ಚಿಕ್ಕಮಗಳೂರು: ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ಬೀದಿ ಬದಿಯ ವ್ಯಾಪಾರಸ್ಥರಿಗೆ ಯಾವುದೇ ಜಾಮೀನು ಇಲ್ಲದೇ 10 ಸಾವಿರ ರೂ.ಗಳ ವರೆಗೂ ಸಾಲ ನೀಡಲಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಅವರು ಇಂದು ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಅಡುಗೆ ಸಹಾಯಕರು ಹಾಗೂ ಸಿಬ್ಬಂದಿಗಳಿಗೆ 250ಕ್ಕೂ ಹೆಚ್ಚು ದಿನಸಿ ಆಹಾರ ಪದಾರ್ಥಗಳ ಕಿಟ್‌ಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಲಾಕ್‌ಡೌನ್ ಸಂಕಷ್ಟದಲ್ಲಿರುವ ಜನತೆಗೆ ಆರಂಭದಲ್ಲಿ 1 ಲಕ್ಷ 70 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಪ್ರತಿ ಬಡಕುಟುಂಬಗಳಿಗೆ 10 ಕೆ.ಜಿ. ಅಕ್ಕಿ, 2 ಕೆ.ಜಿ ಬೇಳೆ ನೀಡಿತ್ತು. ಉಜ್ವಲ ಯೋಜನೆ ಅಡಿ ಫಲಾನುಭವಿಗಳಿಗೆ ಉಚಿತ ಗ್ಯಾಸ್, ಜನ್‌ಧನ್ ಖಾತೆಗೆ ಹಣ, ನೋಂದಾಯಿತ ಕಟ್ಟಡ ಕಾರ್ಮಿಕರಿಗೆ 2000 ರೂ. ನೀಡಿತ್ತು. ಜೊತೆಗೆ ರಾಜ್ಯ ಸರ್ಕಾರವು 10 ಕೆ.ಜಿ. ಅಕ್ಕಿ, 2 ಕೆ.ಜಿ. ಗೋಧಿ ವಿತರಣೆ ಮಾಡಿತ್ತು. ಇದೀಗ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದು, ಇದರಲ್ಲಿ ಬೀದಿ ಬದಿಯ ವ್ಯಾಪಾರಸ್ಥರಿಗೆ ಯಾವುದೇ ಜಾಮೀನು ಇಲ್ಲದೇ 10 ಸಾವಿರ ರೂ. ಗಳ ವರೆಗೆ ಸಾಲ ನೀಡಲಿದೆ ಎಂದರು.
ಲಾಕ್‌ಡೌನ್ ವೇಳೆ ಸರ್ಕಾರದೊಂದಿಗೆ ಬೇರೆ ಬೇರೆ ಸಂಘ-ಸಂಸ್ಥೆಗಳು ತಮ್ಮ ಕೈಲಾದ ನೆರವು ನೀಡುವ ಮೂಲಕ ಮಾನವೀಯತೆ ತೋರಿದ್ದಾರೆ. ಇಲ್ಲಿಯವರೆಗೆ ಚಿಕ್ಕಮಗಳೂರು ನಗರ ಹಾಗೂ ತಾಲ್ಲೂಕಿನಾದ್ಯಾಂತ ಸುಮಾರು 27 ಸಾವಿರಕ್ಕೂ ಹೆಚ್ಚು ಆಹಾರದ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಇದೀಗ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ರವರು ಬಡವರ ಕಷ್ಟಗಳಿಗೆ ಸ್ಪಂದಿಸಿ ಸರ್ಕಾರದ ಜೊತೆಗೆ ಕೈಜೋಡಿಸಿರುವುದು ಹೆಮ್ಮೆಯ ವಿಚಾರ ಎಂದರು.
ಜಿಲ್ಲೆ ಈವರೆಗೂ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಪ್ರಕರಣ ಕಂಡುಬಂದಲ್ಲಿ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ, ಸೋಂಕು ಬಾರದಂತೆ ತಡೆಯಲು ಜನರ ಸಹಕಾರ ಅತ್ಯವಶ್ಯಕ ಎಂದ ಅವರು ವಯೋವೃದ್ಧರು, ಚಿಕ್ಕಮಕ್ಕಳು, ವಿವಿಧ ಕಾಯಿಲೆಯಿಂದ ಬಳಲುತ್ತಿರುವವರು ಮನೆಯಲ್ಲೇ ಇರುವುದು ಒಳಿತು. ಸರ್ಕಾರ ನಾಳೆಯಿಂದ ಹೊಸ ನಿಯಮಗಳನ್ನು ರೂಪಿಸಲಿದ್ದು ನಿಯಮಗಳಿಗೆ ಅನುಸಾರವಾಗಿ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
SOURCE: DAILY HUNT
More Stories
ಮ್ಯಾರಥಾನ ಓಟದ ಮೂಲಕ ಮತದಾನ ಜಾಗೃತಿ
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ