April 29, 2024

Bhavana Tv

Its Your Channel

ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ

ಕೃಷ್ಣರಾಜಪೇಟೆ :- ವಿದ್ಯಾರ್ಥಿಗಳು ಸಾಧಿಸುವ ಛಲವನ್ನು ಮೈಗೂಡಿಸಿಕೊಂಡು ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಗುರಿಸಾಧನೆಯತ್ತ ಹೆಜ್ಜೆ ಹಾಕಬೇಕು ಎಂದು ಮಾಜಿಶಾಸಕ ಬಿ.ಪ್ರಕಾಶ್ ಕರೆ ನೀಡಿದರು ..

ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಕೆಪಿಎಸ್ ಶಾಲೆಯ ಪ್ರೌಢಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು..

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರಲ್ಲಿ ಕನ್ನಡ ನೆಲ, ಜಲ ಮತ್ತು ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ಕೆಲಸ ಮಾಡುತ್ತಾ ಕನ್ನಡಿಗರಲ್ಲಿ ಜಾಗೃತವಾಗಿರುವ ಕನ್ನಡಾಭಿಮಾನವನ್ನು ಬಡಿದೆಬ್ಬಿಸುತ್ತಿದೆ. ಶಾಲಾ ಕಾಲೇಜುಗಳಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡಮ್ಮನ ತೇರನ್ನು ಎಳೆಯುವ, ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದು ಅಭಿಮಾನದಿಂದ ಹೇಳಿದ ಪ್ರಕಾಶ್ ನಾವು ಮಾಡುವ ಯಾವುದೇ ಕೆಲಸವು ಕೀಳಲ್ಲ, ಆದರೆ ನಾವು ಮಾಡುವ ಕೆಲಸದ ಮೇಲೆ ಶ್ರದ್ಧೆ ಹಾಗೂ ಭಕ್ತಿಯನ್ನು ಇಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಾಕು ನಾವು ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯವಿದೆ. ಬರಿಗೈನಲ್ಲಿ ಬಾಲ್ಯದಲ್ಲಿ ಮುಂಬೈ ಮಹಾನಗರಕ್ಕೆ ಹೋದ ಸಚಿವ ನಾರಾಯಣಗೌಡ ಅವರು ಕಷ್ಟಪಟ್ಟು ಸತತವಾಗಿ ಪರಿಶ್ರಮದಿಂದ ಸಂಪಾದನೆ ಮಾಡಿ ಇಂದು ಯಶಸ್ವಿ ಉದ್ಯಮಿಗಳಾಗಿ ಜನಪ್ರತಿನಿಧಿಯಾಗಿ ರಾಜ್ಯದ ಸಚಿವರಾಗುವ ಮಟ್ಟಕ್ಕೆ ಬೆಳೆದಿರುವುದೇ ಸಾಕ್ಚಿಯಾಗಿದೆ ಎಂದು ಹೇಳಿದ ಮಾಜಿಶಾಸಕರು ನಮ್ಮ ತಂದೆತಾಯಿಗಳ ಹೆಸರಿನಲ್ಲಿ ಸಾಹಿತ್ಯ ಪರಿಷತ್ತಿನಲ್ಲಿಟ್ಟಿರುವ ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ಇಂದು ನಾನೇ ಅತಿಥಿಯಾಗಿ ಭಾಗವಹಿಸಿರುವುದು ಸಂತೋಷ ತಂದಿದೆ. ವಿದ್ಯಾರ್ಥಿಗಳು ತಂದೆತಾಯಿಗಳು ಹಾಗೂ ಗುರುಹಿರಿಯರನ್ನು ಗೌರವಿಸಿ ಶ್ರಧ್ಧಾಭಕ್ತಿಯಿಂದ ಕಾಣಬೇಕು. ವಿನಯವಂತಿಕೆ ಹಾಗೂ ಶಿಸ್ತುಸಂಯಮವು ಜೀವನದ ಉಸಿರಾಗಬೇಕು ಎಂದು ಕರೆ ನೀಡಿದರು…

ಮಂಡ್ಯ ಜಿಲ್ಲೆಯ ಗ್ರಾಮೀಣ ಜನರ ಸಮಸ್ಯೆಗಳನ್ನು ಕುರಿತು ದತ್ತಿ ಉಪನ್ಯಾಸ ನೀಡಿದ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಹುಲ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಡಾ.ಬಿ.ಸಿ.ವಿಜಯಕುಮಾರ್ ಮಾತನಾಡಿ ದೇಶಕ್ಕೆ ಸ್ವಾತಂತ್ರ‍್ಯ ಬಂದು 75 ವರ್ಷಗಳು ಕಳೆಯುತ್ತಿದ್ದರೂ ಗ್ರಾಮೀಣ ಜನರ ಸಮಸ್ಯೆಗಳು ಇಂದಿಗೂ ಪರಿಹಾರವಾಗಿಲ್ಲ. ಶುದ್ಧ ಕುಡಿಯುವ ನೀರು, ಗ್ರಾಮೀಣ ಸಾರಿಗೆ ವ್ಯವಸ್ಥೆ ಹಾಗೂ ಉತ್ತಮವಾದ ರಸ್ತೆಗಳು ಗಗನಕುಸುಮವಾಗಿಯೇ ಉಳಿದಿವೆ. ರೈತನು ಬೆಳೆದ ಬೆಳೆಗಳಿಗೆ ವೈಜ್ಞಾನಿಕವಾದ ಬೆಲೆಸಿಗದೇ ಅನ್ನದಾತನಾದ ರೈತನು ಸಂಕಷ್ಠದಲ್ಲಿದ್ದಾನೆ. ಸರ್ವರಿಗೂ ಸಮಾನ ಶಿಕ್ಷಣ ಎನ್ನುವುದು ಮರೀಚಿಕೆಯಾಗಿದೆ. ಅಂಕಗಳಿಕೆಯೇ ಮುಖ್ಯ ಎನ್ನುವ ಇಂದಿನ ದಿನಮಾನದಲ್ಲಿ ಶಿಕ್ಷಣವು ಮಾರಾಟದ ಸರಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ವಿಜಯಕುಮಾರ್ ಸರ್ಕಾರಿ ಶಾಲೆಗಳು ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಖಾಸಗಿ ಶಾಲೆಗಳಿಗೆ ತೀವ್ರಪೈಪೋಟಿ ನೀಡುತ್ತಾ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಯುವ ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿವೆ. ಗ್ರಾಮೀಣ ಜನರು ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯ ಮೂಲಕ ಅನ್ಯಾಯ ಅಕ್ರಮಗಳ ವಿರುದ್ಧ ಹೋರಾಟ ನಡೆಸುವ ಮನೋಭಾವನೆಯನ್ನು ಬೆಳೆಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಕೆಪಿಎಸ್ ಪ್ರೌಢಶಾಲಾ ಕನ್ನಡ ಶಿಕ್ಷಕರಾದ ಎಂ.ನAಜಪ್ಪ ಅವರು ಮಹಾಕವಿ ಕುಮಾರವ್ಯಾಸನನ್ನು ಕುರಿತು ವಿಶೇಷ ಉಪನ್ಯಾಸ ನೀಡಿ ಕುಮಾರವ್ಯಾಸನ ಸಾಹಿತ್ಯಸುಧೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು…

ತಾಲ್ಲೂಕು ಶಿಕ್ಷಣ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ದೊರೆಸ್ವಾಮಿ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸಿ.ಎನ್.ಯತೀಶ್, ತಾಲ್ಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸವಿತಾರಮೇಶ್ ಕನ್ನಡ ನಾಡು-ನುಡಿ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿವೃತ್ತ ಕನ್ನಡ ಶಿಕ್ಷಕ ಚಾಶಿ ಜಯಕುಮಾರ್, ಕಸಾಪ ಪ್ರಧಾನ ಕಾರ್ಯದರ್ಶಿ ಕೆ.ಪಿ.ಬೋರೇಗೌಡ, ಕಟ್ಟೆಕ್ಯಾತನಹಳ್ಳಿ ಮಹೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಪ್ರಾಸ್ತಾವಿಕ ಮಾತನಾಡಿದ ಕಸಾಪ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಕನ್ನಡ ಸಾಹಿತಿಗಳು ಹಾಗೂ ಕನ್ನಡ ನೆಲಜಲದ ಬಗ್ಗೆ ಅಭಿಮಾನ ಮೂಡಿಸುವ ಕೆಲಸ ಮಾಡುತ್ತಿದೆ. ದತ್ತಿ ಉಪನ್ಯಾಸಗಳ ಮೂಲಕ ನಮ್ಮ ನೆಲದ ಪ್ರತಿಭೆಗಳನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು…

ಕೆಪಿಎಸ್ ಪ್ರೌಢಶಾಲೆಯ ಉಪಪ್ರಾಂಶುಪಾಲ ಹೆಚ್.ವಿ.ತಿಮ್ಮೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಕರಾದ ವೇದಾವತಿ ಸ್ವಾಗತಿಸಿದರು, ರಾಘವೇಂದ್ರ ವಂದಿಸಿದರು, ಕೃಷ್ಣೇಗೌಡ ಮತ್ತು ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: