September 16, 2024

Bhavana Tv

Its Your Channel

ಮೇ 3ರವರೆಗೆ ಜಿಲ್ಲೆಯಲ್ಲಿ ಲಾಕ್ ಡೌನ್ ನಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ – ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್

ಕಾರವಾರ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್ ಡೌನ್ ನ ಬಳಿಕವೂ ಸುಮಾರು ನಾಲ್ಕು ತಿಂಗಳವರೆಗೆ ಜಿಲ್ಲೆಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ಓಡಾಡುವಂತಿಲ್ಲ. ಹೀಗೆ ಅನಗತ್ಯವಾಗಿ ರಸ್ತೆಗೆ ಇಳಿಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ವಸ್ತುಗಳಾದ ದಿನಸಿ, ತರಕಾರಿ, ಮೀನನ್ನು ಕೂಡ ಸದ್ಯ ಇರುವಂತೆಯೇ ಮನೆಮನೆಗೆ ಕಳುಹಿಸಲಾಗುವುದು ಎಂದು ಹೇಳಿದರು.

ಏಪ್ರಿಲ್ 21ರ ನಂತರ ಕೃಷಿ ಚಟುವಟಿಕೆಗೆ ಅವಕಾಶ ನೀಡಲಾಗುವುದು‌. ರೈತರಿಗೆ ಹಸಿರು ಕಾರ್ಡ್ ವಿತರಣೆ ಮಾಡಲಾಗುತ್ತದೆ. ಕಾರ್ಖಾನೆಗಳನ್ನು ಆರಂಭಿಸಲು ಕೂಡ ಅವಕಾಶ ನೀಡಲಾಗುವುದು. ಆದರೆ, ಪ್ರತಿದಿನ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಬೇಕು. ವರದಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸುತ್ತಿರಬೇಕು. ಸಿವಿಲ್ ಕಾಮಗಾರಿಗಳನ್ನು ಕೂಡ ಕೈಗೊಳ್ಳಬಹುದಾಗಿದ್ದು, ಕಾಮಗಾರಿ ಗುತ್ತಿಗೆದಾರರು ಅಥವಾ ಮಾಲೀಕರು ಥರ್ಮಲ್ ಸ್ಕ್ಯಾನರ್ ಖರೀದಿಸಿ ಪ್ರತಿದಿನ ಕೂಲಿಕಾರರ ತಪಾಸಣೆ ನಡೆಸಬೇಕು. ಒಂದೆಡೆಯಿಂದ ಇನ್ನೊಂದೆಡೆಗೆ ಕಾರ್ಮಿಕರು ಓಡಾಟ ಮಾಡದಂತೆ ಕಾಮಗಾರಿ ನಡೆಯುವ ಸ್ಥಳದಲ್ಲೇ ಕಾರ್ಮಿಕರಿಗೆ ನೆಲೆ ಕಲ್ಪಿಸಬೇಕು‌. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇವುಗಳ ಪಾಲನೆ ಮಾಡಲಾಗುವುದಿಲ್ಲವೆಂದರೆ ಚಟುವಟಿಕೆಗೆ ಅವಕಾಶ ನಿರಾಕರಣೆ ಮಾಡಲಾಗುವುದು ಎಂದರು.

ಮೇ 3ರ ನಂತರ ಝೋನಲ್ ಕಂಟೇನ್ಮೆಂಟ್ ಮಾಡಲು ಯೋಚಿಸಿದ್ದೇವೆ. ಲಾಕ್ ಡೌನ್ ಸಡಿಲಗೊಂಡ ಬಳಿಕ ಮತ್ತೆ ಸೋಂಕಿತರು ಪತ್ತೆಯಾದರೆ ಆ ಪ್ರದೇಶವನ್ನು ಕಂಟೇನ್ಮೆಂಟ್ ಮಾಡಲಾಗುವುದು. ಸೋಂಕು ಕಾಣಿಸಿಕೊಂಡ ಪ್ರದೇಶದ ಮೂರು ಕಿ.ಮೀ. ವರೆಗೆ ಕಂಟೇನ್ಮೆಂಟ್‌ ಮಾಡಲಾಗುವುದು. ಜಿಲ್ಲೆಯ ಗಡಿಗಳಲ್ಲಿ ಸರ್ಕಾರ ಹೇಳುವ ಆದೇಶವನ್ನು ಪಾಲಿಸುತ್ತೇವೆ. ಆದರೆ ಚುನಾವಣೆಗಳಲ್ಲಿ ತಪಾಸಣೆ ನಡೆಸಿದಂತೆ ಜಿಲ್ಲೆಯಿಂದ ಹೊರ ಹೋಗುವ, ಒಳ ಬರುವ ಎಲ್ಲರನ್ನೂ ತಪಾಸಣೆ ಮಾಡುತ್ತೇವೆ. ನಿಯಮಗಳನ್ನು ಉಲ್ಲಂಘಿಸಿದರೆ, ಅಂಥವರ ಮೇಲೆ ಈಗಾಗಲೇ ಪ್ರಕರಣ ಇದ್ದರೆ ಅವರ ಮೇಲೆ ರೌಡಿ ಶೀಟರ್ ಪ್ರಕರಣ ದಾಖಲು ಮಾಡುತ್ತೇವೆ. ಜಿಲ್ಲೆಯಿಂದ ಹೊರ ಹೋಗುವವರು, ಜಿಲ್ಲೆಗೆ ಹೊರ ಭಾಗದಿಂದ ಬರುವವರು ಆರೋಗ್ಯ ಕಾರ್ಯಕರ್ತರು ಅಥವಾ ಸ್ಥಳೀಯ ಆಡಳಿತದ ಅಧಿಕಾರಿಗಳೊಂದಿಗೆ ಮಾಹಿತಿ ಹಂಚಿಕೊಳ್ಳಬೇಕು ಎಂದು ತಿಳಿಸಿದರು.

ಇನ್ನುಮುಂದೆ ವಾರದಲ್ಲಿ ಎರಡು ದಿನ ಆರೋಗ್ಯ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಇದರೊಂದಿಗೆ ಸಮುದಾಯಿಕ ವರದಿ (ಕಮ್ಯುನಿಟಿ ರಿಪೋರ್ಟ್) ಆರಂಭಿಸುತ್ತೇವೆ. ಸಾರ್ವಜನಿಕರೇ ತಮ್ಮಲ್ಲಿ ಜ್ವರ ಸೇರಿದಂತೆ ಇನ್ನಿತರ ಲಕ್ಷಣಗಳು ಕಂಡು ಬಂದರೆ ಬೆಳಿಗ್ಗೆ 10 ಗಂಟೆಯ ಒಳಗೆ ಮಾಹಿತಿ ಕಳುಹಿಸಬೇಕು. ಅಂಥವರ ಗಂಟಲು ದ್ರವದ ಮಾದರಿಯನ್ನು ಸಂಜೆ 4ರ ಒಳಗೆ ಪ್ರಯೋಗಾಲಯಕ್ಕೆ ಕಳುಹಿಸಿ, ಮಾರನೇ ದಿನ ಬೆಳಿಗ್ಗೆ ಪ್ರಯೋಗಾಲಯದ ವರದಿ ಪಡೆಯಲಿದ್ದೇವೆ. ಮೂರ್ನಾಲ್ಕು ತಿಂಗಳು ಇದೇ ರೀತಿ ನಡೆಸಲಿದ್ದೇವೆ. ಹಳ್ಳಿಗಳಲ್ಲಿ ಕಾವಲು ಸಮಿತಿ ರಚಿಸುತ್ತೇವೆ ಎಂದು ತಿಳಿಸಿದರು.

ಮಣಿಪಾಲದಲ್ಲಿ ಕೋವಿಡ್ – 19 ಚಿಕಿತ್ಸೆ ಪಡೆಯುತ್ತಿದ್ದ ಭಟ್ಕಳ ಮೂಲದ ಗರ್ಭಿಣಿ ಮಹಿಳೆ ಗುಣಮುಖರಾಗಿದ್ದಾರೆ. ಆದರೆ, ಅವರಿಗೆ ಇತರ ಚಿಕಿತ್ಸೆ ನಡೆಯುತ್ತಿದೆ. ಮೂರ್ನಾಲ್ಕು ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕಾರವಾರದ ಐಎನ್ಎಚ್ಎಸ್ ಪತಂಜಲಿಯಲ್ಲಿರುವ ಸೋಂಕಿತ ಪತಿಯ ಆರೋಗ್ಯ ಸ್ಥಿತಿ ಕೂಡ ಸುಧಾರಿಸಿದೆ. 27ಕ್ಕೆ ಗಂಟಲು ದ್ರವದ ಮಾದರಿಯನ್ನು ಮರು ಕಳುಹಿಸಲಾಗುವುದು. ನೆಗೆಟಿವ್ ಬಂದಲ್ಲಿ ಅವರನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ಕೋವಿಡ್- 19 ಪ್ರಯೋಗಾಲಯ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಲಾಕ್ ಡೌನ್ ಮುನ್ನವೇ ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಪ್ರಯೋಗಾಲಯದ ಪರೀಕ್ಷೆ ಶುರುವಾಗಲಿದೆ. ಇದರ ಸಿವಿಲ್ ಕಾಮಗಾರಿಗಳು ಕೂಡ ಆರಂಭವಾಗಿದ್ದು, ಅಗತ್ಯ ಪರಿಕರಗಳನ್ನು ತರಿಸಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

error: