May 3, 2024

Bhavana Tv

Its Your Channel

ನಿಯಮಗಳು ಪಾಲನೆಯಾಗದಿದ್ದರೆ ಕಠಿಣ ಕ್ರಮ: ಕ್ವಾರೆ ಮತ್ತು ಕ್ರಷರ್ ಮಾಲೀಕರಿಗೆ ಎಚ್ಚರಿಕೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ

ವರದಿ: ಚಂದ್ರಮೌಳಿ ನಾಗಮಂಗಲ

ನಾಗಮಂಗಲ : ಬ್ಲಾಸ್ಟ್ ಮಾಡುವುದು ಸೇರಿದಂತೆ ಅಗತ್ಯವಾಗಿ ಪಾಲಿಸಬೇಕಿರುವ ಸರ್ಕಾರದ ನಿಯಮಗಳನ್ನು ಪಾಲಿಸದಿದ್ದರೆ ಕಾನೂನಾತ್ಮಕವಾಗಿ ಕಠಿಣ ಕ್ರಮ ಜರುಗಿಸಬೇಕಾಗುವುದು ಎಂದು ಕ್ವಾರೆ ಮತ್ತು ಕ್ರಷರ್ ಮಾಲೀಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ ಖಡಕ್ ಎಚ್ಚರಿಕೆ ನೀಡಿದರು. ಮಂಡ್ಯ ಜಿಲ್ಲೆ, ನಾಗಮಂಗಲ ಪಟ್ಟಣದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರೆಯಲಾಗಿದ್ದ ನಾಗಮಂಗಲ ಉಪವಿಭಾಗ ವ್ಯಾಪ್ತಿಯ ಕ್ವಾರೆ ಮತ್ತು ಕ್ರಷರ್ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗದಂತೆ ನಿಗಾ ವಹಿಸುವ ಜೊತೆಗೆ ಸ್ಥಳೀಯ ರೈತಾಪಿ ವರ್ಗ ಮತ್ತು ನಿವಾಸಿಗಳ ಬದುಕು ಮತ್ತು ಜೀವನಕ್ಕೆ ಮಾರಕವಾಗದಂತೆ ಎಚ್ಚರಿಕೆಯಿಂದ ಉದ್ಯಮ ನಡೆಸಬೇಕು. ಬಂಡೆಗಳನ್ನು ಸ್ಪೋಟಿಸುವಾಗ ಪಾಲಿಸಬೇಕಾದ ನಿಯಮಗಳಲ್ಲಿ ಸ್ವಲ್ಪವೂ ವ್ಯತ್ಯಾಸವಾಗಬಾರದು. ಸ್ಪೋಟಿಸಲು ಬಳಸುವ ಸ್ಪೋಟಕ ಪರಿಕರಗಳನ್ನು ತರುವ ಮತ್ತು ದಾಸ್ತಾನು ಮಾಡಿಕೊಳ್ಳುವಾಗ ಮಾತ್ರವಲ್ಲದೆ ಬಳಕೆಯ ನಂತರ ಉಳಿಕೆಯ ಬಗ್ಗೆಯೂ ಸ್ಪಷ್ಟ ಮಾಹಿತಿ ಇರಲಿ. ಸರ್ಕಾರದ ಮಾರ್ಗಸೂಚಿಗಳ ಪಾಲನೆಯಲ್ಲಿ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿ ಪದ್ಮಜ, ನಿಯಮಾನುಸಾರ ಚಾಲ್ತಿಯಲ್ಲಿರುವ ಕ್ವಾರೆ ಮತ್ತು ಕ್ರಷರ್ ಗಳ ಮಾಲೀಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. ರಾಜ್ಯದ ಕೆಲವೆಡೆ ಸ್ಪೋಟದಿಂದ ಆಗುತ್ತಿರುವ ಅವಘಡಗಳು ಜಿಲ್ಲೆಯಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.

ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ ನವೀನ್ ಕುಮಾರ್ ಹಾಗೂ ವೃತ್ತ ಆರಕ್ಷಕ ನಿರೀಕ್ಷಕ ಸುಧಾಕರ್ ಉಪಸ್ಥಿತರಿದ್ದ ಸಭೆಯ ಮುಕ್ತಾಯದ ನಂತರವೂ ಮುಖ್ಯರಸ್ತೆಯ ಬದಿಯಲ್ಲೇ ಕ್ರಷರ್ ಮತ್ತು ಕ್ವಾರೆ ಮಾಲೀಕರ ಜೊತೆ, ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿ ಪದ್ಮಜ ನಡೆಸುತ್ತಿದ್ದ ಸಮಾಲೋಚನೆ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳ ವಿಷಯವಾಗಿ ಚರ್ಚೆಯಾಗುತ್ತಿತ್ತು.

error: