April 28, 2024

Bhavana Tv

Its Your Channel

ಕಿತ್ತೂರರಾಣಿ ಚೆನ್ನಮ್ಮ ವಸತಿಶಾಲೆಯಲ್ಲಿ ಗಿಡ ನೆಡುವ ಆಂದೋಲನ, ..150ಕ್ಕೂ ಹೆಚ್ಚಿನ ವಿವಿಧ ಹೂವು ಮತ್ತು ಹಣ್ಣಿನ ಸಸಿಗಳನ್ನು ನೆಟ್ಟು ಸಂಭ್ರಮಿಸಿದ ವಿದ್ಯಾರ್ಥಿನಿಯರು

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಶೆಟ್ಟನಾಯಕನಕೊಪ್ಪಲು ಕಿತ್ತೂರರಾಣಿ ಚೆನ್ನಮ್ಮ ವಸತಿಶಾಲೆಯಲ್ಲಿ ಮೈಸೂರಿನ ಪರಿಸರ ಬಳಗದಿಂದ ಗಿಡ ನೆಡುವ ಆಂದೋಲನ..150ಕ್ಕೂ ಹೆಚ್ಚಿನ ವಿವಿಧ ಹೂವು ಮತ್ತು ಹಣ್ಣಿನ ಸಸಿಗಳನ್ನು ನೆಟ್ಟು ಸಂಭ್ರಮಿಸಿದ ವಿದ್ಯಾರ್ಥಿನಿಯರು..ಪರಿಸರ ಸಂರಕ್ಷಣೆಗೆ ಪಣತೊಟ್ಟ ವಿದ್ಯಾರ್ಥಿಗಳು .. ಮೈಸೂರಿನ ಪರಿಸರ ಬಳಗ ಹಾಗೂ ಕೋಟಿವೃಕ್ಷ ಪ್ರತಿಷ್ಠಾನದಿಂದ ವಿಶಿಷ್ಠ ಕಾರ್ಯ. ಪರಿಸರ ಜಾಗೃತಿಗೆ ಪ್ರೇರಕವಾದ ಗಿಡನೆಡುವ ಆಂದೋಲನ ..

ಗಿಡಮರಗಳನ್ನು ನೆಟ್ಟು ಮಕ್ಕಳಂತೆ ಜೋಪಾನ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ನಾಗರೀಕ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು. ಕಾಡಿದ್ದರೆ ನಾಡು, ಕಾಡಿನಿಂದ ಮಳೆ-ಬೆಳೆ ಎಂಬ ಸತ್ಯ ಅರಿಯಬೇಕು ಎಂದು ನಾಡಿನ ಖ್ಯಾತ ಜಾನಪದ ಸಂಶೋಧಕ, ಚಿಂತಕ ಡಾ.ಕಾಳೇಗೌಡ ನಾಗವಾರ ಹೇಳಿದರು..

ಅವರು ಕೃಷ್ಣರಾಜಪೇಟೆ ತಾಲ್ಲೂಕಿನ ಶೆಟ್ಟನಾಯಕನಕೊಪ್ಪಲು ಗ್ರಾಮದಲ್ಲಿರುವ ಕಿತ್ತೂರರಾಣಿ ಚೆನ್ನಮ್ಮ ವಸತಿಶಾಲೆಯ ಆವರಣದಲ್ಲಿ ಮೈಸೂರಿನ ಪರಿಸರ ಬಳಗ ಹಾಗೂ ಕೋಟಿವೃಕ್ಷ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿನಿಯರೊಂದಿಗೆ 150ಕ್ಕೂ ಹೆಚ್ಚಿನ ವಿವಿಧ ಬಗೆಯ ಹೂವು ಮತ್ತು ಹಣ್ಣಿನ ಸಸಿಗಳನ್ನು ನೆಟ್ಟು ಮಾತನಾಡಿದರು..

ಮಾನವರಾದ ನಾವು ಕಾಡನ್ನು ನಾಶಮಾಡಿ, ಮರಗಳನ್ನು ಕಡಿದು ಪರಿಸರದ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸಿ ದೌರ್ಜನ್ಯ ಮಾಡಿ ಪರಿಸರವನ್ನು ಹಾಳು ಮಾಡುತ್ತಿರುವುದರಿಂದ ಕಾಲ ಕಾಲಕ್ಕೆ ಮಳೆಯಾಗದೇ ಸಂಕಷ್ಠವನ್ನು ಎದುರಿಸುತ್ತಿದ್ದೇವೆ. ಪರಿಸರ ನಾಶದಿಂದ ನಾವು ಸೇವಿಸುವ ಗಾಳಿ, ಕುಡಿಯುತ್ತಿರುವ ನೀರು, ತಿನ್ನುತ್ತಿರುವ ಆಹಾರ ಸೇರಿದಂತೆ ನಾವು ವಾಸ ಮಾಡುತ್ತಿರುವ ಪ್ರದೇಶವೆಲ್ಲವೂ ಕಲುಷಿತವಾಗುತ್ತಿದೆ.

ಅಶುದ್ಧವಾದ ಗಾಳಿ ಹಾಗೂ ಆಹಾರ ಸೇವನೆಯಿಂದ ನಾವು ರೋಗರುಜಿನಗಳಿಗೆ ತುತ್ತಾಗಿ ಸಂಕಷ್ಟಗಳನ್ನು ಎದುರಿಸುತ್ತಿದ್ದೇವೆ. ನೂರು ವರ್ಷಗಳ ಕಾಲ ಬದುಕಿ ಜೀವನ ನಡೆಸಬೇಕಾದ ಮಾನವನು ಕೇವಲ ಅರ್ಧ ವಯಸ್ಸಿಗೆ ಹೃದಯಾಘಾತ, ಕ್ಯಾನ್ಸರ್, ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಯಿಂದ ಅಕಾಲಿಕವಾಗಿ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಮಾನವರಾದ ನಾವು ಅನಾಹುತವು ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದು ಮನವಿ ಮಾಡಿದ ನಾಗವಾರ ನಾವು ಉಸಿರಾಡಲು ಬೇಕಾಗಿರುವ ಶುದ್ಧವಾದ ಗಾಳಿಯು ಗಿಡಮರಗಳಲ್ಲಿ ದೊರೆಯುವುದರಿಂದ ನಾವೆಲ್ಲರೂ ನಮ್ಮ ಹಿರಿಯರ ನಾಣ್ಣುಡಿಯಂತೆ ಮನೆಗೆರಡು ಮರ, ಊರಿಗೊಂದು ವನ ಎಂಬ ಸಂದೇಶವನ್ನು ಅನುಷ್ಠಾನಗೊಳಿಸಬೇಕು. ಗಿಡಮರಗಳನ್ನು ನೆಟ್ಟು ಮಕ್ಕಳಂತೆ ಜೋಪಾನ ಮಾಡಬೇಕು. ಈದಿಕ್ಕಿನಲ್ಲಿ ಮಕ್ಕಳಿಗೆ ಪರಿಸರ ಜಾಗೃತಿಗೊಳಿಸಲು ಮೈಸೂರಿನಿಂದ ಕೃಷ್ಣರಾಜಪೇಟೆ ತಾಲ್ಲೂಕಿಗೆ ಆಗಮಿಸಿ ವಸತಿ ಶಾಲೆಯ ಮಕ್ಕಳೊಂದಿಗೆ ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದರು…

ಮೈಸೂರಿನ ಪರಿಸರ ಬಳಗದ ಸಂಸ್ಥಾಪಕ ಸದಸ್ಯ ಪರಶುರಾಮೇಗೌಡ ಮಾತನಾಡಿ ಪರಿಸರ ನಾಶವು ನಮ್ಮ ಜೀವನ ಹಾಗೂ ವಾತಾವರಣದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅತಿಯಾದ ಬಿಸಿಲಿನಿಂದ ಓಜೋನ್ ಪದರದಲ್ಲಿ ಏರುಪೇರಾಗಿ ಹಿಮಪರ್ವತಗಳು ಕರಗಿ ಸಣ್ಣ ಪುಟ್ಟ ದ್ವೀಪಗಳು ಮುಳುಗುತ್ತಿವೆ. ಪರಿಸರವು ಹಾಳಾಗುತ್ತಿರುವುದರಿಂದ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ನಾವು ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆಯ ಮೂಲ ಭಾಗವಾಗಿರುವ ಗಿಡಮರಗಳನ್ನು ರಕ್ಷಿಸುವ ಜೊತೆಗೆ ಹೊಸದಾಗಿ ಸಸಿಗಳನ್ನು ನೆಟ್ಟು ಬೆಳೆಸುವ ದೀಕ್ಷೆಯನ್ನು ತೊಡಬೇಕಾಗಿದೆ ಎಂದು ಹೇಳಿದರು..

ಸಸಿ ನೆಡುವ ಕಾರ್ಯಕ್ರಮದ ನೇತೃತ್ವವನ್ನು ರಾಜ್ಯ ರೈತಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಜಯರಾಂ, ಸಾಮಾಜಿಕ ಕಾರ್ಯಕರ್ತರಾದ ಲೀಲಾ ಶಿವಕುಮಾರ್, ಗಂಟಯ್ಯ, ಲೋಲಕುಮಾರ್, ಪ್ರಭಾನಂದೀಶ್, ಸುಗುಣ, ಸುಶೀಲಾ, ಪ್ರಧ್ಯಾಪಕರಾದ ಕೆರಗೋಡು ಪ್ರಸನ್ನ, ಅಂಕಣಗಾರ್ತಿ ಕುಸುಮ ಆಯರಹಳ್ಳಿ, ಕಿತ್ತೂರರಾಣಿ ಚೆನ್ನಮ್ಮ ವಸತಿಶಾಲೆಯ ಪ್ರಾಂಶುಪಾಲರಾದ ಪವಿತ್ರ, ಸಂತೆಬಾಚಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಆರ್.ಎಸ್.ಪದ್ಮನಾಭ, ನಿಲಯಪಾಲಕಿ ಆಮಿನಾಬಾನು, ಪತ್ರಕರ್ತ ಸೈಯ್ಯದ್ ಖಲೀಲ್ ಸೇರಿದಂತೆ ಪರಿಸರ ಬಳಗದ ಐವತ್ತಕ್ಕೂ ಹೆಚ್ಚು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ .

error: