May 18, 2024

Bhavana Tv

Its Your Channel

ಭಟ್ಕಳ ಮಾವಿನಕುರ್ವೆ ಬಂದರಿನಲ್ಲಿ ಭಾರೀ ಇಳಿತ, ಬೋಟುಗಳಿಗೆ ಹಾನಿ

ಭಟ್ಕಳ: ಭಟ್ಕಳ ಮಾವಿನಕುರ್ವೆ ಬಂದರಿನಲ್ಲಿ ಭಾರೀ ಇಳಿತ ಉಂಟಾಗಿದ್ದರಿoದ ಬೋಟುಗಳು ಕೆಲವು ಒಂದಕ್ಕೊoದು ತಾಗಿ ಹಾನಿಯಾಗಿದ್ದಲ್ಲದೇ ಜಯಲಕ್ಷಿಎನ್ನುವ ಬೋಟೊಂದು ಮಗುಚಿದ ಪರಿಣಾಮ ನೀರು ತುಂಬುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯದಲ್ಲಿರುವ ಯಡ್ಯೂರಪ್ಪನವರ ಸರಕಾರ ಮೀನುಗಾರರಿಗೆ ಸಾಕಷ್ಟು ಸೌಲಭ್ಯ ನೀಡಿದರೂ ಕೂಡಾ ಕಳೆದ ೨-೩ ವರ್ಷಗಳಿಂದ ಮೀನುಗಾರಿಕೆಯೇ ಇಲ್ಲದೆ ಮೀನುಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರಲ್ಲದೇ ಕಳೆದ ಮಾರ್ಚ ತಿಂಗಳಿನಲ್ಲಿಯೇ ಕೊವಿಡ್-೧೯ನಿಂದಾಗಿ ಮೀನುಗಾರಿಕೆಯೇ ಇಲ್ಲವಾಯಿತು.
ಭಟ್ಕಳ ತಾಲೂಕಿನಲ್ಲಿ ಮೀನುಗಾರಿಕಾ ಇಲಾಖೆಯ ಅಂಕಿ ಅಂಶಗಳನ್ನು ನೋಡಿದಾಗ ವರ್ಷದಿಂದ ವರ್ಷಕ್ಕೆ ಮೀನುಗಾರಿಕಾ ಇಳುವರಿ ಕಡಿಮೆಯಾಗುತ್ತಾ ಬಂದಿದ್ದು ಮೀನುಗಾರರಿಗೆ ಇನ್ನಷ್ಟು ಸಂಕಷ್ಟ ಎದುರಾದಂತಾಗಿದೆ. ಕಳೆದ ಹಲವಾರು ವರ್ಷಗಳಿಂದ ಬಂದರಿನ ಅಳಿವೆಯಲ್ಲಿ ಹೂರು ತುಂಬಿ ಬೋಟುಗಳಿಗೆ ಹಾನಿಯಾಗುತ್ತಿದ್ದು ನೈಸರ್ಗಿಕ ಬಂದರಾಗಿದ್ದರೂ ಸಹ ಮೀನುಗಾರರು ಸಮಯ ಸಂದರ್ಭಗಳನ್ನು ನೋಡಿಯೇ ಮೀನುಗಾರಿಕೆಗೆ ತೆರಳುವ ಅನಿವಾರ್ಯತೆ ಇದೆ.
ಬಂದರಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಹೂಳು ತುಂಬಿದ್ದು ಮೀನುಗಾರರು ಹೂಳೆತ್ತುವಂತೆ ಸರಕಾರವನ್ನು ಆಗ್ರಹಿಸುತ್ತಲೇ ಬಂದಿದ್ದಾರೆ. ಇಲ್ಲಿನ ತನಕ ಬಂದರದಲ್ಲಿ ಹೂಳೆತ್ತುವ ಕಾರ್ಯಕ್ಕೆ ಹಣ ಮಂಜೂರಿಯಾಗಲೇ ಇಲ್ಲ. ಕಳೆದ ಬಾರಿ ಹೂಳೆತ್ತುವ ಕುರಿತು ಮಾಡಿ ಕಳುಹಿಸಿದ ೪.೮೫ ಕೋಟಿ ರೂಪಾಯಿ ಅಂದಾಜು ವೆಚ್ಚದ ಕಾಮಗಾರಿಗೆ ಇನ್ನೂ ತನಕ ಮಂಜೂರಿ ದೊರೆಯದಿರುವುದರಿಂದ ಕಾಮಗಾರಿ ಬಾಕಿಯಾಗಿಯೇ ಉಳಿದಿದೆ.
ಮೀನುಗಾರರು ಸಂಕಷ್ಟದಲ್ಲಿದ್ದು ರಾಜ್ಯದ ಮೀನುಗಾರಿಕಾ ಮಂತ್ರಿಗಳಾದ ಕೋಟ ಶ್ರೀನಿವಾಸ ಪೂಜಾರಿಯವರು ಕಳೆದ ಒಂದು ತಿಂಗಳ ಹಿಂದೆ ಭೇಟಿ ನೀಡಿದಾಗ ಬಂದರದ ಹೂಳೆತ್ತುವ ಕಾರ್ಯಕ್ಕೆ ಒಂದು ವಾರದೊಳಗೆ ಚಾಲನೆ ನೀಡುವುದಾಗಿ ಭರವಸೆಯನ್ನು ನೀಡಿದ್ದರು. ಆದರೆ ಇನ್ನೂ ತನಕ ಯಾವುದೇ ಕೆಲಸ ಆಗದೇ ಇರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

  • ಮಾವಿನಕುರ್ವೆ ಬಂದರದಲ್ಲಿ ಹೂಳು ತುಂಬಿದ್ದು ಬೋಟುಗಳು ಹಾನಿಗೊಳಗಾಗುತ್ತಿವೆ. ಈ ಕುರಿತು ಸರಕಾರದ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣ ಸರಕಾರ ೨ ಕೋಟಿ ಬಿಡುಗಡೆ ಮಾಡಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಬೇಕು. ಬ್ರೇಕ್ ವಾಟರ್ ಕಾರ್ಯವನ್ನು ಮಾಡಬೇಕು. ಇಲ್ಲವಾದಲ್ಲಿ ಕರಾವಳಿಯ ಮೀನುಗಾರರು ಸಹ ರೈತರ ಪ್ರತಿಭಟನೆಯಂತೆ ಬೀದಿಗಿಳಿಯುವುದು ಅನಿವಾರ್ಯವಾಗುವುದು ಎಂದು ಹಿರಿಯ ಮುಖಂಡ ಎನ್.ಡಿ.ಖಾರ್ವಿ ಅವರು ಹೇಳಿದ್ದಾರೆ.

  • ಮಾವಿನಕುರ್ವೆ ಬಂದರಿನಲ್ಲಿ ನೂರಾರು ಬೋಟುಗಳು ಆಶ್ರಯ ಪಡೆಯುತ್ತವೆ. ನೀರಿನ ಇಳಿತದ ಸಮಯದಲ್ಲಿ ಬೋಟುಗಳು ಅತಂತ್ರವಾಗುತ್ತಿದ್ದು ಒಂದಕ್ಕೊದು ಡಿಕ್ಕಿಯಾಗಿ ಹಾನಿಯಾಗುತ್ತಿದೆ. ಡ್ರಜ್ಜಿಂಗ್ ಕಾರ್ಯವನ್ನು ಕೈಗೆತ್ತಿಕೊಳ್ಳದಿದ್ದರೆ, ಮೀನುಗಾರರು ತೀವ್ರ ಸಂಕಷ್ಟಕ್ಕೊಳಗಾಗಲಿದ್ದಾರೆ. ಮೀನುಗಾರಿಕಾ ಮಂತ್ರಿಗಳು ಹಾಗೂ ಶಾಸಕರು ಕಳೆದ ಒಂದು ತಿಂಗಳ ಹಿಂದೆ ನೀಡಿದ ಭರವಸೆ ಹಾಗೆಯೇ ಉಳಿದಿದ್ದು ತಕ್ಷಣ ಕಾಮಗಾರಿಯನ್ನು ಮಾಡಿಕೊಡಬೇಕಾಗಿದೆ ಎನ್ನುವುದು ಮೀನುಗಾರರ ಪ್ರಮುಖ ಮಹೇಶ ಖಾರ್ವಿ ಅವರ ಅಭಿಮತವಾಗಿದೆ.
error: