May 6, 2024

Bhavana Tv

Its Your Channel

ಜನಾನುರಾಗಿ ಶಿಕ್ಷಕ ವಿ.ಎಸ್ ಭಟ್ಟ ನಿಧನ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಶಿಕ್ಷಕ ವಿ.ಎಸ್. ಭಟ್ಟರವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದ ಕಾರಣಕ್ಕಾಗಿ ಅವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ವಿ ಎಸ್ ಭಟ್ ಸೋಮವಾರ ನಸುಕಿನಲ್ಲಿ ನಿಧನರಾಗಿದ್ದಾರೆ. ತೆಲಂಗಾರ ಗ್ರಾಮದ ನಿವಾಸಿಯಾಗಿದ್ದ ವಿ.ಎಸ್ ಭಟ್ಟರವರು ತೆಲಂಗಾರ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ, ಯಲ್ಲಾಪುರದ ವೈಟಿಎಸ್ ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಾಲೆ, ಪಿಯುಸಿ ಮುಗಿಸಿದ್ದರು. ನಂತರ, ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿಯನ್ನು ಪಡೆದಿದ್ದರು.
ಶಿಕ್ಷಕ ವೃತ್ತಿಗೆ ಸೇರಿದ ನಂತರ ಬಹುತೇಕ ಯಲ್ಲಾಪುರ ತಾಲೂಕಿನ ಪ್ರಾಥಮಿಕ ಶಾಲೆಯಲ್ಲಿ ಅವರು ಶಿಕ್ಷಕರಾಗಿ ಕೆಲಸ ಮಾಡಿದ್ದರು. ಪ್ರತಿಯೊಂದು ಶಾಲೆಯಲ್ಲಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಹೆಸರುಗಳಿಸಿದ್ದರು.
ಹಾಲಿ ಯಲ್ಲಾಪುರ ತಾಲೂಕ ಸರ್ಕಾರಿ ನೌಕರರ ಸಂಘದ ಖಜಾಂಚಿಯಾಗಿ, ಯಲ್ಲಾಪುರ ಹವ್ಯಕ ನೌಕರರ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದರು. ಸ್ಥಳೀಯ ರಂಗಭೂಮಿಯ ಹವ್ಯಾಸಿ ಕಲಾವಿದರಾಗಿ ತೆಲಂಗಾರ ವಜ್ರಳ್ಳಿ ಮುಂತಾದ ಭಾಗದಲ್ಲಿ ಜನಪ್ರಿಯರಾಗಿದ್ದರು.
ವಿಶ್ವೇಶ್ವರ ಭಟ್ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶ್ರೀರಾಮ ಹೆಗಡೆ, ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ, ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಆರ್ ಭಟ್ಟ, ತಾಲೂಕಾ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ ಶೋಕ ವ್ಯಕ್ತಪಡಿಸಿದ್ದಾರೆ.
ದಿವಂಗತ ಶಿಕ್ಷಕ ವಿಶ್ವೇಶ್ವರ ಭಟ್ ಅವರ ಪಾರ್ಥಿವ ಶರೀರವನ್ನು ಹುಬ್ಬಳ್ಳಿಯಿಂದ ತೆಲಂಗಾರಕ್ಕೆ ತೆಗೆದುಕೊಂಡು ಹೋಗುವ ಮಾರ್ಗ ಮಧ್ಯೆ ಸೋಮವಾರ ಬೆಳಿಗ್ಗೆ ಯಲ್ಲಾಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎದುರು ಕೆಲ ಸಮಯ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಅನೇಕ ಶಿಕ್ಷಕರು ಅಧಿಕಾರಿಗಳು ಆಪ್ತರು ವಿಶ್ವೇಶ್ವರ ಭಟ್ಟ ಅವರಿಗೆ ಅಂತಿಮ ನಮನ ಸಲ್ಲಿಸಿದರು

error: