May 18, 2024

Bhavana Tv

Its Your Channel

ಚಾಮರಾಜನಗರ ಇದೀಗ ದಕ್ಷಿಣ ಭಾರತದಲ್ಲಿಯೇ ಏಕೈಕ ಕೊರೋನಾ ಮುಕ್ತ ಜಿಲ್ಲೆ

ಚಾಮರಾಜನಗರ: ಒಂದೇ ಒಂದು ಕೊರೋನಾ ಪ್ರಕರಣ ಇಲ್ಲದೇ ಇದುವರೆಗೆ ಇಡೀ ರಾಜ್ಯದ ಗಮನ ಸೆಳೆದಿದ್ದ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ ಇದೀಗ ದಕ್ಷಿಣ ಭಾರತದಲ್ಲಿಯೇ ಏಕೈಕ ಕೊರೋನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ನಡುವೆ ಹಸಿರು ವಲಯವಾಗಿ ಕೊರೋನಾ ಮುಕ್ತ ಜಿಲ್ಲೆಯಾಗಿಯೇ ಉಳಿದಿರುವುದು ಚಾಮರಾಜನಗರ ಎಂಬುದು ಅಧಿಕೃತ ಅಂಕಿ ಅಂಶಗಳಿಂದ ಖಚಿತವಾಗಿದೆ.

ಇದುವರೆಗೂ ತೆಲಂಗಾಣದ ವಾರಂಗಲ್ ಗ್ರಾಮೀಣ ಹಾಗೂ ಕರ್ನಾಟಕದ ಚಾಮರಾಜನಗರ ಜಿಲ್ಲೆಗಳಲ್ಲಿ ಮಾತ್ರ ಕೊರೋನಾ ಕಂಡು ಬಂದಿರಲಿಲ್ಲ. ಆದರೆ ತೆಲಂಗಾಣದ ವಾರಂಗಲ್ ಗ್ರಾಮೀಣ ಜಿಲ್ಲೆಯಲ್ಲಿ ಮಂಗಳವಾರ ಕೊರೋನಾ ಪ್ರಕರಣ ಪತ್ತೆಯಾಗಿದೆ. ಹೀಗಾಗಿ ಚಾಮರಾಜನಗರ ದಕ್ಷಿಣ ಭಾರತದ ಕೊರೋನಾ ಮುಕ್ತ ಏಕೈಕ ಜಿಲ್ಲೆ ಎಂಬ ಹಿರಿಮೆ ಪಾತ್ರವಾಗಿದೆ.

ಚಾಮರಾಜನಗರ ಎಂದರೆ ಉನ್ನತ ರಾಜಕಾರಣಿಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದರು. ಚಾಮರಾಜನಗರಕ್ಕೆ ಭೇಟಿ ಕೊಟ್ಟರೆ ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ ಚಾಮರಾಜನಗರಕ್ಕೆ ಭೇಟಿಯನ್ನೇ ಕೈಬಿಟ್ಟಿದ್ದರು. ಇದು ರಾಜಕಾರಣಿಗಳಿಂದಲೇ ಸೃಷ್ಟಿಗೊಂಡ ಮೂಢನಂಬಿಕೆಯ ವಿಚಾರ.

ಆದರೆ ಇಂದು ಇಡೀ ವಿಶ್ವಕ್ಕೇ ಹೆಮ್ಮಾರಿಯಾಗಿ ಪರಿಣಮಿಸಿರುವ ಕೊರೋನಾ ವೈರಾಣು ಸೋಂಕು ಹಚ್ಚ ಹಸಿರ ವಾತಾವರಣದೊಳಗೆ ಇರುವ ಚಾಮರಾಜನಗರಕ್ಕೆ ತಟ್ಟಿಲ್ಲದೆ ಇರುವುದು ಗಮನಿಸಿದರೆ ರಾಜಕಾರಣಿಗೂ ಇಲ್ಲಿಗೆ ಬರಲು ಇಚ್ಛಿಸದ ಜಿಲ್ಲೆಗೆ ವೈರಾಣು ಕೂಡ ಬರಲು ಹಿಂದೇಟು ಹಾಕಿದ್ದು ಕಾಕತಾಳೀಯವಾಗಿದ್ದರೂ ಸಹ ದಕ್ಷಿಣ ಭಾರತದಲ್ಲಿ ಕೊರೋನಾ ಮುಕ್ತ ಏಕೈಕ ಜಿಲ್ಲೆ ಚಾಮರಾಜನಗರವಾಗಿದೆ ಎನ್ನುವ ಹೆಮ್ಮೆಯ ಸಂಗತಿ ಜಿಲ್ಲೆಯ ಪ್ರತಿಯೊಬ್ಬರಿಗಿದೆ.

ಚಾಮರಾಜನಗರ ಜಿಲ್ಲಾಡಳಿತ ಕೈಗೊಂಡ ದಿಟ್ಟ ನಿರ್ಧಾರ ಮತ್ತು ಕ್ರಮಗಳಿಗೆ ಜಿಲ್ಲೆಯ ಜನತೆ ಸ್ಪಂದಿಸಿದ ರೀತಿ ಇದಕ್ಕೆ ಕಾರಣವಾಗಿದೆ. ಇದಕ್ಕೆ ಶ್ರಮಿಸಿದ ಜಿಲ್ಲೆಯ ಎಲ್ಲಾ ವರ್ಗದ ಅಧಿಕಾರಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿ ಅದರಲ್ಲೂ ಆಶಾ ಕಾರ್ಯಕರ್ತೆಯರ ಸೇವೆ ಮತ್ತು ಕೊರೋನಾ ವಾರಿಯರ್ಸ್‍ಗಳ ಶ್ರಮ ಕಾರಣ ಎನ್ನಬಹುದಾಗಿದೆ. ಆದರೆ ಲಾಕ್ ಡೌನ್ ಸಡಿಲಗೊಂಡ ನಂತರ ಕರೋನಾ ಭೀತಿ ರಾಜ್ಯದಲ್ಲಿ ಹೆಚ್ಚಾಗಿದೆ. ದಿನ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಜಿಲ್ಲಾಡಳಿತ ಇನ್ನು ಹೆಚ್ಚಿನ ಕ್ರಮ, ದಿಟ್ಟ ನಿರ್ಧಾರ ಹಾಗೂ ಕಠಿಣ ಕ್ರಮದೊಂದಿಗೆ ಪಟ್ಟವನ್ನು ಉಳಿಸಿಕೊಳ್ಳುವುದು ಒಂದು ಸವಾಲಾಗಿದೆ.

error: