July 14, 2024

Bhavana Tv

Its Your Channel

ಹೊಸಕೋಟೆಯಲ್ಲಿ ಟೊಮೆಟೊ ಸಂಸ್ಕರಣಾ ಘಟಕಕ್ಕೆ ಸಚಿವ ನಾರಾಯಣಗೌಡ ದಿಢೀರ್ ಭೇಟಿ

ಬೆಂಗಳೂರು : ಟೊಮೆಟೊ ಸಂಸ್ಕರಣಾ ಘಟಕಕ್ಕೆ ದಿಢೀರ್ ಭೇಟಿ ನೀಡಿದ ಸಚಿವ ಡಾ. ನಾರಾಯಣ ಗೌಡ. ಬೆಂಗಳೂರಿನ ಹೊಸಕೋಟೆಯಲ್ಲಿರುವ ಮದರ್ ಡೈರಿಗೆ ಭೇಟಿ ನೀಡಿ ಟೊಮೊಟೊ ಸಂಸ್ಕರಣಾ ಕಾರ್ಯವನ್ನ ಪರಿಶೀಲಿಸಿದ್ದಾರೆ. ಸೋಮವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಭೇಟಿ ನೀಡಿ ಪರಿಶೀಲಿಸಿ, ಮಾಹಿತಿ ಪಡೆದುಕೊಂಡಿದ್ದಾರೆ.

ಪ್ರತಿ ನಿತ್ಯ ಸುಮಾರು 160 ಟನ್ ಟೊಮೆಟೊವನ್ನ ಈ ಘಟಕದಲ್ಲಿ ಸಂಸ್ಕರಣ ಮಾಡಲಾಗುತ್ತಿದೆ. ನೇರವಾಗಿ ರೈತರಿಂದಲೇ ಟೊಮೆಟೊವನ್ನು ಖರೀದಿ ಮಾಡಲಾಗುತ್ತಿದೆ. ಕಳೆದ ಒಂದು ವಾರದಿಂದ ಸಂಸ್ಕರಣಾ ಘಟಕ ಕಾರ್ಯಾರಂಭಿಸಿದೆ. ಹೊಸೂರು ಹಾಗೂ ಕೃಷ್ಣಗಿರಿಯಲ್ಲಿನ ಘಟಕಗಳೂ ಸಂಸ್ಕರಣಾ ಕಾರ್ಯ ಆರಂಭಿಸಿವೆ.

ಇದರಿಂದಾಗಿ ಪ್ರತಿನಿತ್ಯ ಸುಮಾರು 1 ಸಾವಿರ ಟನ್ ಟೊಮೆಟೊ ಸಂಸ್ಕರಣಾ ಘಟಕಕ್ಕೆ ಬರುತ್ತಿದೆ. ಇನ್ನೊಂದು ವಾರದಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಒಟ್ಟು 8 ಸಂಸ್ಕರಣಾ ಘಟಕ ಕಾರ್ಯಾರಂಭಿಸಲಿದೆ. ಆಗ ಪ್ರತಿನಿತ್ಯ 1750 ಟನ್ ಗೂ ಹೆಚ್ಚಿನ ಟೊಮೆಟೊ ರೈತರಿಂದ ಖರೀದಿ ಆಗಲಿದೆ. ಹೀಗಾಗಿ ಟೊಮೆಟೊ ಬೆಳೆಗಾರರು ಸಧ್ಯ ನಿಟ್ಟುಸಿರು ಬಿಡುವಂತಾಗಿದೆ.

ಸಂಪೂರ್ಣ ಕುಸಿದಿದ್ದ ದರವೂ ಚೇತರಿಕೆಯಾಗಿದೆ. ಕೊರೊನಾ ವೈರಸ್ ಕಾರಣದಿಂದ ಟೊಮೆಟೊ ಬೆಳೆ ಮಾರಾಟಕ್ಕೆ ಅನಾನುಕೂಲವಾಗಿತ್ತು. ಮಾರುಕಟ್ಟೆಯಲ್ಲೂ ಹೆಚ್ಚಿನ ಮಾರಾಟವಾಗದೆ ಬೆಲೆ ಕುಸಿದಿತ್ತು. ಸಂಸ್ಕರಣಾ ಘಟಕ ಬಂದ್ ಆಗಿದ್ದರಿಂದ ಭಾರಿ ಪ್ರಮಾಣದಲ್ಲಿ ಟೊಮೆಟೊ ಬೆಳೆ ಮಾರಾಟವಾಗದೆ ರೈತರು ಕಂಗಾಲಾಗುವ ಸ್ಥಿತಿ ನಿರ್ಮಾಣವಾಗಿತ್ತು.

ಈ ಹಿನ್ನೆಲೆಯಲ್ಲಿ ಸಂಸ್ಕರಣಾ ಘಟಕ ಆರಂಭಿಸಲು ಸರ್ಕಾರ ಅನುಮತಿ ನೀಡಿತ್ತು. ಜೊತೆಗೆ ಸಾಗಾಟಕ್ಕೂ ಅನುಮತಿ ಕೊಡಿಸಿ ಸಂಸ್ಕರಣಾ ಘಟಕಕ್ಕೆ ಟೊಮೆಟೊವನ್ನ ನೇರವಾಗಿ ಸಾಗಿಸುವ ಕೆಲಸ ಮಾಡಿತ್ತು. ಘಟಕಕ್ಕೆ ಭೇಟಿ ನೀಡಿದ ವೇಳೆ ಯಾವುದೇ ಕಾರಣಕ್ಕು ಮಧ್ಯವರ್ತಿಗಳಿಗೆ ಅವಕಾಶ ನೀಡಬೇಡಿ.

ನೇರವಾಗಿ ರೈತರಿಂದ ಖರೀದಿ ಆಗಬೇಕು. ಹೆಚ್ಚಿನ ದರ ನೀಡಬೇಕು. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಒಂದು ವೇಳೆ ಮಧ್ಯವರ್ತಿಗಳಿಗೆ ಅಧಿಕಾರಿಗಳು ಅವಕಾಶ ನೀಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತೋಟಗಾರಿಕೆ ಸಚಿವ ಡಾ. ನಾರಾಯಣ ಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ತಿಂಗಳಾಂತ್ಯದಲ್ಲಿ ಮಾವು ಬೆಳೆ ಕೂಡ ಬರಲಿದೆ. ಅದು ಕೂಡ ಸಂಸ್ಕರಣಾ ಘಟಕಕ್ಕೆ ಬರಲಿದೆ. ಮಾವು ಬೆಳೆ ಪ್ರತಿನಿತ್ಯ ಸುಮಾರು 300 ಟನ್ ಸಂಸ್ಕರಿಸುವುದಾಗಿ ಘಟಕದ ಮುಖ್ಯಸ್ಥರು ತಿಳಿಸಿದ್ದಾರೆ. ಮಾವು ಖರೀದಿ ಕಾರ್ಯ ಕೂಡ ನೇರವಾಗಿ ರೈತರಿಂದಲೇ ಆಗಬೇಕು. ಯಾವ ಸಂದರ್ಭದಲ್ಲೂ ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು.

ಇದರಿಂದ ರೈತರಿಗೆ ನಷ್ಟವಾಗುತ್ತೆ. ಕಡಿಮೆ ಬೆಲೆಗೆ ರೈತರಿಂದ ಖರೀದಿ, ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಕೆಲಸ ಮಧ್ಯವರ್ತಿಗಳಿಂದ ಆಗುತ್ತೆ. ಹೀಗೆ ಈ ಸಂದರ್ಭದಲ್ಲಿ ಅಧಿಕಾರಿಗಳು ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚಿಸಿದ್ದಾರೆ.

source : dailyhunt

error: