May 17, 2024

Bhavana Tv

Its Your Channel

ಬೊಗಸೆ ತುಂಬ ಪ್ರೀತಿ ಕವನ ಸಂಕಲನ ಮಾಸ್ಕೇರಿ ಎಂ.ಕೆ ನಾಯಕರವರಿಂದ ಬಿಡುಗಡೆ

ಯಲ್ಲಾಪುರ : ಕವಿ ಕಾಲಾತೀತ ಮನುಷ್ಯನಾಗಿದ್ದಾನೆ. ಕವಿಗಳ ಕವಿತೆಗಳ ವಿಮರ್ಶೆಗಳು ಯಾವುದೇ ಕಾಲಕ್ಕೂ ಸಂಬAಧ ಇರುವುದಿಲ್ಲ. ಸಾಹಿತ್ಯದ ರಚನೆ, ಲೋಕ ಸೃಷ್ಟಿಯಷ್ಟೆ ಪವಿತ್ರವಾದುದು ಎಂದು ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ ಹೇಳಿದರು.

ಅವರು ಯಲ್ಲಾಪುರ ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಕವಿ ಸುಬ್ರಾಯ ಬಿದ್ರೆಮನೆಯವರ ‘ಬೊಗಸೆ ತುಂಬ ಪ್ರೀತಿ’ ಕವನ ಸಂಕಲವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯಬೇಕಾದವರು ರಚಿಸುವ ಪುಸ್ತಕಗಳಿಗೆ ಮುನ್ನುಡಿಯ ಅಗತ್ಯತೆಯಿದೆ. ಕವಿಯ ಕಣ್ಣು ಮಗುವಿನಂತೆ. ಕವಿಯಾದವನು ಪ್ರಪಂಚದ ಎಲ್ಲ ವಸ್ತುವನ್ನು ಪ್ರೀತಿಸುತ್ತಾನೆ. ನಿಜವಾದ ಕವಿ ಸೌಂದರ್ಯವನ್ನು ಕುರುಪವನ್ನು ಒಂದೆ ಕಣ್ಣಿನಲ್ಲಿ ಗಮನಿಸುತ್ತಾನೆ. ಕವಿಗೆ ಮೇಲು ಕೀಳು ಅನ್ನುವ ಭಾವನೆಗಳು ಇರುವುದಿಲ್ಲ. ಒತ್ತಾಯಪೂರ್ವಕವಾಗಿ ಮಕ್ಕಳಿಗೆ ಕವಿಗಳಾಗುವಂತೆ ಕಲಿಸುವ ಅಗತ್ಯತೆ ಇಲ್ಲ ಅದು ಸ್ವಯಂ ಪ್ರೇರಣೆಯಿಂದ ಬರಬೇಕು. ಚಿಕ್ಕ ಮಕ್ಕಳನ್ನು ಕವಿ ಸಾಹಿತಿಯಾಗಿಸುವ ಬದಲು, ಮೊದಲು ಮನುಷ್ಯರನ್ನಾಗಿಸಬೇಕೆಂದು ತಿಳಿಸಿದರು.
ಸಾಹಿತ್ಯ ಕ್ಷೇತ್ರದಲ್ಲಿದ್ದವರು ಆದಷ್ಟು ಈ ಕ್ಷೇತ್ರಕ್ಕಾಗಿ ತ್ಯಾಗ ಮಾಡಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಹುದ್ದೆ ಹೊಂದಿದವರು ಸಮಾಜಕ್ಕೆ ಎನನ್ನಾದರು ಕೊಡುಗೆ ನೀಡಬೇಕು. ಸಾಹಿತ್ಯಕ್ಕಾಗಿ ದುಡಿದವರನ್ನು ಗುರುತಿಸುವ ಕಾರ್ಯ ಸಾಹಿತ್ಯ ಪರಿಷತ್ತಿನವರು ಮಾಡಬೇಕು. ಸಾಹಿತ್ಯ ಕ್ಷೇತ್ರದ ಸಂಘಟನೆಯಲ್ಲಿ ಒಬ್ಬರನ್ನೆ ಮುಂದುವರೆಸುತ್ತಿರುವುದು ಸಲ್ಲದು. ಇನ್ನುಳಿದವರಿಗೂ ಹುದ್ದೆಗಳು ಅವಕಾಶಗಳು ಸಿಗುವಂತಾಗಬೇಕು ಎಂದು ಅಭಿಪ್ರಾಯಪಟ್ಟರು. ತಮ್ಮನ್ನು ಇಲ್ಲಿ ಕರೆದು ಪುಸ್ತಕ ಬಿಡುಗಡೆಗೊಳಿಸಿರುವದಕ್ಕೆ ಯಲ್ಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಕೃತಿ ಪರಿಚಯಿಸಿದ ವಿಶ್ರಾಂತ ಪ್ರಾಂಶುಪಾಲರಾದ ಬೀರಣ್ಣ ನಾಯಕ ಮೊಗಟಾ, ಬೊಗಸೆ ತುಂಬ ಪ್ರೀತಿ ಕವನ ಸಂಕಲನದಲ್ಲಿ ಸುಬ್ರಾಯ ಬಿದ್ರೆಮನೆಯವರು ಸಾಕಷ್ಟು ಪ್ರೀತಿಯನ್ನು ಉಣಬಡಿಸುವ ಪ್ರಯತ್ನ ಮಾಡಿದ್ದಾರೆ. ಶಿಷ್ಟಾಚಾರ ಬದಿಗಿಟ್ಟು ಕವನ ಸಂಕಲನ ರಚಿಸಲಾಗಿದೆ. ಕವನ ಸಂಕಲನದಲ್ಲಿ ಗುರು ಭಕ್ತಿ ಕಂಡು ಬರುತ್ತದೆ. ಕವನ ಸಂಕಲನ ಎರಡು ಬಾರಿ ಓದಿದಾಗ ಅರ್ಥ ತಿಳಿದು ಬರಲಿದೆ. ವ್ಯಂಗ್ಯವು ಇದೆ. ಅನೇಕ ಅರ್ಥ ಕೊಡುವ ರೀತಿಯಲ್ಲಿ ಕವನ ಸಂಕಲನ ರಚನೆಯಾಗಿದೆ. ಓದಿದಾಗ ಮಾನಸಿಕ ಒತ್ತಡವು ಕಡಿಮೆಯಾಗುತ್ತದೆ. ಪ್ರಬುದ್ದವಾದ ಎಲ್ಲರೂ ಓದಬಹುದಾದ ಕವನ ಸಂಕಲನ ಎಂದು ಬಣ್ಣಿಸಿದರು.

ತಹಶೀಲ್ದಾರ ಶ್ರೀಕೃಷ್ಣ ಕಾಮಕರ ಮಾತನಾಡಿ, ಇಂದಿನ ದಿನದಲ್ಲಿ ಪುಸ್ತಕವನ್ನು ಓದುವ ಹವ್ಯಾಸ ಬಹಳಷ್ಟು ಕಡಿಮೆಯಾಗಿದೆ. ಪುಸ್ತಕಗಳನ್ನು ಕೊಂಡ ನಂತರ ಓದುವದನ್ನು ರೂಡಿಸಿಕೊಳ್ಳಬೇಕು ಎಂದು ಹೇಳಿದರು.
ನಿವೃತ್ತ ತಹಶೀಲ್ದಾರ ಡಿ.ಜಿ.ಹೆಗಡೆ ಮಾತನಾಡಿ, ಪುಸ್ತಕ ಬಿಡುಗಡೆ ಕೇವಲ ಒಂದು ಪುಸ್ತಕದ ಹೆರಿಗೆಯಲ್ಲ ರಚನಾಕರರಿಗೆ ಅದು ಬಸಿರಾಗಿದೆ. ಬೊಗಸೆ ತುಂಬ ಪ್ರೀತಿ ಕವನ ಸಂಕಲನ ಬಹಳ ಚೆನ್ನಾಗಿ ರಚನೆಯಾಗಿದೆ. ಬಹಳಷ್ಟು ಜನರಿಗೆ ಸ್ಪೂರ್ತಿಯಾಗಿದೆ ಎಂದರು.
ಪಟ್ಟಣ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಸುನಂದಾ ದಾಸ್, ಸುಬ್ರಾಯ ಬಿದ್ರೆಮನೆ ಬೊಗಸೆ ತುಂಬ ಪ್ರೀತಿಯನ್ನು ಪುಸ್ತಕದ ಮೂಲಕ ಅಕ್ಷಯ ಪಾತ್ರಯಲ್ಲಿಟ್ಟು ಕೊಟ್ಟಿದ್ದಾರೆ ಎಂದು ಹೇಳಿದರು. ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ ಮಾತನಾಡಿ, ಸಾಹಿತ್ಯಕ್ಕೆ ಸಂಬAಧಪಟ್ಟು ಪುಸ್ತಕ ಓದುವ ಆಸಕ್ತಿ ಯಕ್ಷಗಾನ ಕಲಾವಿದರಲ್ಲಿ ಕಡಿಮೆಯಿದೆ. ಕಲಾವಿದರು ಪುಸ್ತಕವನ್ಮು ಓದಿ ಶಬ್ದ ಬಂಡಾರ ಹಾಗೂ ಜ್ಞಾನವನ್ನು ಹೆಚ್ಚಿಸಕೊಳ್ಳಬೇಕೆಂದರು.
ಕೃತಿ ಕರ್ತ ಸುಬ್ರಾಯ ಬಿದ್ರೆಮನೆ ಅಭಿಪ್ರಾಯ ಪಟ್ಟು, ಯಕ್ಷಗಾನ ಕುಟುಂಬದಿAದ ಬಂದ ತಮಗೆ ಯಕ್ಷಗಾನ ಕಲೆ ಒಲಿಯಲಿಲ್ಲ, ಸಾಹಿತ್ಯ ಕ್ಷೇತ್ರ ನನಗೆ ಆಕರ್ಷಿಸಿತು. ಹಿಂದಿನ ‘ಬೇಲಿ’ ಕಥಾ ಸಂಕಲನಕ್ಕೆ ಪಾಟೀಲ ಪುಟ್ಟಪ್ಪನವರು ಮುನ್ನುಡಿ ಬರೆದಿದ್ದರೆ, ‘ಮೌನದ ಮಾತಿ’ ಗೆ ವಿಷ್ಣು ನಾಯ್ಕರವರು ಮುನ್ನುಡಿ ಬರೆದಿದ್ದರು. ವಿಷ್ಣು ನಾಯ್ಕರವರ ಸಲಹೆಯಂತೆ ಮುನ್ನುಡಿಯ ಔಪಚಾರಿಕತೆಯನ್ನು ಬಿಟ್ಟು ನೇರವಾಗಿ ಈ ಕವನ ಸಂಕಲವನ್ನು ಹೊರ ತಂದಿದ್ದೆನೆ. ಪ್ರೀತಿಯನ್ನು ಬೊಗಸೆ ತುಂಬಿಕೊಡುವ ಪ್ರಯತ್ನ ಮಾಡಿದ್ದೆನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಕಸಾಪ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕರ ಹಾಗೂ ಕೃತಿ ಕರ್ತರಾದ ಸುಬ್ರಾಯ ಬಿದ್ರೆಮನೆಯವರನ್ನು ಗೌರವಿಸಲಾಯಿತು. ಪಟ್ಟಣ ಪಂಚಾಯತ ಉಪಾಧ್ಯಕ್ಷರಾದ ಶಾಮಲಿ ಪಾಟಣಕರ, ಹಿರಿಯ ಸಾಹಿತಿಗಳಾದ ವನರಾಗ ಶರ್ಮಾ ಮತ್ತು ಅನಂತ ವೈದ್ಯ, ನಿವೃತ್ತ ಪ್ರಾಂಶುಪಾಲರಾದ ಶ್ರೀರಂಗ ಕಟ್ಟಿ ಮತ್ತು ಜಯರಾಮ ಗುನಗಾ, ಯಲ್ಲಾಪುರ ತಾಲೂಕು ಶಿಕ್ಷಣ ಸಮಿತಿಯ ಪ್ರಾಂಶುಪಾಲರಾದ ವಾಣಿಶ್ರೀ ಹೆಗಡೆ, ಪ್ರಮುಖರಾದ ಜಿ.ಆರ್.ಹೆಗಡೆ ಕುಂಬ್ರಿಗುಡ್ಡೆ, ಎಂ.ಆರ್ ಹೆಗಡೆ, ಸಾಹಿತಿ ಶಿವಲೀಲಾ ಹುಣಸಗಿ, ಸಾಮಾಜಿಕ ಕಾರ್ಯಕರ್ತ ಮಹಮ್ಮದ ಗೌಸ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಿಕ್ಷಕ ಸುಧಾಕರ ನಾಯಕ, ಮಾಸ್ಕೇರಿ ಎಂ.ಕೆ.ನಾಯಕರವರನ್ನು ಪರಿಚಯಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಶ್ರೀಧರ ಅಣಲಗಾರ ಸ್ವಾಗತಿಸಿದರು. ಶಿಕ್ಷಕ ಸಂಜೀವ ಹೊಸ್ಕೇರಿ ನಿರೂಪಿಸಿದರು. ಯಲ್ಲಾಪುರ ತಾಲೂಕು ಶಿಕ್ಷಣ ಸಮಿತಿಯ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸಂದ್ಯಾ ಹಾಗೂ ಶ್ರಾವಣಿ ಪ್ರಾರ್ಥಿಸಿದರು. ಕಸಾಪ ಕಾರ್ಯದರ್ಶಿ ಎಸ್ ಎಲ್ ಜಾಲಿಸತ್ಗಿ ವಂದಿಸಿದರು.

ವರದಿ ; ವೇಣುಗೋಪಾಲ ಮದ್ಗುಣಿ
.

error: