April 23, 2024

Bhavana Tv

Its Your Channel

3 ಮಕ್ಕಳು ಸೇರಿ ಇಂದು ರಾಜ್ಯದಲ್ಲಿ 15 ಮಂದಿಯಲ್ಲಿ ಕೊರೋನಾ ಪತ್ತೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಬಹುದೆಂಬ ನಿರೀಕ್ಷಿ ಹುಸಿಯಾಗಿದ್ದು
ಸೋಮವಾರ ಹೊಸ 15 ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿಯವರೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಒಟ್ಟು 247ಕ್ಕೆ ಏರಿಕೆಯಾಗಿದೆ. ಈ ಪೈಕಿ ಮೂವರು ಮಕ್ಕಳು ಕೂಡ ಸೇರಿದ್ದಾರೆ.

ರಾಜ್ಯದಲ್ಲಿ 8, 14 ಹಾಗೂ 16 ವರ್ಷದ ಮಕ್ಕಳಲ್ಲಿ ಹೊಸದಾಗಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದ್ದು, ಭಾನುವಾರ ಸಂಜೆಯಿಂದ ಸೋಮವಾರ ಸಂಜೆಯವರೆಗೆ15 ಹೊಸ ಪ್ರಕರಣಗಳು ಪತ್ತೆಯಾಗಿದೆ.ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 247ಕ್ಕೇರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಪತ್ತೆಯಾದ 15 ಕೊರೋನಾ ಪಾಸಿಟಿವ್​​ ಪ್ರಕರಣಗಳಿಗೂ ದೆಹಲಿಯ ನಿಜಾಮುದ್ದೀನ್​​​ ಧಾರ್ಮಿಕ ಸಭೆಗೂ ನಂಟಿದೆ ಎಂದು ಹೇಳಲಾಗುತ್ತಿದೆ. ಈ 15 ಮಂದಿಯೂ ಈ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದರು. ದೊಡ್ಡಬಳ್ಳಾಪುರದಲ್ಲಿ ಮೊದಲ ಕೊರೋನಾ ಪಾಸಿಟಿವ್​​​ ಪ್ರಕರಣ ಪತ್ತೆಯಾಗಿದ್ದು, ಈ ವ್ಯಕ್ತಿಗೆ ದೆಹಲಿ ಟ್ರಾವೆಲ್​​ ಹಿಸ್ಟರಿ ಇತ್ತು ಎಂದು ತಿಳಿದು ಬಂದಿದೆ.

ಪ್ರಮುಖವಾಗಿ ಧಾರವಾಡದಲ್ಲಿ 4 ಪ್ರಕರಣಗಳು ದಾಖಲಾಗಿದ್ದು, ಮಳವಳ್ಳಿಯಲ್ಲಿ 3, ಬೀದರ್ ನಲ್ಲಿ 2, ಬಾಗಲಕೋಟೆಯಲ್ಲಿ 1, ಬೆಳಗಾವಿಯ ರಾಯಭಾಗದಲ್ಲಿ, ದೊಡ್ಡಬಳ್ಳಾಪುರದಲ್ಲಿ 1 ಹಾಗೂ ಬೆಂಗಳೂರು ನಗರದ 1 ಪ್ರಕರಣ ವರದಿಯಾಗಿದೆ. ಈ ವರೆಗೂ 60 ಜನ ಡಿಸ್ಜಾರ್ಜ್ ಆಗಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿಯ 8 ವರ್ಷದ ಹೆಣ್ಣು ಮಗು, 18 ವರ್ಷದ ಯುವಕ ಮತ್ತು 60 ವರ್ಷದ ವೃದ್ಧರಲ್ಲಿ ವೈರಸ್ ಸೋಂಕು ದೃಢವಾಗಿದೆ. ಹುಬ್ಬಳ್ಳಿ-ಧಾರವಾಡದ 55 ಮತ್ತು 36 ವರ್ಷದ ಗಂಡು ಮತ್ತು 60 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.

ಅಂತೆಯೇ ಬಾಗಲಕೋಟೆಯ ಮುಧೋಳದ 27 ವರ್ಷದ ಯುವಕನಲ್ಲಿ, ಬೀದರ್ ನಲ್ಲಿ 16 ಮತ್ತು 35 ವರ್ಷದ ಮಹಿಳೆ, ಬೆಳಗಾವಿಯ ರಾಯಭಾಗದಲ್ಲಿ 20, 14, 45 ವರ್ಷದ ವ್ಯಕ್ತಿಗಳು, ದೊಡ್ಡಬಳ್ಳಾಪುರದಲ್ಲಿ 39 ವರ್ಷದ ಗಂಡು, ಬೆಂಗಳೂರು ನಗರದ 62 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಇನ್ನು ಮುಂದೆ ಕ್ವಾರಂಟೈನ್ ಅವಧಿ 28 ದಿನ ಇರಲಿದೆ. 14 ದಿನಗಳ ಕ್ವಾರಂಟೈನ್ ಸಾಲುತ್ತಿಲ್ಲ. ಹಲವು ಶಂಕಿತರಲ್ಲಿ 14 ದಿನಗಳಾದ ನಂತರ ರೋಗ ಲಕ್ಷಣ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಕ್ವಾರಂಟೈನ್ ಅವಧಿಯನ್ನು ವಿಸ್ತರಿಸಲಾಗಿದೆ.ಇಲ್ಲಿಯವರೆಗೆ ತಬ್ಲಿಘಿ ಜಮಾತ್​ನಲ್ಲಿ ಭಾಗಿಯಾದ ಸುಮಾರು 1,330 ಮಂದಿಯನ್ನು ಪತ್ತೆ ಮಾಡಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಇದರಲ್ಲಿ 40 ಪಾಸಿಟಿವ್ ಪ್ರಕರಣ ವರದಿ ಆಗಿದೆ. 1,255 ಜನರ ವರದಿ ನೆಗೆಟಿವ್ ಬಂದಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಯಾಕೆಂದರೆ ಸಾಕಷ್ಟು ಮಂದಿ ಮಾಹಿತಿ ಕೊಟ್ಟಿಲ್ಲ. ನಾವು ಅಂದುಕೊಂಡದ್ದಕ್ಕಿಂತ ಹೆಚ್ಚು ಜನರು ಹೋಗಿ ಬಂದಿರುವ ಮಾಹಿತಿ ಸಿಕ್ತಿದೆ. ಅವರನ್ನ ಹುಡುಕುವ, ಪರೀಕ್ಷೆಗೆ ಒಳಪಡಿಸುವ ಕಾರ್ಯ ನಡೀತಿದೆ ಅಂತ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಇನ್ನು ರಾಜ್ಯಕ್ಕೆ ಬರಬೇಕಿದ್ದ ರ್ಯಪಿಡ್ ಟೆಸ್ಟ್ ಕಿಟ್​ಗಳು ತಡವಾಗಿದೆ. ಇದರಿಂದ ಹೆಚ್ಚು ಜನರ ಪರೀಕ್ಷೆ ಮಾಡಲು ಸಾಧ್ಯವಿದೆ. ಕೇವಲ 20 ನಿಮಿಷಗಳಲ್ಲಿ ರಿಸಲ್ಟ್ ನೀಡುವ ರ್ಯಾಪಿಡ್ ಕಿಟ್​ಗಳು ಇನ್ನೂ ಒಂದು ವಾರದೊಳಗೆ ಬರುವ ಸಾಧ್ಯತೆ ಇದೆ.

ಈ ಮಧ್ಯೆ ಕೊರೋನಾ ವೈರಸ್​​​ ತಹಬದಿಗೆ ಬಾರದ ಹಿನ್ನೆಲೆಯಲ್ಲಿ ಏಪ್ರಿಲ್​​​ 14ನೇ ತಾರೀಕಿನವರೆಗೂ ಜಾರಿಯಲ್ಲಿದ್ದ 21 ದಿನಗಳ ಕಾಲ ಲಾಕ್​​ಡೌನ್​​ ಅನ್ನು ಪ್ರಧಾನಿ ನರೇಂದ್ರ ಮೋದಿಯವರ ಸೂಚನೆ ಮೇರೆಗೆ ಈಗಾಗಲೇ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಆದರೆ, ಈಗ ರಾಜ್ಯ ಸರ್ಕಾರ ಸಂಪೂರ್ಣ ಲಾಕ್​​ಡೌನ್​​ ಬದಲಿಗೆ ಸ್ಮಾರ್ಟ್​ ಲಾಕ್​​ಡೌನ್​ ಜಾರಿಗೊಳಿಸಲು ಚಿಂತಿಸಿದೆ. ಸ್ಮಾರ್ಟ್ ಲಾಕ್​​ಡೌನ್ ಜಾರಿಗೆ ನಿರ್ಧಾರ ತೆಗೆದುಕೊಂಡಿರುವ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಹಲವಾರು ಪ್ರಮುಖ ವಿಚಾರಗಳನ್ನು ಚರ್ಚೆ ಮಾಡಲಾಗಿದೆ.

# ಜಿಲ್ಲಾವಾರು ಮಾಹಿತಿ : ಬೆಂಗಳೂರು – 77 ಪ್ರಕರಣ, ಮೈಸೂರು – 48 ಪ್ರಕರಣ, ದಕ್ಷಿಣ ಕನ್ನಡ – 12 ಪ್ರಕರಣ, ಬೆಳಗಾವಿ – 17 ಪ್ರಕರಣ, ಉತ್ತರ ಕನ್ನಡ – 9 ಪ್ರಕರಣ, ಚಿಕ್ಕಬಳ್ಳಾಪುರ – 9 ಪ್ರಕರಣ, ಕಲಬುರಗಿ – 13 ಪ್ರಕರಣ, ಬೆಂಗಳೂರು ಗ್ರಾಮಾಂತರ – 05 ಪ್ರಕರಣ, ಬೀದರ್ – 13 ಪ್ರಕರಣ, ದಾವಣಗೆರೆ – 3 ಪ್ರಕರಣ, ಉಡುಪಿ – 3 ಪ್ರಕರಣ, ಬಳ್ಳಾರಿ – 6 ಪ್ರಕರಣ, ಕೊಡಗು – 1 ಪ್ರಕರಣ
ಧಾರವಾಡ – 6 ಪ್ರಕರಣ, ತುಮಕೂರು – 1 ಪ್ರಕರಣ, ಬಾಗಲಕೋಟೆ – 9 ಪ್ರಕರಣ, ಮಂಡ್ಯ – 8 ಪ್ರಕರಣ, ಗದಗ – 1 ಪ್ರಕರಣ, ವಿಜಯಪುರ – 6 ಪ್ರಕರಣ

source : dailyhunt.in

error: