December 3, 2024

Bhavana Tv

Its Your Channel

ಬಿಬಿಎಂಪಿ ಬಜೆಟ್‌ನಲ್ಲಿ ಬೆಂಗಳೂರಿಗರಿಗೆ ಕಾದಿದೆ ಬಂಪರ್ ಗಿಫ್ಟ್..!

ಬೆಂಗಳೂರು, ಏ.18- ಮಹಾತ್ವಾಕಾಂಕ್ಷೆಯ ಅಕ್ರಮ-ಸಕ್ರಮ ಯೋಜನೆಯನ್ನು ಜಾರಿಗೆ ತರುವ ತೀರ್ಮಾನಕ್ಕೆ ಸರ್ಕಾರ ಬಂದಿರುವ ಬೆನ್ನಲ್ಲೇ ನಗರದ ರೆವಿನ್ಯೂ ಬಡಾವಣೆಗಳಲ್ಲಿ ನಿರ್ಮಿಸಿಕೊಂಡಿರುವ ಮನೆಗಳ ಬಿ ಖಾತಾಗಳನ್ನು ಎ ಖಾತಾಗಳನ್ನಾಗಿ ಪರಿವರ್ತಿಸುವ ಮಹತ್ವದ ತೀರ್ಮಾನಕ್ಕೆ ಬಿಬಿಎಂಪಿ ಬಂದಿದೆ.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್ ಅವರು ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಂಡಿಸಲಿರುವ 2020-21ನೇ ಸಾಲಿನ ಬಿಬಿಎಂಪಿ ಬಜೆಟ್‍ನಲ್ಲಿ ಈ ಘೋಷಣೆ ಹೊರ ಬೀಳಲಿದೆ.ನಗರದಲ್ಲಿ 1430 ರೆವಿನ್ಯೂ ಬಡಾವಣೆಗಳಿದ್ದು, ಇಲ್ಲಿ ವಾಸಿಸುತ್ತಿರುವ ಲಕ್ಷಾಂತರ ಮಂದಿ ರೆವಿನ್ಯೂ ನಿವೇಶನದಾರರಿಗೆ ಈ ತೀರ್ಮಾನ ವರದಾನವಾಗಲಿದೆ.

ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಹಾವಳಿ ತಡೆಗಟ್ಟಲು ಪ್ರತಿ ವಾರ್ಡ್‍ಗೆ ತಲಾ 25 ಲಕ್ಷ ರೂ.ಗಳ ಅನುದಾನ ನೀಡಲು 50 ಕೋಟಿ ರೂ.ಗಳನ್ನು ಈ ಸಾಲಿನ ಬಜೆಟ್‍ನಲ್ಲಿ ಕಾಯ್ದಿರಿಸಲಾಗಿದೆ.ಈ ಬಾರಿ ಚುನಾವಣಾ ಬಜೆಟ್ ಮಂಡಿಸುವ ಬದಲು ಜನಪರ ಬಜೆಟ್ ಮಂಡನೆಗೆ ಒತ್ತು ನೀಡಲಾಗಿದ್ದು, ಬಜೆಟ್ ಗಾತ್ರ 11 ಸಾವಿರ ಕೋಟಿ ರೂ. ಮೀರದಂತೆ ಎಚ್ಚರಿಕೆ ವಹಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ಎರಡು ಲಕ್ಷ ರೂ.ಗಳ ಆರೋಗ್ಯ ವಿಮೆ ಹಾಗೂ 5 ಲಕ್ಷ ರೂ.ಗಳ ಅಪಘಾತ ವಿಮಾ ಯೋಜನೆಗಳು ಬಜೆಟ್‍ನಲ್ಲಿ ಘೋಷಣೆಯಾಗಲಿವೆ.ಕನ್ನಡ ಪತ್ರಿಕೋದ್ಯಮವನ್ನು ಉಳಿಸಿ-ಬೆಳೆಸಬೇಕೆಂಬ ಉದ್ದೇಶದಿಂದ 198 ವಾರ್ಡ್‍ಗಳಲ್ಲಿ x68 ಅಳತೆಯ ಮಳಿಗೆ ಸ್ಥಾಪಿಸಿ 50 ಸಾವಿರ ರೂ. ವೆಚ್ಚದಲ್ಲಿ ಪತ್ರಿಕಾ ಮಾರಾಟ ಮಳಿಗೆಗಳನ್ನು ಸ್ಥಾಪಿಸಿ ವಿತರಕರಿಗೆ ಹಂಚುವ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.

ದಿ.ಅನಂತ್‍ಕುಮಾರ್ ಅವರ ಸ್ಮರಣಾರ್ಥ ಹೊಸ ಯೋಜನೆಯೊಂದನ್ನು ಅನುಷ್ಠಾನಕ್ಕೆ ತರಲಾಗುತ್ತಿದ್ದು, ನಗರದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ ಮಾಡಲಾಗುವುದು.ಪ್ರತಿ ವಾರ್ಡ್‍ನ 15 ವಿದ್ಯಾರ್ಥಿಗಳಿಗೆ 65 ಸಾವಿರ ರೂ. ಬೆಲೆ ಬಾಳುವ 17 ಇಂಚಿನ ಲ್ಯಾಪ್‍ಟಾಪ್ ವಿತರಿಸುವ ಅನಂತ್‍ಕುಮಾರ್ ವಿದ್ಯಾರ್ಥಿ ಯೋಜನೆಯನ್ನು ಘೋಷಣೆ ಮಾಡಲಾಗುತ್ತಿದೆ.

ಅದೇ ರೀತಿ ಪಾಲಿಕೆಯ 8 ವಲಯಗಳಲ್ಲಿ ಸುಷ್ಮಾಸ್ವರಾಜ್ ಹೆಸರಿನಲ್ಲಿ ಹೈಟೆಕ್ ಆಯಂಬುಲೆನ್ಸ್ ಸೇವೆ ಆರಂಭಿಸಲಾಗುತ್ತಿದೆ. ಬೊಮ್ಮನಹಳ್ಳಿಯಲ್ಲಿ ಇತ್ತೀಚೆಗೆ ವಶಪಡಿಸಿಕೊಳ್ಳಲಾಗಿರುವ ಎರಡೂವರೆ ಎಕರೆ ಜಮೀನಿನಲ್ಲಿ ದೀನ್‍ದಯಾಳ್ ಉಪಾಧ್ಯಾಯ ಅವರ ಹೆಸರಿನಲ್ಲಿ ಮಕ್ಕಳ ಆಸ್ಪತ್ರೆ ಆರಂಭಿಸಲು ತೀರ್ಮಾನಿಸಲಾಗಿದೆ. 50ಕೋಟಿ ಅಂದಾಜು ವೆಚ್ಚದ ಈ ಯೋಜನೆಗೆ ಪ್ರಸಕ್ತ ವರ್ಷ 25 ಕೋಟಿ, ಮುಂದಿನ ವರ್ಷ 25 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ.

ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ನಗರದ ನಾಲ್ಕು ದಿಕ್ಕುಗಳಲ್ಲಿ ಐಸಿಯು ವ್ಯವಸ್ಥೆಗಳನ್ನು ಒಳಗೊಂಡ ನಾಲ್ಕು ಡಾಗ್ ಕೆನಲ್‍ಗಳನ್ನು ಸ್ಥಾಪಿಸಲು ತಲಾ ಎರಡು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ನಗರದ ನಾಲ್ಕು ದಿಕ್ಕಿನಲ್ಲಿ ನಾಲ್ಕು ವಿದ್ಯುತ್ ಚಿತಾಗಾರಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಇದರ ಜತೆಗೆ ರುದ್ರಭೂಮಿಗಳಲ್ಲಿ ಕರೆಂಟ್ ಬದಲು ಗ್ಯಾಸ್ ಅಳವಡಿಸುವ ತೀರ್ಮಾನವನ್ನು ಈ ಬಜೆಟ್‍ನಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರುದ್ರಭೂಮಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಉಚಿತ ಮನೆ ನಿರ್ಮಿಸಿಕೊಡಲು ತೀರ್ಮಾನಿಸಲಾಗಿದೆ.ಹೊಸಬೆಳಕು ಯೋಜನೆಯಡಿ 75 ವರ್ಷ ಮೇಲ್ಪಟ್ಟ ಅಸಕ್ತ ಕಲಾವಿದರಿಗೆ ತಲಾ ಒಂದು ಲಕ್ಷ ರೂ.ಗಳ ಸಹಾಯಧನ ನೀಡಲು ಬಜೆಟ್‍ನಲ್ಲಿ ಒತ್ತು ನೀಡಲಾಗಿದೆ.

ಉಳಿದಂತೆ ಬಿಬಿಎಂಪಿಯ ಆಸ್ಪತ್ರೆಗಳನ್ನು ಆಧುನೀಕರಣಗೊಳಿಸಲು, ವಾರ್ಡ್ ಮಟ್ಟದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಲು, ಕಸದ ಸಮಸ್ಯೆ ನಿವಾರಣೆಗೆ ಹಾಗೂ ಆರ್ಥಿಕವಾಗಿ ಹಿಂದುಳಿದ, ಸಾಮಾನ್ಯ ವರ್ಗದವರ ಒಂಟಿ ಮನೆ ನಿರ್ಮಾಣಕ್ಕೆ ಹೆಚ್ಚಿನ ಆಸಕ್ತಿ ವಹಿಸಲಾಗಿದೆ. ಕಳೆದ ಬಾರಿ ಜಾರಿಗೆ ತಂದ ಸಿದ್ದಗಂಗಾ ಶ್ರೀಗಳ ಹೆಸರಿನ ಪ್ರಶಸ್ತಿಯನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ.

# ಇದೇ ಮೊದಲು:
1953ರಲ್ಲಿ ನಗರದಲ್ಲಿ ಕಾಲರಾ ಭೀತಿ ಕಾಡಿದ್ದಾಗಲೂ ಪಾಲಿಕೆ ಬಜೆಟ್ ಮಂಡನೆ ಮಾಡಲು ಸಾಧ್ಯವಾಗಿರಲಿಲ್ಲ. ಆಗ 31 ನಗರಸಭೆ ಸದಸ್ಯರು ಹಾಗೂ ಇಬ್ಬರು ಆಂಗ್ಲೋ ಇಂಡಿಯನ್ ಸೇರಿದಂತೆ 6 ಮಂದಿ ನಾಮನಿರ್ದೇಶಿತ ಸದಸ್ಯರಿದ್ದರು. ಕಾಲರಾ ಭೀತಿಯ ಹಿನ್ನೆಲೆಯಲ್ಲಿ ಬಜೆಟನ್ನು ಮೇಯೋಹಾಲ್‍ನಲ್ಲಿ ಮಂಡನೆ ಮಾಡಲಾಗಿತ್ತು.

67 ವರ್ಷಗಳ ನಂತರ ಕೊರೊನಾ ಭೀತಿಯ ಕಾರಣದಿಂದ ಸಕಾಲಕ್ಕೆ ಬಿಬಿಎಂಪಿ ಬಜೆಟ್ ಮಂಡನೆ ಮಾಡಲು ಸಾಧ್ಯವಾಗಿರಲಿಲ್ಲ.
ಇದೀಗ ಇತಿಹಾಸದಲ್ಲೇ ಇದೇ ಪ್ರಥಮಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ 2020-21ನೇ ಸಾಲಿನ ಬಜೆಟ್ ಮಂಡನೆ ಮಾಡಲು ಏ.20ಕ್ಕೆ ಮುಹೂರ್ತ ನಿಗದಿಯಾಗಿದೆ.

source :Dailyhunt

error: