April 26, 2024

Bhavana Tv

Its Your Channel

ಮಂಗನ ಕಾಯಿಲೆಯೊಂದಿಗೆ ಸಮಸ್ಯೆಗಳೂ ಉಲ್ಬಣ

ಹೊನ್ನಾವರ ಎ. ೧೭ : ಜಿಲ್ಲೆಯ ಹೊನ್ನಾವರ, ಸಿದ್ಧಾಪುರ, ಭಟ್ಕಳ, ಕುಮಟಾ, ಅಂಕೋಲಾಗಳಲ್ಲಿ ಗುರುತಿಸಲ್ಪಟ್ಟಿರುವ ಮಂಗನ ಕಾಯಿಲೆ ಈ ವರ್ಷ ೪೭ಜನರನ್ನು ಕಾಡಿದೆ. ಫೆಬ್ರವರಿಯಲ್ಲಿ ೧ಸಾವು ಸಂಭವಿಸಿದೆ. ೧೪ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಉಳಿದವರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಹೊನ್ನಾವರ ೧೨, ಸಿದ್ಧಾಪುರ ೩೨, ಭಟ್ಕಳ, ಕುಮಟಾ, ಅಂಕೋಲಾಗಳಲ್ಲಿ ತಲಾ ಒಬ್ಬರು ಮಂಗನ ಕಾಯಿಲೆ ಪೀಡಿತರಾಗಿದ್ದಾರೆ. ೭ಜನ ಮಣಿಪಾಲ ಆಸ್ಪತ್ರೆಯಲ್ಲಿ, ೫ಜನ ಹೊನ್ನಾವರ ಸರ್ಕಾರಿ ಆಸ್ಪತೆಯಲ್ಲಿ, ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿದ್ಧಾಪುರದ ೬ಪ್ರಾಥಮಿಕ ಕೇಂದ್ರದ ವ್ಯಾಪ್ತಿಯಲ್ಲಿ, ಹೊನ್ನಾವರದ ಗೇರಸೊಪ್ಪಾ, ಸಂಶಿ, ಖರ್ವಾ ೩ ಪ್ರಾಥಮಿಕ ಕೇಂದ್ರದ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ ಹರಡಿದೆ. ಈಗ ಲಸಿಕೆ ಪರಿಣಾಮ ಬೀರುವುದಿಲ್ಲ, ಮೂರು ತಿಂಗಳು ಮೊದಲೇ ಪಡೆಯಬೇಕಿತ್ತು. ಆಗ ಜನ ಒತ್ತಾಯಿಸಿದರೂ ಪಡೆದಿಲ್ಲ. ಈಗ ಅನಿವರ‍್ಯವಾಗಿ ಜ್ವರ ಬಂದ ಕೋಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವುದರೊಂದಿಗೆ ಬೇಸಿಗೆ ಹೆಚ್ಚಾದಂತೆ ಮಂಗನ ಕಾಯಿಲೆ ಹೆಚ್ಚು ಕಾಡುವುದರಿಂದ ಕಾಳಜಿ ವಹಿಸಬೇಕಾಗಿದೆ.
ಇದು ಕಾಯಿಲೆಯ ಕಥೆಯಾದರೆ ಚಿಕಿತ್ಸೆಯ ವ್ಯಥೆ ಇನ್ನೊಂದಾಗಿದೆ. ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಶಿವಮೊಗ್ಗಾ ಜಿಲ್ಲೆಯ ೨ ಶಾಸಕರು ಧ್ವನಿ ಎತ್ತಿದ ಕಾರಣ ಮುಖ್ಯಮಂತ್ರಿಗಳು ಮಂಗನ ಕಾಯಿಲೆಯ ರೋಗಿಗಳ ಎಲ್ಲ ವೆಚ್ಚವನ್ನು ಸರ್ಕಾರ ಭರಿಸುವುದಾಗಿ ಪ್ರಕಟಿಸಿದ್ದರು. ಅಂತೆಯೇ ಶಿವಮೊಗ್ಗಾ ಜಿಲ್ಲೆಯಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಅಲ್ಲಿಯ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಬಿಲ್ ಪಾವತಿ ಮಾಡುತ್ತಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಮಾತ್ರ ಈ ಆದೇಶ ಇನ್ನೂ ಜಾರಿಗೆ ಬರಬೇಕಾಗಿದೆ. ಈಗಾಗಲೇ ಆಸ್ಪತ್ರೆಯಿಂದ ಗುಣಮುಖರಾಗಿ ಬಂದ ಜಿಲ್ಲೆಯ ಹಲವು ಮಂಗನ ಕಾಯಿಲೆ ಪೀಡಿತರು ಬಿಲ್ ಹಿಡಿದುಕೊಂಡು ಓಡಾಡುತ್ತಿದ್ದು ಸಾಲ ಮಾಡಿ ಮನೆ, ಬಂಗಾರ ಒತ್ತೆಯಿಟ್ಟು ಗುಣವಾಗಿ ಬಂದಿದ್ದೇವೆ. ಮಾನ್ಯ ಮುಖ್ಯಮಂತ್ರಿಗಳು ಹೇಳಿದಂತೆ ನಮ್ಮ ಆಸ್ಪತ್ರೆಯ ವೆಚ್ಚವನ್ನು ಮರಳಿ ಕೊಡಿಸಿ ಎಂದು ವಿನಂತಿಸುತ್ತಿದ್ದಾರೆ. ಪತ್ರಿಕೆಗಳಿಗೆ ಬಿಲ್ ಪ್ರತಿ ಕೊಟ್ಟಿದ್ದಾರೆ. ಇವರಿಗೆ ಆಸ್ಪತ್ರೆಯ ವೆಚ್ಚವನ್ನು ಮರಳಿಸಬೇಕಾದ ಅಗತ್ಯವಿದೆ.
ಇತ್ತೀಚೆ ಆರೋಗ್ಯ ಕರ್ನಾಟಕದಲ್ಲಿ ಮಂಗನ ಕಾಯಿಲೆ ಚಿಕಿತ್ಸೆಯನ್ನು ಸೇರಿಸಲಾಗಿದೆ, ಈ ಹಿಂದೆ ಚಿಕಿತ್ಸೆ ಪಡೆದವರಿಗೆ ಇದರ ಪ್ರಯೋಜನ ಸಿಗಲಿಲ್ಲ. ಆದರೆ ಇದರಲ್ಲಿ ಮಕ್ಕಳನ್ನು ಸೇರಿಸಲಾಗಿಲ್ಲ, ಹೊನ್ನಾವರ ಸಂಶಿಯ ದೀಕ್ಷಾ ಮರಾಠಿ ೪ವರ್ಷ, ಮೇಘಾ ಮರಾಠಿ ೯ ವರ್ಷ ಎಂಬ ಇಬ್ಬರು ಮಕ್ಕಳು ಮಣಿಪಾಲದಲ್ಲಿ ಗುಣಮುಖರಾಗಿದ್ದು ಅವರಿಗೆ ಹಣ ಸಿಗಲಿಲ್ಲ. ಈ ಮಕ್ಕಳ ತಾಯಿ ಹೊನ್ನಾವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಖಾಸಗಿ ಆಸ್ಪತ್ರೆಯವರು ಹಣ ತುಂಬದೆ ಗುಣಮುಖರಾದವರನ್ನು ಬಿಡುತ್ತಿಲ್ಲ. ಈ ಸಮಸ್ಯೆಯನ್ನು ಮುಖ್ಯಮಂತ್ರಿಗಳು ತಕ್ಷಣ ಪರಿಹರಿಸಬೇಕಾಗಿದೆ.
ಶಾಸಕ ಸುನೀಲ ನಾಯ್ಕ ಇವರನ್ನು ಈ ಕುರಿತು ಸಂಪರ್ಕಿಸಿದಾಗ ಇಂದು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಮಣಿಪಾಲದಲ್ಲಿ ಇರುವ ಮಕ್ಕಳ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುವುದು ಎಂದು ಹೇಳಿದ್ದಾರೆ.
ಮಂಗನ ಕಾಯಿಲೆ ಪೀಡಿತ ಮಕ್ಕಳಿಗೆ ಆರೋಗ್ಯ ಕರ್ನಾಟಕದ ಪ್ರಯೋಜನ ದೊರೆಯುವಂತೆ ತಿದ್ದುಪಡಿ ಮಾಡಲು ಆರೋಗ್ಯ ಮಂತ್ರಿಗಳು ಒಪ್ಪಿಕೊಂಡಿದ್ದು ಶನಿವಾರ ಆದೇಶ ಹೊರಬರಲಿದೆ, ಆಸ್ಪತ್ರೆಯಲ್ಲಿರುವವರಿಗೆ ಉಚಿತವಾಗಿ ಇದರ ಪ್ರಯೋಜನ ಸೋಮವಾರ ಸಿಗಲಿದೆ ಎಂದು ಹೊನ್ನಾವರದ ಆರೋಗ್ಯ ಮಿತ್ರ ವೆಂಕಟೇಶ ಪಟಗಾರ ಹೇಳಿದ್ದಾರೆ.
ಜೀಯು, ಹೊನ್ನಾವರ

error: