May 18, 2024

Bhavana Tv

Its Your Channel

ಯಲ್ಲಾಪುರ ತಾಲೂಕು ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಗಜಾನನ ಭಟ್ಟ ನಿಧನ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಗಣ್ಯಉದ್ಯಮಿ, ಶಿಕ್ಷಣ ಪ್ರೇಮಿ, ದಾನಿ, ಗೌಡ ಸಾರಸ್ವತ ಸಮಾಜ(ಜಿ.ಎಸ್.ಬಿ.) ಪ್ರಮುಖ , ಯಲ್ಲಾಪುರ ತಾಲೂಕ ಶಿಕ್ಷಣ ಸಮಿತಿ ( ವೈ.ಟಿ.ಎಸ್.ಎಸ್.)ಯ ಅಧ್ಯಕ್ಷ ಗಜಾನನ ಭಟ್ಟ (೭೬) ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಮೂವರು ಪುತ್ರಿ, ಒಬ್ಬ ಪುತ್ರ ಇದ್ದಾರೆ.ಶಿಕ್ಷಣ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಗಜಾನನ ಭಟ್ಟ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರಮುಖರಾಗಿದ್ದರಲ್ಲದೇ, ಪ್ರತಿಷ್ಠಿತ ಕಾಮಾಕ್ಷಿ ಅಟೋಮೊಬೈಲ್ಸ್, ಕಾಮಾಕ್ಷಿ ಪೆಟ್ರೊಲ್ ಪಂಪ್ ಮಾಲಕರಾಗಿದ್ದರು.
ಗೌಡ ಸಾರಸ್ವತ ಸಮಾಜದ ಪರ್ತಗಾಳಿ ಜೀವೋತ್ತಮ ಮಠ ನೀಡುವ ‘ಶ್ರೀ ಜೀವೊತ್ತಮ ಪುರಸ್ಕಾರ’ ಪಡೆದಿದ್ದ ಇವರು, ತಮ್ಮ ಅಧ್ಯಕ್ಷತೆಯಲ್ಲಿ ಯಲ್ಲಾಪುರದ ಶ್ರೀಲಕ್ಷ್ಮಿ ನಾರಾಯಣ ವೆಂಕಟ್ರಮಣ ಮಠದ ಜೀರ್ಣೋದ್ಧಾರವನ್ನು ಕೈಗೊಂಡಿದ್ದರು. ಇವರ ನಾಯಕತ್ವದಲ್ಲಿ ಜಿ.ಎಸ್.ಬಿ. ಜೀವೊತ್ತಮ ಜೀವನ ಸಾಥಿ ವಿವಾಹ ನೊಂದಣಿ ಕೇಂದ್ರ ಆರಂಭಿಸಿ ೧೧ ಸಾವಿರ ನೊಂದಣಿ ಮಾಡಿಸಿ ೫ ಸಾವಿರ ಫಲಾನುಭವಿಗಳಾಗುವಂತೆ ಸಾಧನೆ ಮಾಡಿದ್ದರು.ವಿಶ್ವ ಹಿಂದೂ ಪರಿಷತನ ಯಲ್ಲಾಪುರ ತಾಲ್ಲೂಕು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಇವರ ಅವಧಿಯಲ್ಲಿ ಪಟ್ಟಣದಲ್ಲಿ ೧೦ ಗುಂಟೆ ಸ್ಥಳ ಮಂಜೂರಿ ಮಾಡಿಸಿ,ಶ್ರೀ ಮಹಾಗಣಪತಿ ದೇವಸ್ಥಾನ ನಿರ್ಮಾಣಕ್ಕೆ ಕಾರಣೀಕರ್ತರಾಗಿದ್ದರು. ಕೋಟೆ ಕರಿಯವ್ವ ದೇವಸ್ಥಾನ ಜೀರ್ಣೋದ್ಧಾರಕ್ಕೂ ಇವರು ಶ್ರಮಿಸಿದ್ದರು.ಶಿರಸಿ ಅರ್ಬನ್ ಬ್ಯಾಂಕ್ ಹಾಗೂ ವರದಾ ಗ್ರಾಮೀಣ ಬ್ಯಾಂಕಿನ ನಿರ್ದೆಶಕರಾಗಿ ಕಾರ್ಯ ನಿರ್ವಹಿಸಿದ್ದ ಇವರು, ಯಲ್ಲಾಪುರ ರೋಟರಿ ಕ್ಲಬ್ ನ ಫೌಂಡರ್ ಆಗಿದ್ದರಲ್ಲದೇ, ರೋಟರಿ ಸಂಸ್ಥೆಯ ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಸಂಸ್ಥೆಗೆ ೧.೫ ಎಕರೆ ಭೂಮಿ ಮಂಜೂರಿ ಮಾಡಿಸಿದ್ದರು.
ಉತ್ತರ ಕನ್ನಡ ಜಿಲ್ಲಾ ಪೆಟ್ರೋಲಿಯಂ ಡೀರ‍್ಸ್ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಇವರ ನಿಧನಕ್ಕೆ ಜಿ.ಎಸ್.ಬಿ. ಸಮಾಜ, ವಿಧಾನ ಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಪಂಚಾಯತಿ ರಾಜ ವಿಕೇಂದ್ರಿಕರಣ ಅಭಿವೃದ್ಧಿ ಸಮಿತಿ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ವಾ.ಕ.ರಾ.ರ.ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿ ಮುಂತಾದವರು ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.

error: