September 16, 2024

Bhavana Tv

Its Your Channel

ವುಹಾನ್‌ನಲ್ಲಿ ಲಾಕ್‌ಡೌನ್‌ ಭೀಕರತೆ ಬಿಚ್ಚಿಟ್ಟ ಲೇಖಕಿಗೆ ಜೀವ ಬೆದರಿಕೆ: ‘ವುಹಾನ್‌ ಡೈರಿ’ಯಲ್ಲಿದೆ ಚೀನಾದ ಕಟು ಕಹಿ ಸತ್ಯ!

ಬೀಜಿಂಗ್‌: ಕರೊನಾ ವೈರಸ್‌ ತವರು ಚೀನಾದ ವುಹಾನ್‌ ಈಗ ಮತ್ತೊಮ್ಮೆ ಸುದ್ದಿ ಮಾಡಿದೆ. ಇಡೀ ವಿಶ್ವಕ್ಕೆ ಸೋಂಕು ಹಚ್ಚಿಸಿರುವ ಕುಖ್ಯಾತಿ ಗಳಿಸಿರುವ ವುಹಾನ್‌ನಲ್ಲಿ ವಿಧಿಸಲಾದ ಲಾಕ್‌ಡೌನ್‌ ಭೀಕರತೆಯನ್ನು ವಿವರಿಸುವ ‘ವುಹಾನ್‌ ಡೈರಿ’ ಲೇಖಕಿ ಫಂಗ್‌ ಫಂಗ್‌ ಅವರಿಗೆ ಜೀವ ಬೆದರಿಕೆ ಒಂದರ ಮೇಲೊಂದು ಬರಲು ಶುರುವಾಗಿಯಂತೆ.

ವುಹಾನ್‌ ಭೀಕರತೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿರುವ 64 ವರ್ಷದ ಫಂಗ್‌ ಫಂಗ್‌ ಈ ಬಗ್ಗೆ ಆನ್‌ಲೈನ್‌ನಲ್ಲಿ ಲೇಖನದ ಸರಣಿ ಆರಂಭಿಸಿದ್ದಾರೆ. ಇದು ಬೇರೆ ಬೇರೆ ದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ಪ್ರಕಟವಾಗುತ್ತಿದೆ. ಚೀನಾದ ಕಹಿ ಸತ್ಯಗಳು ವಿಶ್ವದ ಗಮನ ಸೆಳೆದ ಹಿನ್ನೆಲೆಯಲ್ಲಿ ಅವರಿಗೆ ಬೆದರಿಕೆ ಬರುತ್ತಿದೆ ಎನ್ನಲಾಗಿದೆ.

ಅಮೆರಿಕದ ಹಾರ್ಪರ್‌ಕಾಲಿನ್ಸ್‌ ಎಂಬ ಪ್ರಕಾಶನ ಸಂಸ್ಥೆ ಕೃತಿಗೆ ‘ವುಹಾನ್‌ ಡೈರಿʼ ಎಂದು ಹೆಸರಿಸಿ ತನ್ನ ವೆಬ್‌ಸೈಟ್‌ನಲ್ಲಿ ಸಂಕ್ಷಿಪ್ತ ವಿವರ ನೀಡಿರುವುದು ಟೀಕಾಕಾರರನ್ನು ಮತ್ತಷ್ಟು ಕೆರಳಿಸಿದೆ. ಕಮ್ಯುನಿಸ್ಟ್‌ ಆಡಳಿತವಿರುವ ಚೀನಾದಲ್ಲಿ ಮಾಧ್ಯಮ ಸೇರಿದಂತೆ ಹಲವಾರು ಸ್ವಾತಂತ್ರ್ಯಕ್ಕೆ ಕಡಿವಾಣ ಇದೆ. ಇದರ ನಡುವೆಯೂ ಧೈರ್ಯದಿಂದ ಅಲ್ಲಿನ ಹುಳುಕನ್ನು ಲೇಖಕಿ ಬಿಚ್ಚಿಡಲು ಧೈರ್ಯ ಮಾಡಿದ್ದು ಸಾಮಾನ್ಯ ಮಾತಲ್ಲ. ಎಲ್ಲವನ್ನೂ ಗುಟ್ಟು ಮಾಡುತ್ತ ಬಂದಿರುವ ಚೀನಾದ ಬಣ್ಣ ಈ ಮೂಲಕ ಬಯಲಾಗುವುದನ್ನು ಅಲ್ಲಿಯ ಸರ್ಕಾರ ಸಹಿಸಲಾಗಿದೆ. ಇದರಿಂದಾಗಿ ಅವರಿಗೆ ಬೆದರಿಕೆ ಬಂದಿದೆ. ಚೀನಾದ ಒಳಗುಟ್ಟುಗಳನ್ನು ತಿಳಿದುಕೊಳ್ಳುವ ಸಲುವಾಗಿ ಅನೇಕ ಮಂದಿ ಈ ಲೇಖನಗಳನ್ನು ಓದಲು ಉತ್ಸುಕತರಾಗಿದ್ದ ಕಾರಣ, ವುಹಾನ್‌ ಡೈರಿ ಲೇಖನ ಸರಣಿ ಲಕ್ಷಾಂತರ ಓದುಗರನ್ನು ಸೆಳೆದಿದೆ.

ಒಂದೆಡೆ ಅನೇಕ ದೇಶಗಳ ಅಭಿಮಾನಿಗಳನ್ನು ಫಂಗ್‌ ಫಂಗ್‌ ಗಳಿಸಿದರೆ, ಅವರ ಬರಹಕ್ಕೆ ಚೀನಾದ ಸಾಮಾಜಿಕ ಜಾಲತಾಣ ‘ವಿಬೊ’ ದಲ್ಲಿ ಸಾಕಷ್ಟು ಟೀಕೆಗಳೂ ವ್ಯಕ್ತವಾಗಿವೆ. ‘ಕರೊನಾ ವೈರಸ್‌ ಪಿಡುಗಿನ ಸ್ಥಿತಿಯನ್ನು ನಿಭಾಯಿಸುವಲ್ಲಿ ಚೀನಾ ವರ್ತಿಸಿದ ರೀತಿಯನ್ನು ಟೀಕಿಸುತ್ತಿರುವ ರಾಷ್ಟ್ರಗಳಿಗೆ ನಿಮ್ಮ ಈ ಕೃತಿ ಮತ್ತಷ್ಟು ಉತ್ತೇಜನ ನೀಡುತ್ತಿದೆ. ಇದು ಖಂಡನಾರ್ಹ’ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದರೆ, ‘ನಿಮ್ಮ ಡೈರಿಯನ್ನು ಎಷ್ಟು ದುಡ್ಡಿಗೆ ಮಾರಿಕೊಂಡಿದ್ದೀರಿ’ ಎಂದು ಹಲವರು ಟೀಕಿಸಿದ್ದಾರೆ. ‘ಚೀನಾ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ಯುದ್ಧ ಮಾಡಲು ನೀವು ಶಸ್ತ್ರಾಸ್ತ್ರ ನೀಡುತ್ತಿದ್ದೀರಿ’ ಎಂದು ಇನ್ನು ಕೆಲವರು ಕೃತಿಯನ್ನು ಖಂಡಿಸಿದ್ದಾರೆ.

‘ನನ್ನ ಕೃತಿಗೆ ಟೀಕೆಗಳು ಬರುತ್ತಿರುವುದ ಮಾತ್ರವಲ್ಲದೇ, ಹತ್ಯೆ ಬೆದರಿಕೆಗಳೂ ಬರುತ್ತಿವೆ. ನನ್ನ ಮನೆಯ ವಿಳಾಸ ಆನ್‌ಲೈನ್‌ನಲ್ಲಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ, ಮನೆಗೇ ನೇರವಾಗಿ ಬೆದರಿಕೆ ಬರುತ್ತಿವೆ’ ಎಂದು ಸಂದರ್ಶನವೊಂದರಲ್ಲಿ ಫಂಗ್‌ ಫಂಗ್‌ ಹೇಳಿದ್ದಾರೆ.

ಜೂನ್‌ 30ರಿಂದ ಆನ್‌ಲೈನ್‌ನಲ್ಲಿ ಈ ಕೃತಿ ಮಾರಾಟಕ್ಕೆ ಲಭ್ಯವಿರುತ್ತದೆ ಎಂದು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. 

source : vijayavani

error: