September 16, 2024

Bhavana Tv

Its Your Channel

ಆಸ್ಪತ್ರೆ ವಿಚಾರದಲ್ಲೂ ಸುಳ್ಳು ಹೇಳಿದವರು ಬಿಜೆಪಿಗರು: ಮಂಕಾಳ ವೈದ್ಯ

ಕುಮಟಾ: ನಾವು ನುಡಿದಂತೆ ನಡೆದಿದ್ದೇವೆ. ಆದರೆ ಬಿಜೆಪಿಯವರಿಗೆ ಸುಳ್ಳು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆಯೂ ಅವರು ಸುಳ್ಳೇ ಹೇಳಿದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಿಡಿಕಾರಿದರು.

ಹೊಲನಗದ್ದೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆಗೆ ಸಂಬAಧಿಸಿದAತೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಭಾಧ್ಯಕ್ಷರಾಗಿದ್ದ ಈಗಿನ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಅವಕಾಶವಿದ್ದರೂ ಮಾಡಿದ ಕೆಲಸಗಳೇನೂ ಇಲ್ಲ. ಈಗ ಚುನಾವಣೆಗಾಗಿ ಸುಳ್ಳು ಹೇಳುತ್ತಾ ಬಂದಿದ್ದಾರೆ. ನಮ್ಮ ಅವಧಿಯಲ್ಲಿ ಬಂದ ಸೇತುವೆ ಕಾಮಗಾರಿಗಳನ್ನೂ ಉದ್ಘಾಟಿಸಲಾಗಿಲ್ಲ. 40% ಕಮಿಷನ್ ಲೂಟಿ ಬಿಟ್ಟರೆ ಬೇರೇನೂ ಮಾಡಿಲ್ಲ. ಅಭಿವೃದ್ಧಿಗಾಗಿ ಬಿಜೆಪಿಗರ ಸುಳ್ಳನ್ನು ನಂಬದೆ ಕಾಂಗ್ರೆಸ್ ಗೆ ಮತ ನೀಡಿ ಎಂದು ಮನವಿ ಮಾಡಿದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ಮೊದಲ ಬಾರಿಗೆ ಶಾಸಕಿಯಾದಾಗ ಖಾನಾಪುರದಲ್ಲಿ ಒಂದು ಆಸ್ಪತ್ರೆ ನಿರ್ಮಿಸಬೇಕೆಂಬ ಕನಸಿತ್ತು. ಅದನ್ನ ಮಾಡಿ ತೋರಿಸಿದ್ದೇನೆ. ಆ ಗುರಿ, ಧೈರ್ಯ ಬಂದಿದ್ದು ನಿಮ್ಮಿಂದ. ಈ ಭಾಗದ ಜನರ ಆಸೆಯಂತೆ ನಾನು ಸಂಸದಳಾದರೆ ಮೊದಲ ಆದ್ಯತೆ ಆಸ್ಪತ್ರೆಗೇ ನೀಡುತ್ತೇನೆ. ನಿಮ್ಮ ಮನೆಮಗಳಂತೆ ಆಶೀರ್ವದಿಸಿದರೆ ಶಾಸಕಿಯಾಗಿ ಖಾನಾಪುರದಲ್ಲಿ ಮಾಡಿದಂತೆ ಕೆಲಸಗಳನ್ನ ಈ ಜಿಲ್ಲೆಯ ಪ್ರತಿ ಕ್ಷೇತ್ರದಲ್ಲೂ ಮಾಡಿ ತೋರಿಸುತ್ತೇನೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ, ಗ್ಯಾರಂಟಿ ಕಾರ್ಡ್ ಬಗ್ಗೆ ಅಪಪ್ರಚಾರ ಮಾಡಿದ ಬಿಜೆಪಿಗರು, ಅದರ ಸೌಲಭ್ಯ ಪಡೆಯಲು ತಾ ಮುಂದೆ ತಾ ಮುಂದೆ ಎಂದರು. ಇದು ದೇಶದ ಭವಿಷ್ಯದ ಚುನಾವಣೆ. ಸಂವಿಧಾನ, ಹಕ್ಕಿನ ಬಗ್ಗೆ ಮಾತನಾಡಿದರೂ ಸುಮ್ಮನೆ ಕೂರಲು ಆಗಲ್ಲ. 30 ವರ್ಷಗಳಿಂದ ಸಂಸದರು ಹೇಗಿದ್ದರು ಎಂಬುದನ್ನ ನಾವು ಮರೆಯಬಾರದು. ಬಿಜೆಪಿಯ ಹೊಸ ಅಭ್ಯರ್ಥಿಯೂ ಏನು ಕೆಲಸ ಮಾಡಿದ್ದಾರೆಂಬುದೂ ತಿಳಿದಿದೆ. ಒಂದಾಗಿ ಜಿಲ್ಲೆಯಿಂದ ನಮ್ಮ ಎಂಪಿಯನ್ನು ದೆಹಲಿಗೆ ಕಳಿಸೋಣ ಎಂದು ಕರೆನೀಡಿದರು.

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರತ್ನಾಕರ್ ನಾಯ್ಕ ಮಾತನಾಡಿ, ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುತ್ತೇವೆಂದ ಬಿಜೆಪಿಗರಿಗೆ ಅಡಿಗಲ್ಲು ಹಾಕಲೂ ಆಗಿಲ್ಲ. ಆದರೆ ಈ ಬಾರಿ ಸಚಿವ ಮಂಕಾಳ ವೈದ್ಯರ ನೇತೃತ್ವದಲ್ಲಿ ಈ ಬಾರಿ ಕುಮಟಾದಲ್ಲಿ ಆಸ್ಪತ್ರೆ ಆಗೇ ಆಗುತ್ತದೆಂಬ ವಿಶ್ವಾಸವಿದೆ. ಆಸ್ಪತ್ರೆಯಾದರೆ ಕೇವಲ ಆರೋಗ್ಯವಷ್ಟೇ ಅಲ್ಲ, ಜಿಲ್ಲೆಯ ಎಲ್ಲಾ ಕ್ಷೇತ್ರಗಳೂ ಅಭಿವೃದ್ಧಿ ಆಗಲಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಎಚ್.ನಾಯ್ಕ, ಡಾ.ಅಂಜಲಿಯವರು ಸ್ವತಃ ವೈದ್ಯರಾಗಿರುವ ಕಾರಣ ಜಿಲ್ಲೆಗೆ ಅಗತ್ಯ ಇರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನ ನಿರ್ಮಾಣ ಮಾಡೇ ಮಾಡುತ್ತಾರೆಂಬ ನಂಬಿಕೆ ಇದೆ. 30 ವರ್ಷ ಸಂಸದರಾಗಿದ್ದ ಅನಂತಕುಮಾರ್ ಹೆಗಡೆಯವರು ಒಂದೇ ಒಂದು ಜನೋಪಯೋಗಿ ಕೆಲಸಗಳನ್ನ ಮಾಡಿಲ್ಲ. ಕೇಂದ್ರದಲ್ಲಿ ನಮ್ಮನ್ನ ಪ್ರತಿನಿಧಿಸುವ ಅಭ್ಯರ್ಥಿ ಇದ್ದರೆ ನಮ್ಮೆಲ್ಲ ಸಮಸ್ಯೆಗಳನ್ನ ಪರಿಹರಿಸಿಕೊಡಲು ಸಾಧ್ಯ, ಇದಕ್ಕೆ ಡಾ.ಅಂಜಲಿ ನಿಂಬಾಳ್ಕರ್ ಸಮರ್ಥರು. ಚುನಾವಣೆ ಬಂದಾಗ ಜಿಲ್ಲೆಯಲ್ಲಿ ಯಾಕೆ ಕೋಮುಗಲಭೆ ಆಗುತ್ತಿತ್ತು, ಜಾತಿ- ಜಾತಿಗಳ ನಡುವೆ ವೈಷಮ್ಯ ಬೆಳೆಯುತ್ತಿತ್ತು ಎಂಬುದನ್ನ ಜನತೆ ಅರ್ಥ ಮಾಡಿಕೊಳ್ಳಬೇಕು. ಇಂಡಿಯಾ ಸರ್ಕಾರ ಮುಂದಿನ ದಿನಗಳಲ್ಲಿ ಭದ್ರವಾಗಿ ಕೇಂದ್ರದಲ್ಲಿ ಬರಲಿದ್ದು, ಡಾ.ಅಂಜಲಿಯವರನ್ನ ಜಿಲ್ಲೆಯ ಧ್ವನಿಯಾಗಿ ಆರಿಸಿ ಕಳಿಸೋಣ ಎಂದರು.

ಹೊಲನಗದ್ದೆ ಗ್ರಾ.ಪಂ. ಮಾಜಿ ಅಧ್ಯಕ್ಷರೂ ಆದ ಹಾಲಿ ಸದಸ್ಯ ರಾಘವೇಂದ್ರ ಪಟಗಾರ ಮಾತನಾಡಿ, ವೈದ್ಯರಿಗೆ ರೋಗಿಯ ಕಷ್ಟ ಅರ್ಥವಾಗುತ್ತದೆ. ವೈದ್ಯರಾದ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಜಿಲ್ಲೆಯ ಜನರ ಕಷ್ಟ ಗೊತ್ತಿದೆ. ಹೀಗಾಗಿ ಅವರನ್ನ ಗೆಲ್ಲಿಸಿ, ಅಗತ್ಯವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನ ನಿರ್ಮಿಸಲು ಅವರ ಕೈ ಬಲಪಡಿಸೋಣ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ಉತ್ತರಕನ್ನಡದ ಧ್ವನಿಯನ್ನ ಲೋಕಸಭೆಗೆ ಮುಟ್ಟಿಸಲು ಡಾ.ಅಂಜಲಿ ನಿಂಬಾಳ್ಕರ್ ಸಮರ್ಥರು. ಕಾಂಗ್ರೆಸ್ ಎಲ್ಲರ ಪಕ್ಷ; ದೇಶಕ್ಕಾಗಿ ಬಲಿದಾನ ನೀಡಿ, ಸ್ವಾತಂತ್ರ‍್ಯ ತಂದುಕೊಟ್ಟ ಪಕ್ಷ. ಪಂಚ ಗ್ಯಾರಂಟಿ ಮೂಲಕ ಜನಮನ್ನಣೆ ಗಳಿಸಿದ್ದೇವೆ. ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲದ ಮೇಲಿದೆ ಎಂದರು.

ಈ ವೇಳೆ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಹೊಲನಗದ್ದೆ ಗ್ರಾಮಸ್ಥರು ಉಡಿ ತುಂಬಿ ಗೌರವಿಸಿದರು.

error: