December 21, 2024

Bhavana Tv

Its Your Channel

ಕಲ್ಯಾಣ ಕರ್ನಾಟಕಕ್ಕೆ ಬೇಕು ಸಮಗ್ರ ಆರೋಗ್ಯ, ಶಿಕ್ಷಣ ಮತ್ತು ಕೃಷಿ-ಕೂಲಿ ನೀತಿ.

ಕೊರೋನಾ ವೈರಸ್ ಕಾರಣದಿಂದ ಬೆಂಗಳೂರಿನಿoದ,ಕಲ್ಯಾಣ ಕರ್ನಾಟಕದ ಸರಿ ಸುಮಾರು ಇಪ್ಪತ್ತೈದು ಸಾವಿರ ಕೂಲಿ ಮಾಡುವ ಜನರು ಸ್ವಗ್ರಾಮಗಳಿಗೆ ಮರಳಿದ್ದಾರೆ ಎಂಬುದು ನಿಜಕ್ಕೂ ಭಯಾನಕ ವಿಷಯ. ಇಷ್ಟು ದೊಡ್ಡ ಪ್ರಮಾಣದಲ್ಲಿ ತಮ್ಮ ಗ್ರಾಮಗಳ ಹತ್ತಾರು ಸರಕಾರಿ ಯೋಜನೆಗಳ ಸೌಲಭ್ಯಗಳನ್ನು ಪಡೆಯದೇ ಬೆಂಗಳೂರಿಗೆ ಗುಳೆ ಹೋದ ಕಾರಣವನ್ನು ಈ ಭಾಗದ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಬೇಕು. ಇದೇ ಜನ ಚುನಾವಣಾ ಸಂದರ್ಭದಲ್ಲಿ ಮತ ಚಲಾಯಿಸಲು ಅಷ್ಟೇ ನಿಷ್ಠೆಯಿಂದ ಊರಿಗೆ ಬಂದು ಹೋಗುವ ಸಂಗತಿಯೂ ಓಪನ್ ಸೀಕ್ರೆಟ್. ನಿರಂತರ ಬರಗಾಲ ಮತ್ತು ಒಣ ಬೇಸಾಯದ ಏರಿಳಿತ ಮತ್ತು ವರ್ಷದುದ್ದಕ್ಕೂ ಕಾಡುವ ನಿರುದ್ಯೋಗದಿಂದ ಜನ ಹೊಟ್ಟೆಪಾಡಿಗಾಗಿ ಗುಳೆ ಹೋಗಿ ಬೆಂಗಳೂರು,ಗೋವಾ ಮತ್ತು ಮಂಗಳೂರು ಪ್ರದೇಶದಲ್ಲಿ ಕೆಲಸ ಮಾಡಿ ಆರ್ಥಿಕ ಭದ್ರತೆ ಕಂಡುಕೊಳ್ಳುವುದು ಅನಿವಾರ್ಯ. ಆದರೆ ಸರಕಾರ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ಹಣ ಸುರಿಯುವುದು ಕಾಂಕ್ರೀಟ್ ಅಭಿವೃದ್ಧಿಗಾಗಿ ಎಂಬುದು ಕೂಡ ಅಷ್ಟೇ ಸತ್ಯ! ಬೃಹತ್ ಕಟ್ಟಡಗಳು, ಸುಂದರ ರಸ್ತೆಗಳು ಒಂದು ಪ್ರದೇಶದ ಅಭಿವೃದ್ಧಿ ಎಂಬುದು ನಿಜವಾದರೂ ಇದರ ಸಂಪೂರ್ಣ ಲಾಭ ಮಾತ್ರ ಜನ ಸಾಮಾನ್ಯರಿಗಲ್ಲ ಕೇವಲ ಸೀಮಿತ ರಾಜಕಾರಣಿಗಳು ಮತ್ತು ದೊಡ್ಡ ಗುತ್ತಿಗೆದಾರರಿಗೆ ಮಾತ್ರ. ಒಂದು ಪ್ರದೇಶದ ಅಭಿವೃದ್ಧಿ ಎಂದರೆ ಸುಸಜ್ಜಿತ
ಸಂಪರ್ಕದ ಅಗತ್ಯವಿದೆ ಆದರೆ ಅದೇ ಅತಿಯಾಗಿ ಜನ ಸಾಮಾನ್ಯರ ಬದುಕು ಬೀದಿ ಪಾಲಾದರೆ ಈ ರಸ್ತೆ ಮತ್ತು ಕಟ್ಟಡಗಳಿಂದ ಯಾವ ಪ್ರಯೋಜನವೂ ಇಲ್ಲ. ಒಂದು ಪ್ರದೇಶದ ನಿಜವಾದ ಅಭಿವೃದ್ಧಿ ಪರಿಕಲ್ಪನೆ ಬೇರೆ ಇದೆ ಮತ್ತು ಇರಬೇಕು.
ಆರೋಗ್ಯ-ಶಿಕ್ಷಣ-ವರಮಾನ ಒಂದು ಪ್ರದೇಶದ ಅಭಿವೃದ್ಧಿ ಸಂಕೇತ ಎಂಬುದು ಜಾಗತಿಕ ಅರ್ಥಶಾಸ್ತ್ರಜ್ಞರ ಸುಂದರ ಅಭಿಪ್ರಾಯ. ಅಭಿವೃದ್ಧಿ ಹೆಸರಿನಲ್ಲಿ ಮೇಲೆ ಹೇಳಿದ ಯಾವುದಾದರೂ ವಿಷಯದ ಮೇಲೆ ಬೆಳಕು ಚೆಲ್ಲುವ ಕೆಲಸ ನಡೆದಿದ್ಧರೆ ಸಾವಿರಾರು ಜನ ಗುಳೆ ಹೋಗುತ್ತಿರಲಿಲ್ಲ. ಈ ಭಾಗದಲ್ಲಿ ಸರಕಾರಿ ಉದ್ಯೋಗಿಗಳು ಮಾತ್ರ ಮಧ್ಯಮ ವರ್ಗದವರು ಅವರನ್ನು ಬಿಟ್ಟರೆ ಇಲ್ಲಿ ಅತೀ ಶ್ರೀಮಂತರು ಮತ್ತು ಕಡು ಬಡವರು.ಈ ಪ್ರದೇಶದಿಂದ ಬಂದ ನಾನು ವೈಯಕ್ತಿಕವಾಗಿ ಈ ತರತಮವನ್ನು ಕಣ್ಣಾರೆ ಕಂಡಿದ್ದೇನೆ.
ಧಣಿಗಳು, ಸಾಹುಕಾರರ ಕೈಯಲ್ಲಿ ದೈನೇಸಿಯಿಂದ ದುಡಿಯುವುದು ತಮ್ಮ ಪುಣ್ಯವೆಂದೇ ದುಡಿಯುವ ವರ್ಗ ಭಾವಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅರಿವು ಮತ್ತು ಅಕ್ಷರದ ಕೊರತೆ. ಆರ್ಟಿಕಲ್ ೩೭೧- ಜೆ ಮತ್ತು ಇತರ ಮೀಸಲಾತಿಗಳ ಲಾಭ ಪಡೆದು ಉತ್ತಮ ಗುಣಮಟ್ಟದ ಬದುಕು ರೂಪಿಸಿಕೊಳ್ಳುವ ಆಲೋಚನೆ ಇವರ ಹತ್ತಿರ ಸುಳಿಯದ ಕಾರಣದಿಂದ ಜನ ಅಸಹಾಯಕತೆಯಿಂದ ಗುಳೆ ಹೋಗುತ್ತಾರೆ. ಅದನ್ನು ತಡೆಯಲು ಈ ಭಾಗದ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ.ಈಗಲೂ ಕಾಲ ಮಿಂಚಿಲ್ಲ
ಕೊರೋನಾ ಕಾರಣದಿಂದ ಸರ್ವತೋಮುಖ ಅಭಿವೃದ್ಧಿಗೆ ಹೊಸ ಚಿಂತನೆ ಮಾಡುವ ಪ್ರಸಂಗ ಬಂದಿದೆ. ಊರು ಸೇರಿರುವ ಜನರ ಆರೋಗ್ಯ, ಶಿಕ್ಷಣ ಮತ್ತು ಕೃಷಿ ಕಾರ್ಮಿಕ ಸಮಗ್ರ ಅಭಿವೃದ್ದಿಗೆ ಹೊಸ ನೀತಿಯನ್ನು ಸರಕಾರ ಕೂಡಲೇ ರೂಪಿಸಲೇಬೇಕು.
ಇಡೀ ಪ್ರದೇಶದ ಸುಮಾರು ಒಂದು ಲಕ್ಷ ಜನ ಗುಳೆ ಹೋಗುವುದನ್ನು ತಡೆಯಲು ಅವರಿಗೆ ಈ ಪ್ರದೇಶದಲ್ಲಿ ಪ್ರತಿನಿತ್ಯ ಕೆಲಸ ಸಿಗುವ ವಿಶೇಷ ಕಾನೂನು ರೂಪಿಸಬೇಕು. ಅವರಿಗೆ ವರ್ಷದುದ್ದಕ್ಕೂ ಕೈತುಂಬ ಕೆಲಸ, ಅವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ವಾತಾವರಣ ಕಲ್ಪಿಸಲು ಹೊಸ ವಿಶೇಷ ನೀತಿ ರೂಪಿಸಿ, ಈ ಪ್ರದೇಶದ ಅಭಿವೃದ್ಧಿ ಕೆಲಸಗಳಿಗೆ ಅವರ ಶ್ರಮ ವಿನಿಯೋಗಿ, ಅಗತ್ಯ ಆದಾಯ ದೊರೆತರೆ ಅವರು ಗುಳೆ ಹೋಗುವ ಪ್ರಸಂಗ ಬರುವುದಿಲ್ಲ ಮತ್ತು ಗುಳೆ ಹೋದವರ ಮಕ್ಕಳು ಅನಾಥರಾಗುವುದಿಲ್ಲ. ಈ ಅನಾಥ ಪ್ರಜ್ಞೆಯಿಂದ ಪಾಲಕರು ಗುಳೆ ಹೋದಾಗ ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿ ಅಧಃಪತನವಾಗುತ್ತದೆ
ದುಡಿಮೆಯ ಮೂಲ ವ್ಯವಸ್ಥೆ ಸರಿಹೋಗದಿದ್ದರೆ ಇತರ ಆಯಾಮಗಳಿಗೂ ಹಿನ್ನಡೆ ಉಂಟಾಗುತ್ತದೆ. ಗುಳೆ ಹೋಗುವ ಹಿರಿಯರ ಜೊತೆಗೆ ಮುಂದಿನ ತಲೆಮಾರಿನ ಮಕ್ಕಳ ಬದುಕು ಕ್ಷೀಣಿಸುತ್ತದೆ. ಇದು ಇಡೀ ಪ್ರದೇಶದ ಹುಮನ್ ಇಂಡೆಕ್ಸ್ ಕುಸಿಯಲು ಪ್ರಮುಖ ಕಾರಣವಾಗುತ್ತದೆ.ಕರ್ನಾಟಕ ರಾಜ್ಯದ ಕೆಲವು ಹಿರಿಯ ಜನ ನಾಯಕರಿಗೆ ಈ ಕುರಿತು ಬದ್ಧತೆ ಇದೆ ಆದರೆ ಅದು ತಮ್ಮ ಪಕ್ಷಗಳ ಜನಪ್ರತಿನಿಧಿಗಳ ಹಕ್ಕಾಗಿ ಪರಿವರ್ತನೆ ಆಗುವಂತೆ ನೋಡಿಕೊಳ್ಳಬೇಕು….
ಜನಸಾಮಾನ್ಯರ ಬದುಕು ಹಸನಾಗಿ ಗುಳೆ ನಿಯಂತ್ರಣಕ್ಕೆ ಕೆಲವು ಮಹತ್ವದ ನಿರ್ಧಾರಗಳನ್ನು ಸರಕಾರ ಕೂಡಲೇ ತೆಗೆದುಕೊಳ್ಳಬೇಕು-
ಸಮಗ್ರ ಶಿಕ್ಷಣ ಮತ್ತು ಕೃಷಿ ನೀತಿ ರೂಪಿತವಾಗಿ ಪ್ರಾಮಾಣಿಕ ಜಾರಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಯುರೋಪ್ ಎನ್.ಎಚ್.ಎಸ್.( ರಾಷ್ಟ್ರೀಯ ಆರೋಗ್ಯ ಸೇವೆ) ಮಾದರಿಯಲ್ಲಿ ಆರೋಗ್ಯ ನೀತಿ ರೂಪಿತವಾಗಿ ಪ್ರತಿಯೊಬ್ಬರಿಗೂ ಉಚಿತ ಚಿಕಿತ್ಸೆ ದೊರೆಯಬೇಕು. ಈ ಭಾಗದ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಅನುದಾನ ನೀಡಬೇಕು.ಈ ಭಾಗದ ಮಠಾಧೀಶರು, ಚಿಂತಕರು, ಬರಹಗಾರರು, ಮಾಧ್ಯಮ ಸ್ನೇಹಿತರು, ಸಾಮಾಜಿಕ ಹೋರಾಟಗಾರರು ಮತ್ತು ರಾಜಕೀಯ ಪಕ್ಷಗಳು ನಿಷ್ಪಕ್ಷಪಾತವಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಜನ ಜಾಗೃತಿ ಹೋರಾಟ ಆರಂಭಿಸಿ ಯೋಜನೆ ಸದುಪಯೋಗ ಎಲ್ಲರಿಗೆ ತಲುಪಲು ಪ್ರಾಮಾಣಿಕವಾಗಿ ಶ್ರಮಿಸಬೇಕು. ಅಂದಿನ ಕಲ್ಯಾಣದ ಶರಣರು ಅರಿವು,ಕಾಯಕ,ದಾಸೋಹ ಸೂತ್ರಗಳ ಮೂಲಕ ಅರ್ಥಪೂರ್ಣ
ಅನುಭವ ಮಂಟಪ ಕಟ್ಟಿ ಕೊಟ್ಟಿದ್ದಾರೆ. ಈಗ ಪ್ರಜಾಪ್ರಭುತ್ವ ಮಾದರಿಯಲ್ಲಿ ಅಭಿವೃದ್ಧಿಗೆ ಹೊಸ ಭಾಷ್ಯೆ ಸರಕಾರ ಬರೆಯಬೇಕು, ಜನರ ಕಷ್ಟ ಸುಖಗಳ ಅಳಿಸಬೇಕು.

.--ಪ್ರೊ.ಸಿದ್ದು ಯಾಪಲಪರವಿ ಕಾರಟಗಿ
( ಬರಹಗಾರ ಮತ್ತು ಜೀವನಶೈಲಿ ಚಿಂತಕ )

error: