May 19, 2024

Bhavana Tv

Its Your Channel

ಕೇರಳ-ಕರ್ನಾಟಕ ಗಡಿಗಳು ಕೊನೆಗೂ ಓಪನ್.

ಕಾಸರಗೋಡು: ಅಂತಾರಾಜ್ಯ ಪ್ರಯಾಣ ಕುರಿತ ಕೇರಳ ಹೈಕೋರ್ಟ್ ಮಧ್ಯಂತರ ಆದೇಶದ ಬೆನ್ನಿಗೆ ತಲಪಾಡಿ ಸಹಿತ ಪಾಣತ್ತೂರು, ಮಾಣಿಮೂಲೆ, ಪೆರ್ಲ(ಸಾರಡ್ಕ) ಹಾಗೂ ಜಾಲ್ಸೂರು ಮಾರ್ಗಗಳ ಮೂಲಕ ಪಾಸ್ ರಹಿತವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಚಾರಕ್ಕೆ ಕಾಸರಗೋಡು ಜಿಲ್ಲಾಡಳಿತ ಅನುಮತಿ ಕಲ್ಪಿಸಿದೆ.

ಇದುವರೆಗೆ ತಲಪಾಡಿ ಗೇಟ್ ಮೂಲಕ ಪಾಸ್ ಇದ್ದವರಿಗೆ ಮಾತ್ರ ದ.ಕ. ಜಿಲ್ಲೆ ಪ್ರವೇಶಕ್ಕೆ ಅವಕಾಶವಿತ್ತು. ಇತರ ಮಾರ್ಗಗಳಲ್ಲೂ ಅವಕಾಶ ನೀಡಬೇಕು ಎಂದು ಬಿಜೆಪಿ ಮುಖಂಡ, ವಕೀಲ ಕೆ.ಶ್ರೀಕಾಂತ್ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ಅದರಂತೆ ಷರತ್ತಿಗೊಳಪಟ್ಟು ಇತರ ನಾಲ್ಕು ಮಾರ್ಗಗಳ ಮೂಲಕವೂ ಸಂಚಾರಕ್ಕೆ ಅನುಮತಿ ನೀಡಿ ನ್ಯಾಯಾಲಯ ಆದೇಶಿಸಿದೆ.

ಈ ಕುರಿತು ಬುಧವಾರ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ಬಾಬು, ತಲಪಾಡಿ ಸಹಿತ ಐದು ಮಾರ್ಗಗಳ ಮೂಲಕ ಪಾಸ್ ಇಲ್ಲದೆ ಗುರುವಾರದಿಂದಲೇ ಅಂತಾರಾಜ್ಯ ಪ್ರಯಾಣ ಮಾಡಬಹುದು. ಆದರೆ ಆ್ಯಂಟಿಜೆನ್ ಟೆಸ್ಟ್ ನಡೆಸಿ, ನೆಗೆಟಿವ್ ಸರ್ಟಿಫಿಕೆಟ್ ಹೊಂದಿರಬೇಕು ಮತ್ತು ಕೋವಿಡ್-19 ಜಾಗ್ರತಾ ಪೋರ್ಟಲ್‌ನಲ್ಲಿ ನೋಂದಾಯಿಸಿರಬೇಕು ಎಂದು ಸೂಚಿಸಿದರು.
ಗಡಿಪ್ರದೇಶದ ಪಂಚಾಯಿತಿ ವ್ಯಾಪ್ತಿಯ ಜನರು ಅಗತ್ಯ ತಪಾಸಣೆಗೆ ಒಳಗಾಗಬೇಕು. ಈ ಪ್ರದೇಶದಲ್ಲಿ ಸಿಬ್ಬಂದಿ, ವೈದ್ಯಕೀಯ ತಪಾಸಣೆಗೆ ವ್ಯವಸ್ಥೆಯನ್ನು ಆಯಾ ಪಂಚಾಯಿತಿಗಳು ಮಾಡಿಕೊಳ್ಳಬೇಕು.

ಇನ್ನು ಗಡಿ ಪ್ರದೇಶದ ಪಂಚಾಯಿತಿಗೆ ಮಾತ್ರ ಆಗಮಿಸುವವರಿಗೆ ಈ ತಪಾಸಣೆಯಿಲ್ಲದೆ ದ.ಕ ಜಿಲ್ಲೆಯಿಂದ ಆಗಮಿಸಬಹುದಾದರೂ ಇವರು ಇತರ ಪಂಚಾಯಿತಿಗಳಿಗೆ ತೆರಳುವುದಿಲ್ಲ ಎಂಬುದನ್ನು ಆಯಾ ಪಂಚಾಯಿತಿ ಅಧಿಕಾರಿಗಳು ಖಚಿತಪಡಿಸಿಕೊಳ್ಳುವುದು ಅನಿವಾರ್ಯ ಎಂದು ತಿಳಿಸಲಾಗಿದೆ

error: