April 26, 2024

Bhavana Tv

Its Your Channel

ಮಂಡ್ಯ ಜಿಲ್ಲೆಯ ಜನತೆಯಿಂದ ಹೇಮಾವತಿ ನದಿಯ ಮೂಲ ಉಳಿಸಿ ಅಭಿಯಾನ

ಕೆ.ಆರ್.ಪೇಟೆ: ನಾಡಿನ ಲಕ್ಷಾಂತರ ಜನರು ಬದುಕು ಕಟ್ಟಿಕೊಂಡು ಸಮೃದ್ಧ ಸ್ವಾಭಿಮಾನಿ ಜೀವನ ನಡೆಸಲು ಆಸರೆಯಾಗಿರುವ ನಾಡಿನ ಜೀವನದಿಯಾಗಿರುವ ಹೇಮಾವತಿ ನದಿಯ ಉಗಮ ಸ್ಥಾನವಾದ ಜಾವಳಿ’ಯನ್ನು ಕಾವೇರಿ ನದಿಯ ಉಗಮ ಸ್ಥಾನವಾದ ತಲಕಾವೇರಿಯ ಮಾದರಿಯಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಿ ತೀರ್ಥಕ್ಷೇತ್ರವನ್ನಾಗಿ ಮಾಡಲು ಸರ್ಕಾರದ ಗಮನ ಸೆಳೆಯಲು ಹೇಮಾವತಿ ನದಿಯ ಮೂಲ ಉಳಿಸಿ ಅಭಿಯಾನವನ್ನು ನಡೆಸಿ ಹೇಮಾವತಿ ನದಿಯ ನೀರಿನಿಂದ ಉಪಕಾರ ಪಡೆದಿರುವ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ಪಾಂಡವಪುರ, ನಾಗಮಂಗಲ ಸೇರಿದಂತೆ ಚಿಕ್ಕಮಗಳೂರು, ಹಾಸನ, ತುಮಕೂರು ಜಿಲ್ಲೆಯ ನೂರಾರು ರೈತರು ಸಮಾಜ ಸೇವಕ ಬಸ್ ಕೃಷ್ಣೇಗೌಡರ ನೇತೃತ್ವದಲ್ಲಿ ಜಾವಳಿಗೆ ತೆರಳಿ ತಾಯಿ ಹೇಮಾವತಿ ನದಿಯ ಮೂಲಸ್ಥಳಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು ….

ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿ ತಮಿಳುನಾಡು ಕರ್ನಾಟಕ ರಾಜ್ಯಗಳ ನೀರಿನ ಜಲ ವಿವಾಧದ ಜಗಳವು ಸುಖಾಂತ್ಯವಾಗಲು ಕಾವೇರಿ ನದಿಯ ನೀರಿನ ಜೊತೆಗೆ ತಾಯಿ ಹೇಮಾವತಿಯ ಪಾತ್ರವು ಅಪಾರವಾಗಿದೆ. ಮಲೆನಾಡಿನ ಪಶ್ಚಿಮ ಘಟ್ಟಗಳ ಮಧ್ಯದಲ್ಲಿರುವ ಮೂಡಿಗೆರೆ ತಾಲೂಕಿನಲ್ಲಿ ಹುಟ್ಟುವ ಪಂಚ ನದಿಗಳಲ್ಲಿ ಹೇಮಾವತಿ ನದಿಯ ನೀರಿನ ಕೊಡುಗೆಯು ಬಯಲು ಸೀಮೆಯ ರೈತರಿಗೆ ಅಪಾರವಾಗಿದೆ. ಕಾವೇರಿ ನದಿಯ ನೀರಿನ ಕೊಡುಗೆಯನ್ನು ಸ್ಮರಿಸುವ ಮೈಸೂರು, ಮಂಡ್ಯ, ಬೆಂಗಳೂರು ಭಾಗದ ರೈತರು ಸೇರಿದಂತೆ ರಾಜ್ಯದ ರಾಜಧಾನಿಯಾದ ಬೆಂಗಳೂರು ಮಹಾಜನತೆಗೆ ಕುಡಿಯುವ ನೀರನ್ನು ಸರಬರಾಜು ಮಾಡಲು ಬಳಸುವ ನೀರಿನಲ್ಲಿ ಹೇಮೆಯು ಕೊಡುಗೆಯು ಅಪಾರವಾಗಿದೆ. ಕಾವೇರಿ ನದಿಯ ಉಗಮಸ್ಥಾನವಾದ ತಲಕಾವೇರಿಯನ್ನು ಅಭಿವೃದ್ಧಿಪಡಿಸಿ ವರ್ಷಕ್ಕೊಮ್ಮೆ ನಡೆಯುವ ತುಲಾ ಸಂಕ್ರಮಣದAದು ತೀರ್ಥೋದ್ಭವವಾಗುವ ಸಮಯದಲ್ಲಿ ಲಕ್ಷಾಂತರ ಜನರು ಸೇರಿ ವಿಶೇಷವಾದ ಭಕ್ತಿ ನಮನವನ್ನು ಸಲ್ಲಿಸುತ್ತಿದ್ದಾರೆ. ತಲಕಾವೇರಿ ಇಂದು ರಾಜ್ಯ ಸರ್ಕಾರದ ವಿಶೇಷವಾದ ಆಸಕ್ತಿಯಿಂದಾಗಿ ಪವಿತ್ರ ತೀರ್ಥಕ್ಷೇತ್ರವಾಗಿ ಬದಲಾಗಿದೆ.
ಕಾವೇರಿ ನದಿಗೆ ಸರಿಸಮವಾಗಿ ಕನ್ನಂಬಾಡಿ ಕಟ್ಟೆಗೆ ನೀರನ್ನು ಹರಿಸುತ್ತಿರುವ ತಾಯಿ ಹೇಮಾವತಿಯು ಚಿಕ್ಕಮಗಳೂರು, ಹಾಸನ, ಮಂಡ್ಯ, ತುಮಕೂರು ಜಿಲ್ಲೆಯ ಕೆರೆ ಕಟ್ಟೆಗಳನ್ನು ತುಂಬಿಸಿ ಲಕ್ಷಾಂತರ ಜನರಿಗೆ ಕುಡಿಯಲು ನೀರುಣಿಸುವ ಜೊತೆಗೆ ಅಂತರ್ಜಲದ ಮರುಪೂರಣಕ್ಕೆ ಸಹಕಾರಿಯಾಗಿದೆ. ಹೇಮಾವತಿ ನದಿಯ ನೀರನ್ನು ಕಾಲುವೆಗಳ ಮೂಲಕ ಕೆರೆ ಕಟ್ಟೆಗಳಿಗೆ ಹರಿಸಿ ತುಂಬಿಸುತ್ತಿರುವುದರಿAದ ಕುಡಿಯುವ ನೀರಿಗೆ ಹಾಗೂ ರೈತರ ಕೃಷಿ ಚಟುವಟಿಕೆಗಳಿಗೆ ಶಾಶ್ವತವಾದ ಪರಿಹಾರವು ದೊರಕಿದೆ.
ಕಾವೇರಿ ನದಿಯ ಉಗಮ ಸ್ಥಾನವಾದ ತಲಕಾವೇರಿಗೆ ಹೋಲಿಸಿದರೆ ಹೇಮಾವತಿ ನದಿಯ ಮೂಲವು ಸಂಪೂರ್ಣವಾಗಿ ನಿರ್ಲಕ್ಷಕ್ಕೆ ಒಳಗಾಗಿದೆಯಲ್ಲದೇ ಹೇಮಾವತಿ ನದಿಯ ಉಗಮ ಸ್ಥಳದ ಮಾಹಿತಿಯ ಬಗ್ಗೆ ಹೇಮೆಯಿಂದ ಬದುಕು ಕಟ್ಟಿಕೊಂಡಿರುವ ನಮಗೆ ತಿಳಿಯದಿರುವುದು ಮಾತ್ರ ವಿಪರ್ಯಾಸದ ಸಂಗತಿಯಾಗಿದೆ.

ಹೇಮಾವತಿ ನದಿಯ ಮೂಲವನ್ನು ನಾವು ರಕ್ಷಿಸಿ ಜೋಪಾನ ಮಾಡದಿದ್ದರೆ ಮುಂದಿನ ದಿನಗಳಲ್ಲಿ ನಾವು ಕುಡಿಯುವ ನೀರಿಗೆ ಹಾಗೂ ಬೇಸಾಯಕ್ಕೆ ತೊಂದರೆಗೆ ಒಳಗಾಗುವುದು ನಿಶ್ಚಿತವಾಗಿದೆ. ಆದ್ದರಿಂದ ಹೇಮಾವತಿ ನದಿಯ ಉಗಮ ಸ್ಥಳವಾದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪಶ್ಚಿಮಘಟ್ಟದಲ್ಲಿರುವ ಜಾವಳಿಯನ್ನು ತಲಕಾವೇರಿಯ ಮಾದರಿಯಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಿ ತೀರ್ಥಕ್ಷೇತ್ರವನ್ನಾಗಿ ಮಾಡಿ ಲಕ್ಷಾಂತರ ಜನರು ಬಂದು ಹೇಮಾವತಿ ನದಿಯ ಉಗಮ ಸ್ಥಳವನ್ನು ಬಂದು ನೋಡಿಕೊಂಡು ಹೋಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಗಮನ ಸೆಳೆಯುವುದು. ಹೇಮಾವತಿ ನದಿ ನೀರಿನ ವಿಚಾರಗಳನ್ನು ಸಮಗ್ರವಾಗಿ ತಿಳಿದಿರುವ ತಜ್ಞರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಹಾಗೂ ಮುಖ್ಯ ಮಂತ್ರಿಗಳಾದ ಬಸವರಾಜಬೊಮ್ಮಾಯಿ ಅವರನ್ನು ನದಿಯ ಉಗಮ ಸ್ಥಳಕ್ಕೆ ಕರೆಸಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಸಮಾಲೋಚನೆ ನಡೆಸಿ ಕ್ರಿಯಾಯೋಜನೆಯ ವರದಿಯನ್ನು ಸಲ್ಲಿಸಲು ಹೇಮಾವತಿ ನದಿ ಉಗಮ ಸ್ಥಾನ ಸಂರಕ್ಷಣಾ ಬಳಗದ ಅಧ್ಯಕ್ಷರಾದ ಬಿ.ಆರ್.ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಿ ಹೇಮಾವತಿ ನದಿಯು ಹರಿದು ಹೋಗಿರುವ ಕಾವೇರಿ ಕೊಳ್ಳದ ರೈತರು ಹಾಗೂ ಮುಖಂಡರ ಸಭೆ ನಡೆಸಿ ಸಾಧಕ ಭಾದಕಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಮೂಡಿಗೆರೆ ತಾಲೂಕಿನ ಎಪಿಎಂಸಿ ಸಭಾಂಗಣದಲ್ಲಿ ಹೇಮಾವತಿ ನದಿಯ ಉಗಮಸ್ಥಾನ ಸಂರಕ್ಷಣಾ ವೇದಿಕೆ ಹೋರಾಟ ಅಭಿಯಾನ ಬಳಗದ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯನ್ನು ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಹೇಮಾವತಿ ನದಿಯ ಮೂಲ ಉಳಿಸಿ ಅಭಿಯಾನದ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ. ನಾವು ತಡವಾಗಿ ಎಚ್ಚೆತ್ತು ಕೊಂಡಿದ್ದೇವೆ. ನಾಡಿನ ಎರಡು ಪ್ರಮುಖ ಜೀವ ನದಿಗಳಾದ ಕಾವೇರಿ ಹೇಮಾವತಿ ನದಿಗಳು ತಮಿಳುನಾಡಿನ ನೀರಿನ ವಿವಾಧವನ್ನು ಬಗೆ ಹರಿಸುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರೂ ರಾಜ್ಯ ಸರ್ಕಾರವು ಕಾವೇರಿ ನದಿ ಮೂಲವನ್ನು ಅಭಿವೃದ್ಧಿಪಡಿಸಿ ಹೇಮಾವತಿ ನದಿಯ ಉಗಮ ಸ್ಥಳಕ್ಕೆ ಕಾಯಕಲ್ಪ ನೀಡದೇ ನಿರ್ಲಕ್ಷ್ಯವಹಿಸಿದೆ. ಈ ಬಗ್ಗೆ ಸಂಘಟಿತ ಹೋರಾಟವನ್ನು ನಾವು ನಡೆಸಲೇಬೇಕಾಗಿದೆ. ಹೇಮಾವತಿ ನದಿ ಉಗಮಸ್ಥಳ ಅಭಿವೃದ್ಧಿ ಹೋರಾಟ ಸಮಿತಿಯ ಎಲ್ಲಾ ಹೋರಾಟಗಳಿಗೆ ನನ್ನ ಸಂಪೂರ್ಣವಾದ ಬೆಂಬಲವಿದೆ ಎಂದು ಘೋಷಿಸಿದ ಶಾಸಕ ಕುಮಾರಸ್ವಾಮಿ ತಾಯಿ ಹೇಮಾವತಿಯು ಮಳೆಗಾಲದ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಜನತೆಗೆ ತೊಂದರೆ ನೀಡಿ ಆಸ್ತಿಪಾಸ್ತಿ ಹಾನಿ ಮಾಡಿದರೂ ರಾಜ್ಯದ ಆರು ಜಿಲ್ಲೆಗಳ ಲಕ್ಷಾಂತರ ಕುಟುಂಬಗಳಿಗೆ ಬಾಗ್ಯದ ಬಾಗಿಲು ತೆರೆದು ಅನುಕೂಲ ಮಾಡಿಕೊಟ್ಟಿದ್ದಾಳೆ. ಪಂಚ ನದಿಗಳ ಉಗಮ ಸ್ಥಳವಾದ ಮೂಡಿಗೆರೆ ತಾಲೂಕಿಗೆ ರಾಜ್ಯದ ಜನತೆಗೆ ಅನುಕೂಲ ಮಾಡುವ ಅವಕಾಶ ಸಿಕ್ಕಿದೆ ಇದಕ್ಕಾಗಿ ನಾನು ಸಂತೋಷಪಡುತ್ತೇನೆ ಎಂದು ತಿಳಿಸಿದ ಅವರು ಹೇಮಾವತಿ ನದಿಯ ಉಗಮಸ್ಥಾನದ ಅಭಿವೃದ್ಧಿಗಾಗಿ ಯಾವುದೇ ಹೋರಾಟಕ್ಕೆ ಸಿದ್ಧನಿದ್ದೇನೆ ಎಂದು ಘೋಷಿಸಿದರು.

ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ವಿಧಾನಪರಿಷತ್ ಮಾಜಿ ಉಪಸಭಾಪತಿಗಳು ಹಾಗೂ ವಿಧಾನಪರಿಷತ್ ಸದಸ್ಯರಾದ ಪ್ರಾಣೇಶ್ ಮಾತನಾಡಿ ಹೇಮಾವತಿ ನದಿಯ ಉಗಮಸ್ಥಾನವನ್ನು ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸುವುದು ನಮ್ಮ ಹಕ್ಕಾಗಿದೆ. ಹೇಮಾವತಿ ನದಿಯ ನೀರಿನಿಂದ ಅನುಕೂಲಹೊಂದಿರುವ ಮಂಡ್ಯ, ಹಾಸನ, ತುಮಕೂರು ಜಿಲ್ಲೆಯ ರೈತರು ಈ ಹೋರಾಟದಲ್ಲಿ ಭಾಗವಹಿಸಿರುವುದನ್ನು ಗಮನಿಸಿದಾಗ ಸಮಾಜಸೇವಕರಾದ ಬಸ್ ಕೃಷ್ಣೇಗೌಡರು ಮತ್ತು ಹೇಮಾವತಿ ನದಿಯ ಮೂಲ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷರಾದ ಬಾಲಣ್ಣ ಅವರಿಗೆ ಯಶಸ್ಸು ಸಿಗುವುದು ಕಂಡುಬರುತ್ತಿದೆ. ಸಂಘಟಿತ ಹೋರಾಟಕ್ಕೆ ಎಂದಿಗೂ ಜಯವಿದೆ. ರಾಜ್ಯ ಸರ್ಕಾರದ ಕಣ್ತೆರೆಸುವ ಕೆಲಸ ಮಾಡುತ್ತಿರುವ ಹೋರಾಟ ಸಮಿತಿಗೆ ಹೆಚ್ಚು ಜನರು ಸದಸ್ಯರಾಗುವ ಮೂಲಕ ಹೇಮಾವತಿ ನದಿ ಮೂಲ ಉಳಿಸಿ ಅಭಿಯಾನಕ್ಕೆ ಶಕ್ತಿತುಂಬುವ ಕೆಲಸವನ್ನು ನಾಗರಿಕ ಸಮಾಜದ ಪ್ರತಿಯೊಬ್ಬರೂ ಮಾಡಬೇಕು ಎಂದು ಮನವಿ ಮಾಡಿದ ಪ್ರಾಣೇಶ್ ಸ್ವತಃ ತಾವೇ ನದಿಮೂಲ ಉಳಿಸಿ ಅಭಿಯಾನದ ಸದಸ್ಯತ್ವವನ್ನು ಪಡೆಯುವ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಹೋರಾಟ ನ್ಯಾಯಯುತವಾಗಿದೆ, ನಮ್ಮ ಬೆಂಬಲ ನಿಮಗಿದೆ. ತಲಕಾವೇರಿ ಮಾದರಿಯಲ್ಲಿ ಹೇಮಾವತಿ ನದಿಯ ಉಗಮ ಸ್ಥಾನವು ಅಭಿವೃದ್ಧಿಯಾಗಿ ಲಕ್ಷಾಂತರ ಜನರು ಬಂದುಹೋಗುವ ತೀರ್ಥಕ್ಷೇತ್ರವಾಗಿ ಜಾವಳಿಯು ಉನ್ನತ ಮಟ್ಟ ತಲುಪಬೇಕು ಎಂದು ಶುಭ ಹಾರೈಸಿದರು.

ಹೇಮಾವತಿ ನದಿ ಉಗಮಸ್ಥಾನ ಉಳಿಸಿ ಹೋರಾಟ ಸಮಿತಿಯ ಮಂಡ್ಯ ಜಿಲ್ಲಾ ಸಂಚಾಲಕರಾದ ಬಸ್ ಕೃಷ್ಣೇಗೌಡ ಮಾತನಾಡಿ ಜ್ಯೋತಿಷಿಗಳು ಹಾಗೂ ವಿದ್ವಾಂಸರ ಬಳಿ ಹೋಗಿ ಅಷ್ಟಮಂಗಳ ಪ್ರಶ್ನೆಹಾಕಿಸಿ ಹೇಮಾವತಿ ನದಿಯ ತೀರ್ಥೋದ್ಭವದ ಸಮಯವನ್ನು ನಿಗದಿಪಡಿಸಿದ ನಂತರ ನಾವು ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಬೇಕಿದೆ. ನೀರಾವರಿ ತಜ್ಞರಾದ ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರ ಸಲಹೆ ಸೂಚನೆಗಳು ಹಾಗೂ ಮಾರ್ಗದರ್ಶನವನ್ನು ಪಡೆದುಕೊಂಡ ನಂತರ ಮುಂದಿನ ಹೋರಾಟದ ಹೆಜ್ಜೆಗಳನ್ನು ನಿರ್ಧರಿಸೋಣ, ಅಲ್ಲಿಯವರೆಗೆ ಹೇಮಾವತಿ ನದಿಯ ನೀರು ಹರಿದು ಅನುಕೂಲವಾಗಿರುವ ಜಿಲ್ಲೆಗಳ ಎಲ್ಲಾ ತಾಲೂಕುಗಳಲ್ಲಿ ಸಭೆಗಳನ್ನು ನಡೆಸಿ ಜನ-ಜಾಗೃತಿ ಮೂಡಿಸೋಣ ಕಾವೇರಿ ನದಿಯ ಉಗಮಸ್ಥಾನಕ್ಕೆ ಸಿಗುವ ಗೌರವವು ಹೇಮಾವತಿ ನದಿಯ ಉಗಮಸ್ಥಾನಕ್ಕೂ ಸಿಗಲೇಬೇಕು. ಪವಿತ್ರ ತೀರ್ಥಕ್ಷೇತ್ರವಾಗಿ ಹೇಮಾವತಿ ನದಿ ಉಗಮಸ್ಥಾನ ಅಭಿವೃದ್ಧಿ ಯಾಗಬೇಕು. ನಮ್ಮ ಹೋರಾಟವು ನಿರಂತರವಾಗಿರಬೇಕು. ಹೇಮಾವತಿ ನದಿಯ ನೀರಿನಿಂದ ಅನುಕೂಲ ಪಡೆದವರು ತಪ್ಪದೇ ಹೋರಾಟ ಸಮಿತಿಯ ಸದಸ್ಯತ್ವ ಪಡೆದುಕೊಂಡು ಸಕ್ರಿಯವಾಗಿ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕೃಷ್ಣೇಗೌಡ ಮನವಿ ಮಾಡಿದರು.

ಹೇಮಾವತಿ ನದಿಯ ಉಗಮ ಸ್ಥಾನ ಉಳಿಸಿ ಸಂರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಮಾತನಾಡಿ ಹೇಮಾವತಿ ನದಿಯ ಉಗಮಸ್ಥಾನವು ಅಭಿವೃದ್ಧಿಯಾಗುವ, ತಾಯಿ ಹೇಮಾವತಿಗೆ ಭಕ್ತಿ ಗೌರವಗಳನ್ನು ಸಲ್ಲಿಸುವ ಸಮಯವು ಸಮೀಪಿಸುತ್ತಿದೆ. ಮಂಡ್ಯ ಜಿಲ್ಲೆಯ ರೈತರು ಹೋರಾಟಕ್ಕಿಳಿದರೆ ನ್ಯಾಯ ದೊರೆಯುವುದು ನಿಶ್ಚಿತವಾಗಿದೆ.
ಹೇಮಾವತಿ ನದಿಯ ಉಗಮಸ್ಥಾನ ಉಳಿಸಿ ಹೋರಾಟಕ್ಕೆ ಶಕ್ತಿತುಂಬಿದ ಸಮಾಜಸೇವಕರಾದ ಕೃಷ್ಣೇಗೌಡ ಹಾಗೂ ವಿಠಲಾಪುರ ಸುಬ್ಬೇಗೌಡ ಅವರಿಗೆ ತಾವು ಸದಾ ಋಣಿಯಾಗಿರುವುದಾಗಿ ತಿಳಿಸಿದ ಬಾಲಣ್ಣ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಧ್ಯದಲ್ಲಿಯೇ ಕುಳಿತು ಚರ್ಚೆ ಮಾಡೋಣ, ಹೇಮಾವತಿ ನದಿಯು ಹರಿಯುವ ಎಲ್ಲಾ ಜಿಲ್ಲೆಗಳ ತಾಲೂಕು ಕೇಂದ್ರಗಳಲ್ಲಿ ಜಾಗೃತಿ ಸಭೆಗಳನ್ನು ನಡೆಸುವ ಮೂಲಕ ನಮ್ಮ ಹೋರಾಟಕ್ಕೆ ಶಕ್ತಿತುಂಬೋಣ, ಮಾಜಿಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮುಂದಿನ ಕಾರ್ಯಕ್ರಮದ ದಿನಾಂಕ ನಿಗಧಿಪಡಿಸೋಣ ಎಂದು ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಶಕ್ತಿತುಂಬಿದ ಸರ್ವರಿಗೂ ಕೃತಜ್ಞತೆಗಳನ್ನು ಸಮರ್ಪಿಸಿದರು..

ಹೇಮಾವತಿ ನದಿಯ ಉಗಮಸ್ಥಾನ ಉಳಿಸಿ ಹೋರಾಟ ಸಮಿತಿಯ ಸಮಾಲೋಚನಾ ಸಭೆಯಲ್ಲಿ ರೈತಮುಖಂಡರು, ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು, ನೀರಾವರಿ ತಜ್ಞರು ಸೇರಿದಂತೆ ಪ್ರಗತಿಪರ ರೈತರು, ಸಮಾಜ ಸೇವಕರು ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: