April 26, 2024

Bhavana Tv

Its Your Channel

ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳನ್ನು ತಿರಸ್ಕರಿಸಿ ಅಕ್ಕ ಮಾಯಾವತಿ ನೇತೃತ್ವದ ಬಿ.ಎಸ್.ಪಿ. ಪಕ್ಷವನ್ನು ಅಧಿಕಾರಕ್ಕೆ ತರಬೇಕು – ಬಿ.ಎಸ್.ಪಿ ರಾಜ್ಯಾಧ್ಯಕ್ಷ ಡಾ.ಎಂ.ಕೃಷ್ಣಮೂರ್ತಿ

ಕೆ.ಆರ್.ಪೇಟೆ: ದೇಶದಲ್ಲಿ ಸುಮಾರು ೫೦ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಈಗ ಕಳೆದ ಏಳು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು, ಭಾರತ ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಎರಡೂ ಪಕ್ಷಗಳಿಗೂ ವಿಫುಲ ಅವಕಾಶಗಳಿದ್ದರೂ ಸಹ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿರುವುದಿಲ್ಲ. ಬದಲಾಗಿ ತಮ್ಮ ತಮ್ಮ ಪಕ್ಷಗಳ ಮತಬ್ಯಾಂಕ್ ಗಟ್ಟಿಗಾಗಿ ಮಾತ್ರ ಆಡಳಿತ ನಡೆಸಿ ದೇಶವನ್ನು ಬಡರಾಷ್ಟ್ರವನ್ನಾಗಿ ಮಾಡಿವೆ ಹಾಗಾಗಿ ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳನ್ನು ತಿರಸ್ಕರಿಸಿ ಅಕ್ಕ ಮಾಯಾವತಿ ನೇತೃತ್ವದ ಬಿ.ಎಸ್.ಪಿ. ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಬಹುಜನ ಸಮಾಜ ಪಾರ್ಟಿಯ(ಬಿ.ಎಸ್.ಪಿ) ರಾಜ್ಯಾಧ್ಯಕ್ಷ ಡಾ.ಎಂ.ಕೃಷ್ಣಮೂರ್ತಿ ಅವರು ಮನವಿ ಮಾಡಿದರು.

ಅವರು ತಾಲ್ಲೂಕಿನ ಸಿಂಧುಘಟ್ಟ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಸಿಂಧುಘಟ್ಟ, ಬೂಕನಕೆರೆ, ಸಂತೇಬಾಚಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯ ರಾಜಕೀಯ ಐಕ್ಯತಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷವನ್ನು ೫೫ವರ್ಷ ದೇಶವನ್ನು ಆಳಿದೆ ಆದರೆ ದೇಶದಲ್ಲಿ ದಲಿತರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರು ಅಭಿವೃದ್ಧಿಯಾದರೆ ನಮ್ಮ ಓಟ್ ಬ್ಯಾಂಕ್ ಎಲ್ಲಿ ದಕ್ಕೆಯಾಗುವುದೋ ಎಂದು ಅವರಿಗೆ ಉಚಿತವಾಗಿ ಅಕ್ಕಿ, ಬಟ್ಟೆ, ಆಶ್ರಯ ಮನೆ, ನೀಡುವ ಮೂಲಕ ಅವರನ್ನು ಬಡವರನ್ನಾಗಿ ಇರಿಸಿತ್ತು. ಇದರಿಂದ ಈ ಸಮುದಾಯಗಳ ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ. ಕಾಂಗ್ರೆಸ್ ಪಕ್ಷವು ಬಡವರ ಬಗ್ಗೆ ಕಾಳಜಿ ಇದ್ದರೆ ಅವರಿಗೆ ಸರಿಯಾಗಿ ಉದ್ಯೋಗ ಸೃಷ್ಠಿ ಮಾಡಿದ್ದರೆ ಅಕ್ಕಿ ಕೊಳ್ಳುವ, ಬಟ್ಟೆ ಖರೀದಿಸುವ, ಸ್ವಂತ ಮನೆ ಕಟ್ಟಿಕೊಳ್ಳುವ ಶಕ್ತಿಯನ್ನು ಕೊಡಬಹುದಾಗಿತ್ತು. ಇದನ್ನು ಮಾಡದೇ ನಮ್ಮ ಪಕ್ಷ ಅಧಿಕಾರಕ್ಕೆ೧೦ಕೆಜಿ ಕೊಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿರುವುದನ್ನು ತೀವ್ರವಾಗಿ ಖಂಡಿಸಿದರು. ೧೦ಕೆಜಿ ಅಕ್ಕಿ ಕೊಡುವ ಬದಲು ಅಕ್ಕಿ ಕೊಳ್ಳುವ ಸಂಪಾದನೆ ಮಾಡಲು ಉದ್ಯೋಗ ಕೊಡುತ್ತೇವೆ ಎಂದು ಹೇಳಬೇಕಿತ್ತು. ಬಡವರು ಬಡವರಾಗಿಯೇ ಇರಲಿ, ನಾವು ಉಚಿತವಾಗಿ ಅಕ್ಕಿ, ರಾಗಿ, ಜೋಳ, ಬೇಳೆ ಕೊಡುವ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬರಬಹುದು ಎಂದು ಈಗಲೂ ಕಾಂಗ್ರೆಸ್ ನವರು ಮುಂದಾಗಿದ್ದಾರೆ. ಹಾಗಾಗಿ ಮತದಾರರು ಇನ್ನಾದದೂ ಎಚ್ಚೆತ್ತುಕೊಂಡು ತಮ್ಮ ಪವಿತ್ರವಾದ ಮತವನ್ನು ೫೦೦-೧೦೦೦ಕ್ಕೆ ಮಾರಿಕೊಳ್ಳದೇ ಅಂಬೇಡ್ಕರ್ ಅವರು ಮೊದಲು ಕಟ್ಟಿದ ಪಕ್ಷದ ಗುರುತು ಹಾಗೂ ಅಣ್ಣ ಕಾನ್ಶಿರಾಂ, ಅಕ್ಕಾ ಮಯಾವತಿಯವರು ಕಟ್ಟಿದ ಬಿ.ಎಸ್.ಪಿ ಪಕ್ಷದ ಗುರುತಾದ ಆನೆಯ ಗುರುತಿಗೆ ನೀಡುವ ಮೂಲಕ ಬಿ.ಎಸ್.ಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು. ಇನ್ನೂ ಈಗ ಅಧಿಕಾರ ನಡೆಸುತ್ತಿರುವ ಪ್ರಧಾನಿ ನರೇಂದ್ರಮೋದಿ ಅವರು ಅಂಬಾನಿ, ಅದಾನಿಗಳ ಆಧಾಯವನ್ನು ಹೆಚ್ಚಿಸುವಲ್ಲಿ ನಿರತರಾಗಿದ್ದಾರೆ. ದೇಶದಲ್ಲಿ ಕೋರೋನಾ ಹಾವಳಿ ಇದ್ದಾಗ, ಜನರಿಗೆ ಊಟ ವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ ಸಮಯದಲ್ಲಿಯೂ ಅಂಬಾನಿ ಮತ್ತು ಅಧಾನಿ ಕಂಪನಿಗಳು ಸುಮಾರು ೧೨ಲಕ್ಷ ಕೋಟಿ ಅಧಾಯ ಮಾಡಿವೆ. ದೇಶದ ಬಡವರು ಅನ್ನಕ್ಕಾಗಿ ಬಿಕ್ಷೆ ಬೇಡುವ ಸ್ಥಿತಿಯಲ್ಲಿದ್ದಾರೆ. ಇಂತಹ ಉದ್ಯಮಿಗಳ ಪರವಾಗಿ ಆಡಳಿತ ನಡೆಸುತ್ತಿರುವ ನರೇಂದ್ರಮೋದಿ ನೇತೃತ್ವದ ಬಿಜೆಪಿಯನ್ನು ತಿರಸ್ಕರಿಸಬೇಕು ಎಂದು ಕರೆ ನೀಡಿದರು.

ಅಕ್ಕಾ ಮಯಾವತಿ ಅವರು ಉತ್ತರ ಪ್ರದೇಶ ರಾಜ್ಯದಲ್ಲಿ ೪ಬಾರಿ ರಾಜ್ಯ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವ ವೇಳೆ ೧ಕೋಟಿ ೧೦ಲಕ್ಷ ಹೆಕ್ಟೇರ್ ಭೂಮಿಯನ್ನು ೩೫ಲಕ್ಷ ಬಡ ರೈತರಿಗೆ ಹಂಚಿಕೆ ಮಾಡಿದರು. ೨೩ಲಕ್ಷ ಉದ್ಯೋಗ ಸೃಷ್ಠಿ ಮಾಡಿ ನಿರುದ್ಯೋಗಿ ಯುವಕರಿಗೆ ಆಸರೆಯಾದರು. ೧ಲಕ್ಷದ ೬೫ಸಾವಿರ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಿ ದಲಿತ ವರ್ಗಗಳಿಗೆ ಅನುಕೂಲ ಮಾಡಿಕೊಟ್ಟರು. ಐಎಎಸ್, ಐಪಿಎಸ್, ಕೆಎಎಸ್ ನಂತಹ ಹುದ್ದೆಗಳ ಪರೀಕ್ಷೆ ಎದುರಿಸುವ ಯುವಕರಿಗೆ ಉಚಿತವಾಗಿ ತರಬೇತಿ ಕೇಂದ್ರ ಆರಂಭಿಸಿ, ಸಾವಿರಾರು ಮಂದಿ ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಮಾಡಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ತಹಸೀಲ್ದಾರ್ ಹುದ್ದೆಗಳಿಗೆ ಸುಲಭವಾಗಿ ಸೇರುವಂತೆ ಮಾಡಿದರು. ಬಡವರು ಮನೆ ಮತ್ತು ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದ ಸರ್ಕಾರಿ ಸ್ಥಳಗಳಲ್ಲಿ ಅಕ್ರಮ-ಸಕ್ರಮ ಯೋಜನೆ ಜಾರಿಗೆ ತಂದು ಮನೆಗಳ ಹಕ್ಕುಪತ್ರವನ್ನು ಮನೆ ಬಾಗಿಲಿಗೆ ಹೋಗಿ ನೀಡಿದರು. ಆದರೆ ಕರ್ನಾಟಕ ರಾಜ್ಯದಲ್ಲಿ ೧೧ಲಕ್ಷ ಹೆಕ್ಟೇರ್ ಭೂಮಿಯನ್ನು ಹತ್ತಾರು ವರ್ಷಗಳಿಂದ ರೈತರು ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದರೂ ಅವರಿಗೆ ಮಂಜೂರು ಮಾಡಿಕೊಡಲು ಹಿಂದೇಟು ಹಾಕುತ್ತಿದೆ. ೩ವರ್ಷದಿಂದ ಶೇ.೯೦ರಷ್ಟು ಶಾಸಕರು ದರಖಾಸ್ತು ಕಮಿಟಿ ಸಭೆಯನ್ನೇ ಮಾಡಿಲ್ಲ. ಯುವಕರಿಗೆ ಉದ್ಯೋಗ ಸೃಷ್ಠಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ರೈತ ವಿರೋಧಿ, ಯುವಕರ ವಿರೋಧಿ ಆಡಳಿತ ನಡೆಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರವನ್ನು ಬದಲಾವಣೆ ಮಾಡಬೇಕು. ಮುಂಬರುವ ೨೦೨೪ರ ಚುನಾವಣೆಯಲ್ಲಿ ಕನಿಷ್ಠ ೨೫ಮಂದಿ ಶಾಸಕರನ್ನು ರಾಜ್ಯದಲ್ಲಿ ಆಯ್ಕೆ ಮಾಡಿ ವಿರೋಧ ಪಕ್ಷದ ಸ್ಥಾನವನ್ನು ಬಿಎಸ್‌ಪಿ ಅಲಂಕರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದಕ್ಕೆ ಪೂರ್ವಭಾವಿಯಾಗಿ ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಬಹುಜನ ಪಕ್ಷದ ಅಭ್ಯರ್ಥಿಗಳಿಗೆ ಮತದಾರರು ಆಶೀರ್ವಾದ ಮಾಡಿ ಪಕ್ಷದ ಶಕ್ತಿಯನ್ನು ಹೆಚ್ಚಿಸಬೇಕು ಎಂದು ಡಾ.ಎಂ.ಕೃಷ್ಣಮೂರ್ತಿ ಮನವಿ ಮಾಡಿದರು.

ಮುಂಜಾಗ್ರತಾ ಕ್ರಮಕ್ಕೆ ಆಗ್ರಹ:

ಕೊರೋನಾ ೨ನೇ ಅಲೆಯು ದೇಶದಲ್ಲಿ ವ್ಯಾಪಕವಾಗಿ ಹೆಚ್ಚಾಗುತ್ತಿದ್ದರೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೊರೋನಾ ಹೆಸರಿನಲ್ಲಿ ಲಕ್ಷಾಂತರ ಕೋಟಿ ಹಣವನ್ನು ದುರುಪಯೋಗ ಮಾಡಿಕೊಂಡು ಶ್ರೀಸಾಮಾನ್ಯನ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಜಿಲ್ಲಾಸ್ಪತ್ರೆಗಳು ಸೇರಿದಂತೆ ರಾಜ್ಯದ ಪ್ರಮುಖ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಾಕಷ್ಟು ಬೆಡ್‌ಗಳು(ಹಾಸಿಗೆ) ಸಿಗುತ್ತಿಲ್ಲ. ಔಷಧಗಳ ಪೂರೈಕೆ ಇಲ್ಲ. ವೆಂಟಿಲೇಟರ್ ಸಿಗುತ್ತಿಲ್ಲ. ಆಮ್ಲಜನಕ ಸಿಲಿಂಡರ್ ಕೊರತೆ ಇದೆ. ಸಿಗುತ್ತಿಲ್ಲ ಎಂದು ದಿನ ಬೆಳಗಾದರೆ ಮಾಧ್ಯಮಗಳ ಮೂಲಕ ನೋಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವರಾದ ಅಮಿತ್ ಷಾ ಅವರು ಸ್ವಾರ್ಥ ಸಾಧನೆಗಾಗಿ ದೇಶದ ಜನರ ಆರೋಗ್ಯವನ್ನು ಬಲಿಕೊಟ್ಟು ಚುನಾವಣೆಗಳಲ್ಲಿ ಗೆಲ್ಲಲೇಬೇಕೆಂದು ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ರಾಜ್ಯದಲ್ಲಿಯೂ ಕೂಡ ಪರಿಸ್ಥಿತಿಯು ಹೊರತಾಗಿಲ್ಲ, ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಗೆಲ್ಲಲು ಕೊರೋನಾ ೨ನೇ ಅಲೆಯ ಅಬ್ಬರವನ್ನು ತಡೆಯಲು ಕಾರ್ಯಕ್ರಮ ರೂಪಿಸದೇ ಊರು ಕೊಳ್ಳೆ ಹೊಡೆದ ಮೇಲೆ ಕೋಟೆಯ ಬಾಗಿಲು ಹಾಕಿದಂತೆ ಸ್ವತಃ ಕೋವಿಡ್ ಗೆ ತುತ್ತಾಗಿರುವ ಮುಖ್ಯಮಂತ್ರಿಗಳು ಈಗ ಗಾಢವಾದ ನಿದ್ರೆಯಿಂದ ಎದ್ದು ನೀತಿ ನಿಯಮವನ್ನು ರೂಪಿಸಿ ಕೊರೋನಾ ಹಾವಳಿಯನ್ನು ನಿಯಂತ್ರಿಸಲು ಮುಂದಾಗಿದ್ದಾರೆ ಎಂದು ಕೃಷ್ಣಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀ ಸಾಮಾನ್ಯನ ಹಿತವನ್ನು ಕಡೆಗಣಿಸಿ ಕೊರೋನಾ ಹೆಸರಿನಲ್ಲಿ ದಂಧೆ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರವು ಕೊರೋನಾ ಹೆಸರಿನಲ್ಲಿ ಮಾಡಿರುವ ದಂಧೆಗೆ ಖರ್ಚು ಮಾಡಿರುವ ಲೆಕ್ಕ ನೀಡಬೇಕು ಎಂದು ಕೃಷ್ಣಮೂರ್ತಿ ಒತ್ತಾಯಿಸಿದರು.

ತಾಲ್ಲೂಕು ಬಿ.ಎಸ್.ಪಿ ಅಧ್ಯಕ್ಷ ಬಸ್ತಿ ಪ್ರದೀಪ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಉಸ್ತುವಾರಿಗಳಾದ ಚೆಲುವರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅನಿಲ್‌ಕುಮಾರ್, ತಾಲ್ಲೂಕು ಉಸ್ತುವಾರಿ ಸಿ.ವಿ.ಗೋವಿಂದರಾಜು, ತಾಲ್ಲೂಕು ಸಂಯೋಜಕ ಶಶಿಧರ್, ತಾಲ್ಲೂಕು ಉಪಾಧ್ಯಕ್ಷರಾದ ಮಮತಾ, ಶಂಕರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗಂಗಾಧರ್, ಖಜಾಂಚಿ ಸುನಿಲ್, ನಗರ ಘಟಕದ ಅಧ್ಯಕ್ಷ ಆನಂದ್, ತಾಲ್ಲೂಕು ಕಾರ್ಯದರ್ಶಿಗಳಾದ ಶೀರ್ ಬಿಲ್ಲೇನಹಳ್ಳಿ ಕುಮಾರ್, ವಸಂತಪುರ ಯೋಗೇಶ್, ಹಲಗೆಹೊಸಹಳ್ಳಿ ಸ್ವಾಮಿ, ಕಾಪನಹಳ್ಳಿ ಶಿವರಾಂ, ಬಸ್ತಿಹೊಸಕೋಟೆ ದೇವರಾಜು, ಅರೆಬೊಪ್ಪನಹಳ್ಳಿ ಸುನಿಲ್‌ಕುಮಾರ್, ಮಲ್ಕೋನಹಳ್ಳಿ ಪ್ರದೀಪ್, ಮಧು, ಹರೀಶ್, ಐಚನಹಳ್ಳಿ ರಂಗಸ್ವಾಮಿ, ಕಬ್ಬಲಗೆರೆಪುರ ಮಹೇಶ್, ಮಡುವಿನಕೋಡಿ ಮಹೇಶ್, ಬಿಲ್ಲೇನಹಳ್ಳಿ ಬಿ.ಕೆ.ನಾಗೇಂದ್ರ, ನೀತಿಮಂಗಲ ಸುದೀಪ್, ವಸಂತಪುರ ಮಂಜು, ಸಾರಂಗಿ ಸಂಪತ್, ಜಾಗಿನಕೆರೆ ಶಂಕರ್, ವಳಗೆರೆ ಮೆಣಸ ಬಾಲಕೃಷ್ಣ, ಚಿಕ್ಕಗಾಡಿಗನಹಳ್ಳಿ ಲೋಕೇಶ್, ಧನಂಜಯ, ನಾರಾಯಣಪುರ ಸುರೇಶ್, ರಮೇಶ್ ಹಲಸನಹಳ್ಳಿ, ನೀತಿಮಂಗಲ ಸುನೀಲ್‌ಕುಮಾರ್, ಜಿಲ್ಲಾ ಬಹುಜನ ಸಮಾಜವಾದಿ ಪಕ್ಷದ ಉಸ್ತುವಾರಿ ಚೆಲುವರಾಜು, ಪದಾಧಿಕಾರಿಗಳಾದ ರವಿ, ಸಂತೋಷ್, ಪ್ರದೀಪ್, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.


ವರದಿ: ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಕೆ.ಆರ್.ಪೇಟೆ.

error: