April 27, 2024

Bhavana Tv

Its Your Channel

ಸಂತ್ರಸ್ತ ದಲಿತರು ಹಾಗೂ ದಲಿತ ಸಂಘರ್ಷ ಸಮಿತಿಯ ತಾಲೂಕು ಪದಾಧಿಕಾರಿಗಳೊಂದಿಗೆ ಪತ್ರಿಕಾಗೋಷ್ಠಿ

ಕೆ.ಆರ್.ಪೇಟೆ: ದೇಶಕ್ಕೆ ಸ್ವಾತಂತ್ರ‍್ಯ ಬಂದು ೭೪ ವರ್ಷಗಳು ಕಳೆಯುತ್ತಿದ್ದರೂ ಸಂವಿಧಾನದ ಆಶಯಗಳು ಕನಸಾಗಿಯೇ ಉಳಿದಿವೆ, ದಲಿತರ ಭೂಮಿಯ ಹಕ್ಕು ಇಂದಿಗೂ ಈಡೇರಿಲ್ಲ. ತಾಲೂಕಿನ ಚಿಕ್ಕಗಾಡಿಗನಹಳ್ಳಿ, ನಾಟನಹಳ್ಳಿ ಮತ್ತು ತುಳಸಿ ಗ್ರಾಮಗಳಲ್ಲಿ ದಲಿತರಿಗೆ ಮಂಜೂರಾಗಿರುವ ಭೂಮಿಯನ್ನು ಇನ್ನು ಹದಿನೈದು ದಿನಗಳ ಒಳಗೆ ಖಾತೆ ಮಾಡಿಕೊಡದಿದ್ದರೆ ಅಕ್ಟೋಬರ್ ೧೩ ರಂದು ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ತಮಟೆ ಚಳವಳಿ ನಡೆಸುವುದಾಗಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಾ.ಎಂ.ಬಿ.ಶ್ರೀನಿವಾಸ್ ಎಚ್ಚರಿಕೆ ನೀಡಿದರು.

ಅವರು ಇಂದು ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಸಂತ್ರಸ್ತ ದಲಿತರು ಹಾಗೂ ದಲಿತ ಸಂಘರ್ಷ ಸಮಿತಿಯ ತಾಲೂಕು ಪದಾಧಿಕಾರಿಗಳೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ತುಳಸಿ ಗ್ರಾಮದಲ್ಲಿನ ಎರಡು ದಲಿತ ಕುಟುಂಬಗಳಿಗೆ ಮಂಜೂರಾಗಿದ್ದು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಖಾತೆ ಮಾಡಿಕೊಡದ ತಾಲೂಕು ಆಡಳಿತವು ದಲಿತರು ಎಂಬ ಒಂದೇ ಕಾರಣಕ್ಕಾಗಿ ಅವರಿಗೆ ಕಿರುಕುಳ ನೀಡಿ ಒಕ್ಕಲೆಬ್ಬಿಸುವ ಪ್ರಯತ್ನವು ನಿರಂತರವಾಗಿ ನಡೆಯುತ್ತಿದೆ. ತಾಲೂಕಿನ ಬೂಕನಕೆರೆ ಹೋಬಳಿಯ ಚಿಕ್ಕಗಾಡಿಗನಹಳ್ಳಿ ಗ್ರಾಮದಲ್ಲಿ ದಲಿತರಿಗೆ ಶವಸಂಸ್ಕಾರ ಮಾಡಲು ಸ್ಮಶಾನ ಭೂಮಿಯನ್ನು ಗುರುತಿಸಿಕೊಟ್ಟಿಲ್ಲ. ಬೀಳು ಬಿದ್ದಿರುವ ಸರ್ಕಾರಿ ಭೂಮಿಯು ದುರಸ್ಥಿಯಾಗಿದ್ದರೂ ದಲಿತರು ಬೇಸಾಯ ಮಾಡುತ್ತಿರುವ ಕೃಷಿ ಭೂಮಿಗೆ ಸಾಗುವಳಿ ಚೀಟಿಯನ್ನು ನೀಡಿ ಖಾತೆ ಮಾಡಿಕೊಡದೇ ಸತಾಯಿಸಲಾಗುತ್ತಿದೆ. ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಸತಾಯಿಸಿ ತೊಂದರೆ ನೀಡುತ್ತಿದ್ದಾರೆ. ತಮಟೆ ಚಳವಳಿಗೂ ಅಧಿಕಾರಿಗಳು ದಲಿತ ಕುಟುಂಬಗಳಿಗೆ ನ್ಯಾಯವನ್ನು ನೀಡದಿದ್ದರೆ ಕಾನೂನುಭಂಗ ಚಳವಳಿಯನ್ನು ಹಮ್ಮಿಕೊಳ್ಳಲಾಗುತ್ತದೆ. ಮುಂದಾಗುವ ಎಲ್ಲಾ ಅನಾಹುತಗಳಿಗೆ ತಾಲೂಕು ಆಡಳಿತವೇ ನೇರವಾಗಿ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಎಂ.ಬಿ.ಶ್ರೀನಿವಾಸ್ ನಾಟನಹಳ್ಳಿ ಗ್ರಾಮದಲ್ಲಿಯೂ ದಲಿತರು ಬೇಸಾಯ ಮಾಡುತ್ತಿರುವ ಭೂಮಿಯನ್ನು ಖಾತೆ ಮಾಡಿಕೊಡದೇ ತೊಂದರೆ ನೀಡಲಾಗುತ್ತಿದೆ ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಉಳುವವನೇ ಭೂಮಿಯ ಒಡೆಯ ಎಂಬ ಕಾನೂನನ್ನು ಜಾರಿಗೆ ತಂದು ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜಅರಸು ಹಾUದ್ದೀ ಹಿಂದೆ ಕಂದಾಯ ಸಚಿವರಾಗಿದ್ದ ಬಸವಲಿಂಗಪ್ಪ ಅವರು ಪರಿಶಿಷ್ಠ ಜನಾಂಗದ ಬಡಜನರಿಗೆ ಮಂಜೂರು ಮಾಡಿರುವ ಭೂಮಿಯನ್ನು ದಲಿತರಿಗೆ ಅಧಿಕೃತವಾಗಿ ಹಸ್ತಾಂತರಿಸದಿದ್ದರೆ ಹೋರಾಟದ ಸಂಘರ್ಷದ ಹಾದಿಯನ್ನು ತುಳಿಯುವುದು ಅನಿವಾರ್ಯವಾಗಲಿದೆ. ತಮ್ಮ ತಾಳ್ಮೆಯ ಕಟ್ಟೆ ಒಡೆದರೆ ಮುಂದಾಗಬಹುದಾದ ಅನಾಹುತಗಳಿಗೆ ತಾಲೂಕು ಆಡಳಿತವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಶ್ರೀನಿವಾಸ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಚಿಕ್ಕಗಾಡಿಗನಹಳ್ಳಿ ಎನ್. ಪರಮೇಶ್, ನಿಂಗಯ್ಯ, ಶಶಿಕುಮಾರ್ ಕಲ್ಕುಣಿ, ಸಂತೋಷ್‌ಕುಮಾರ್, ನಾಟನಹಳ್ಳಿ ಸೋಮರಾಜು, ಮುತ್ತಯ್ಯ, ಸೊಂಬಯ್ಯ, ಮಾಯಿಗಯ್ಯ, ಸಿ.ಬಿ.ಸುನಿಲ್‌ಕುಮಾರ್, ತಮ್ಮಯ್ಯ, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ.

error: