October 5, 2024

Bhavana Tv

Its Your Channel

ವಿಶ್ವಕರ್ಮ ಯುವಮಿಲನ್ ತಾಲೂಕು ಘಟಕ ಉದ್ಘಾಟಿಸಿ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ

ಕೃಷ್ಣರಾಜಪೇಟೆ:– ಪಂಚ ಶ್ರೇಷ್ಠ ಕಸುಬುಗಳನ್ನು ಮಾಡುವ ವಿಶ್ವಕರ್ಮ ಸಮಾಜದ ಬಂಧುಗಳು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಿ ಸಂಘಟಿತರಾಗಿ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಬೇಕು ಎಂದು ವಿಶ್ವಕರ್ಮ ಯುವಮಿಲನ್ ರಾಜ್ಯಾಧ್ಯಕ್ಷ ವಿಕ್ರಮ್ ಐ ಆಚಾರ್ಯ ಮನವಿ ಮಾಡಿದರು .

ಕೆ.ಆರ್.ಪೇಟೆ ಪಟ್ಟಣದ ನಾಗಮಂಗಲ ರಸ್ತೆಯಲ್ಲಿರುವ ಬ್ರಾಹ್ಮಣರ ಶ್ರೀರಾಮಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿಶ್ವಕರ್ಮ ಯುವಮಿಲನ್ ತಾಲೂಕು ಘಟಕವನ್ನು ಉದ್ಘಾಟಿಸಿ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು.

ರಾಜ್ಯದಲ್ಲಿ 40ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ವಿಶ್ವಕರ್ಮ ಸಮಾಜದ ಬಂಧುಗಳು ಅಸಂಘಟಿತರಾಗಿದ್ದು ಜೀವನದ ಮಟ್ಟವು ಇಂದಿಗೂ ಸಂಕಷ್ಠ ಸ್ಥಿತಿಯಲ್ಲಿದೆ. ನಾವು ಪೂಜೆ ಮಾಡುವ ದೇವರ ವಿಗ್ರಹ, ಧರಿಸುವ ಚಿನ್ನಬೆಳ್ಳಿಯ ಆಭರಣಗಳು, ರೈತನ ಬೇಸಾಯಕ್ಕೆ ಬೇಕಾದ ಕೃಷಿ ಹುಟ್ಟುವಳಿಗಳನ್ನು ತನ್ನ ವೃತ್ತಿಕೌಶಲ್ಯದ ಮೂಲಕ ತಯಾರಿಸಿ ಕೊಡುವ ವಿಶ್ವಕರ್ಮ ಸಮಾಜದ ಬಂಧುಗಳು ವೃತ್ತಿ ಕಸುಬನ್ನು ಮಾಡುವ ಜೊತೆಗೆ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡಿಸಿ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡುವಂತೆ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು.
ಶಿಕ್ಷಣದ ಜ್ಞಾನದಬೆಳಕಿನ ಶಕ್ತಿಯು ಸಾಮಾಜಿಕ ಅಸಮಾನತೆಯನ್ನು ಹೊಡೆದೋಡಿಸಿ ನಮಗೆ ಶಕ್ತಿಯನ್ನು ತುಂಬುವ ಪ್ರಬಲವಾದ ಅಸ್ತ್ರವಾದ್ಧರಿಂದ ವಿಶ್ವಕರ್ಮ ಸಮಾಜದ ಬಂಧುಗಳು ಸಂಘಟಿತರಾಗಿ ತಮಗೆ ಸಂವಿಧಾನಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಕೇಳಿ ಪಡೆದುಕೊಳ್ಳಬೇಕು. ರಾಜ್ಯ ಸರ್ಕಾರವು ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಕೇವಲ ಕಾಟಾಚಾರಕ್ಕೆ ಹಣ ಬಿಡುಗಡೆ ಮಾಡದೇ ರಾಜ್ಯದಲ್ಲಿನ 40ಲಕ್ಷಕ್ಕೂ ಹೆಚ್ಚಿನ ವಿಶ್ವಕರ್ಮ ಸಮಾಜದ ಬಂಧುಗಳು ನೆಮ್ಮದಿನ ಜೀವನವನ್ನು ನಡೆಸಲು ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ರೂಪಿಸಲು ವಾರ್ಷಿಕ ಕನಿಷ್ಠ 100ಕೋಟಿ ರೂ ವಿಶೇಷ ಅನುಧಾನವನ್ನು ಬಜೆಟ್‌ನಲ್ಲಿ ಘೋಷಿಸಬೇಕು ಎಂದು ವಿಕ್ರಮ್‌ಆಚಾರ್ಯ ಆಗ್ರಹಿಸಿದರು.

ಸಮಾಜಸೇವಕರಾದ ಆಲಂಬಾಡಿಕಾವಲು ಮಲ್ಲಿಕಾರ್ಜುನ ಮಾತನಾಡಿ ಸಮಾಜದ ಅಭಿವೃದ್ಧಿಗೆ ರೈತರ ಕಲ್ಯಾಣಕ್ಕೆ ಹಾಗೂ ಕೃಷಿ ಚಟುವಟಿಕೆಗಳ ಅನುಷ್ಠಾನಕ್ಕೆ ವಿಶ್ವಕರ್ಮ ಸಮಾಜದ ಬಂಧುಗಳ ಕೊಡುಗೆಯು ಅಪಾರವಾಗಿದೆ. ಆದರೂ ದೀಪದ ಕೆಳಗೆ ಕತ್ತಲು ಎಂಬAತೆ ವಿಶ್ವಕರ್ಮರ ಜೀವನವು ಇಂದಿಗೂ ಸಂಕಷ್ಠದಲ್ಲಿರುವುದು ವಿಪರ್ಯಾಸದ ಸಂಗತಿಯಾಗಿದೆ. ರಾಜ್ಯ ಸರ್ಕಾರವು ವಿಶ್ವಕರ್ಮ ಸಮಾಜದ ಬಂಧುಗಳ ಕಲ್ಯಾಣಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ನೀಡಿ ನೆರವಿಗೆ ಧಾವಿಸಿ ಬರಬೇಕು ಎಂದು ಮಲ್ಲಿಕಾರ್ಜುನ ಮನವಿ ಮಾಡಿದರು.

ಮಂಡ್ಯದ ನಗರ ನೀರುಸರಬರಾಜು ಒಳಚರಂಡಿ ಮಂಡಳಿಯ ಎಇಇ ಗುರುರಾಜ್, ವಿಶ್ವಕರ್ಮ ಸಮಾಜದ ಮುಖಂಡರಾದ ಈಶ್ವರಾಚಾರ್ಯ, ಯುವಮಿಲನ್ ಜಿಲ್ಲಾಧ್ಯಕ್ಷ ಬಿ.ವಿ.ಮೋಹನಕುಮಾರ್, ಉಪಾಧ್ಯಕ್ಷ ಎಸ್.ಕೃಷ್ಣ, ಜಿಲ್ಲಾಪ್ರಧಾನ ಕಾರ್ಯದರ್ಶಿ ಚಂದನ್, ತಾಲೂಕು ವಿಶ್ವಕರ್ಮ ಕರಕುಶಲ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರೆಸ್ ಕುಮಾರಸ್ವಾಮಿ, ಜಿಲ್ಲಾ ಬಿಜೆಪಿ ಓಬಿಸಿ ಘಟಕದ ಅಧ್ಯಕ್ಷ ಎಂ.ಬಿ.ರಮೇಶ್, ತಾಲೂಕು ವಿಶ್ವಕರ್ಮ ಯುವಮಿಲನ್ ಅಧ್ಯಕ್ಷ ಕೆ.ಎಸ್.ವಿಜಯಕುಮಾರ್, ಉಪಾಧ್ಯಕ್ಷ ಗಾಂಧೀನಗರ ಯೋಗೇಶ್, ಬಿ.ಕಾರ್ತೀಕ್, ಪ್ರಧಾನ ಕಾರ್ಯದರ್ಶಿ ಚೇತನ್, ವಿಶ್ವನಾಥ್, ಶರತ್, ನಟೇಶ್, ಯೋಗೇಶ್, ಮಹೇಶ್, ಪ್ರಕಾಶ್, ನಂದೀಶ್, ಪ್ರತಾಪ್ ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: