಶಾಸಕ ದಿನಕರ ಶೆಟ್ಟಿ ಮಾತ್ರ ತನ್ನ ಜವಾಬ್ದಾರಿ ಮರೆತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಮಖಂಡ ಮಂಜುನಾಥ ಲಕ್ಷ್ಮಣ ನಾಯ್ಕ ಆರೋಪಿಸಿದ್ದಾರೆ.
ಕುಮಟಾ ಪಟ್ಟಣದ ಮಾರುಕಟ್ಟೆ ರಸ್ತೆಯಲ್ಲಿ ಚರಂಡಿ ಕಾಮಗಾರಿ ಅರೆಬರೆ ಆಗಿದೆ. ದಿಢೀರ್ ಮಳೆಯಾದರೆ ಕೃತಕ ನೆರೆ ಸೃಷ್ಟಿಯಾಗಿ ಮಳೆನೀರು ರಸ್ತೆಯಲ್ಲಿ ಹರಿದು ಅಂಗಡಿಗಳಿಗೆ ನುಗ್ಗುವ ಸಾಧ್ಯತೆಯೂ ಇದೆ. ಈ ಬಗ್ಗೆ ಅಂಗಡಿಯವರೂ ಸಹ ಚಿಂತಾಕ್ರಾAತರಾಗಿದ್ದಾರೆ. ಶಾಸಕರು ತಮ್ಮ ಪ್ರಭಾವ ಬಳಸಿ ಕುಮಟಾ ಪುರಸಭೆಯ ಮುಖ್ಯಾಧಿಕಾರಿಯನ್ನು ವರ್ಗ ಮಾಡಿಸಿದ್ದಾರೆ. ಆದರೆ ಅದೇ ಪ್ರಭಾವ ಬಳಸಿ ಮತ್ತೊಬ್ಬ ಮುಖ್ಯಾಧಿಕಾರಿಯನ್ನು ಕುಮಟಾಕ್ಕೆ ತರುವಲ್ಲಿ ಶಾಸಕ ದಿನಕರ ಶೆಟ್ಟರು ವಿಫಲರಾಗಿದ್ದಾರೆ ಎಂದು ಮಂಜುನಾಥ ನಾಯ್ಕ ಕಿಡಿ ಕಾರಿದ್ದಾರೆ.

ಶಾಸಕ ಶೆಟ್ಟರು ನಿತ್ಯ ಓಡಾಡುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂಡ ಮಳೆ ನೀರು ನಿಲ್ಲುತ್ತದೆ. ಇದು ಅವರ ಗಮನಕ್ಕೆ ಬಾರದಿರುವುದು ಅಚ್ಚರಿ ಮೂಡಿಸುತ್ತದೆ. ಇದು ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಅಪಾಯಕಾರಿ. ಭಾರೀ ವಾಹನಗಳು ಸಾಗುವಾಗ ರಸ್ತೆಯಲ್ಲಿ ನಿಂತ ನೀರು ಬೈಕ್ ಸವಾರರಿಗೆ ಸಿಂಚನವಾದರೆ ಅಪಘಾತಗಳಾಗುವ ಸಂಭವ ಹೆಚ್ಚು. ಹಾಗಾಗಿ ಶಾಸಕರು ಜನರ ಪರವಾಗಿ ಆಗಬೇಕಾದ ಕೆಲಸಕಾರ್ಯಗಳನ್ನು ಕೂಡಲೇ ಮಾಡಿಸಬೇಕು. ಜನಪ್ರತಿನಿಧಿ ಆದವರಿಗೆ ಜನರ ಸಮಸ್ಯೆಗಳನ್ನು ಪರಿಹರಿಸುವ ಚಿಕಿತ್ಸಕ ದೃಷ್ಟಿ ಇರಬೇಕು. ಜನರೇ ತಮ್ಮ ಬಳಿ ಬಂದು ಸಮಸ್ಯೆ ಹೇಳಿಕೊಳ್ಳಲಿ ಎಂದು ಕಾಯಬಾರದು ಎಂದು ಮಂಜುನಾಥ ನಾಯ್ಕ ಪ್ರಕಟಣೆಯಲ್ಲಿ ಹೇಳಿದ್ದಾರೆ.

ವರದಿ: ನಟರಾಜ ಗದ್ದೆಮನೆ ಕುಮಟಾ

error: